ಕುಂದಾಪುರವನ್ನು ಬೆಚ್ಚಿ ಬಿಳಿಸಿದ ಪ್ರಕರಣ: ಪೊಲೀಸ್ ಪೇದೆ ಶ್ರೀಧರ್ ಹಂತಕರಿಗೆ ಶಿಕ್ಷೆ

ಕುಂದಾಪುರ: ಇಲ್ಲಿನ ಸಂಗಮ್ ಸೇತುವೆ ಬಳಿ 2010ರ ಮೇ 31ರಂದು ಬೈಂದೂರು ಪೊಲೀಸ್ ಪೇದೆ ಶ್ರೀಧರ್ ಅವರನ್ನು ಹತ್ಯೆಗೈದ ಪ್ರಕರಣದ ವಿಚಾರಣೆಯ ತೀರ್ಪು 5ವರ್ಷಗಳ ಬಳಿಕ ಗುರುವಾರ ಹೊರಬಿದ್ದಿದೆ.

       ಶ್ರೀಧರ್ ಅವರನ್ನು ಹತ್ಯೆಗೈದ ಆರೋಪಿ ರಘು(32) ಎಂಬುವವನಿಗೆ ಜೀವಾವಧಿ ಶಿಕ್ಷೆ ಹಾಗೂ ವೃತ್ತನಿರೀಕ್ಷಕ ಕಾಂತರಾಜ್ ಮೇಲೆ ಹಲ್ಲೆಗೆ ಮುಂದಾದ ಆರೋಪಿ ರಾಜೇಶ್ (35) ಎಂಬಾತನಿಗೆ 5 ವರ್ಷ ಕಠಿಣ ಸಜೆ ವಿಧಿಸಿ ಕುಂದಾಪುರದ ಹೆಚ್ಚುವರಿ ಜಿಲ್ಲಾ ಸತ್ರನ್ಯಾಯಾಧೀಶ ರಾಜಶೇಖರ ವಿ. ಪಾಟೀಲ್ ತೀರ್ಪು ಪ್ರಕಟಿಸಿದ್ದಾರೆ .
ಪ್ರಕರಣದ ವಿವರ: ಮೇ 31ರ ರಾತ್ರಿ ನಡೆದ ಈ ಪ್ರಕರಣ ಇಡೀ ಕುಂದಾಪುರವನ್ನೇ ಬೆಚ್ಚಿ ಬಿಳಿಸಿತ್ತು. ಜಿಲ್ಲೆಯ ಇತಿಹಾಸದಲ್ಲೂ ಕರ್ತವ್ಯನಿರತ ಪೊಲೀಸ್ ಪೇದೆ ದರೋಡೆಕೋರರ ಅಟ್ಟಹಾಸಕ್ಕೆ ಬಲಿಯಾಗಿದ್ದೂ ಕೂಡ ಇದೇ ಮೊದಲಾಗಿತ್ತು.

