ಆನಗಳ್ಳಿ ಕಿರು ಸೇತುವೆಗೆ ದೊರಕುವುದೆ ಮುಕ್ತಿ ?

ಕುಂದಾಪುರ: ಈ ಗ್ರಾಮದ ಜನ ಅಬ್ಬಾಬ್ಬ ಎಂದರೆ ಒಂದು ಕಿ. ಮೀ ದೂರ ಸಾಗಿದ್ರೆ ಕುಂದಾಪುರ ನಗರವನ್ನು ಸುಲಭವಾಗಿ ತಲುಪಬಹುದು. ಆದ್ರೆ ಈ ಕಿರು ಸೇತುವೆಯ ಕಾರಣದಿಂದಾಗಿ  ಕುಂದಾಪುರ ನಗರವನ್ನು ತಲುಪಲು 7 ಕಿ.ಮೀ ಸುತ್ತಿ ಸಾಗಬೇಕು. ಇದು ಸುಮಾರು 800ಕ್ಕೂ ಅಧಿಕ ಮನೆಗಳು, 2,000ಕ್ಕೂ ಹೆಚ್ಚಿನ ಜನಸಂಖ್ಯೆ ಇರುವ ಆನಗಳ್ಳಿ ಗ್ರಾಮದ ಜನರ ದುಸ್ಥಿತಿ. ಇಷ್ಟರ ನಡುವೆಯೂ ಹೊಸ ಸೇತುವೆಯ ಕನಸು ಹೋರಾಟದೊಂದಿಗೆ ನಿರಂತರವಾಗಿ ಮುಂದುವರಿದಿದೆ.

     ಆ ಕಾಲದಲ್ಲಿ ನಡೆದುಕೊಂಡು ಹೋಗಲು ಅನುಕೂಲವಾಗುವಂತೆ ಆನಗಳ್ಳಿಯಲ್ಲಿ ವಾರಾಹಿ ನದಿಗೆ ಅಡ್ಡಲಾಗಿ ಕಿಂಡಿ ಅಣೆಕಟ್ಟಿನೊಂದಿಗೆ ನಿರ್ಮಾಣಗೊಂಡ ಈ ಕಿರು ಸೇತುವೆ 6 ಅಡಿ ಅಗಲವಿದೆ. ಸೇತುವೆಯ ಮೇಲೆ ಒಂದು ರಿಕ್ಷಾ ಅಥವಾ ಕಾರು ಚಲಿಸುತ್ತಿದ್ದರೇ ಎದುರಿನ ವಾಹನಗಳು ಇನ್ನೊಂದು ಬದಿಯಲ್ಲಿ ಕಾಯಲೇಬೇಕು. ತುರ್ತು ಸಂದರ್ಭದಲ್ಲಂತೂ ಜನರು ಪಾಡು ಹೇಳತೀರದು. ಕಿರಿದಾದ ಈ ಸೇತುವೆಯಾದ ಕಾರಣದಿಂದಾಗಿ ಬೆಳಿಗ್ಗೆ ಶಾಲೆ-ಕಾಲೇಜಿಗೆ, ಇನ್ನಿತರ ದಿನನಿತ್ಯದ ಅಗತ್ಯಗಳಿಗಾಗಿ ಗ್ರಾಮವನ್ನು ತಲುಪಬೇಕಾದ ವಾಹನಗಳ ಸಂಚರ ಸಾಧ್ಯವಿಲ್ಲವಾದುದರಿಂದ ಬಸ್ರೂರು-ಮೂಡ್ಲಕಟ್ಟೆ ಮಾರ್ಗವಾಗಿ ಸುತ್ತು ಹಾಕಿ ಕುಂದಾಪುರ ನಗರವನ್ನು ತಲುಪಬೇಕಿದೆ. ದಿನನಿತ್ಯವೂ 7ಕಿ.ಮೀ. ಅನಗತ್ಯವಾಗಿ ಸಂಚರಿಸಬೇಕಾದ ಅನಿವಾರ್ಯತೆ ಇಲ್ಲಿನ ನಿವಾಸಿಗಳದ್ದು. ಈಗ ಸದ್ಯವಿರುವ ಕಿರುಸೇತುವೆಯೂ ಶಿಥಿಲಾವಸ್ಥೆಗೆ ತಲುಪಿದೆ.  ರಿವಿಟ್ಮೆಂಟ್ ಕೂಡ ಕುಸಿದಿದೆ. 

