ಕೃಷಿಯಲ್ಲಿ ಹೊಸ ಹೊಳಹು ಮೂಡಿಸಿದ ಗಿಳಿಯಾರು ಯುವಕರು

ಕೋಟ: ಕೃಪಿ ಎಂದರೆ ಸಾಕು ನಮ್ಮ ಯುವಕರು ಮಾರುದ್ದ ದೂರದಲ್ಲಿ ನಿಲ್ಲುತ್ತಾರೆ. ಅಲ್ಪ ಸಲ್ಪ ಓದಿಕೊಂಡವರಂತೂ ಲಾಭವಿಲ್ಲದೆ ಮೈಮುರಿದು ಕೆಲಸ ಮಾಡುವವರ್ಯಾರು ಎಂದು ಪ್ರಶ್ನಿಸುತ್ತಾರೆ. ಪರಿಣಾಮವಾಗಿ ವರ್ಷದಿಂದ ವರ್ಷಕ್ಕೆ ಕೃಷಿ ಚಟುವಟಿಕೆಗಳೂ ಕ್ಷೀಣಿಸುತ್ತಿವೆ. ಇಂತಹ ಸಂದರ್ಭದಲ್ಲಿ ಕೋಟದ ಗಿಳಿಯಾರು ಹಾಗೂ ಬನ್ನಾಡಿ ಪರಿಸರದ ಈ ಮೂವರು ಯುವಕರ ಕೃಷಿ ಬಗೆಗಿನ ಆಸಕ್ತಿ ಈ ಕ್ಷೇತ್ರದಲ್ಲಿ ಒಂದಿಷ್ಟು ಹೊಸ ಹೊಳವುಗಳನ್ನು ಮೂಡಿಸಿದೆ. ಮೊದಲ ಪ್ರಯತ್ನದಲ್ಲಿಯೇ ಇವರು ಕೈಗೊಂಡ ವಾಣಿಜ್ಯ ಕೃಷಿಯು, ಇಲ್ಲಿ ನಷ್ಟವಾಗುವುದು ಸಾಮಾನ್ಯ ಎಂಬುದಕ್ಕೆ ಅಪವಾದವಾಗಿ ನಿಂತಿದೆ. ಕಡಿಮೆ ಬಂಡವಾಳದಲ್ಲಿ ಹೆಚ್ಚು ಗಳಿಕೆಯನ್ನು ಕಂಡುಕೊಂಡಿರುವ ಈ ತ್ರಿಮೂರ್ತಿಗಳು ನಿಜಕ್ಕೂ ಯುವಸಮುದಾಯಕ್ಕೆ ಮಾದರಿಯಾಗಿ ನಿಂತಿದ್ದಾರೆ. 

ತ್ರಿಮೂರ್ತಿಗಳು ಮಾಡಿದ್ದೇನು?
