ಬೆಳದಿಂಗಳ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಕುಂದಾಪುರದ ಎ.ಎಸ್.ಎನ್ ಹೆಬ್ಬಾರ್

ಕುಂದಾಪುರ: ತಮ್ಮ ಮಾತು, ಕೃತಿ, ಬರಹಗಳಲ್ಲಿ ಕುಂದಾಪ್ರ ಭಾಷೆಯ ಬನಿಯನ್ನು ಉಣಬಡಿಸಿದ ಪತ್ರಕರ್ತ, ಕವಿ, ಜೇಸಿ, ರೋಟರಿಯನ್, ಅಂಕಣಕಾರ ಹಲವು ಸಂಘ ಸಂಸ್ಥೆಗಳ ಸ್ಥಾಪಕ ಜನಪ್ರಿಯ ವಕೀಲ, 7ನೇ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಎ.ಎಸ್.ಎನ್ ಹೆಬ್ಬಾರ್ ಅವರು 6 ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಸಮ್ಮೇಳನದ ರೂವಾರಿ, ಸಮಿತಿಯ ಅಧ್ಯಕ್ಷ ಶೇಖರ ಅಜೆಕಾರು ತಿಳಿಸಿದ್ದಾರೆ.

     ಅವರು ಉಡುಪಿಯ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಾ ಕಳೆದ ಐದು ದಶಕಗಳಿಂದ ಕನ್ನಡದ ಕಂಪನ್ನು ಪಸರಿಸಿದ ಹೆಬ್ಬಾರರು ತರಬೇತಿಗಳ ಮೂಲಕ ಸಾವಿರಾರು ಮಂದಿಯ ಬದುಕನ್ನು ಬದಲಾಯಿಸಿದ್ದಾರೆ. ಅನೇಕ ಗೌರವಗಳಿಗೆ ಪಾತ್ರರಾಗಿದ್ದಾರೆ ಎಂದರು.
   ಎಪ್ರಿಲ್ 4ರಂದು ಎನ್‌ಕೌಂಟರ್ ಕಿಂಗ್ ದಯಾನಾಯಕ್ ಅವರ ಹುಟ್ಟೂರು ಎಣ್ಣೆಹೊಳೆಯಲ್ಲಿ ನಡೆಯುವ ಸಮ್ಮೇಳನದ ಉದ್ಘಾಟನೆಯ ಗೌರವ ಪ್ರಸಿದ್ಧ ಸಾಹಿತಿ ಅಂಬಾತನಯ ಮುದ್ರಾಡಿ ಅವರಿಗೆ ದೊರಕಿದೆ.
   ಬೆಳದಿಂಗಳ ಸಾಹಿತ್ಯ ಸಮ್ಮೇಳನ ವಿಶಿಷ್ಟ ರೀತಿಯಲ್ಲಿ ನಡೆಯುತ್ತಾ ಬಂದಿದ್ದು ಡುಂಡಿರಾಜ್ (ಅಜೆಕಾರು), ಎಂ.ಎಸ್.ನರಸಿಂಹ ಮೂರ್ತಿ (ಮೂಡುಬಿದಿರೆ), ಜಯಂತ್ ಕಾಯ್ಕಿಣಿ (ಕಾರ್ಕಳ ಗೊಮ್ಮಟಬೆಟ್ಟ) , ದೊಡ್ಡರಂಗೇಗೌಡ(ಹೆಬ್ರಿ ನವೋದಯಶಾಲೆ) , ಡಾ.ನಾ.ಮೊಗಸಾಲೆ(ಮಂಗಳೂರು ತೋಟಬೆಂಗ್ರೆ) ಹಿಂದಿನ ಸಮ್ಮೇಳನಗಳ ಅಧ್ಯಕ್ಷತೆ ವಹಿಸಿದ್ದರು.

