ಮಹಿಳಾ ದಿನಾಚರಣೆ ಹಬ್ಬವೂ ಅಲ್ಲ, ಆನಂದದಿಂದ ಆಚರಣೆಗೊಂಡ ದಿನವೂ ಅಲ್ಲ. ನ್ಯೂಯಾರ್ಕ್‍ನಲ್ಲಿ ಕ್ಲಾರಾ ಜೆಟ್‍ಕಿನ್ ಎಂಬ ಮಹಿಳಾ ಕಾರ್ಮಿಕೆ ಕೆಲಸಕ್ಕಾಗಿ, ಸಮಾನ ವೇತನಕ್ಕಾಗಿ, ಹೆರಿಗೆ ಸೌಲಭ್ಯಕ್ಕಾಗಿ ತಿಂಗಳುಗಟ್ಟಲೆ ಹೋರಾಟ ನಡೆಸಿ ಗೆಲುವು ಸಾಧಿಸಿದ ದಿನ. ಹುಟ್ಟಿನಿಂದ ಸಾಯುವವರೆಗೂ ದಿನ ನಿತ್ಯ ಒಂದಿಲ್ಲೊಂದು ಸಂಘರ್ಷದಲ್ಲಿ ಬಿದ್ದು ಸಾಧಿಸಲು ಪ್ರಯತ್ನ ಪಡುತ್ತಿರುವ, ಸಂಘರ್ಷದಿಂದ ಸಾಧಿಸಿದ ದಿನದ ಒಂದು ಸ್ಮರಣೆಯ ದಿನ ಮಾತ್ರ.
21ನೆಯ ಶತಮಾನದಲ್ಲಿ ಮಹಿಳೆ ಪಾತ್ರ ಬದಲಾಗಿದೆ. ವೃತ್ತಿ, ಸಂಸಾರ ಎರಡನ್ನೂ ನಿಭಾಯಿಸಬಲ್ಲೆ ಎಂದು ಮಾದರಿಯಾಗಿ ನಿಂತಿದ್ದಾಳೆ. ಹೆಣ್ಣು ಇದೀಗ ಕಷ್ಟವಿದ್ದಲ್ಲಿ ಗೊಳೋ ಎಂದು ಅಳುವ ಅಳುಮುಂಜಿಯಾಗಿಲ್ಲ. ದಿಟ್ಟೆಯಾಗಿ ಜೀವನದ ಪ್ರತಿಯೊಂದು ಸಮಸ್ಯೆಯನ್ನೂ ಪರಿಹರಿಸಿಕೊಳ್ಳುವ ಶಕ್ತಿ ತನ್ನಲ್ಲೂ ಇದೆ ಎಂದು ತೋರಿಸಿಕೊಟ್ಟಿದ್ದಾಳೆ.
ಬದುಕು ಎಂದರೆ ನೋವು ನಲಿವುಗಳ ಸಮ್ಮಿಲನ. ಆದರೆ ಹೆಣ್ಣಿನ ಬದುಕು ಅಂದರೆ ಅದು ಕೇವಲ ನೋವುಗಳ ಸಂಕಲನ. ಬುದ್ಧಿವಂತಿಕೆ, ಪರಿಶ್ರಮ, ಕ್ರೀಯಾಶಿಲತೆ, ನೋವು ನುಂಗುವ ಶಕ್ತಿ ಮತ್ತು ಸಂಘಟನೆಯಲ್ಲಿ ತಾನು ಮುಂದು ಎಂದು ಹೆಣ್ಣು ತೋರಿಸಿಕೊಟ್ಟಿದ್ದಾಳೆ. ಬಹುತೇಕ ಪ್ರಮುಖ ಹುದ್ದೆಗಳಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಮಹಿಳೆ ರಾರಾಜಿಸುತ್ತಿದ್ದಾಳೆ. ಇವತ್ತು ಮಹಿಳೆ ಉತ್ತಮ ಶಿಕ್ಷಣ ಪಡೆಯುತ್ತಿದ್ದಾಳೆ. ಒಳಮನೆ ಮಾತ್ರವೇ ಅಲ್ಲ ಹೊರ ಜಗತ್ತಿನ ಅರಿವೂ ಆಕೆಗೆ ಆಗಿದೆ. ಯಾರನ್ನು ಹೇಗೆ ಎಲ್ಲಿ ನಿಭಾಯಿಸಬೇಕೆಂಬ ಕಲೆಯೂ ಕರಗತವಾಗಿದೆ. ಕೊಟ್ಟ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುವ ತಾಳ್ಮೆ ಮತ್ತು ಚಾಕಚಕ್ಯತೆ ಆಕೆಯ ರಕ್ತದಲ್ಲೇ ಇದೆ. ಅದಕ್ಕೀಗ ವೇದಿಕೆ ದೊರಕುತ್ತಿದೆಯಷ್ಟೆ. ಆದರೆ ಇಡೀ ದಿನ ಮನೆಯಲ್ಲಿ ದುಡಿಯುವ ಹೆಂಡತಿ/ತಾಯಿ/ಅಕ್ಕ-ತಂಗಿಯರ ಪರಿಶ್ರಮಕ್ಕೂ ಒಂದು ಪ್ರೋತ್ಸಾಹ, ಶಹಬಾಸ್‍ಗಿರಿ ಸಿಗಬೇಕು, ಹೌದಲ್ಲವೇ ?