        ಕಳೆದ ಎರಡು ತಿಂಗಳ ಹಿಂದೆ ಬನ್ನಾಡಿಯ ಕಮ್ಮಟಕುದ್ರುವಿನ ವಾರ್ಷಿಕವಾಗಿ ಭತ್ತ ಬೆಳೆಯುತ್ತಿದ್ದ ಒಂದು ಎಕರೆ ಗದ್ದೆಯಲ್ಲಿ ಕಲ್ಲಂಗಡಿ ಬೆಳೆಯುವ ಸಾಹಸಕ್ಕೆ ಮುಂದಾದರು. ಕೇವಲ 15 ಸಾವಿರ ರೂಪಾಯಿ ಬಂಡವಾಳ ವಿನಿಯೋಗಿಸಿ, ಬಿಡುವಿನ ವೇಳೆಯಲ್ಲಿ ಗೊಬ್ಬರ, ನೀರು ಹರಿಸಿ ಗೀಡಗಳನ್ನು ಪೋಷಿಸಿ 70-80 ದಿನಗಳಲ್ಲಿ ಲಕ್ಷ ರೂಗಳಷ್ಟು ಲಾಭದ ಕಲ್ಲಂಗಡಿ ಬೆಳೆಯನ್ನು ತೆಗೆದಿದ್ದಾರೆ. ಅಷ್ಟಕ್ಕೂ ಇವರ್ಯಾರು ವೃತ್ತಿಪರ ಕೃಷಿಕರಲ್ಲ. ವಸಂತ ಗಿಳಿಯಾರ್, ಅಶೋಕ್ ಶೆಟ್ಟಿ ಬನ್ನಾಡಿ ಹಾಗೂ ಅರುಣಕುಮಾರ್ ಶೆಟ್ಟಿ ಈ ಮೂವರೂ ಬೇರೆ ಬೇರೆ ವೃತ್ತಿಯಲ್ಲಿದ್ದಾರೆ. ವಸಂತ ಗಿಳಿಯಾರು ಪ್ರಸಿದ್ಧ ಪತ್ರಿಕೆಯಾದ 'ನಿಮ್ಮ ಅಭಿಮತ' ಪಾಕ್ಷಿಕದ ಸಂಪಾದಕರು. ಅಶೋಕ್ ಶೆಟ್ಟಿ ಸಹನಾ ಡೆವಲಪರ್ಸ್ ನಲ್ಲಿ ಸಿವಿಲ್ ಇಂಜಿನೀಯರ್ ಆಗಿದ್ದರೇ, ಅರುಣಕುಮಾರ್ ಶೆಟ್ಟಿ ಕೆ.ಎಸ್. ಹೆಗ್ಡೆ & ಕಂಪೆನಿಯಲ್ಲಿ ಚಾರ್ಟೆಡ್ ಅಕೌಂಟೆಂಟ್ ವಿದ್ಯಾರ್ಥಿ. ಹೇಳಿಕೇಳಿ ಎಲ್ಲರದ್ದೂ ವೈಟ್ ಕಾಲರ್ ವೃತ್ತಿ. ಆದರೂ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಅವರ ಪ್ರವೃತ್ತಿ ಮಾತ್ರ ವಿಶೇಷವಾದುದು.

ಕಡಿಮೆ ಬಂಡವಾಳ, ಸಲ್ಪ ಶ್ರಮ, ಹೆಚ್ಚು ಲಾಭ:
       ಸಾಮಾನ್ಯವಾಗಿ ಈ ಪ್ರದೇಶಗಳಲ್ಲಿ ಸಾಂಪ್ರದಾಯಿಕ ಬೆಳೆ ಭತ್ತವನ್ನು ಮಳೆಗಾಲದಲ್ಲಿ ಮಾತ್ರ ಬೆಳೆಯಲಾಗುತ್ತಿತ್ತು. ಕಮ್ಮಟಕುದ್ರುವಿನ ಮೂರು ಭಾಗಗಳಲ್ಲಿ ಹೊಳೆ ಇದ್ದುದರಿಂದ ಇಲ್ಲಿ ನೀರಿನ ಕೊರತೆ ಅಷ್ಟಾಗಿ ಇರಲಿಲ್ಲ. ಆದರೂ ವರ್ಷಕ್ಕೆ ಒಂದೇ ಬೆಳೆಯನ್ನು ತೆಗೆಯಲಾಗುತ್ತಿತ್ತು. ಕೃಷಿ ಭೂಮಿಯನ್ನು ಹಡಿಲು ಬಿಡುವ ಬದಲು ಕಲ್ಲಂಗಡಿ ಬೆಳೆದರೆ ಹೇಗೆ ಎಂಬ ಯೋಚನೆ ಬಂದದ್ದು