ಎ.ಎಸ್.ಎನ್. ಹೆಬ್ಬಾರ್ ಪರಿಚಯ

     ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಗೆಳೆಯ ಸಂತೋಷ ಕುಮಾರ ಗುಲ್ವಾಡಿ ಮತ್ತು ಬಾಲಕೃಷ್ಣ ಶೆಟ್ಟಿ ಪೊಳಲಿ ಜತೆಗೂಡಿ ಮಂಗಳೂರಿನಲ್ಲಿ ’ಕನ್ನಡ ಸಂಘ’ ಸ್ಥಾಪಿಸಿದವರು ಎ.ಎಸ್.ಎನ್.ಹೆಬ್ಬಾರರು(ಐರೋಡಿ ಶಂಕರನಾರಾಯಣ ಹೆಬ್ಬಾರರು). ಕಳೆದ 51 ವರ್ಷಗಳಿಂದ ಕುಂದಾಪುರದಲ್ಲಿ ಅತ್ಯಂತ ಯಶಸ್ವಿಯಾಗಿ ವಕೀಲಿ ವೃತ್ತಿ ನಡೆಸಿಕೊಂಡು ಬಂದಿರುವ ಹೆಬ್ಬಾರರು, 1962ರಲ್ಲಿ ಕುಂದಾಪುರದಲ್ಲೂ ಕನ್ನಡ ಸಂಘ ಸ್ಥಾಪಿಸಿದಾಗ, ಅವರ ತಂದೆ ವಕೀಲ ಎ.ವಿ.ಎನ್.ಹೆಬ್ಬಾರರು ’ನೀನು ವಕೀಲಿ ಮಾಡಲು ಬಂದದ್ದಾ, ಕನ್ನಡ ಸಂಘ ಮಾಡಲು ಬಂದದ್ದಾ?’ ಎಂದು ಕೇಳಿಬಿಟ್ಟಿದ್ದರು. ಕನ್ನಡ ಸಂಘ ಕಟ್ಟಿ, ಕನ್ನಡದ ಸಾಹಿತ್ಯದ ಕೆಲಸ ಮಾಡುತ್ತಾ ಬಂದ ಹೆಬ್ಬಾರರ ಮನೆಗೆ ಭೇಟಿ ನೀಡದ ಕನ್ನಡದ ಸಾಹಿತಿಗಳಿರಲಿಲ್ಲ. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಹೆಬ್ಬಾರರೇ ಉಡುಪಿ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಪ್ರಥಮ ಅಧ್ಯಕ್ಷರಾಗಿ ಆಯ್ಕೆಯಾಗಿ ಎರಡು ಅವಧಿಗೆ ಸೇವೆ ಸಲ್ಲಿಸಿ ಉತ್ತಮ ಅಸ್ತಿಭಾರ ಹಾಕಿದವರು.
      ಸ್ವತಃ ಲೇಖಕರಾದ ಹೆಬ್ಬಾರರ ಕಥೆಗಳಲ್ಲಿ ಜನಪದ ಬನಿ, ಕುಂದಾಪುರ ಕನ್ನಡದ ಸೊಗಡು ಇರುತ್ತದೆ. ಕುಂದಗನ್ನಡದಲ್ಲೇ ಕವನಗಳನ್ನೂ ಬರೆದವರು. ಅವರ ಲೇಖನಗಳು, ಹಾಸ್ಯ ಲೇಖನಗಳು, ಪ್ರವಾಸ ಕಥನಗಳು ಜನಪ್ರಿಯ. 75ರ ಹರೆಯದಲ್ಲೂ ಬರೆಯುತ್ತಿರುವ ಅವರ ’ಮಾಧ್ಯಮದ ಮಧ್ಯದಿಂದ’ ಅಂಕಣ ಬರಹಗಳು, ’ಸುದ್ದಿ ಮಾಡಿದ ಸುದ್ದಿಗಳು’ ಸರಣಿ ಲೇಖನಗಳು, ’ಅಮೇರಿಕಥನ’ ಪ್ರವಾಸ ಸಾಹಿತ್ಯ, ’ವಕೀಲರು ಹೇಳಿದ ಸತ್ಯಗಳು’ ಧಾರಾವಾಹಿ ಅನುಭವ ಕಥನಗಳು ರೋಚಕ ಸಾಹಿತ್ಯವೆನಿಸಿವೆ. ರೋಟರಿಗಾಗಿ ಎಂಟು ಪ್ರಹಸನಗಳನ್ನು ಬರೆದು ಪ್ರಕಟಿಸಿದ್ದಾರೆ. ’ಅಧ್ಯಕ್ಷರು ಹೇಗಿರಬೇಕು?’, ’ಕಾರ್ಯಕ್ರಮಗಳು ಹೇಗಿರಬೇಕು?’, ಎಂಬ ಅವರ ಹೊತ್ತಗೆಗಳು ಸಾಹಿತ್ಯಿಕವಾಗಿಯೂ ಜನಪ್ರೀತಿಗಳಿಸಿವೆ.
