ಎಚ್ಚರ ಮಹಿಳೆಯರೇ! ನೀರೊಳಕ್ಕೂ ಕಿರುಕಳ ನೀಡುವ ಕೀಚಕರಿದ್ದಾರೆ!!

ಕುಂದಾಪುರ: ಮಹಿಳೆಯರ ಮೇಲಿನ ದೌರ್ಜನ್ಯ ಒಂದಿಲ್ಲೊಂದು ಬಗೆಯಲ್ಲಿ ದಿನೇ ದಿನೇ ಹೆಚ್ಚುತ್ತಿದೆ. ಸಮಾಜದಲ್ಲಿ ಆಕೆಯ ಸುರಕ್ಷೆ ಹಾಗೂ ಸ್ವಾತಂತ್ರ್ಯಕ್ಕೆ ದಕ್ಕೆ ತರುವಂತಹ ಪ್ರಕರಣಗಳು  ವರದಿಯಾಗುತ್ತಿಲೇ ಇದೆ. ಕೆಲವು ತಿಂಗಳುಗಳ ಹಿಂದೆ ನಡೆದ ಒಂದು ಪ್ರಕರಣ ಯುವತಿಯೋರ್ವಳ ಅಂತರಂಗ ಯಾತನೆಯನ್ನು ತೆರೆದಿಟ್ಟು ಸಾಮಾಜಿಕ ತಾಣದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.

ಡ್ರಿಮ್ಝ್ ಸ್ಕೂಬಾ ಡೈವಿಂಗ್ ಪ್ರಕರಣ:

ಸಮುದ್ರದ ಆಳದಲ್ಲಿ ಈಜಲು ತರಬೇತಿಗೆ ಬಂದ ಹೈದರಾಬಾದ್ ಮೂಲದ ಎಂಜಿನಿಯರ್ ಯುವತಿಗೆ ತರಬೇತಿ ನೀಡುತ್ತಿರುವಾಗಲೇ ಕಿರುಕುಳ ನೀಡಿದ ಪ್ರಕರಣ ಸಾಮಾಜಿಕ ತಾಣದ ಮೂಲಕ ಬೆಳಕಿಗೆ ಬಂದಿದ್ದು, ಪ್ರಕರಣ ಗಂಭೀರತೆ ಅರಿತ ಜಿಲ್ಲಾ ಪೊಲೀಸ್ ಇಲಾಖೆ ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಚಾರ್ಚ್ ಶೀಟ್ ಸಲ್ಲಿಸಿದ ಘಟನೆ ಇತ್ತಿಚಿಗೆ ವರದಿಯಾಗಿದೆ.

ಏನಿದು ಪ್ರಕರಣ?
ಮುರ್ಡೇಶ್ವರದಲ್ಲಿ ಕಾರ್ಯಾಚರಿಸುತ್ತಿರುವ ಡ್ರಿಮ್ಝ್ ಸ್ಕೂಬಾ ಡ್ರೈವಿಂಗ್ ಸಂಸ್ಥೆಯಲ್ಲಿ ಮೂಲಕ ಆಳ ಸಮುದ್ರದ ಈಜು ತರಬೇತಿಗಾಗಿ ಕುಂದಾಪುರ ತಾಲೂಕಿನ ಶಿರೂರಿಗೆ ತನ್ನ ಸಹೋದ್ಯೋಗಿಗಳೊಂದಿಗೆ 2015ರ ಜನವರಿ 26ರಂದು ಆಗಮಿಸಿದ್ದ ಹೈದರಬಾದ್ ಮೂಲದ, ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಐಟಿ ಎಂಜಿನೀಯರ್ ಆಗಿರುವ ಯುವತಿಗೆ ತರಬೇತಿ ನೀಡಲು, ಡ್ರಿಮ್ಝ್ ಸ್ಕೂಬಾ ಡ್ರೈವಿಂಗ್ ಸಂಸ್ಥೆಯ ನಿರ್ದೇಶಕನಾಗಿರುವ ಉತ್ತರಖಾಂಡ ಮೂಲಕ ಧೀರೇಂದ್ರ ರಾವತ್ ಎಂಬುವವನು ಬಂದಿದ್ದ.