ಹೊಸ ಸೇತುವೆ ದಶಕಗಳ ಕನಸು
    1990ರಲ್ಲಿ ಐ.ಎಂ. ಜಯರಾಂ ಶೆಟ್ಟಿಯವರು ಉಡುಪಿ ಸಂಸದರಾಗಿದ್ದ ಸಂದರ್ಭದಲ್ಲಿ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ಅಂದಿನ ಬೋಪಾಲ್ ರಾಜ್ಯಸಭಾ ಸದಸ್ಯರಾಗಿದ್ದ ಮೇಬಲ್ ರೆಬೆಲ್ಲೋ ಈ ಸೇತುವೆಯ ಅವ್ಯವಸ್ಥೆ ಕಂಡು ತನ್ನ ಅನುದಾನದಲ್ಲಿ 1 ಕೋಟಿ ನೀಡುವ ಭರವಸೆಯಿತ್ತರು, ಆದರೇ ರಾಜ್ಯಸಭಾ ಸದಸ್ಯರು ರಾಜ್ಯಕ್ಕೆ ತಮ್ಮ ಅನುದಾನ ನೀಡುವುದರಲ್ಲಿ ತಾಂತ್ರಿಕ ಅಡಚಣೆಯುಂಟಾಗಿ ಈ ವಿಚಾರ ಅಲ್ಲಿಗೆ ನಿಂತಿತು. ಬಳಿಕ ಸೊರಕೆಯವರು ಸಂಸದರಾದ ಮೇಲೆಯೂ ನಬಾರ್ಡ್ ಯೋಜನೆಯಲ್ಲಿ ಹೊಸ ಸೇತುವೆ ನಿರ್ಮಿಸಲು ಅಡಚಣೆಯುಂಟಾಗಿತ್ತು. ಬಳಿಕ ಈ ಸೇತುವೆಯಿಂದ ಮೊದಲಗೊಂಡು 1ಕಿಮೀ. ದೂರವನ್ನು ಲೋಕೋಪಯೋಗಿ ಇಲಾಖೆಗೆ ಸೇರಿಸಿ 4 ಕೋಟಿ ಅನುದಾನ ಇಡಲಾಗಿತ್ತು. ಆದರೇ ಅಲ್ಲಿಯೂ ಅಡಚಣೆ ಉಂಟಾಯಿತು. ನಂತರದಲ್ಲಿ 1.90ಲಕ್ಷ ವೆಚ್ಚಕ್ಕೆ ಟೆಂಡರ್ ಕರೆದರೂ ಕೂಡ ಅನುದಾನ ಕಡಿಮೆಯಾದ್ದರಿಂದ ಸೇತುವೆ ನಿರ್ಮಾಣಕ್ಕೆ ಯಾರೂ ಮುಂದೆ ಬರಲಿಲ್ಲ.