ರಕ್ತ ಹರಿಸಿದ ನರಹಂತಕರು:
   2010 ರ ಮೇ.28 ರಂದು ಕೇರಳದ ಕೊಟ್ಟಾಯಂನಿಂದ ಬಂದಿದ್ದ  ಈ ಇಬ್ಬರು ಆರೋಪಿಗಳು ಮೇ.29ರಂದು ಬೈಂದೂರಿಗೆ ಬಂದು 29ರ ರಾತ್ರಿ ಬೈಂದೂರಿನ ಪೆಟ್ರೋಲ್‌ ಬಂಕ್‌ನಲ್ಲಿ ದರೋಡೆ ನಡೆಸಿ, ಅಲ್ಲಿಂದ ಕೊಲ್ಲೂರಿಗೆ ತೆರಳಿ ಲಾಡ್ಜವೊಂದರಲ್ಲಿ ಉಳಿದುಕೊಂಡು ದೇವರ ದರ್ಶನ ಮಾಡಿ ಮೇ.30 ರಂದು ಕುಂದಾಪುರಕ್ಕೆ ಬಂದಿದ್ದರು.
     ಕುಂದಾಪುರ ಅಂಗಡಿಯೊಂದರಿಂದ ‌ ಚೂರಿಯನ್ನು ಖರೀದಿಸಿ ಮೇ 31ರ ರಾತ್ರಿ ಕುಂದಾಪುರ ಪಾರಿಜಾತ ಸಮೀಪದ ಜಿ.ಎಸ್.ನಾಯಕ್ ಪೆಟ್ರೋಲ್ ಬಂಕ್‌ನಲ್ಲಿ ದರೋಡೆಗೆ ಯತ್ನಿಸಿ ಅಲ್ಲಿಯೇ ಮಲಗಿದ್ದ ಖಾಸಿಗಿ ಬಸ್ಸಿನ ಕ್ಲೀನರ್ ಸಂತೋಷ್ ಗೆ ಚೂರಿಯಿಂದ ತಿವಿಯಲು ಮುಂದಾಗಿದ್ದರು. ಆತ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಆತನ ಬೆರಳಿಗೆ ತಿವಿದು ಪರಾರಿಯಾಗಿದ್ದರು.  ಪೊಲೀಸರಿಗೆ ಸುದ್ದಿ ತಿಳಿದು ಅಲರ್ಟ್ ಆಗಿದ್ದರು.
    ಮುಂದೆ ಆರೋಪಿಗಳು ಕುಂದಾಪುರದ ರಾಮಮಂದಿರ ವಠಾರದ ಅಂಗಡಿಯೊಂದರ ಬಾಗಿಲನ್ನು ಮುರಿಯಲು ಪ್ರಯತ್ನಿಸುತ್ತಿದ್ದರು. ವಿಷಯ ತಿಳಿದು ಅಲ್ಲಿಗೆ ಬಂದ ಖಾರ್ವಿಕೇರಿಯ ವಿವೇಕ್‌ ಮೇಲೆ ಹಲ್ಲೆ ನಡೆಸಿ ಅವರಿಂದಲೂ ಮೊಬೈಲ್‌ ಕಸಿದುಕೊಂಡು ಪರಾರಿಯಾಗಿದ್ದರು. ಈ ನಡುವೆ ಅಲ್ಲಿಗೆ ಬಂದ ಗೂರ್ಖನ ಮೇಲು ಹಲ್ಲೆ ನಡೆಸಿದರು.