ಸಮುದ್ರದ ಮಟ್ಟದಿಂದ 12ಮೀಟರ್ ಕೆಳಗೆ ಡೈವಿಂಗ್ ತರಬೇತಿ ನೀಡುತ್ತಿದ್ದ ವೇಳೆ ಯುವತಿಗೆ ಕಿರುಕುಳ ನೀಡಿದ ಬಗ್ಗೆ ಸ್ವತಃ ಯುವತಿ ಬೈಂದೂರು ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು, ಅದರಂತೆ ಆರೋಪಿಯ ವಿರುದ್ಧ ರೌಡಿಶೀಟ್ ತೆರೆದು, ಆತನನ್ನು ದಸ್ತಗಿರಿ ಮಾಡಿ ಬಂಧಿಸಿ, ದೋಷಾರೋಪಣಾ ಪತ್ರವನ್ನು ನ್ಯಾಯಾಲಕ್ಕೆ ಸಲ್ಲಿಸಲಾಗಿತ್ತು. ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಡ್ರಿಮ್ಝ್ ಸ್ಕೂಬಾ ಡ್ರೈವಿಂಗ್ ಸಂಸ್ಥೆಯ ಪರವಾನಿಗೆಯನ್ನೂ ಉಡುಪಿಯ ಜಿಲ್ಲಾಧಿಕಾರಿ ರದ್ದುಗೊಳಿಸಿದ್ದಾರೆ. ಇಷ್ಟೇ ಅಲ್ಲದೇ ಪ್ರಕರಣದಿಂದ ಬೇರೆ ಯಾರಿಗಾದರೂ ತೊಂದರೆಯಾಗಿದ್ದಲ್ಲಿ ಉಡುಪಿ ಜಿಲ್ಲೆ ಪೊಲೀಸ್‌ ಅಧೀಕ್ಷಕರನ್ನು ತಕ್ಷಣವೇ ಸಂಪರ್ಕಿಸುವಂತೆ ಪೊಲೀಸ್ ಇಲಾಖೆ ತಿಳಿಸಿದೆ. ಸದ್ಯ ಧೀರೇಂದ್ರ ರಾವತ್ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾನೆ.

ಬ್ಲಾಗ್ ಮೂಲಕ ಬೆಳಕಿಗೆ ಬಂತು
ಧೀರೇಂದ್ರ ರಾವತ್ ನಿಂದ ಕಿರುಕುಳಕ್ಕೆ ಒಳಗಾದ ಯುವತಿ ತನ್ನ ಬ್ಲಾಗಿನಲ್ಲಿ (ಸ್ರೀಮಿಂಗ್ ಔಟ್ ಸೈಲೆಂಟ್ಲಿ ಫೆ.5,2015) ತಾನು ಅನುಭವಿಸಿದ ನೋವಿನ ಸಂಗತಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಳು. ತಾನು ಚಿಕ್ಕವಳಿದ್ದಾಗ ರಾತ್ರಿ ಮಲಗುವ ವೇಳೆ ಹಾಸಿಗೆಯ ಕೆಳಗೆ ರಾಕ್ಷಸರು ಬರುತ್ತಾರೆ ಎಂದು ಹೆದರಿಸುತ್ತಿದ್ದರು. ನಾನು ಅದನ್ನು ನಂಬಿ ಹೊದಿಕೆಯನ್ನು ಮುಚ್ಚಿಕೊಂಡು ಮಲಗಿ ಸುಂದರ ಸೂರ್ಯೋದಯಕ್ಕಾಗಿ ಕಾಯುತ್ತಿದ್ದೆ. ಬೆಳೆಯುತ್ತಿದ್ದಂತೆ ಆ ರಾಕ್ಷಸರು ಮತ್ತೆ ಬರುವುದಿಲ್ಲ ಹೆಚ್ಚಾಗಿ ಅಂತವರು ಯಾರೂ ಇಲ್ಲ ಎಂದೇ ನಂಬಿದ್ದೆ. 