   ಬಳಿಕ ಕೆ. ಜಯಪ್ರಕಾಶ ಹೆಗ್ಗಡೆಯವರು ಸಂಸದರಾಗಿದ್ದ ಕಾಲದಲ್ಲಿ ರೀ-ಎಸ್ಟಿಮೇಟ್ ಮಾಡಿ 8.70 ಲಕ್ಷಕ್ಕೆ ಪ್ರಸ್ತಾವನೆ ಮಾಡಿದಾಗ 5.67 ಲಕ್ಷ ಮಂಜೂರಾಗಿತ್ತಾದರೂ ಪೂರ್ಣ ಪ್ರಮಾಣದ ಹಣ ಮಂಜೂರಾದ ಕಾರಣ ಸೇತುವೆ ವಿಚಾರವೂ ಅಲ್ಲಿಗೆ ನಿಂತಿತ್ತು. ಇದೇ ಸಮಯದಲ್ಲಿ ಲೋಕಸಭಾ ಚುನಾವಣೆಯೂ ಬಂದಿತ್ತು.
       ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಸೇತುವೆಯ ಬಗ್ಗೆ ನಿರಂತರವಾಗಿ ಧ್ವನಿಎತ್ತುತ್ತಲೇ ಬಂದಿದ್ದಾರೆ. ಕಳೆದ ಅಧಿವೇಶನದಲ್ಲಿಯೂ ಸೇತುವೆ ನಿರ್ಮಾಣದ ಬಗ್ಗೆ ಲೋಕೋಪಯೋಗಿ ಸಚಿವರ ಗಮನ ಸೆಳೆದಿದ್ದಾರೆ. ಸಚಿವರೂ ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದ್ದು ರಾಜ್ಯದೆಲ್ಲೆಡೆ ಹಲವು ಸೇತುವೆ ನಿರ್ಮಾಣವಾಗುತ್ತಿದ್ದು ಅದರೊಂದಿಗೆ ಆನಗಳ್ಳಿ ಸೇತುವೆ ನಿರ್ಮಾಣವೂ ಆಗಲಿದೆ ಎಂಬ ಭರವಸೆ ನೀಡಿದ್ದಾರೆಂಬ ಮಾತುಗಳು ಕೇಳಿಬರುತ್ತಿದೆ.

ಸೇತುವೆ ಅನಿವಾರ್ಯವೇ?
    ಕೇವಲ 25ರಿಂದ 30 ಮನೆಗಳಿರುವ ಪ್ರದೇಶಗಳಿಗೆ ಸುಸಜ್ಜಿನ ಸೇತುವೆ ನಿರ್ಮಿಸುವಾಗ, 800ಕ್ಕೂ ಅಧಿಕ ಮನೆಗಳೂ 2000 ಜನಸಂಖ್ಯೆ ಇರುವ ಪ್ರದೇಶಕ್ಕೆ ಸುಸುಜ್ಜಿತ ಸೇತುವೆ ಬೇಡವೆ ಎಂದು ಆನಗಳ್ಳಿಯ ಜನ ಪ್ರಶ್ನಿಸುತ್ತಾರೆ. ಇಷ್ಟೇ ಇಲ್ಲದೇ ಬಸ್ರೂರು ಮಾರ್ಗವಾಗಿ ಆನಗಳ್ಳಿ ಮೂಲಕ ಕುಂದಾಪುರ ಪೇಟೆ ತಲುಪಲು ಇದು ಅತ್ಯಂತ ಹತ್ತಿರದ ಮಾರ್ಗವಾಗಿರುವುದರಿಂದ ನಿತ್ಯ ಸಾವಿರಾರು ಜನರಿಗೆ ಅನುಕೂಲವಾಗಲಿದೆ. ಕುಂದಾಪುರದ ಮೂಡ್ಲಕಟ್ಟೆ ರೈಲು ನಿಲ್ದಾಣಕ್ಕೂ ಹತ್ತಿರವಾಗಲಿದೆ.  ಅಲ್ಲದೇ ಆನಗಳ್ಳಿ ಕಿರು ಪಂಚಾಯತ್ ಆಗಿದ್ದು ಸದ್ಯ ಆರ್ಥಿಕ ಸಂಪನ್ಮೂಲ ಕಡಿಮೆ ಇದ್ದು ಸೇತುವೆ ನಿರ್ಮಾಣಗೊಂಡರೆ ಪಂಚಾಯತ್ ವ್ಯಾಪ್ತಿಯಲ್ಲಿ ವಾಣಿಜ್ಯ ಕೇಂದ್ರಗಳು ನಿರ್ಮಾಣಗೊಂಡು ಗ್ರಾಮದ ಅಭಿವೃದ್ಧಿಯೂ ಸಾಧ್ಯ.

