ಮಹಿಳಾ ಪೊಲೀಸ್ ಠಾಣೆ ಸ್ಥಳಾಂತರಕ್ಕೆ ನಾಗರೀಕರ ವಿರೋಧ

ಕುಂದಾಪುರ: ಕಳೆದ 12ವರ್ಷಗಳಿಂದ ನಗರದ ಸ್ವಂತ ಜಾಗದಲ್ಲಿ ಕಾರ್ಯಾಚರಿಸುತ್ತಿರುವ ಕುಂದಾಪುರ ಉಪವಿಭಾಗದ ಮಹಿಳಾ ಪೊಲೀಸ್ ಠಾಣೆ ಸ್ಥಳಾಂತರಗೊಳ್ಳುವ ಭೀತಿ ತಾಲೂಕಿನ ನಾಗರೀಕರಲ್ಲಿ ಎದುರಾಗಿದೆ. ನಗರಸಭೆಯಾಗುವತ್ತ ದಾಪುಗಾಲಿಟ್ಟಿರುವ ಕುಂದಾಪುರದಲ್ಲಿ ಮಹಿಳಾ ಪೊಲೀಸ್ ಠಾಣೆಯು ಅನಗತ್ಯವಾಗಿ ಕಂಡುಬಂದುದರ ಹಿಂದಿನ ಕಾರಣ ಮಾತ್ರ ನಿಗೂಡವಾಗಿದೆ.  
            2003ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿದ್ದ ವಿನ್ನಿಫ್ರೆಡ್ ಅವರ ವಿಶೇಷ ಮುತುವರ್ಜಿಯಿಂದಾಗಿ ಅಂದಿನ ಮಂತ್ರಿಯಾಗಿದ್ದ ಮಲ್ಲಿಕಾರ್ಜುನ ಖರ್ಗೆಯವರಿಂದ ಮಹಿಳಾ ಪೊಲೀಸ್ ಠಾಣೆ ಮಂಜೂರಾಗಿತ್ತು. ಎಲ್.ಐ.ಸಿ ರೋಡ್ ನ ಸ್ವಂತ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಈ ಠಾಣೆಯ ಮೂಲಕವೇ ಕುಂದಾಪುರ ಉಪವಿಭಾಗದ ಎಲ್ಲಾ ಮಹಿಳಾ ಸಂಬಂಧಿ ಪ್ರಕರಣಗಳು ವಿಲೇವಾರಿಯಾಗುತ್ತಿದೆ. ಇದರಿಂದ ಈ ಭಾಗದ ಮಹಿಳೆಯರಿಗೂ ಸಾಕಷ್ಟು ಅನುಕೂಲವಾಗುತ್ತಿದೆ. ಇದೀಗ ಠಾಣೆ ಸ್ಥಳಾಂತರಗೊಂಡರೆ ಸಣ್ಣ ಪ್ರಕರಣಗಳಿಗೂ ಗ್ರಾಮೀಣ ಭಾಗದವರು ಉಡುಪಿಗೆ ತೆರಳಬೇಕಾದ ಅನಿವಾರ್ಯತೆ ಎದುರಾಗಲಿದೆ. 

      ಉಡುಪಿ ಜಿಲ್ಲೆಯ ಬೇರೆ ನಗರಗಳಿಗೆ ಹೋಲಿಸಿದರೇ ಕುಂದಾಪುರ ವಿಭಾಗದಲ್ಲಿ ಅತಿಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದು ಸದ್ಯ ಠಾಣೆಯಲ್ಲಿ ಪೊಲೀಸ್ ಉಪನಿರೀಕ್ಷಕರು, ಇಬ್ಬರು ಸಹಾಯಕ ಉಪನಿರೀಕ್ಷಕರು, ಎರಡು ಮಂದಿ ಮುಖ್ಯಪೇದೆ ಸೇರಿದಂತೆ ಇಪ್ಪತ್ತೊಂದು ಮಂದಿ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇಲಾಖೆ ಸ್ಥಳಾಂತರದ ಬದಲು ಪ್ರಕರಣಗಳನ್ನು ಶೀಘ್ರ ವಿಲೇವಾರಿ ಮಾಡಲು ಮಹಿಳಾ ಪೊಲೀಸ್ ಠಾಣೆಗೆ ಸಿಬ್ಬಂದಿ ಹಾಗೂ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವ ಕಾರ್ಯ ಮಾಡುವುದು ಒಳಿತು ಎಂದು ನಾಗರಿಕರು ಅಭಿಪ್ರಾಯ ಪಟ್ಟಿದ್ದಾರೆ. 