ಸುಳಿವು ಹಿಡಿದು ಹೊರಟ ಪೊಲೀಸರು, ಸಾಹಸ ಮೆರೆದ ಶ್ರೀಧರ್ 

      ಆರೋಪಿಗಳ ಸುಳಿವು ಹುಡುಕಿ ಬಂದ ಅಂದಿನ ಎಎಸ್‌ಐ ಸುಬ್ಬಣ್ಣ  ರಾಮ ಮಂದಿರ ಪರಿಸರವನ್ನು ರೌಂಡ್‌ಅಪ್ ಆಗಿದ್ದರು. ಆದರೆ ಎಎಸ್‌ಐ ಸುಬ್ಬಣ್ಣ ಅವರ ಮೇಲೆ ಮುಗಿಬಿದ್ದ ದುಷ್ಕರ್ಮಿಗಳು ತಪ್ಪಿಸಿಕೊಂಡಿದ್ದರು. ಅವರನ್ನು ಬೆನ್ನತ್ತಿದಾಗ ಸಂಗಮ್ ಬಳಿ ನಿಂತಿರುವುದನ್ನು ಗಮನಿಸಿದರು. ಆದರೆ ಅಲ್ಲಿಂದ ಆರೋಪಿಗಳು ಪೊಲೀಸರಿಗೆ ಹೆದರದೇ ಅವರ ಮೇಲೆಯೇ ಹಲ್ಲೆಗೆ ಮುಂದಾದರು. ಪೊಲೀಸ್ ಜೀಪಿಗೆ ಕಬ್ಬಿಣದ ಸರಳಿನಿಂದ ಬಾರಿಸುತ್ತಿದ್ದಂತೆ ಹಿಂದೆ ಸರಿದ ಪೊಲೀಸರು ಮೇಲಾಧಿಕಾರಿಗೆ ವಿಷಯ ತಿಳಿಸಿದರು.
      ರಾತ್ರಿ ಪಾಳಿಯಲ್ಲಿದ್ದ ವೃತ್ತನಿರೀಕ್ಷಕ ಕಾಂತರಾಜು, ಜೀಪು ಚಾಲಕ ಶ್ರೀಧರ್ ಬೈಂದೂರಿನಿಂದ ಕುಂದಾಪುರಕ್ಕೆ ಬರುತ್ತಿರುವಂತೆ ಸಂಗಮ್ ಸೇತುವೆ ಬಳಿ ದರೋಡೆಕೋರರು ಇರುವುದನ್ನು ಗಮನಿಸುತ್ತಾರೆ. ವೃತ್ತನಿರೀಕ್ಷಕರು ಅವರನ್ನು ಯಾರೆಂದು ವಿಚಾರಿಸಿ ಬರಲು ಶ್ರೀಧರ್ ಅವರಿಗೆ ತಿಳಿಸುತ್ತಾರೆ. ಅಲ್ಲಿಗೆ ತೆರಳಿದ ಶ್ರೀಧರ್ ಅನುಮಾನಗೊಂಡು ಜೀವದ ಹಂಗುತೊರೆದು ಆರೋಪಿಯನ್ನು ಹಿಡಿಕೊಂಡಿದ್ದಾಗ ಹಿಂದಿನಿಂದ ಬಂದ ಮತ್ತೊಬ್ಬ ಆರೋಪಿ ತನ್ನ ಕೈಯಲ್ಲಿದ್ದ ಚಾಕುವಿನಿಂದ ಶ್ರೀಧರ್ ರ ಕುತ್ತಿಗೆ ಬೆನ್ನಿಗೆ ತಿವಿದಿದ್ದಾನೆ. ಅಲ್ಲಿಗೆ ಬಂದ ಸರ್ಕಲ್ ಇನ್ಸ್‌ಪೆಕ್ಟರ್ ಕಾಂತರಾಜು ಮೇಲೆ ಕೂಡ ಹಲ್ಲೆಗೆ ಮುಂದಾಗಿದ್ದಾರೆ. ವೃತ್ತ ನಿರೀಕ್ಷಕ ಕಾಂತರಾಜು ಅವರ ಪಿಸ್ತೂಲ್ ಇದೆ ಹೊತ್ತಿಗೆ ಜಾಮ್ ಆಗಿದ್ದರಿಂದ ಆರೋಪಿಗಳು ಸಂಗಮ್ ಸೇತುವೆಯಿಂದ ಕೆಳಗಡೆ  ನದಿಗೆ ಧುಮುಕಿ ತಪ್ಪಿಸಿಕೊಂಡಿದ್ದರು. ತಿವಿದ ರಭಸಕ್ಕೆ  ಪೊಲೀಸ್ ಪೇದೆ ಶ್ರೀಧರ್ ಅಸುನೀಗಿದ್ದರು.
      ವಿಷಯ ತಿಳಿದ ಸಂಗಮ್ ಯುವಕರುಗಳಾದ ಸುಭಾಶ್, ಪ್ರದೀಪ ಮತ್ತು ಗಿರೀಶ್ ತಮ್ಮ ಗೆಳೆಯರೊಂದಿಗೆ ಸೇರಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಕಾರ್ಯಾಚರಣೆಯಲ್ಲಿ ಸಹಕರಿಸಿದವರಿಗೆ ಪೊಲೀಸ್ ಇಲಾಖೆ ಬಹುಮಾನ ನೀಡಿ ಗೌರವಿಸಿತ್ತು.

