ಬಜೆಟ್ನಲ್ಲಿ ತಾಲೂಕಾಗಿ ಘೋಷಣೆಯಾಗಿಲ್ಲ ಬೈಂದೂರು. ದಶಕಗಳ ಕೂಗನ್ನು ಕೇಳುವವರ್ಯಾರು?

       ಉಡುಪಿ ಜಿಲ್ಲೆಯ ಶಿರೋಭಾಗದಲ್ಲಿರುವ ಬೈಂದೂರು ತಾಲೂಕು ರಚನೆಯ ವಿಚಾರ ಪ್ರಸ್ತಾಪಗೊಂಡು 30 ವರ್ಷಗಳೇ ಕಳೆದು ಹೋಗಿದೆ. ಸರಕಾರ ಆಡಳಿತ ಸುಧಾರಣೆಯ ದೃಷ್ಠಿಯಿಂದ ನೂತನ ತಾಲೂಕು ರಚನೆಗೆ ನೇಮಿಸಿದ ಸಮಿತಿ, ಆಯೋಗಗಳು ಮಾಡಿದ್ದ ಶಿಫಾರಸ್ಸು-ವರದಿಗಳು ಧೂಳು ಹಿಡಿದಿವೆ. ಈ ಭಾಗದ ಜನ ನಡೆಸುತ್ತಿರುವ ಹೋರಾಟದ ಕೂಗು ನಿರಂತರವಾಗಿ ಮುಂದುವರಿಯುತ್ತಲೇ ಇದೆ. ನಮ್ಮ ಜನಪ್ರತಿನಿಧಿಗಳು ಮಾತ್ರ ದಿನವೂ ಭರವಸೆ ಹುಟ್ಟಿಸುವಂತಹ ಮಾತಗಳನ್ನಾಡುತ್ತಲೇ ಇದ್ದಾರಾದರೂ ಕೂಡ ತಾಲೂಕು ರಚನೆಯ ವಿಚಾರ ಸರಕಾರಿ ಕಡತಗಳಲ್ಲಷ್ಟೇ ಉಳಿದಿದೆ.

      ಬೈಂದೂರು ತಾಲೂಕಾಗಬೇಕೆಂಬ ಕನಸು ಮೂರು ದಶಕಕ್ಕಿಂತಲೂ ಹಿಂದಿನದು. ಈ ಸಂಬಂಧ 1986ರಲ್ಲಿ ಬೈಂದೂರಿಗೆ ಭೇಟಿ ನೀಡಿದ್ದ ಜಿಲ್ಲಾ ಪುನರ್‌ವಿಂಗಡನೆ ಮತ್ತು ತಾಲೂಕು ಪುನರ್ ರಚನೆಯ ಆಯೋಗದ ಅಧ್ಯಕ್ಷರಾಗಿದ್ದ ಹುಂಡೇಕಾರರಿಗೆ ಬೈಂದೂರು ತಾಲೂಕು ರಚನಾ ಸಮಿತಿಯಿಂದ ಮನವಿಯನ್ನು ನೀಡಲಾಗಿತ್ತು.

     ನೂತನ ತಾಲೂಕು ರಚನೆಗೆ ನೇಮಿಸಿದ ವಾಸುದೇವರಾವ್ ಆಯೋಗ, ಹುಂಡೇಕರ್ ಸಮಿತಿ ಮತ್ತು ಗದ್ದಿಗೌಡರ್ ಸಮಿತಿ ಕುಂದಾಪುರ ತಾಲೂಕನ್ನು ಕುಂದಾಪುರ ಉತ್ತರ ಮತ್ತು ದಕ್ಷಿಣ ಭಾಗಗಳಾಗಿ ವಿಭಜಿಸಿ ಕೇಂದ್ರಿತ ತಾಲೂಕು ರಚನೆಗೆ ಶಿಫಾರಸ್ಸು ಮಾಡಿದ್ದವು. ಇದು ಬೈಂದೂರು ಕೇಂದ್ರಿತ ತಾಲೂಕು ರಚನೆಗೆ ಪುಷ್ಠಿ ನೀಡಿತ್ತು. 1987ರಲ್ಲಿ ಉಡುಪಿ ಜಿಲ್ಲೆಯ ಪುನರ್ ವಿಂಗಡನೆಯ ನಿರ್ಧಾರ ಕೈಗೊಂಡಾಗ ಮತ್ತು 1997ರಲ್ಲಿ ಉಡುಪಿ ಜಿಲ್ಲೆಯಾಗುವ ಸಂಧರ್ಭದಲ್ಲಿ ಬೈಂದೂರು ಹಾಗೂ ಬ್ರಹ್ಮಾವರ ತಾಲೂಕು ಫೋಷಣೆಯಾಗಬೇಕಿತ್ತು. ಆದರೆ ನೂತನ ಜಿಲ್ಲೆಯ ಉದ್ಘಾಟನಾ ಸಮಾರಂಭದಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಜೆ. ಎಚ್. ಪಾಟೇಲರು ಇನ್ನು ಒಂದು ವರ್ಷದೊಳಗೆ ತಾಲೂಕು ಪುನರ್ ರಚನೆ ಮಾಡುವುದಾಗಿ ಘೋಷಿಸಿ ತಾಲೂಕು ರಚನೆಯ ಪ್ರಸ್ತಾಪವನ್ನು ಮುಂದೆ ತಳ್ಳಿದ್ದರು.