ಮಾದರಿ ಪಂಚಾಯತ್
     ಕುಂದಾಪುರ ತಾಲೂಕಿನ ಪಂಚಾಯತಿಗಳ ಪೈಕಿ ಕಡಿಮೆ ಮನೆಗಳಿರುವ ಕಡಿಮೆ ಆದಾಯದ ಪಂಚಾಯತ್ ಆನಗಳ್ಳಿ. ಇಲ್ಲಿ ವಾಣಿಜ್ಯ-ವ್ಯವಹಾರದ ಆದಾಯ ಕಡಿಮೆ. ಮನೆ ಕಂದಾಯವೇ ಆದಾಯದ ಮೂಲ. ಆದರೂ ಇಲ್ಲಿ ಮೂಲಸೌಕರ್ಯಗಳನ್ನು ಓದಗಿಸಲು ಗ್ರಾ.ಪಂ ಹಿಂದೆ ಬಿದ್ದಿಲ್ಲ. ಬೀದಿದೀಪ, ನೀರು ಪೂರೈಕೆಯಲ್ಲಿ ಅಚ್ಚುಕಟ್ಟುತನ ಸಾಧಿಸಿ ಉಳಿದ ಪಂಚಾಯತ್ ಗಳಿಗೂ ಮಾದರಿಯಾಗಿ ನಿಂತಿದೆ.

   ಅದೇನೆ ಇರಲಿ. ನಮ್ಮ ಜನಪ್ರತಿನಿಧಿಗಳು ಸುಸಜ್ಜಿತ ಸೇತುವೆಯ ಕನಸನ್ನು ನನಸಾಗಿಸುವ ಮೂಲಕ ಆನಗಳ್ಳಿ ಭಾಗದ ಜನರ ದಶಕಗಳ ಹೋರಾಟಕ್ಕೆ ಒಂದು ಅಂತ್ಯ ಹಾಡಿ, ನೆಮ್ಮದಿಯಿಂದ ಬದುಕಲು ಅನುಮಾಡಿಕೊಬೇಕಿದೆ. 

* ಸೇತುವೆಯ ಬಗ್ಗೆ ದಶಕಗಳಿಂದಲೂ ಆನಗಳ್ಳಿ ಗ್ರಾಮದ ಜನತೆ ಹೋರಾಡುತ್ತಲೇ ಬಂದಿದ್ದೇವೆ. ಅಂದಿನಿಂದಲೂ ಭರವಸೆಗಳು ಸಿಕ್ಕಿ ಅನುಷ್ಠಾನಗೊಳ್ಳುವೆ ವೇಳೆಗೆ ಕೈತಪ್ಪಿ ಹೋಗುತ್ತಿದೆ. ಈ ಕ್ಷೇತ್ರದ ಸಂಸದರಾಗಿದ್ದ ಜಯಪ್ರಕಾಶ್ ಹೆಗ್ಡೆ, ಶಾಸಕರಾದ ಶ್ರೀನಿವಾಸ ಶೆಟ್ಟಿ ಅವರು ನಮಗೆ ಬೆಂಬಲ ನೀಡಿದ್ದಾರೆ. ಆದರೂ ಸೇತುವೆ ಮಾತ್ರ ಆಗಿಲ್ಲ. ಹಾಗಾಗಿ ಗ್ರಾಮದ ಜನತೆಗೆ ಸೇತುವೆಯಾಗುತ್ತದೆಂಬ ಭರವಸೆ ನೀಡುವುದನ್ನೇ ನಿಲ್ಲಿಸಿದ್ದೇನೆ. ಹೋರಾಟ ಮುಂದುವರಿಸುತ್ತೇವೆ.
-ಸುರೇಶ್ ಆರ್. ನಾಯ್ಕ ಅಧ್ಯಕ್ಷರು, ಆನಗಳ್ಳಿ ಗ್ರಾ.ಪಂ
ಕುಂದಾಪ್ರ ಡಾಟ್ ಕಾಂ- editor@kundapra.com