     ಕನ್ನಡದಲ್ಲಿ ಪರಿಣಾಮಕಾರಿ ಭಾಷಣ ಕಲೆಯ ಅಪ್ರತಿಮ ತರಬೇತುದಾರರಾದ ಹೆಬ್ಬಾರರು ಉತ್ತಮ ವಾಗ್ಮಿ. ಅವರ ಭಾಷಣಗಳೆಂದರೆ ಸಾಹಿತ್ಯಿಕ ರಸದೌತಣ. ’ಭಾಷಣ ಒಂದು ಕಲೆ’ ಎಂಬ ಅವರ ಪುಸ್ತಕ ಭಾಷಣ ಮಾಡುವವರಿಗೊಂದು ಕೈಗನ್ನಡಿ. ಅಮೇರಿಕಾದ ಸಾನ್‌ಓಸೆ, ಶಿಕಾಗೋಗಳಲ್ಲೂ ಈ ತರಬೇತಿ ನೀಡಿ ಅಲ್ಲಿನ ಕನ್ನಡಿಗರಿಂದ ಸೈ ಎನ್ನಿಸಿಕೊಂಡ ಹೆಬ್ಬಾರರು, ಶಿಕಾಗೋದಲ್ಲಿ ನಡೆದ ’ಅಕ್ಕ’ ಅಂತಾರಾಷ್ಟ್ರೀಯ ಕನ್ನಡ ಸಮ್ಮೇಳನದಲ್ಲೂ ಕವಿಗೋಷ್ಠಿಯಲ್ಲಿ ಭಾಗವಹಿಸಿ ಜನಮೆಚ್ಚುಗೆ ಪಡೆದವರು. ದಶಕಗಳ ಕಾಲ ಪತ್ರಕರ್ತರಾಗಿ ಉದಯವಾಣಿ, ಪ್ರಜಾವಾಣಿ, ಡೆಕ್ಕನ್‌ಹೆರಾಲ್ಡ್‌ಗಳನ್ನು ಪ್ರತಿನಿಧಿಸಿ ರೋಚಕ ಸಾಹಿತ್ಯಿಕ ಸುದ್ದಿಗಳ ಸರದಾರರಾದವರು. ತಾಲೂಕು ಪತ್ರಕರ್ತರ ಸಂಘದ ಸ್ಥಾಪಕಾಧ್ಯಕ್ಷರು, ಜಿಲ್ಲಾ ಪತ್ರಕರ್ತರ ಸಂಘದ ಸ್ಥಾಪಕ ಉಪಾಧ್ಯಕ್ಷರಾಗಿದ್ದವರು.
