ಕೊಟ್ಪಾ ಯಶಸ್ವಿ ಅನುಷ್ಠಾನಕ್ಕೆ ಚಿಂತನೆ. ಕುಂದಾಪುರದ ಅಂಗಡಿಗಳಿಗೆ ದಾಳಿ

ಕುಂದಾಪುರ: ಉಡುಪಿ ಜಿಲ್ಲೆಯನ್ನು ತಂಬಾಕುಮುಕ್ತಗೊಳಿಸುವ ನಿಟ್ಟಿನಲ್ಲಿ ಕೊಟ್ಪಾ (ಸಿಗರೇಟ್ ಮತ್ತು ಇನ್ನಿತರ ತಂಬಾಕು ಉತ್ಪನ್ನ ಕಾಯ್ದೆ) ಕಾಯ್ದೆಯನ್ನು ಅನುಷ್ಠಾನಗೊಳಿಸುವ ಬಗ್ಗೆ ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ವಿಶೇಷ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. 
        ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದ ಕೊಟ್ಪಾ ಕಾಯ್ದೆಯ ವಿಶೇಷ ನೋಡೆಲ್ ಅಧಿಕಾರಿ ಡಾ| ಜಾನ್ ಭಾರತದಲ್ಲಿ ಪ್ರತಿ ವರ್ಷ ಹತ್ತು ಲಕ್ಷ ಜನರು ತಂಬಾಕು ಸೇವನೆಯಿಂದ ಸಾಯುತ್ತಿದ್ದರೇ, ಕರ್ನಾಟಕವೊಂದರಲ್ಲೇ 60,000 ಜನರು ಸಾಯುತ್ತಿದ್ದಾರೆ. ಪ್ರತಿದಿನ ರಾಜ್ಯದಲ್ಲಿ ಸರಾಸರಿ 20 ಜನ ಸಾವನ್ನಪ್ಪುತ್ತಿದ್ದಾರೆ ಇದನ್ನು ತಡೆಗಟ್ಟಲು ತಂಬಾಕು ನಿಷೇಧ ಜಾರಿಗೊಳಿಸುವುದು ಅಗತ್ಯ. ಆದರೆ ತಂಬಾಕು ಸೇವನೆ ನಮ್ಮ ಸಂಸ್ಕೃತಿಯ ಜೊತೆಗೆ ಬೆಳೆದು ಬಂದಿರುವುದರಿಂದ ಒಂದೇ ಬಾರಿಗೆ ಅನುಷ್ಠಾನಗೊಳಿಸಲು ಸಾಧ್ಯವಿಲ್ಲವಾದರೂ ಹಂತ ಹಂತವಾಗಿ ಜಾಗೃತಿ ಮೂಡಿಸಬಹುದಾಗಿದೆ. ಈಗಾಗಲೇ ಸಾರ್ವಜನಿಕ ಪ್ರದೇಶಗಳಲ್ಲಿ ತಂಬಾಕು ಮಾರಾಟ ನಿಷೇಧದ ಬಗ್ಗೆ 2003 ಕಾನೂನು ಜಾರಿಯಲ್ಲಿದೆ. ಕರ್ನಾಟಕ ರಾಜ್ಯದಲ್ಲಿ ಗದಗ ಜಿಲ್ಲೆಯನ್ನು ತಂಬಾಕು ಮುಕ್ತ ಜಿಲ್ಲೆಯನ್ನಾಗಿಸಲಾಗಿದೆ. ಕೋಲಾರದಲ್ಲಿಯೂ ಈ ಆಂದೋಲನವನ್ನು ಕೈಗೆತ್ತಿಕೊಂಡಿದ್ದೆವು. ಈಗ ಉಡುಪಿ ಜಿಲ್ಲೆಯಲ್ಲಿ ಈ ಕಾಯ್ದೆಯ ಯಶಸ್ವಿ ಅನುಷ್ಠಾನವಾಗಬೇಕಿದೆ ಎಂದರು.
