ಸುಂದರ ಕಣ್ಣಿನ ಹುಡುಗಿ. ಕುಂದಾಪುರ ಸೀಮೆಯ ಬೆಡಗಿ!

ಕುಂದಾಪುರ: ಬೆಂಗಳೂರಿನಲ್ಲಿ ಜರುಗಿದ ಸೌತ್ ಇಂಡಿಯಾ ಕ್ವೀನ್ - 2015 ಸ್ಪರ್ಧೆಯಲ್ಲಿ  ಕುಂದಾಪುರದ ಗುಜ್ಜಾಡಿಯ ಬೆಡಗಿ ಸೀಮಾ ಬುದಲ್ಲೊ 'ಸೌತ್ ಇಂಡಿಯಾ ಕ್ವೀನ್ ಮಿಸ್ ಬ್ಯೂಟಿಪುಲ್ ಐಸ್' ವಿಭಾಗದಲ್ಲಿ ಪ್ರಥಮ ಸ್ಥಾನಿಯಾಗಿ ಮಿಂಚಿರುವುದಲ್ಲದೇ  ಸೌತ್ ಇಂಡಿಯಾ ಕ್ವೀನ್ ಹಾಗೂ ಮಿಸ್ ಕರ್ನಾಟಕ ದ ಮೊದಲ ರನ್ನರ್ ಆಗಿ ಕೂಡ ಹೊರಹೊಮ್ಮಿದ್ದಾರೆ.

    ಕುಂದಾಪುರದ ಗುಜ್ಜಾಡಿಯ ವಿ.ವಿ. ಬುದಲ್ಲೊ ಹಾಗೂ ಸಿಲೈನ್ ಬುದಲ್ಲೊ ದಂಪತಿಗಳ ಮಗಳಾದ ಸೀಮಾ ಸದ್ಯ ಬೆಂಗಳೂರಿನ ಪ್ರಸಿದ್ಧ ಕಂಪೆನಿಯೊಂದರಲ್ಲಿ ಪ್ರೊಡೆಕ್ಷನ್ ಮ್ಯಾನೆಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
   ಗಂಗೊಳ್ಳಿಯಲ್ಲಿ ಪಿಯುಸಿವರೆಗಿನ ಶಿಕ್ಷಣವನ್ನು ಪಡೆದ ಸೀಮಾ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಬಿಎ ಪದವಿಯ ಪೂರೈಸಿ ಮೈಸೂರು ಮುಕ್ತ ವಿ.ವಿಯಿಂದ ಸ್ನಾತಕೋತ್ತರ ಪದವಿಯನ್ನು ಎಂ.ಬಿ.ಎ.ನೊಂದಿಗೆ ಪೂರೈಸಿದ್ದಾರೆ.
      ಬಹುಮುಖ ಪ್ರತಿಭೆಯಾದ ಸೀಮಾ 1997ರಲ್ಲಿ ನಡೆದ ಕಲೋತ್ಸವದಲ್ಲಿ ಯುವ ಪ್ರತಿಭೆಯಾಗಿ ಗುರುತಿಸಿಕೊಂಡಿದದರು. 2006 ಅವಧಿಯಲ್ಲಿ ಸ್ಮೈಲ್ ಟಿವಿಯಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ್ದಲ್ಲದೇ, ವಿನೋದ್ ಗಂಗೊಳ್ಳಿ ನಿರ್ದೇಶನದ ಕೊಂಕಣಿ ಕಿರುಚಿತ್ರ 'ಡ್ರೀಮ್ ಗರ್ಲ್'ನಲ್ಲಿಯೂ ನಟಿಸಿದ್ದರು. ಇಷ್ಟೇ ಅಲ್ಲದೇ ವಿವಿಧ ಸಂಘ ಸಂಸ್ಥೆಗಳಲ್ಲೂ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು. 
     ಗ್ಲಾಮರ್ ಲೋಕದ ನಂಟು ಈವರೆಗೆ ಇದ್ದಿರಲಿಲ್ಲ. ಮೊದಲ ಬಾರಿಗೆ ಇಲ್ಲಿ ಸ್ವರ್ಧಿಸಿದ್ದೇನೆ. ವಿಜಯಿಯಾಗಿರುವುದು ಖುಷಿ ತಂದಿದೆ ಎಂದು ಕುಂದಾಪ್ರ ಡಾಟ್ ಕಾಂ ನೊಂದಿಗೆ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.
     ಬೆಂಗಳೂರಿನ ಸ್ಯಾಂಕಿ ಇವೆಟ್ಸ್, ರೋಹಿಣಿ ಫ್ಯಾಶನ್ಸ್ ಗ್ಯಾಲರಿ ಹಾಗೂ ನಿಮ್ಸ್ ಪ್ರೊಡೆಕ್ಷನ್ಸ್ ಜಂಟಿಯಾಗಿ ಆಯೋಜಿಸಿದ್ದ ಸೌಂದರ್ಯ ಸ್ವರ್ಧೆಯು ವಿವಿಧ ಹಂತಗಳಲ್ಲಿ ನಡೆದಿತ್ತು. ಜನವರಿ 18ರಂದು ಬೆಂಗಳೂರಿನ ಬ್ರಿಗೇಡ್ ರಾಯಲ್ ನಲ್ಲಿ ನಡೆದ ಅಂತಿಮ ಸುತ್ತಿನ ಆಡಿಷನ್ ನಲ್ಲಿ ಕರ್ನಾಟಕ, ಕೇರಳ, ತೆಲಂಗಾಣ, ಸೀಮಾಂದ್ರ ಹಾಗೂ ತಮಿಳುನಾಡು ರಾಜ್ಯಗಳ ಒಟ್ಟು 25 ಸ್ವರ್ಧಿಗಳು ಭಾಗವಹಿಸಿದ್ದರು. ಫೆ.5ಕ್ಕೆ ಅಂತಿಮ ಸುತ್ತಿಗೆ ಆಯ್ಕೆಯಾದವರ ಪಟ್ಟಿಯನ್ನು ಬಿಡುಗಡೆಗೊಳಿಸಲಾಯಿತು. ಆಯ್ಕೆಗೊಂಡವರಿಗೆ ಈ ಅವಧಿಯಲ್ಲಿ ತರಬೇತಿ, ಸೌಂದರ್ಯ ಸಲಹಾ ಶಿಬಿರಗಳು ನಡೆದು ಮಾ.14ರಂದು ಬೆಂಗಳೂರಿನ ಚೌಂಡಯ್ಯ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ರ್ಯಾಂಪ್ ವಾಕ್ ಮಾಡುವುದರೊಂದಿಗೆ ಗೆದ್ದವರ ಮುಡಿಗೆ ಕಿರೀಟವೇರಿಸಲಾಗಿತ್ತು. ಸೌಂದರ್ಯ ಸ್ವರ್ಧೆಯಲ್ಲಿ ಕೇವಲ ಹೊರಗಿನ ಸೌಂದರ್ಯಕ್ಕಷ್ಟೇ ಮಾನ್ಯತೆ ನೀಡದೇ, ಸ್ವರ್ಧಿಗಳ ಪ್ರತಿಭೆಯನ್ನೂ ಗುರುತಿಸಿ ಆಯ್ಕೆಮಾಡಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
-ಸುನಿಲ್ ಬೈಂದೂರು
Write your opinion to - editor@kundapra.com
Seema Buthello of Kundapura won SOUTH INDIA QUEEN BEAUTIFUL MISS EYES and also She is the first Runner Up of KARNATAKA QUEEN & SOUTH INDIA QUEEN.