         ಈ ಹಿಂದೆಯೂ ಠಾಣೆಯ ಸ್ಥಳಾಂತರ ಬಗ್ಗೆ ಮಾತುಗಳು ಕೇಳಿಬಂದಿದ್ದವು. ಉಡುಪಿಯ ಆಗಿನ ಎಸ್.ಪಿ.ಯಾಗಿದ್ದ ಬೋರಲಿಂಗಯ್ಯ ಇದಕ್ಕೆ ಪುಷ್ಠಿ ನೀಡುವಂತೆ ಪೊಲೀಸ್ ಠಾಣೆ ಸ್ಥಳಾಂತರಗೊಳ್ಳುವ ಬಗ್ಗೆ ಪ್ರಸ್ತಾಪಿಸಿದ್ದರು. ಆದರೆ ಪಶ್ಚಿಮ ವಲಯ ಐಜಿಪಿ ಅಮೃತಪಾಲ್ ಕಳೆದ ಭಾರಿ ಕುಂದಾಪುರಕ್ಕೆ ಭೇಟಿ ನೀಡಿದ್ದ ಸಂದರ್ಭ ಮಹಿಳಾ ಠಾಣೆಯನ್ನು ಉಡುಪಿಗೆ ವರ್ಗಾಯಿಸುವ ವಿಚಾರವನ್ನು ಪುನರ್ ಪರಿಶೀಲಿಸುದಾಗಿ ತಿಳಿಸಿದ್ದರು. ಕುಂದಾಪುರದ ನಾಗರಿಕರೂ ಕೂಡ ಈ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಲ್ಲದೇ ಒಂದು ವೇಳೆ ಸ್ಥಳಾಂತರಿಸಿದಲ್ಲಿ ಸಂಘಟಿತ ಹೋರಾಟ ನಡೆಸುವುದಾಗಿಯೂ ಕುಂದಾಪ್ರ ಡಾಟ್ ಕಾಂ ಗೆ ತಿಳಿಸಿದ್ದಾರೆ.
ವರದಿ: ಸುನಿಲ್ ಬೈಂದೂರು

ಮಹಿಳಾ ಪೊಲೀಸ್ ಠಾಣೆ ಸ್ಥಳಾಂತರಗೊಳಿಸುವುದು ಸರಿಯಲ್ಲ. ಕೆಲವು ವರ್ಷಗಳಿಂದ ಪೊಲೀಸ್ ಠಾಣೆ ಉತ್ತಮವಾಗಿ ಕೆಲಸ ಮಾಡುತ್ತಿದೆ. ಇದರಿಂದ ಕುಂದಾಪುರ ಗ್ರಾಮೀಣ ಭಾಗದ ಮಹಿಳೆಯರಿಗೆ ಸಾಕಷ್ಟು ಅನುಕೂಲವಾಗಿದೆ. ಮಹಿಳೆಯರ ಖಾಸಗಿ ಸಮಸ್ಯೆಗಳನ್ನು ಸಾಮಾನ್ಯ ಠಾಣೆಯಲ್ಲಿ  ಹೇಳಿಕೊಳ್ಳಲು ಸಾಧ್ಯವಾಗದಿರುವುದರಿಂದ ಮಹಿಳಾ ಠಾಣೆಯ ಅವಶ್ಯಕತೆ ಇದೆ. ಒಂದು ವೇಳೆ ಸ್ಥಳಾಂತರಕ್ಕೆ ಪ್ರಯತ್ನಿಸಿದಲ್ಲಿ ಮಹಿಳಾ ಸಂಘಟನೆಗಳ ನೇತೃತ್ವದಲ್ಲಿ ಹೋರಾಟ ನಡೆಸಲಾಗುವುದು. ಈ ಬಗ್ಗೆ ಕುಂದಾಪುರದ ಶಾಸಕರಿಗೂ ಮನವಿ ಸಲ್ಲಿಸಿದ್ದೇವೆ.
-ಶ್ರೀಮತಿ ಗುಣರತ್ನ, ಕುಂದಾಪುರ ಪುರಸಭಾ ಸದಸ್ಯೆ

ಮಹಿಳಾ ಪೊಲೀಸ್ ಠಾಣೆ ಸ್ಥಳಾಂತರಿಸುವ ಬಗ್ಗೆ ನನ್ನ ವಿರೋಧವಿದೆ. ಠಾಣೆಯನ್ನು ಸ್ಥಳಾಂತರಿಸುವ ಬದಲು ಅಲ್ಲಿರುವ ಕೆಲವು ಭ್ರಷ್ಟ ಅಧಿಕಾರಿಗಳನ್ನು ವರ್ಗಾಯಿಸಿ ಉತ್ತಮವಾಗಿ ಕಾರ್ಯನಿರ್ವಹಿಸಲು ಅನುವುಮಾಡಿಕೊಡುವುದು ಒಳ್ಳೆಯದು. 
-ಶ್ರೀಮತಿ ರಾಧಾದಾಸ್, ಅಧ್ಯಕ್ಷರು ಶ್ರೀ ಮೂಕಾಂಬಿಕಾ ಮಹಿಳಾ ಮಂಡಲಗಳ ತಾಲೂಕು ಒಕ್ಕೂಟ(ರಿ)

ಕುಂದಾಪ್ರ ಡಾಟ್ ಕಾಂ  editor@kundapra.com
Public opposed to shifting Kundapura Lady Police Station - A report by Sunil Byndoor