ಮಹಿಳಾ ಸಬಲೀಕರಣ ಎಂಬುದು ಒಂದು ಪ್ರಬಲ ಅಂಶ ಹುಟ್ಟಿಕೊಂಡಿದೆ. ವಿವಿಧ ಕ್ಷೇತ್ರಗಳಲ್ಲಿ ಮಹಿಳೆ ಮುನ್ನಡೆದಿದ್ದರೂ ಅವಳ ಸ್ಥಿತಿಗತಿ, ಸ್ಥಾನಮಾನ, ಆರ್ಥಿಕ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ಮೇಲಕ್ಕೇರಿಸುವುದು ಹೆಚ್ಚು ಸಾಧ್ಯವಾಗಿಲ್ಲ. ಇದಕ್ಕೆ ಕಾರಣಗಳು ಹಲವಾರು ಇದ್ದರೂ ಉತ್ತರ ಅತ್ಯಂತ ಸರಳ. ಮಹಿಳಾ ಅಭಿವೃದ್ಧಿ ಎಂದಾಕ್ಷಣ ಕೇವಲ ಬೆರಳೆಣಿಕೆಯ ಮಹಿಳೆಯರಿಗೆ ಅವಕಾಶ ಕಲ್ಪಿಸುವುದು, ಸಬಲೀಕರಣ ಎಂದಾಕ್ಷಣ ಗಂಡನನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳುವುದು ಎಂದರ್ಥವಲ್ಲ. 'ಮಹಿಳಾ ಪರ ಸಂಘರ್ಷ' ಎನ್ನುವುದು ಒಂದು ದಿನದ ಕಾರ್ಯಕ್ರಮ ಮಾಡಿ ಮುಗಿಸುವಂತದ್ದಲ್ಲ.
ಉದ್ಯೋಗ ಕ್ಷೇತ್ರದಲ್ಲಿ ಹೆಣ್ಣು ಗಂಡಿಗೆ ಸರಿಸಮಾನ ಎಂದು ತೋರಿಸಿಕೊಂಡಿದ್ದರೂ, ಹಲವೆಡೆಗಳಲ್ಲಿ ಇನ್ನೂ ನಡೆಯುತ್ತಿರುವ ಲಿಂಗ ತಾರತಮ್ಯ, ಹೆಣ್ಣು ಭ್ರೂಣಹತ್ಯೆ, ಅತ್ಯಾಚಾರ ಇವುಗಳನ್ನು ತಡೆಯಬೇಕು. ವಿಶ್ವಾಸ, ಪ್ರೀತಿ, ಮಮತೆ, ನಂಬಿಕೆ, ನೈತಿಕ ಮೌಲ್ಯಗಳು ನಮ್ಮ ಸಮಾಜದ ಕಣ್ಣುಗಳಾಗಬೇಕು. ಮಹಿಳೆಯರ ಸಾಧನೆಗೆ ಪ್ರೋತ್ಸಾಹ ನೀಡಬೇಕು. ಇದಕ್ಕೆ ಪುರುಷರ ನೈತಿಕ ಬೆಂಬಲ ದೊರಕಬೇಕು.
'ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೆ ತತ್ರ ದೇವತಾಃ' ಎಂಬ ಮಾತು ಕೇವಲ ಮಾತಾಗಿಯೇ ಇರಬಾರದು, ಅದನ್ನು ಆಚರಣೆಗೆ ತರಬೇಕು. ಆಗ ಮಾತ್ರ ಈ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಒಂದು ಒಳ್ಳೆಯ ಸ್ಥಾನ ಸಿಗಲು ಸಾಧ್ಯ. ಹೀಗಾದಲ್ಲಿ ಮಾತ್ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಉದ್ದೇಶ ಅರ್ಥಪೂರ್ಣ. ಮಹಿಳೆಯರಿಗೆ "ಮಹಿಳಾ ದಿನಾಚರಣೆಯ ಶುಭಾಶಯಗಳು".
ಕುಂದಾಪ್ರ ಡಾಟ್ ಕಾಂ- editor@kundapra.com