ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಕಡ್ಡಾಯವಾಗಲಿ: ಪುಂಡಲೀಕ ಹಾಲಂಬಿ

ಉಡುಪಿ ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನ
ಸಾಲಿಗ್ರಾಮ: ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮರಿಚಿಕೆಯಾಗುತ್ತಿರುವ ನೋವು ನನ್ನನ್ನು ಕಾಡುತ್ತಿದೆ. ಮುಂದಿನ ತಲೆಮಾರಿಗೆ ಕನ್ನಡ ತಲುಪಬೇಕಾದರೆ ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡದ ಕಲಿಕೆ ಅಗತ್ಯ. ಐದನೇ ತರಗತಿಯ ತನಕ ಕನ್ನಡದ ಕಲಿಕೆ ಕಡ್ಡಾಯವಾಗಬೇಕು ಎಂದು ಉಡುಪಿ ಜಿಲ್ಲಾ ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ಒತ್ತಾಯಿಸಿದರು.
     ಅವರು ಉಡುಪಿ ಜಿಲ್ಲೆಯ 10ನೇ ಕನ್ನಡ ಸಾಹಿತ್ಯ ಸಮ್ಮೇಳನ ನುಡಿಹಬ್ಬ-2015ರ ಸರ್ವಾಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಸೂತಕದ ಮನೆಯೊಳಗೆ ಸಂಭ್ರಮಿಸುವ ಪರಿ ನಮ್ಮದಾಗಿದೆ. ಕನ್ನಡ ಕಲಿಯುವವರೇ ಇಲ್ಲದ ಮೇಲೆ  ಉತ್ತಮ ಕನ್ನಡದ ಸಾಹಿತಿಗಳು ಎಲ್ಲಿ ಹುಟ್ಟುತ್ತಾರೆ. ಕನ್ನಡ ಮಾಧ್ಯಮದವರಿಗೆ ಉದ್ಯೋಗದಲ್ಲಿ 50 ಪ್ರತಿಶತ ಮೀಸಲಾತಿಯನ್ನು ನೀಡುವುದು ಹೇಗೆ ಎಂದು ಅವರು ವಿಷಾದಿಸಿದರು.
   ಸಂವಿಧಾನದಲ್ಲಿ ಕನ್ನಡ ಮಾಧ್ಯಮ ಕಡ್ಡಾಯಗೊಳಿಸುವ ತಿದ್ದುಪಡಿ ತರುವಂತೆ ನಮ್ಮ ಪ್ರಭುತ್ವವನ್ನು ಈಗಾಗಲೇ ಒತ್ತಾಯಿಸಿದ್ದೇವೆ. ಕನ್ನಡದ ಕಾರ್ಯಕರ್ತರುಗಳನ್ನು ಸೇರಿಸಿಕೊಂಡು ಗೋಕಾಕ್ ಮಾದರಿಯ ಆಂದೋಲನವನ್ನು ರೂಪಿಸಬೇಕಾದ ಅಗತ್ಯವಿದೆ ಎಂದ ಅವರು ಈ ಹೋರಾಟ ಕೇವಲ ಸಾಹಿತಿಗಳ ಮೂಲಕ ಸಾಧ್ಯವಿಲ್ಲ ಕನ್ನಡಪರ ಸಂಘಟನೆಗಳು ನಮ್ಮೊಂದಿಗಿರಬೇಕು ಎಂದರು.
     ಇಂದು ಶಿಕ್ಷಣದ ವ್ಯಾವಹಾರೀರಣವಾಗಿದೆ. ರಾಜಕೀಯ ಪ್ರತಿನಿಧಿಗಳ ಕೈಯಲ್ಲಿ ಆಂಗ್ಲಮಾಧ್ಯಮ ಶಾಲೆಗಳಿದೆ. ಹೀಗಿರುವಾಗ ಕನ್ನಡ ಶಾಲೆಗಳನ್ನು ಉದ್ದರಿಸುವವರು ಯಾರು ಎಂದು ಅವರು ಪ್ರಶ್ನಿಸಿದರು. ಕನ್ನಡ ಶಾಲೆಗಳಲ್ಲಿ ಮಕ್ಕಳು ಕಡಿಮೆಯಾಗುವುದಕ್ಕೆ ಪೋಷಕರು, ಶಿಕ್ಷಕರು ಕಾರಣರಲ್ಲ. ಅದಕ್ಕೆ ನಮ್ಮ ಪ್ರಭುತ್ವ ಮತ್ತು ಬದ್ಧತೆ ಇಲ್ಲದ ಜನಪ್ರತಿಧಿಗಳಷ್ಟೇ ಕಾರಣ. ನ್ಯಾಯಾಲಯ ಕೂಡ ಜನ ಬದುಕಬೇಕು ಎಂಬ ವಿಚಾರದಲ್ಲಿ ನಂಬಿಕೆಯಿಲ್ಲದೆ ತೀರ್ಪನ್ನು ಕೊಟ್ಟಿದೆ ವಿಷಾದಿಸಿದರು.
