ಸುಖ - ದುಃಖಗಳ ಸಮನ್ವಯದ ಪ್ರತೀಕ ಯುಗಾದಿ

   ಮರಳಿ ಬಂದಿದೆ ಯುಗಾದಿ. ಮತ್ತದೇ ಹೊಸತನದೊಂದಿದೆ. ಎಲ್ಲೆಲ್ಲೂ ಹೊಸ ಚಿಗುರು, ಹೊಸ ಹೂವು, ಹೊಸ ಫಲ, ಹೊಸ ನಿರೀಕ್ಷೆಗಳು, ಪ್ರಕೃತಿಯಲ್ಲಿ ನವ ಚೈತನ್ಯ. ಮನೆ ಮನೆಯಲ್ಲೂ ಯುಗಾದಿಯ ಸಡಗರ. ಸಂಪ್ರದಾಯದಂತೆ ಈ ದಿನದಂದು ಸೇವಿಸುವ ಬೇವು-ಬೆಲ್ಲ ಜೀವನದ ಸುಖ - ದುಃಖ ಎರಡನ್ನೂ ಸಮನಾಗಿವ ಸ್ವೀಕರಿಸುವ ಪ್ರತೀಕ. ಹಿಂದಿನ ವರುಷದ ಕಹಿ ಅನುಭವಗಳನ್ನು ಮರೆತು, ಮುಂಬರುವ ಭವಿಷ್ಯದ ಆನಂದಕ್ಕಾಗಿ ನಿರೀಕ್ಷಿಸುವ, ಹಾರೈಸುವ ದಿನವಿದು.
     ಯುಗಾದಿ ಎಂಬುದು ಚೈತ್ರ ಮಾಸದ ಮೊದಲನೆ ದಿನ. ಹಿಂದೂ ಪಂಚಾಂಗದ ಮೊದಲನೆ ದಿನ. ಯುಗ ಎಂದರೆ ಅದೊಂದು ಕಾಲ ಗಣನೆ. ಕಾಲದ ಒಂದು ಭಾಗ ಮತ್ತೆ ಆರಂಭವಾಗುತ್ತಿದೆ ಎಂಬುದರ ಸೂಚನೆಯಾಗಿದೆ.

ಆಚರಣೆ ಮತ್ತು ಹಿನ್ನೆಲೆ:
      ಯುಗಾದಿಯಲ್ಲಿ ಮುಖ್ಯವಾಗಿ ಚಂದ್ರಮಾನ ಹಾಗೂ ಸೌರಮಾನ ಎಂಬ ಎರಡು ಪ್ರಭೇದಗಳಿದ್ದು, ಹಿಂದೂ ಧರ್ಮದ ವೇದಾಂಗ ಜ್ಯೋತಿಷ್ಯ ಶಾಸ್ತ್ರದಿಂದ ಇದು ನಿರ್ಣಯಗೊಳ್ಳುತ್ತವೆ. ಚಂದ್ರನ ಚಲನೆಯನ್ನಾಧರಿಸಿ, ದಿನಗಣನೆ ಮಾಡುವುದನ್ನು ಚಂದ್ರಮಾನ ಹಾಗೂ ಸೂರ್ಯನ ಚಲನೆಯಿಂದ ಎಣಿಕೆ ಮಾಡುವುದನ್ನು ಸೌರಮಾನ ಎನ್ನುತ್ತಾರೆ. ಕರ್ನಾಟಕದಲ್ಲಿ ಚಂದ್ರಮಾನ ಪದ್ಧತಿ ಮೊದಲಿನಿಂದ ರೂಢಿಯಲ್ಲಿದೆ. 

