ಕುಂದಾಪುರ ತಾಲೂಕಿನ 11 ಕೇಂದ್ರಗಳಲ್ಲಿ ಪಿಯುಸಿ ಪರೀಕ್ಷೆ

ಕುಂದಾಪುರ: ಇಂದಿನಿಂದ ರಾಜ್ಯಾದ್ಯಂತ ದ್ವಿತೀಯ ಪದವಿಪೂರ್ವ ಪರೀಕ್ಷೆಗಳು ಆರಂಭಗೊಂಡಿದ್ದು ಪದವಿಪೂರ್ವ ಶಿಕ್ಷಣ ಇಲಾಖೆಯು ಪರೀಕ್ಷೆ ಅಗತ್ಯವಾದ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದೆ.
      ರಾಜ್ಯದಲ್ಲಿ ಒಟ್ಟು 1017 ಕೇಂದ್ರಗಳಲ್ಲಿ 6,10,939 ಮಂದಿ ಪರೀಕ್ಷೆ ಬರೆಯುತ್ತಿದ್ದರೇ, ಕುಂದಾಪುರ ತಾಲೂಕಿನ 11 ಕೇಂದ್ರಗಳಲ್ಲಿ ಸುಮಾರು 5,000 ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸುತ್ತಿದ್ದಾರೆ. ತಾಲೂಕಿನ ಶಿರೂರು, ಬೈಂದೂರು, ಉಪ್ಪುಂದ, ನಾವುಂದ, ವಂಡ್ಸೆ, ಕುಂದಾಪುರ, ಕೋಟೇಶ್ವರ, ಬಿದ್ಕಲಕಟ್ಟೆ ಸರಕಾರಿ ಕಾಲೇಜುಗಳಲ್ಲಿ ಹಾಗೂ ಎಸ್.ವಿ. ಕಾಲೇಜು ಗಂಗೊಳ್ಳಿ, ಆರ್. ಎನ್. ಶೆಟ್ಟಿ ಕುಂದಾಪುರ, ಭಂಡಾರ್ಕಾರ್ಸ್ ಕಾಲೇಜು ಕುಂದಾಪುರದ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸುತ್ತಿದ್ದಾರೆ  ಈ ಪೈಕಿ ಕುಂದಾಪುರ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿಯೇ 618 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದಾರೆ.
     ಜಿಲ್ಲಾಡಳಿತದ ಸೂಚನೆಯಂತೆ ತಾಲೂಕು ಮಟ್ಟದಲ್ಲಿ ತಹಸೀಲ್ದಾರ್, ಖಜಾನೆ ಅಧಿಕಾರಿ ಮತ್ತು ಶಿಕ್ಷಣಾಧಿಕಾರಿಗಳು ಅಗತ್ಯ ಕ್ರಮ ಕೈಗೊಂಡಿದ್ದು, ಪ್ರತಿ ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್‌ವರೆಗೆ ನಿಷೇಧಾಜ್ಞೆಯನ್ನು ಜಾರಿ ಮಾಡಲಾಗಿದೆ. 
      ಇಂದು ವ್ಯವಹಾರ ಅಧ್ಯಯನ ಮತ್ತು ರಸಾಯನಶಾಸ್ತ್ರ ವಿಷಯದ ಪರೀಕ್ಷೆಯನ್ನು ಎದುರಿಸಿದ್ದು, ಮಾರ್ಚ್ 27ರ ವರೆಗೆ ಪರೀಕ್ಷೆಗಳು ನಡೆಯಲಿದೆ.

ಚಿತ್ರಗಳು: ಕುಂದಾಪುರ ಸರಕಾರಿ ಪದವಿಪೂರ್ವ ಕಾಲೇಜು ಹಾಗೂ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು

ಕುಂದಾಪ್ರ ಡಾಟ್ ಕಾಂ- editor@kundapra.com