ಹಾಸಿಗೆ ಹಿಡಿದ ಅಸಹಾಯಕ ಯುವಕನಿಗೆ ಬೇಕಿದೆ ಆರ್ಥಿಕ ಆಸರೆ

ಉಡುಪಿ: ವಿಧಿಯಾಟವೆಂಬುದು ಎಂಥಹ ಕ್ರೂರವಾದುದು ಎಂಬುದಕ್ಕೆ ಈ ಯುವಕನೇ ಸಾಕ್ಷಿ. ಛಲದಿಂದ ಬದುಕು ಕಟ್ಟಿಕೊಳ್ಳಬೇಕೆಂಬುದು ಹೊರಟ ಯುವಕ ಈಗ ಹಾಸಿಗೆಯಿಂದಾಚೆ ಏಳಲಾರದೆ ಪರಿತಪಿಸುತ್ತಿರುವ ರೀತಿ ಮನಕಲಕುವಂತದ್ದು.
    ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬಂಗ್ಲೆಗುಡ್ಡೆಯ ನಿವಾಸಿ ಕೃಷ್ಣಯ್ಯ ಶೆಟ್ಟಿ ಮತ್ತು ಪ್ರೇಮಾ ಎಂಬುವವರ ಎರಡನೇ ಮಗನಾದ ನಾಗರಾಜ ಶೆಟ್ಟಿ (26) ಕಳೆದ 10 ವರ್ಷಗಳಿಂದ ಹಾಸಿಗೆಯಿಂದ ಎಳಲಾರದೇ ತನ್ನೆಲ್ಲಾ ಬೇಕು-ಬೇಡಗಳಿಗೆ ಮತ್ತೊಬ್ಬರನ್ನು ಅವಲಂಬಿಸಬೇಕಾದ ಸ್ಥಿತಿಯಲ್ಲಿ ಮಲಗಿದ್ದಾರೆ.
   ನಾಗರಾಜ ಅವರ ಮನೆಯಲ್ಲಿ ತೀರಾ ಬಡತನವಾದ್ದರಿಂದ ವಿದ್ಯಾಭ್ಯಾಸವನ್ನು ಪಿಯುಸಿಗೆ ಮೊಟಕುಗೊಳಿಸಿದ ಖಾಸಗಿ ವಿದ್ಯುತ್ ಗುತ್ತಿಗೆದಾರರಲ್ಲಿ ಬಳಿ ವಿದ್ಯುತ್ ಕಂಬ ಹಾಕುವ ಹಾಗೂ ತಂತಿ ಎಳೆಯುವ ಕೆಲಸಕ್ಕೆ ಸೇರಿದರು. 2005ರಲ್ಲಿ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ಕಂಬದಿಂದ ಆಯತಪ್ಪಿ ಕೆಳಕ್ಕೆ ಬಿದ್ದಿದ್ದರಿಂದ ಅವರ ಬೆನ್ನುಮೂಳೆ ಮುರಿತಕ್ಕೊಳಗಾಗಿತ್ತಲ್ಲದೇ ಮೆದುಳು ಬಳ್ಳಿಯು ಜಖಂಗೊಂಡಿತ್ತು. ಇದರಿಂದ ಸೊಂಟದ ಕೆಳಭಾಗ ನಿಶ್ಚಲವಾಗಿತ್ತು. ಸ್ವಂತ ದುಡಿಮೆಯಲ್ಲಿ ಓದು ಮುಂದುವರಿಸಬೇಕು, ಮುಂದೆ ಒಳ್ಳೆಯ ಉದ್ಯೋಗ ಗಿಟ್ಟಿಸಿಕೊಳ್ಳಬೇಕು ಎಂದು ಹೊರಟ್ಟಿದ್ದ ಯುವಕ ಬದುಕು ಹಾಸಿಗೆಗೆ ಸೀಮಿತವಾಯಿತು.
      ಮಣಿಪಾಲದ ಕೆಎಂಸಿಯಲ್ಲಿ ಶಸ್ರ್ತಚಿಕಿತ್ಸೆ ನಡೆಸಿದರೂ ಕೂಡ ಫಲಕಾರಿಯಾಗಲಿಲ್ಲ. ಆದರೆ ಮತ್ತೆ ಮತ್ತೆ ಶಸ್ತ್ರ  ಚಿಕಿತ್ಸೆಗೆ ಒಡ್ಡಿಕೊಳ್ಳಬೇಕಾದ ಅನಿವಾರ್ಯವೊಂದು ತಲೆದೂರಿತು. ಈವರೆಗೆ ನಾಗರಾಜ 16 ಬಾರಿ ಆಸ್ಪತ್ರೆಗೆ ದಾಖಲಾಗಿದ್ದು 15ಕ್ಕೂ ಹೆಚ್ಚು ಭಾರಿ ವಿವಿಧ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಇಲ್ಲಿಯತನಕ ಚಿಕಿತ್ಸೆಗೆ 9 ಲಕ್ಷಕ್ಕೂ ಹೆಚ್ಚು ಹಣ ಚಿಕಿತ್ಸೆಗೆ ಖರ್ಚಾಗಿದೆ. 