ಆಗಲೇ. ಇದಕ್ಕೆ ಪೂರಕವಾಗಿ ಮನು ಶೆಟ್ಟಿ ಎಂಬುವವರು ಈ ಯುವಕರ ಉತ್ಸಾಹಕ್ಕೆ ನೀರೆರೆದರು. ಪ್ರಯೋಗಾರ್ಥವೆಂಬಂತೆ ಕಮ್ಮಟಕುದ್ರಿನ ಶೇಖರ ಶೆಟ್ಟಿ ಎಂಬುವವರ ಕೃಷಿ ಗದ್ದೆಯಲ್ಲಿ ಸಾಧಾ ಪದ್ಧತಿಯಂತೆ ಏರಿ ತೆಗೆದು ಕಲ್ಲಂಗಡಿ ಬೀಜ ನೆಟ್ಟರು. ಪ್ರತಿ ಎರಡು ದಿನಗಳಿಗೊಮ್ಮೆ ಶೇಖರ ಶೆಟ್ಟಿಯವರ ಮನೆಯ ಬಾವಿಯಿಂದ ಪಂಪ್ ಸೆಟ್ ಮೂಲಕ ಗದ್ದೆಗೆ ನೀರು ಹಾಯಿಸಿದರು. ಹಟ್ಟಿ ಗೊಬ್ಬರ, ಸಾವಯಕ ಗೊಬ್ಬರಗಳನ್ನು ಅಗತ್ಯಕ್ಕೆ ತಕ್ಕಂತೆ ಬಳಸಿದರು. ಎಲೆಗಳಿಗೆ ಹುಳಭಾದೆಯನ್ನು ತಪ್ಪಿಸಲು ಬೇವಿನ ಸ್ಟ್ರೇ ಸಿಂಪಡಿಸಿದರು. ಕಲ್ಲಂಗಡಿ ಕಾಯಿ ಬಿಡುತ್ತಿದ್ದಂತೆಯೇ ರಾತ್ರಿ ವೇಳೆಯಲ್ಲಿ ಕಾದು ಉತ್ತಮ ಬೆಳೆ ತೆಗೆದರು.
       68ದಿನಗಳಲ್ಲಿ ಕಲ್ಲಂಗಡಿ ಕಟಾವಿಗೆ ಸಿದ್ಧಗೊಂಡಿತು. ಮೊದಲ ಹಂತದಲ್ಲಿ 2.2 ಟನ್ ಕಲ್ಲಂಗಡಿ ದೊರೆಯಿತು. ಎರಡನೇ ಕಟಾವಿನ ವೇಳೆಗೆ 3.5 ಟನ್ ಕಲ್ಲಂಗಡಿ ದೊರೆಯಿತು. ಇನ್ನೂ ಒಂದು ಹಂತದ ಕಟಾವು ಬಾಕಿ ಇದೆ. ಭದ್ರ ಪೂಜಾರಿ ಎನ್ನುವವರು ಇವರು ಬೆಳೆದ ಕಲ್ಲಂಗಡಿ ಕೆ.ಜಿಗೆ 12ರಿಂದ 14ರೂ. ವರೆಗಿನ ಮಾರುಕಟ್ಟೆಯಲ್ಲಿ ಮೌಲ್ಯದಂತೆ ಹಣ ನೀಡಿ ಖರೀದಿಸಿದ್ದಾರೆ. ಸಹಜವಾಗಿ ನಿರೀಕ್ಷೆಗಿಂತ ಅಧಿಕ ಲಾಭವನ್ನೂ ಪಡೆದಿದ್ದಾರೆ. 

ಕನಸು ದೊಡ್ಡದಿದೆ. ಸಾಕಾರಗೊಳಿಸುವ ಛಲವೂ ಇದೆ
       ತ್ರಿಶೂಲ್ ಅಸೋಸಿಯೇಟ್ಸ್ ಎಂಬ ಸಂಸ್ಥೆಯ ಮೂಲಕ ವಿವಿಧ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಈ ಯುವಕರ ತಂಡ ಕೃಷಿಯನ್ನು ಈ ಸಂಸ್ಥೆಯ ಚಟುವಟಿಕೆಗಳಿಗೆ ಪೂರಕವಾಗಿ ಬಳಸಿಕೊಂಡಿದೆ. ಕೃಷಿಯಿಂದ ಬರುವ ಲಾಭವನ್ನು ಇದರ ಮೂಲಕವೇ ಅಸಾಹಯಕರಿಗೆ, ಅಗತ್ಯವಿರುವವರಿಗೆ ತಲುಪಿಸುವ ಗುರಿ ಇವರದ್ದು. 