ಹೊಸ ಚಿಗುರು:
    ವೇದಾಂಗ ಜ್ಯೋತಿಷ್ಯದಂತೆ, ಮೊದಲ ನಕ್ಷತ್ರ ಅಶ್ವಿನಿ - ಅಂದರೆ ಮೇಷ ರಾಶಿಯ 0 ಡಿಗ್ರಿಯಲ್ಲಿ ಸೂರ್ಯ ಬಂದಾಗ ಭೂಮಿಯ ಉತ್ತರಾರ್ಧಗೋಳದಲ್ಲಿ ಸಸ್ಯಗಳಲ್ಲಿ ಚಿಗುರು ಕಾಣುತ್ತದೆ; ಅಂದರೆ ಹೊಸಹುಟ್ಟು. ಆದ್ದರಿಂದ ಅಶ್ವಿನಿ ನಕ್ಷತ್ರಕ್ಕೆ ರವಿಯು ಪ್ರವೇಶಿಸುವ ಕಾಲವನ್ನು ಹೊಸವರ್ಷ ಎಂದು ಪರಿಗಣಿಸುತ್ತಾರೆ. ಇದೇ ಸೌರಮಾನ ಯುಗಾದಿ.
     ಶಿಶಿರ ಋತುವಿನಲ್ಲಿ ಗಿಡಮರಗಳ ಎಲೆಗಳು ಉದುರಿ ಹೋಗಿರುತ್ತವೆ ಮತ್ತು ಪ್ರತಿಪದೆಯ ಸಮಯದಲ್ಲಿ ಅವುಗಳಿಗೆ ಹೊಸ ಚಿಗುರು ಬರುತ್ತಿರುತ್ತವೆ. ಗಿಡಮರಗಳು ಚೆನ್ನಾಗಿ ಕಾಣುತ್ತವೆ. ಇದು ಈ ದಿನ ವರ್ಷಾರಂಭ ಮಾಡುವ ಹಿಂದಿನ ನೈಸಗಿಕ ಕಾರಣವಾಗಿದೆ.
  ಈ ದಿನವೇ ಬ್ರಹ್ಮದೇವನು ಸೃಷ್ಟಿಯನ್ನು ನಿರ್ಮಿಸಿದನು, ಅರ್ಥಾತ್ ಈ ದಿನ ಸತ್ಯಯುಗವು ಪ್ರಾರಂಭವಾಯಿತು. ಆದುದರಿಂದಲೇ ಈ ದಿನದಂದು ವರ್ಷಾರಂಭವನ್ನು ಮಾಡುತ್ತಾರೆ. ಇದು ಈ ದಿನ ವರ್ಷಾರಂಭ ಮಾಡುವ ಹಿಂದಿನ ಆಧ್ಯಾತ್ಮಿಕ ಕಾರಣವಾಗಿದೆ.
. ಅಂದೇ ಗ್ರಹ, ನಕ್ಷತ್ರ, ಮಾಸ, ಋತು, ವರ್ಷಾಧಿಪತಿಯನ್ನು ಸೃಷ್ಟಿಸಿ, ಕಾಲಗಣನೆ ಆರಂಭಿಸಿದನೆಂದು ಪುರಾಣದಲ್ಲಿದೆ. ಈ ದಿನದಂದು ರಾಮನು ವಾಲಿಯನ್ನು ವಧಿಸಿದನು. ದುಷ್ಟ ಪ್ರವೃತ್ತಿಯ ರಾಕ್ಷಸರನ್ನು ಹಾಗೂ ರಾವಣನನ್ನು ವಧಿಸಿ ಭಗವಾನ ರಾಮಚಂದ್ರನು ಅಯೋಧ್ಯೆಗೆ ಹಿಂತಿರುಗಿದ್ದು ಇದೇ ದಿನ.  ಅದೇ ರೀತಿ ಇದೇ ದಿನದಂದು ರಾವಣವಧೆಯ ನಂತರ ಅಯೋಧ್ಯೆಗೆ ಹಿಂತಿರುಗಿದ ರಾಮನ ವಿಜಯದ ಹಾಗೂ ಆನಂದದ ಪ್ರತೀಕವೆಂದು ಮನೆಮನೆಗಳಲ್ಲಿ ಬ್ರಹ್ಮಧ್ವಜವನ್ನು ಏರಿಸಿದರು. ವಿಜಯದ ಪ್ರತೀಕವು ಎತ್ತರದಲ್ಲಿರುತ್ತದೆ. ಹಾಗಾಗಿ ಬ್ರಹ್ಮಧ್ವಜ ಎತ್ತರದಲ್ಲಿರುತ್ತದೆ. ವಿಷ್ಣು ಮತ್ಸ್ಯಾವತಾರವನ್ನು ತಳೆದದ್ದೆಂದೂ, ಶಾಲಿವಾಹನ, ವಿಕ್ರಮಾದಿತ್ಯನನ್ನು ಜಯಸಿದ್ದರಿಂದ ಶಾಲಿವಾಹನ ಶಕೆ ಪ್ರಾರಂಭವಾಗಿದ್ದು, ಯುಗಾದಿ ದಿವಸವೆ. ವೇದವ್ಯಾಸರು ಕಲಿಯುಗ ಪ್ರಾರಂಭವಾಗಿದ್ದು ಯುಗಾದಿಯಂದೆ ಎಂದು ತಮ್ಮ ಗ್ರಂಥದಲ್ಲಿ ವಿವರಿಸಿದ್ದಾರೆ. ಯುಗಾದಿ ದಿನದಿಂದ ಹೊಸ ವರ್ಷ ಪ್ರಾರಂಭವಾಗುವುದರಿಂದ ಹಿಂದೂ ಪಂಚಾಂಗ ಮತ್ತು ಕ್ಯಾಲೆಂಡರ್ ಸಹ ಇಂದಿನಿಂದಲೇ ಪ್ರಾರಂಭವಾಗುತ್ತದೆ. ಯುಗ ಯುಗಗಳಿಂದಲೂ ಅತ್ಯಂತ ಮಹತ್ವದ ಕಾರ್ಯಗಳು ಈ ಶುಭ ದಿವಸವೇ ನಡೆದುವೆಂದು ಶಾಸ್ತ್ರ ಪುರಾಣಗಳು ಹೇಳಿವೆ.
ಆಧಾರ: ಧರ್ಮ ಸನಾತನ ಗ್ರಂಥ

ನಮ್ಮೆಲ್ಲಾ ಓದುಗರಿಗೂ, ನೋಡುಗರಿಗೂ, ಹಿತೈಶಿಗಳಿಗೂ, ಜಾಹಿರಾತುದಾರರಿಗೂ ಯುಗಾದಿಯ ಶುಭಾಶಯಗಳು.


ನಿಮ್ಮ ಅಭಿಪ್ರಾಯ ಬರೆಯಿರಿ 
ಕುಂದಾಪ್ರ ಡಾಟ್ ಕಾಂ- editor@kundapra.com