ವ್ಯಾಘ್ರ ದುಷ್ಕರ್ಮಿಗಳು: 
     ಶ್ರೀಧರ್ ಅವರನ್ನು ಹತ್ಯೆಗೈದ ಆರೋಪಿಗಳಿಬ್ಬರು ಕೇರಳ ಕೊಟ್ಟಾಯಂ ನಿವಾಸಿ ರಾಜೇಶ್ ಮತ್ತು ರಘು ನಟೋರಿಯಸ್ ಕ್ರಿಮಿನಲ್‌ಗಳಾಗಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ. ಇವರ ವಿರುದ್ಧ ಕೇರಳದ ವಿವಿಧೆಡೆ ಕರ್ನಾಟಕದ ಕದ್ರಿ ಹಾಗೂ ಬೈಂದೂರಿನಲ್ಲಿ ಪ್ರಕರಣ ದಾಖಲಾಗಿದೆ. ಇವರು ಪುಟ್ಟ ಮಕ್ಕಳನ್ನು ಸಲಿಂಗಕಾಮಕ್ಕೆ ಬಳಸಿಕೊಳ್ಳುತ್ತಿದ್ದರು ಎನ್ನಲಾಗಿದೆ.

ಮೃದು ಸ್ವಭಾವದ ಶ್ರೀಧರ್:
    ಬೈಂದೂರಿನ ಕಳವಾಡಿಯವರಾದ ಶ್ರೀಧರ್ ಶೇರುಗಾರ್ ಕುಂದಾಪುರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ (ಜೀಪು ಚಾಲಕ) ಕರ್ತವ್ಯ ನಿರ್ವಹಿಸಿ ವಾರದ ಹಿಂದಷ್ಟೇ ಬೈಂದೂರಿಗೆ ವರ್ಗಾವಣೆಗೊಂಡಿದ್ದರು. ಎರಡು ವರ್ಷ ಹಿಂದೆ ಕೊಲ್ಲೂರು ಠಾಣೆಯಲ್ಲಿ ಪೇದೆಯಾಗಿದ್ದ ಮಯ್ಯಾಡಿಯ ನಾಗರತ್ನ ಎಂಬುವವರನ್ನು ವಿವಾಹವಾಗಿದ್ದರು. ಮೃದು ಸ್ವಭಾವ, ಸದಾ ಹಸನ್ಮಕಿಯಾಗಿರುತ್ತಿದ್ದ ಶ್ರೀಧರ್ ಎಲ್ಲರಿಗೂ ಪ್ರೀಯರಾಗಿದ್ದರು. ಶ್ರೀಧರ್ ಅವರ ಸಾಹಸಕ್ಕೆ ಅವರ ಮರಣೋತ್ತರ 2011ರಲ್ಲಿ ಗೌರವಾನ್ವಿತ ರಾಷ್ಟ್ರಪತಿಯವರ ಗ್ಯಾಲಂಟರಿ ಪ್ರಶಸ್ತಿ ದೊರೆಯಿತು.

ಸರಕಾರದ ಪರ ವಕೀಲರಾಗಿ ರವಿಕಿಣ್ ಮುರ್ಡೇಶ್ವರ:
     ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಕಗೊಂಡಿರುವ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಸರಕಾರದ ಪರ ವಕಾಲತ್ತು ವಹಿಸಿದ್ದರು. ಸಾರ್ವಜನಿಕರು ಸೇರಿದಂತೆ 25 ಮಂದಿ ಘಟನೆಯ ಬಗ್ಗೆ ಸಾಕ್ಷ್ಯ ಹೇಳಿದ್ದರು. ಸಾಕ್ಷ್ಯಾಧಾರ ಪರಿಶೀಲಿಸಿದ ಹೆಚ್ಚುವರಿ ಸತ್ರ ನ್ಯಾಯಾಲಯ ಇಬ್ಬರು ಆರೋಪಿಗಳಿಗೂ ಕಠಿಣ ಶಿಕ್ಷೆ ವಿಧಿಸಿದೆ.  ಆರೋಪಿ ಪೈಕಿ ರಾಜೇಶ್‌ಗೆ 5 ವರ್ಷ ಕಠಿಣ ಸಜೆ, 10 ಸಾವಿರ ದಂಡ ಅಲ್ಲದೆ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಹೆಚ್ಚುವರಿ 2 ವರ್ಷ ಸಜೆ ಘೋಷಿಸಿ ತೀರ್ಪು ನೀಡಿದೆ.