       ಜೇಸೀಸ್ ಎಂಬ ಯುವಜನ ಸಂಸ್ಥೆಯನ್ನು ಕುಂದಾಪುರದಲ್ಲಿ ಸ್ಥಾಪಿಸಿದವರು. ಗ್ರಾಹಕರ ವೇದಿಕೆ ಆರಂಭಿಸಿದವರು. ಸ್ವತಃ ಅಭಿನಯಕಾರರಾಗಿರುವ ಅವರು ’ರೂಪರಂಗ’ ನಾಟಕಸಂಸ್ಥೆ, ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ಅಧ್ಯಕ್ಷರು. ಕುಂದಾಪುರದ ಬಿ.ಆರ್.ರಾಯರ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು. ದೇಶ ವಿದೇಶಗಳನ್ನೆಲ್ಲ ಸುತ್ತಿ ಬಂದು ಅನುಭವ ಶ್ರೀಮಂತಿಕೆ ಪಡೆದು ಭಾಷಣಗಳಲ್ಲಿ, ಲೇಖನಗಳಲ್ಲಿ ಹಂಚಿಕೊಂಡವರು. ಅವರ ಕಾರ್ಯ ಕ್ಷೇತ್ರ ಕುಂದಾಪುರದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ಜಿಲ್ಲಾ 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಹೆಬ್ಬಾರರನ್ನೇ ಆರಿಸಲಾಗಿತ್ತು. ಅವರ ಅಧ್ಯಕ್ಷ ಭಾಷಣ ಸಾಹಿತಿಗಳ ಪ್ರಶಂಸೆಗೆ ಪಾತ್ರವಾಗಿತ್ತು. ರೋಟರಿ ಅಂತಾರಾಷ್ಟ್ರೀಯ ಸಂಸ್ಥೆಯಲ್ಲೂ ಸೇವೆ ಸಲ್ಲಿಸುತ್ತಿರುವ ಹೆಬ್ಬಾರರನ್ನು ಅದರ ಶತಾಬ್ದಿ ಜಿಲ್ಲಾ ಗವರ್ನರ್ ಆಗಿ 2004-05ಕ್ಕೆ ಆರಿಸಲಾಗಿತ್ತು. ಅವರಿಗೆ ರೋಟರಿಯ ಅತ್ಯುಚ್ಚ ’ಸರ್ವೀಸ್ ಎಬೌ ಸೆಲ್ಫ್’ ಪ್ರಶಸ್ತಿ ಕೂಡಾ ನೀಡಲಾಗಿತ್ತು.
      ಸಕ್ರಿಯ ವಕೀಲಿ ವೃತ್ತಿಯಲ್ಲಿದ್ದೂ ಹೀಗೆ ಬಹುಮುಖೀ ಪ್ರವೃತ್ತಿಗಳಲ್ಲಿ ತೊಡಗಿಕೊಂಡಿರುವವರು ವಿರಳ. ಅದರಲ್ಲೂ ವಕೀಲರಾಗಿ ಸಾಹಿತಿಯೂ ಆಗಿರುವ ಹೆಬ್ಬಾರರ ವ್ಯಕ್ತಿತ್ವ ಅನನ್ಯ. 75ರ ಹರೆಯದಲ್ಲೂ ಮುಂಚಿನದೇ ಹುಮ್ಮಸ್ಸಿನಿಂದ ಸಾಹಿತ್ಯಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕ್ರಿಯಾಶೀಲರಾಗಿದ್ದಾರೆ ಹೆಬ್ಬಾರರು. ಕಾಸರಗೋಡಿನ ಕನ್ನಡದ ಕಟ್ಟಾಳು ವಕೀಲ್ ಬಿ.ಎಸ್.ಕಕ್ಕಿಲ್ಲಾಯರ ಪುತ್ರಿ ಸುಧಾರನ್ನು ವಿವಾಹವಾಗಿ ಮೂರು ಮಕ್ಕಳನ್ನೂ, ಆರು ಮೊಮ್ಮಕ್ಕಳನ್ನೂ ಹೊಂದಿದ ಹೆಬ್ಬಾರರದು ಸುಖೀ ಸಂಸಾರ. ಕನ್ನಡ ಪ್ರಸಿದ್ಧ ಸಾಹಿತಿ ವೈದೇಹಿ ಅವರು ಹೆಬ್ಬಾರ್ ಅವರ ಸಹೋದರಿ.


ಕುಂದಾಪ್ರ ಡಾಟ್ ಕಾಂ- editor@kundapra.com