ಮುಂದಿನ ದಿನಗಳಲ್ಲಿ ವಾಣಿಜ್ಯ ಬೆಳೆಯಾದ ಕಲ್ಲಂಗಡಿಗೆ ಆಧುನಿಕ ಪದ್ದತಿಯಾದ ಡ್ರಿಪ್ಸ್ ಸಿಸ್ಟಮ್ ಮಂತಾದವುಗಳನ್ನು ಅಳವಡಿಸಿಕೊಳ್ಳುವ ಇಂಗಿತ ಹೊಂದಿದ್ದಾರೆ. ಕೀಟಭಾದೆ, ನವಿಲುಗಳ ಸಮಸ್ಯೆಯನ್ನೂ ಎದುರಿಸಬೇಕಾಗಿದೆ. ಇಷ್ಟೇ ಅಲ್ಲದೇ ವಡ್ಡರ್ಸೆ ಕಾವಾಡಿಯ 5 ಎಕರೆ ಜಾಗದಲ್ಲಿ ಪಪ್ಪಾಯಿ, ಪರಂಗಿ ಬೆಳೆ ತೆಗೆಯುವ ಯೋಜನೆಯನ್ನೂ ಹಾಕಿಕೊಂಡಿದ್ದಾರೆ. ನೀರಿನ ಅನುಕೂಲಕ್ಕೆ ತಕ್ಕಂತೆ ಯೋಜನೆ ಸಿದ್ಧಪಡಿಸುತ್ತಿದ್ದಾರೆ.

ನಿಜಕ್ಕೂ ಇದು ಶ್ಲಾಘನಾರ್ಹ. 
       ತಮ್ಮ ವೃತ್ತಿ ಬದುಕಿನ ಜಂಜಾಟದ ನಡುವೆಯೂ ಕೃಷಿಯತ್ತ ಒಲವು ತೋರಿರುವ ಈ ಯುವಕರುಗಳ ಆಸಕ್ತಿ ಮಾತ್ರ ಮೆಚ್ಚುವಂತದ್ದು. ಒಂದು ಬೆಳೆಗಷ್ಟೇ ಅಂಟಿಕೊಂಡು ನಿರೀಕ್ಷಿತ ಲಾಭ ಪಡೆಯದೆ ಒದ್ದಾಡುವ ಈ ಊರಿನ ರೈತಭಾಂದವರಿಗೆ ಹೊಸ ಮಾರ್ಗವೊಂದನ್ನು ತೋರಿಸಿಕೊಟ್ಟಿದ್ದಾರೆ. ಈ ಕ್ಷೇತ್ರದಲ್ಲಿಯೂ ಒಂದು ಸುಂದರ ಬದುಕಿದೆ ಎಂಬುದನ್ನು ತೋರಿಸಿಕೊಟ್ಟ ಈ ಯುವಕರು ಆಧುನಿಕ ಕೃಷಿ ಪದ್ಧತಿಯನ್ನು, ಸರಕಾರದ ಸೌಲಭ್ಯಗಳೊಂದಿಗೆ ಅಳವಡಿಸಿಕೊಂಡು ಮತ್ತಷ್ಟು ಯಶಸ್ಸು ಸಾಧಿಸಲಿ. ಆ ಮೂಲಕ ನಮ್ಮ ಯುವಕರುಗಳಿಗೆ ಮಾದರಿಯಾಗಲಿ.
-ಸುನಿಲ್ ಬೈಂದೂರು

ಕುಂದಾಪ್ರ ಡಾಟ್ ಕಾಂ- editor@kundapra.com