       ಸಾರ್ವಜನಿಕ ಸ್ಥಳಗಳಲ್ಲಿ ಶಾಲಾ-ಕಾಲೇಜು ಆವರಣದಿಂದ 100ಮೀ ಅಂತರದಲ್ಲಿ, ಅಂಗಡಿ, ಸರಕಾರಿ ಹಾಗೂ ಕಛೇರಿ, ಹೊಟೇಲು, ಬಾರ್ ಮತ್ತು ರೆಸ್ಟೋರೆಂಟ್ ಈ ಸ್ಥಳಗಳಲ್ಲಿ ತಂಬಾಕು, ಬೀಡಿ, ಸಿಗರೇಟು ಮಾರಾಟ ಹಾಗೂ ಸೇವನೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕಡ್ಡಾಯವಾಗಿ ಎಲ್ಲಾ ಅಂಗಡಿ, ಕಛೇರಿ, ಶಾಲಾ-ಕಾಲೇಜುಗಳ ಆವರಣದಲ್ಲಿ ಪೊಲೀಸ್ ಇಲಾಖೆ ಮಾರ್ಗದರ್ಶನದಂತೆ ಫಲಕಗಳನ್ನು ಅಳವಡಿಸುವುದು ಕಡ್ಡಾಯ. ಸಿಗರೇಟು ಹಾಗೂ ಇನ್ನಿತರ ತಂಬಾಕು ಕಂಪೆನಿಗಳಿಗೆ ಸಂಬಂಧಿಸಿದ ಜಾಹೀರಾತುಗಳನ್ನು ಯಾವುದೇ ರೂಪದಲ್ಲಿ, ಎಲ್ಲಿಯೂ ಪ್ರದರ್ಶಿಸುವಂತಿಲ್ಲ. ನಿಯಮಗಳನ್ನು ಉಲ್ಲಂಘಿಸಿದಲ್ಲಿ ಪೊಲೀಸ್ ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳು, ತಾಲೂಕು  ದಂಡಾಧಿಕಾರಿಗಳು ಯಾರು ಬೇಕಾದರೂ ದಂಡ ವಿಧಿಸಬಹುದು. ಮೊದಲ ಬಾರಿ ತಪ್ಪಿತಸ್ಥರೆಂದು ಸಿಕ್ಕಿಬಿದ್ದರೆ 2 ವರ್ಷ ಜೈಲು ಹಾಗೂ ಐದು ಸಾವಿರ ದಂಡ, ಎರಡನೇ ಬಾರಿ ಸಿಕ್ಕಿ ಬಿದ್ದರೆ 5 ವರ್ಷ ಜೈಲು ಹಾಗೂ 5000 ದಂಡ ವಿಧಿಸಲಾಗುತ್ತದೆ ಎಂದರು. 
    ಬೀಡಿ, ಸಿಗರೇಟ್‌ ಮುಂತಾದ ತಂಬಾಕು ಉತ್ಪನ್ನಗಳನ್ನು ಸಾರ್ವಜನಿಕ ಸ್ಥಳದಲ್ಲಿ  ಸೇವಿಸುವಂತಿಲ್ಲ. ಕೆಲವು ನಿಷೇಧಿತ ಪ್ರದೇಶಗಳನ್ನು ಹೊರತುಪಡಿಸಿ ಬೇರೆ ಎಲ್ಲಾ  ಕಡೆಗಳಲ್ಲೂ  ತಂಬಾಕು ಉತ್ಪನ್ನಗಳ ಮಾರಾಟ ಮಾಡಬಹುದು. ಆದರೆ ಪ್ರದರ್ಶನಕ್ಕಿಡುವಂತಿಲ್ಲ. ಸಿಗರೇಟು ಸೇದುವವರು ಫ್ರೀ ಸ್ಮೋಕಿಂಗ್ ಜೋನ್ (ಕುಂದಾಪುರದಲ್ಲಿ ಇಲ್ಲ) ಬಳಸಿಕೊಳ್ಳಬಹುದು ಸೇರಿದಂತೆ ಕಾಯಿದೆಗಳ ಸಂಪೂರ್ಣ ಚಿತ್ರಣವನ್ನು ತೆರೆದಿಟ್ಟರು. 
        ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ತಹಶೀಲ್ದಾರರಾದ ಗಾಯತ್ರಿ ನಾಯಕ್, ತಾಲೂಕು ಆರೋಗ್ಯಾಧಿಕಾರಿ ಉದಯಶಂಕರ್,  ತಾಲೂಕು ಪಂಚಾಯತ್ ಅಧ್ಯಕ್ಷ ಭಾಸ್ಕರ ಬಿಲ್ಲವ, ಪುರಸಭೆ ಅಧ್ಯಕ್ಷೆ ಕಲಾವತಿ, ವೃತ್ತ ನಿರೀಕ್ಷರುಗಳಾದ ದಿವಾಕರ್, ಸುದರ್ಶನ್  ಉಪಸ್ಥಿತರಿದ್ದರು.
     ಕಾರ್ಯಗಾರಕ್ಕೆ ಶಿಕ್ಷಣ ಇಲಾಖೆಯ ಅಧಿಕಾರಿಗಳು, ತಂಬಾಕು ಹೂಡಿಕೆದಾರರು, ಚಿಲ್ಲರೆ ವ್ಯಾಪಾರಿಗಳು, ಬೇಕರಿ ಮಾಲಿಕರು, ಹೋಟೆಲ್, ರೆಸ್ಟೋರೆಂಟ್, ಬಾರ್, ಬಸ್ ಮಾಲಿಕರು, ವಾಣಿಜ್ಯ ಸಂಸ್ಥೆಗಳು, ಚಿತ್ರಮಂದಿರದ ಮಾಲಿಕರು, ತಾಲೂಕಿನ ಎಲ್ಲಾ ಆಸ್ಪತ್ರೆಗಳ ಮುಖ್ಯಸ್ಥರು, ಎನ್.ಜಿ.ಓ. ಹಾಗೂ ಇನ್ನಿತರ ಸಂಘಸಂಸ್ಥೆಗಳನ್ನು ಆಹ್ವಾನಿಸಲಾಗಿತ್ತು. ಪೊಲೀಸ್ ಇಲಾಖೆಯ ಎಲ್ಲಾ ಅಧಿಕಾರಿಗಳು ಹಾಜರಿದ್ದರು.

ವಿಶೇಷ ಕಾರ್ಯಗಾರದ ಬಳಿಕ ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ ನೆತೃತ್ವದಲ್ಲಿ, ಕುಂದಾಪುರ ವೃತ್ತನಿರೀಕ್ಷಕ ನಿರೀಕ್ಷಕ ದಿವಾಕರ್, ಬೈಂದೂರು ವೃತ್ತ ನಿರೀಕ್ಷಕ ಸುದರ್ಶನ್, ಕುಂದಾಪುರದ ಉಪನಿರೀಕ್ಷರು ಹಾಗೂ ಸಿಬ್ಬಂದಿಗಳು ಕುಂದಾಪುರ ನಗರದ ವಿವಿಧ ಅಂಗಡಿ ಹಾಗೂ ಬಾರ್ ಗಳಿಗೆ ದಾಳಿ ಮಾಡಿ ಸಿಗರೇಟು ಹಾಗೂ ತಂಬಾಕು ಪದಾರ್ಥಗಳನ್ನು ವಶಪಡಿಸಿಕೊಂಡು ಅಂಗಡಿ ಮಾಲಿಕರಿಗೆ ದಂಡ ವಿಧಿಸಲಾಯಿತು. ಜಿಲ್ಲಾ ನೋಡೆಲ್ ಅಧಿಕಾರಿ ಡಾ| ಜಾನ್ ಜೊತೆಗಿದ್ದರು.




















ಕುಂದಾಪ್ರ ಡಾಟ್ ಕಾಂ- editor@kundapra.com