    ಆದರೆ ಈ ನಡುವೆ ಎಂ. ಬಿ. ಪ್ರಕಾಶ್ ನೇತೃತ್ವದಲ್ಲಿ ರಚನೆಗೊಂಡ ಇನ್ನೊಂದು ಸಮಿತಿ ಈ ಹಿಂದಿನ ಸಮಿತಿಗಳು ಶಿಪಾರಸ್ಸು ಮಾಡಿದ್ದ ವರದಿಯನ್ನು ತಳ್ಳಿಹಾಕಿ ಬೈಂದೂರು ಹಾಗೂ ಬ್ರಹ್ಮಾವರ ತಾಲೂಕು ರಚನೆಯ ಅಗತ್ಯವನ್ನು ಅಲ್ಲಗಳೆಯಿತು. ಇಲ್ಲಿಂದೀಚೆಗೆ ಬೈಂದೂರು ತಾಲೂಕು ರಚನಾ ಮತ್ತು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಬಿ. ಜಗನ್ನಾಥ ಶೆಟ್ಟಿ ಅವರು ಈ ಭಾಗದ ಶಾಸಕರು, ಸಂಸದರು, ಉಸ್ತುವಾರಿ ಸಚಿವರುಗಳಿಗೆ ನಿರಂತರವಾಗಿ ಪತ್ರ ಬರೆಯುತ್ತಾ ತಾಲೂಕು ರಚನೆಯ ಅಗತ್ಯವನ್ನು ಮನಗಾಣಿಸಿದ್ದಾರೆ. ಇವರ ನೇತೃತ್ವದಲ್ಲಿ ಬೈಂದೂರು ಕ್ಷೇತ್ರದ ನಾಗರೀಕರು ಹಲವಾರು ಬಾರಿ ಹೋರಾಟಗಳನ್ನು ನಡೆಸುತ್ತಾ ಬಂದಿದ್ದಾರೆ. ಕ್ಷೇತ್ರದ ಶಾಸಕರಾದ ಗೋಪಾಲ ಪೂಜಾರಿ ಹಾಗೂ ಮಾಜಿ ಶಾಸಕರಾಗಿದ್ದ ಲಕ್ಷ್ಮೀನಾರಾಯಣ ಅವರು ಇವರ ಹೋರಾಟಗಳಿಗೆ ಸಕಾರಾತ್ಮಕವಾಗಿಯೇ ಸ್ಪಂದಿಸಿದ್ದರು. ರಾಜಕೀಯ ಭಿನ್ನಾಪ್ರಾಯಗಳನ್ನು ಮರೆತು ಒಂದಾಗಿದ್ದರು.

     ಹೋರಾಟಕ್ಕೆ ಸ್ಪಂದಿಸಿದ ಹಿಂದಿನ ಬಿಜೆಪಿ ಸರಕಾರ 43 ಹೊಸ ತಾಲೂಕು ರಚನೆಯ ಪ್ರಸ್ತಾಪದಲ್ಲಿ ಬೈಂದೂರನ್ನೂ ಪ್ರಮುಖವಾಗಿ ಪರಿಗಣಿಸಿ ತನ್ನ ಕೊನೆಯ ಬಜೆಟ್‌ನಲ್ಲಿ ತಾಲೂಕು ರಚನೆಯನ್ನು ಘೋಷಿಸಿ ಅನುದಾನ ತೆಗೆದಿರಿಸಿತ್ತು. ಬೈಂದೂರು ಕ್ಷೇತ್ರದ ಜನ ಇದು ಮೂರು ದಶಕಗಳ ಹೋರಾಟಕ್ಕೆ ಸಂದ ಜಯ ಎಂದು ಸಂಭ್ರಮಿಸಿದ್ದರು. ಇನ್ನೇನು ತಾಲೂಕು ರಚನೆ ಆಗೇಬಿಟ್ಟಿತು ಎಂಬ ನಿರೀಕ್ಷೆಯಲ್ಲಿದ್ದರು ಆದರೆ ಆ ಬಳಿಕ ಬಂದ ಕಾಂಗ್ರೆಸ್ ಸರಕಾರ 43 ತಾಲೂಕು ರಚನೆಯ ಪ್ರಸ್ತಾಪವನ್ನು ತಡೆಹಿಡಿದು ಪುನರ್ ಪರಿಶೀಲಿಸುವ ನಿರ್ಧಾರ ಕೈಗೊಂಡಿತು. ಇದು ತಾಲೂಕು ರಚನೆಯ ಕನಸನ್ನು ಮತ್ತೆ ಮುಂದೂಡಿತು.