    ಪ್ರತಿತಿಂಗಳು ಬರುವ 4ರಿಂದ 5ಸಾವಿರದಷ್ಟು  ಔಷಧಿ ಖರ್ಚನ್ನು ವ್ಯಯಿಸಲು ಈ ಬಡ ಕುಟುಂಬ ಹೆಣಗಾಡುತ್ತಿದೆ. ಇದರ ನಡುವೆ ನಾಗರಾಜರ ಬೆನ್ನಮೂಳೆಯ ಭಾಗದಲ್ಲಿ ಹಾಕಲಾಗಿದ್ದ ರಾಡ್ ನಿಂದ ತೀವ್ರ ನೋವುಕಾಣಿಸಿಕೊಳ್ಳುತ್ತಿದ್ದು ಅದನ್ನು ತೆಗೆಯಲೆಬೇಕು, ಮತ್ತೊಂದು ಶಸ್ತ್ರ ಚಿಕಿತ್ಸೆ ಅನಿವಾರ್ಯ ಎಂದು ವೈದ್ಯರು ತಿಳಿಸಿದ್ದಾರೆ. ಒಬ್ಬನೇ ಅಣ್ಣನ ಆದಾಯದಲ್ಲಿ ಅನಾರೋಗ್ಯ ಪೀಡಿತ ತಂದೆ, ತಾಯಿ ಹಾಗೂ ಇತರ ಚಿಕಿತ್ಸೆಯ ವೆಚ್ಚವನ್ನು ಭರಿಸುವುದು ಬಡ ಕುಟುಂಬಕ್ಕೆ ದೂರದ ಮಾತು. ಇಂತಹ ಶೋಚನೀಯ ಸ್ಥಿತಿಯಲ್ಲಿರುವ ಈ ಕುಟುಂಬಕ್ಕೆ ಇಷ್ಟು ವರ್ಷಗಳವರೆಗೂ ಹೇಳಿಕೊಳ್ಳುವಂತಹ ಆರ್ಥಿಕ ನೆರವೂ ಸಿಗದಿರುವುದರಿಂದ ಅವರು ಮತ್ತಷ್ಟು ಕಂಗೆಟ್ಟಿದ್ದಾರೆ. ಸಹೃದಯಿಗಳ ನೆರವು ಇವರಿಗೆ ಅಗತ್ಯವಾಗಿ ಬೇಕಾಗಿದೆ. 
    ಕುಂದಾಪ್ರ ಡಾಟ್ ಕಾಂ ನೊಂದಿಗೆ ಮಾತನಾಡಿರುವ ನಾಗರಾಜ ತನ್ನ ಚಿಕಿತ್ಸೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಒದಗಿಸಿದ್ದಾರೆ. ಅದರಂತೆ ಶೀರ್ಘ್ರವೇ ಅವರಿಗೆ ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ. 
      ನಾಗರಾಜ ಅವರಿಗೆ ನೆರವು ನೀಡಲಿಚ್ಚಿಸುವವರು ಅಜೆಕಾರ್ ನ ಕಾರ್ಪೋರೇಶನ್ ಬ್ಯಾಂಕ್ ಶಾಖೆಯ ಖಾತೆ ನಂ. 009800101014791 (ಐ.ಎಫ್.ಎಸ್.ಸಿ ಕೋಡ್: CORP0000098) ಇಲ್ಲಿಗೆ ಜಮಾ ಮಾಡಬಹುದಾಗಿದೆ.
ಅವರನ್ನು ನೇರವಾಗಿ ಭೇಟಿಯಾಗಲಿಚ್ಛಿಸುವವರು ನಾಗರಾಜ ಶೆಟ್ಟಿ s/o ಕೃಷ್ಣಯ್ಯ ಶೆಟ್ಟಿ, ಅನಂತ ನಿಲಯ, ಬಂಗ್ಲೆಗುಡ್ಡೆ, ಅಂಚೆ-ಅಜೆಕಾರು, ಮರ್ಣೆ ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಈ ವಿಳಾಸದಲ್ಲಿ ಸಂಪರ್ಕಿಸಬಹುದು. ಮೊಬೈಲ್ 7760940737



ಕುಂದಾಪ್ರ ಡಾಟ್ ಕಾಂ- editor@kundapra.com