   ಧರ್ಮ, ಜಾತಿ ಮನುಷ್ಯರನ್ನು ವಿಭಜಿಸುವ ಅಸ್ತ್ರವಾಗುತ್ತಿದೆ. ಮನುಷ್ಯ ಎಲ್ಲವನ್ನೂ ಪಡೆಯುತ್ತಾ ಕೆಳ ಹಂತಕ್ಕೆ ತಲುಪುತ್ತಿದ್ದಾನೆ. ಧರ್ಮ, ಜಾತಿಯನ್ನು ಮನೆಯೊಳಗಿಟ್ಟು ಜಾತ್ಯಾತೀತ ಸಮಾಜವನ್ನು ಕಟ್ಟಲು ನಾವು ಬದ್ಧರಾಗಿರಬೇಕು ಎಂದು ಅವರು ಹೇಳಿದರು.
    ಮಂಗಳೂರು ವಿ.ವಿ. ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಡಾ| ಕೆ. ಚಿನ್ನಪ್ಪ ಗೌಡ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಾ ಸಮ್ಮೇಳನಗಳು ಏಕೆ ಬೇಕು ಎನ್ನುವುದಕ್ಕಿಂತ ಸಮ್ಮೇಳನ ಹೇಗೆ ಬೇಕು, ಅದರ ಪ್ರಸ್ತುತತೆ ಏನು ಎಂಬುದರ ಬಗ್ಗೆ ಆಲೋಚಿಸಬೇಕು. ಕನ್ನಡದ ಜೊತೆಗಿನ ಸಂಬಂಧವನ್ನು ಸಾಹಿತ್ಯ ಸಮ್ಮೇಳನಗಳು ಪುರಸ್ಕರಿಸುತ್ತಾ ಬಂದಿದೆ. ಅದು ಅಗತ್ಯವೂ ಆಗಿದೆ. ಸ್ಥಳೀಯವಾಗಿದ್ದುಕೊಂಡೆ ಕನ್ನಡಕ್ಕೆ ವಿಶ್ವಪ್ರಜ್ಞೆಯನ್ನು ಕನ್ನಡ ಭಾಷೆಗೆ ವಿಶ್ವಜ್ಞಾನವನ್ನು ತಂದುಕೊಟ್ಟ ಕಾರಂತರ ಊರಿನಲ್ಲಿ ಈ ಸಮ್ಮೇಳನ ನಡೆಯುತ್ತಿರುವುದು ಅರ್ಥಪೂರ್ಣವಾದುದು ಎಂದರು.
     ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡುತ್ತಾ ಕನ್ನಡದ ಬಗ್ಗೆ ಮಾತನಾಡುವ ಮೊದಲು ನಮ್ಮ ಮಕ್ಕಳನ್ನು ಕನ್ನಡದ ಮಾಧ್ಯಮಕ್ಕೆ ಸೇರಿಸಬೇಕು. ಆಂಗ್ಲ ಮಾಧ್ಯಮದ ಶಾಲೆಗಳಿಗೆ ಮಕ್ಕಳನ್ನು ಸೇರಿಸುವವರಿಗೆ ಕನ್ನಡ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದರು. ಕರ್ನಾಟಕದಲ್ಲಿ ಏಕರೂಪದ ಶಿಕ್ಷಣ ಹಾಗೂ ರಾಜ್ಯ ಭಾಷೆಯಲ್ಲಿ ಶಿಕ್ಷಣ ಜಾರಿಯಾಗಬೇಕು. ಕನ್ನಡ ಮಾಧ್ಯಮ ಮೇಲೆ ವ್ಯವಸ್ಥಿತವಾಗಿ ಅಪಪ್ರಚಾರ ಮಾಡುವವರ ಬಗ್ಗೆ ನನಗೆ ಕೋಪವಿದೆ ಎಂದು ತಮ್ಮ ಸಾತ್ವಿಕ ಸಿಟ್ಟನ್ನು ಹೊರಗೆಡವಿದರು.
   ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ವಾರ್ತಾಧಿಕಾರಿ ರೋಹಿಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ್ ಹೂಗಾರ್, ಉಡುಪಿ ಸಾ.ಶಿ. ಇಲಾಖೆಯ ದಿವಾಕರ ಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಿ. ಮಂಜುನಾಥಯ್ಯ, ಸಾಲಿಗ್ರಾಮ ಪಟ್ಟಣ ಪಂಚಾಯತ್ ನ ಸದಸ್ಯೆ ವಸುಮತಿ ನಾಗೇಶ್, ಮುಖ್ಯಾಧಿಕಾರಿ ವೆಂಕಟರಾಮಣಯ್ಯ, ದ.ಕ. ಜಿಲ್ಲೆಯ ಅಧ್ಯಕ್ಷ ಪದೀಪಕುಮಾರ್ ಕಲ್ಕೂರು ಉಪಸ್ಥಿತರಿದ್ದರು. 
     ಸಮ್ಮೇಳನವು ವಿವೇಕ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳ ನಾಡಗೀತೆಯೊಂದಿಗೆ ಆರಂಭಗೊಂಡಿತು. ಬಳಿಕ ವಿವೇಕ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರೈತಗೀತೆಯನ್ನು ಹಾಡಿದರು. 
     ಉಡುಪಿ ಸಿಂಡಿಕೇಟ್ ಬ್ಯಾಂಕ್ ನ ಕ್ಷೇತ್ರಿಯ ಪ್ರಬಂಧಕ ಎಚ್. ವಿ ಭರಮಗೌಡರ್ ಮಳಿಗೆಗಳನ್ನು ಉದ್ಘಾಟಿಸಿದರು.  ಉ.ಕ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರೋಹಿದಾಸ್ ನಾಯಕ್, ವಾರ್ತಾಧಿಕಾರಿ ರೋಹಿಣಿ ಪುಸ್ತಕಗಳನ್ನು ಬಿಡುಗಡೆಗೊಳಿಸಿದರು. 
    ಉತ್ಸವ ಸಮಿತಿಯ ಸಂಚಾಲಕ ಪ್ರೊ. ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ವಿ. ರಂಗಪ್ಪ ಹೊಳ್ಳ ವಂದಿಸಿದರು. ಗಣೇಶ್ ರಾವ್ ಎಲ್ಲೂರು ನಿರೂಪಿಸಿದರು.
    ಸಮ್ಮೇಳನದ ಉದ್ಘಾಟನೆಗೂ ಮೊದಲು ಪಟ್ಟಣ ಪಂಚಾಯತ್ ನ ಆಧ್ಯಕ್ಷೆ ರಾಷ್ಟ್ರಧ್ವಜವನ್ನು, ನೀಲಾವರ ಸುರೇಂದ್ರ ಅಡಿಗ ಪರಿಷತ್ ಧ್ವಜವನ್ನು ಹಾರಿಸಿದರು.
       ಕರ್ನಾಟಕ ಬ್ಯಾಂಕಿನ ವಠಾರದಿಂದ ಪುಪ್ಪರಥ, ಜಾನಪದ ನೃತ್ಯ, ವಿವಿಧ ಸ್ತಬ್ದಚಿತ್ರಗಳು, ಕವಾಯತುಗಳೊಂದಿಗೆ ಡಾ| ಕಾರಂತ ಬೀದಿಯ ಮೂಲಕ ಸಾಗಿಬಂದ ಮೆರವಣಿಗೆ ಸಮ್ಮೇಳನದ ಆವರಣವನ್ನು ಪ್ರವೇಶಿಸಿದ ಮೆರವಣಿಗೆಗೆ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತ ಮುಕ್ತೇಸರರಾಗಿ ಐರೋಡಿ ಜಗದೀಶ ಕಾರಂತ ಚಾಲನೆ ನೀಡಿದರು.