      ಈ ನಡುವೆ ಬೈಂದೂರು ತಾಲೂಕು ರಚನೆಯ ನಿರ್ಧಾರವನ್ನು ಸ್ವಾಗತಿಸಿದ ವಂಡ್ಸೆ ಹೋಬಳಿಯ 11 ಗ್ರಾ. ಪಂ.ಗಳು, ಬೈಂದೂರು ತಾಲೂಕು ಕೇಂದ್ರವಾಗುವುದನ್ನು ವಿರೋಧಿಸಿದವು ಇದರೊಂದಿಗೆ ಬ್ರಿಟಿಷರ ಕಾಲದಿಂದಲೂ ಪ್ರಮುಖ ಸರಕಾರಿ ಕಛೇರಿಗಳನ್ನು ಹೊಂದಿರುವ ಶಂಕರನಾರಾಯಣ ಭಾಗದ ಜನರು ಪ್ರತ್ಯೇಕ ತಾಲೂಕು ರಚನೆಯ ಬೇಡಿಕೆಯನ್ನು ಮುಂದಿಟ್ಟು ಹೋರಾಟಕ್ಕಿಳಿದರು. ಬೈಂದೂರು ಕ್ಷೇತ್ರದ ಭಾಗವೇ ಆಗಿರುವ ವಂಡ್ಸೆ ಹಾಗೂ ಶಂಕರನಾರಾಯಣ ಪ್ರದೇಶದವರ ಈ ಹೇಳಿಕೆ ಮತ್ತಷ್ಟು ಸಂದಿಗ್ಧತೆಯನ್ನುಂಟುಮಾಡಿತ್ತಾದರೂ 1985ರಲ್ಲಿ ನಡೆದ ಸಾರ್ವಜನಿಕ ಪ್ರಾತಿನಿಧಿಕ ಸಭೆಯಲ್ಲಿ ಭಾಗವಹಿಸಿದ್ದ ಕುಂದಾಪುರ ತಾಲೂಕಿನ ಎಲ್ಲಾ ಪಕ್ಷಗಳ ಜನನಾಯಕರು ಚಕ್ರಾ ನದಿಯ ಉತ್ತರಕ್ಕಿರುವ 41 ಗ್ರಾಮಗಳನ್ನು ಒಳಗೊಂಡಂತೆ ಬೈಂದೂರು ತಾಲೂಕು ರಚಿಸುವುದು ಸೂಕ್ತ ಎಂಬ ನಿರ್ಣಯಕ್ಕೆ ಬಂದಿದ್ದರು ಎಂಬುದು ಗಮನಾರ್ಹ.

     ಕಾಂಗ್ರೆಸ್ ಸರಕಾರದ ನಿರ್ಧಾರ ಬೈಂದೂರು ಭಾಗದ ಜನರಲ್ಲಿ ಸಹಜವಾಗಿ ಹತಾಶೆಯನ್ನುಂಟಮಾಡಿದೆ. ಹೋರಾಟ ಮತ್ತೆ ಅಗತ್ಯವೆಂದು ಮನಗಂಡ ಬೈಂದೂರು ತಾಲೂಕು ರಚನಾ ಸಮಿತಿ ಆ ನೆಲೆಯಲ್ಲಿ ಮತ್ತೆ ಶಾಸಕರು, ಉಸ್ತುವಾರಿ ಸಚಿವರು, ಕಂದಾಯ ಸಚಿವರಿಗೆ ಪತ್ರ ಮುಖೇನ ಆಗ್ರಹಿಸಿದೆ. ಅಲ್ಲದೇ ಹೋರಾಟದ ಮುನ್ಸೂಚನೆಯನ್ನೂ ನೀಡಿದೆ. ಇವೆಲ್ಲದರ ನಡುವೆ ಭರವಸೆ ನೀಡುತ್ತಲೇ ಬಂದಿತ್ತ ಕ್ಷೇತ್ರದ ಶಾಸಕರಾದ ಗೋಪಾಲ ಪೂಜಾರಿ,  ಉಸ್ತುವಾರಿ ಸಚಿವರಾದ ವಿನಯಕುಮಾರ್ ಸೊರಕೆ ಹಾಗೂ ರಾಜ್ಯದ ಕಂದಾಯ ಸಚಿವರು 2015-16ನೇ ಸಾಲಿನ ಬಜೆಟ್ ನಲ್ಲಿ ತಾಲೂಕನ್ನಾಗಿ ಘೋಷಿಸುವುಗಾಗಿ ತಿಳಿಸಿದ್ದರು.  ಆದರೆ ಮತ್ತೆ ಜನರ ಕಿವಿ ಮೇಲೆ ಹೂ ಇಡುವ ಕೆಲಸ ಮಾಡಿದ್ದಾರೆ.

    ಪರಿಸ್ಥಿತಿಯ ಅರಿವಿದ್ದ ಬೈಂದೂರಿನ ಪ್ರಮುಖರು ತಾಲೂಕಾಗಿ ಘೋಷಿಸುವಂತೆ ಮತ್ತೆ ಹೋರಾಟಕ್ಕಿಳಿದಿದ್ದಾರೆ. ಬಜೆಟ್ ಮಂಡಿಸುವ ಮುನ್ನಾದಿನ ತಹಶೀಲ್ದಾರ್ ಮೂಲಕ ಮನವಿಯನ್ನು ಸಲ್ಲಿಸಿ ಬಜೆಟ್ ಮಂಡನೆಯಾಗುವ ದಿನವೇ ಕುಂದಾಪುರ ತಾಲೂಕು ರೈತಸಂಘ, ಆಟೋ, ರಿಕ್ಷಾ, ಟೆಂಪೋ ಯೂನಿಯನ್, ಬೈಂದೂರು ತಾಲೂಕು ಹೋರಾಟ ಸಮಿತಿ ಮತ್ತು ಇನ್ನಿತರ ಸಂಘಸಂಸ್ಥೆಗಳ ನೇತೃತ್ವದಲ್ಲಿ ಧರಣಿ ಕುಳಿತಿದ್ದಾರೆ. 
 
    ಬೈಂದೂರು ತಾಲೂಕು ರಚನೆಗೆ ಪೂರಕವಾಗಿ ವಿಶೇಷ ತಹಶೀಲ್ದಾರ ಕಛೇರಿ, ಕಂದಾಯ ನಿರೀಕ್ಷಕರ ಕಛೇರಿ, ಉಪಖಜಾನೆ, ಪೊಲೀಸ್ ಠಾಣೆ, ಅಂಚೆ ಕಛೇರಿ, ಸಮುದಾಯ ಆಸ್ವತ್ರೆ, ದೂರವಾಣಿ ಉಪಮಂಡಲ, ಲೋಕೋಪಯೋಗಿ ಇಲಾಖೆ, ಅರಣ್ಯ ಇಲಾಖೆ, ಸುಸಜ್ಜಿತ ರೈಲು ನಿಲ್ದಾಣ, ಪದವಿ ಕಾಲೇಜು ಸೇರಿದಂತೆ ಕೆಲವು ಪ್ರಮುಖ ಸರಕಾರಿ ಕಛೇರಿಗಳು ಈಗಾಗಲೇ ಕಾರ್ಯಾಚರಿಸುತ್ತಿವೆ. 
    ಅಭಿವೃದ್ಧಿಯ ದೃಷ್ಟಿಯಿಂದ ಸಾಕಷ್ಟು ಹಿಂದೆ ಬಿದ್ದಿರುವ ಬೈಂದೂರು ತಾಲೂಕು ಕ್ಷೇತ್ರವಾಗುವ ಎಲ್ಲಾ ಅರ್ಹತೆಗಳನ್ನು ಹೊಂದಿದೆ. ಮಾತ್ರವಲ್ಲ ರಾ.ಹೆ 66ರ ಸನಿಹವೇ ಇರುವ ಬೈಂದೂರೇ ತಾಲೂಕು ಕೇಂದ್ರವಾಗುವುದು ಸೂಕ್ತ ಕೂಡ. ತಾಲೂಕು ರಚನೆ ಎನ್ನುವುದು ರಾಜಕೀಯದ ದಾಳವನ್ನಾಗಿಸದೇ ದಶಕಗಳ ಹೋರಾಟಕ್ಕೆ ಒಂದು ತಾರ್ಕಿಕ ಅಂತ್ಯ ಕಾಣಿಸಬೇಕಿದೆ.

-ಸುನಿಲ್ ಬೈಂದೂರು


ನಿಮ್ಮ ಅಭಿಪ್ರಾಯ ಬರೆಯಿರಿ 
ಕುಂದಾಪ್ರ ಡಾಟ್ ಕಾಂ- editor@kundapra.com