ನನಗೀಗ 23 ವರ್ಷ. ಆದರೆ ರಾಕ್ಷಸರು ಇಂದಿಗೂ ಇದ್ದಾರೆ ಎಂದೆನಿಸುತ್ತಿದ್ದೆ. ಪ್ರಪಂಚದ ಬೀದಿ ಬೀದಿಗಳಲ್ಲಿ ಅಡಗಿ ಕುಳಿತಿರುವ ರಾಕ್ಷಸರುಗಳು ಪ್ರತಿ ಕ್ಷಣವೂ ನನ್ನಂಥಹ ಮಹಿಳೆಯರ ಸುರಕ್ಷೆ, ಘನತೆ ಹಾಗೂ ಸ್ವಗೌರವಕ್ಕೆ ಧಕ್ಕೆ ತರುತ್ತಿದ್ದಾರೆ. ನಮ್ಮ ದೌರ್ಬಲ್ಯ, ಅಸಾಹಾಯಕ ಕ್ಷಣಗಳನ್ನು ಅವರು ಚನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಅವರ ಯಾವ ರೀತಿಯಲ್ಲಾದರೂ ಬರಬಹುದು. ಇಂಡಿಗೋ ಏರ್ಲೈನ್ಸ್ ನ ಪ್ರಯಾಣಿಕರಾಗಿ ಅಥವಾ ಸ್ಕೂಬಾ ಡ್ರೈವಿಂಗ್ ನ ತರಬೇತುದಾರರಾಗಿ... ಹೀಗೆ ತನ್ನ ನೋವಿಗೊಂದು ಪೀಠಿಕೆ ನೀಡುತ್ತಾ ಸಮುದ್ರದಾಳದಲ್ಲಿ ಅನುಭವಿಸಿದ ಯಾತನೆಯನ್ನು ಬರೆಯುತ್ತಾ ಮುಂದುವರಿಯುತ್ತಾಳೆ.

ಅಂದು ಸಮುದ್ರ ಶಾಂತವಾಗಿಯೇ ಇತ್ತು ಆದರೆ ನನ್ನ ತಲೆಯೊಳಗೆ ಚಂಡಮಾರುತವೆದ್ದಿತ್ತು. ಆಮ್ಲಜನಕದ ಟ್ಯಾಂಕ್ ಆತನ ಬಳಿ ಇದ್ದಿದ್ದರಿಂದ ಆತ ಕಿರುಕುಳ ನೀಡುತ್ತಿದ್ದರೂ 'ಓಕೆ' ಎಂದು ಹೇಳುವುದನ್ನು ಬಿಟ್ಟು ಬೇರೆವನ್ನೂ ಹೇಳಲು ಸಾಧ್ಯವಾಗುತ್ತಿರಲಿಲ್ಲ ಎಂದು ತನಗಾದ ದೌರ್ಜನ್ಯದ ಅಧ್ಯಾಯವನ್ನು ಸಂಪೂರ್ಣವಾಗಿ ವಿವರಿಸಿದ್ದಳು.

 ಸಮುದಾಳದಲ್ಲಿ 40ನಿಮಿಷಗಳ ಕಾಲ ಆ ರಾಕ್ಷಸನ ಕಿರುಕುಳಕ್ಕೆ ನಲುಗಿ ಬಿಡುಗಡೆಗೊಂಡಾಗ ದಿಟ್ಟತನ ತೋರಿರುವ ಆಕೆ ತನ್ನ ಸಹೋದ್ಯೋಗಿಗಳೊಂದಿಗೆ ಉಳಿದ ತರಬೇತುದಾರರು ಹೇಗೆ ನಡೆದುಕೊಂಡಿದ್ದರು ಎಂಬುದನ್ನು ತಿಳಿದುಕೊಂಡು, ರಾವತ್ ವಿರುದ್ದ ಕಿಡಿಕಾರಿದ್ದಾಳೆ. ಅವನು ಕ್ಷಮೆ ಯಾಚಿಸಿದ ವಿಡಿಯೋವನ್ನೂ ಬ್ಲಾಗ್ ನಲ್ಲಿ ಪೋಸ್ಟ್ ಮಾಡಿದ್ದಾಳೆ. ತನ್ನ ಬಳಿಕ ಯಾವೊಬ್ಬ ಮಹಿಳೆಯೂ ಇಂತಹ ಯಾತನೆಯನ್ನು ಅನುಭವಿಸಬಾರದು ಎಂದು ಪ್ರಕರಣವನ್ನು ಇಷ್ಟಕ್ಕೆ ಬಿಡದೇ ಪೊಲೀಸರಿಗೆ ದೂರು ನೀಡಿದ್ದಳು. ಆಷ್ಟೇ ಅಲ್ಲದೇ ಆತ ಡ್ರೈವಿಂಗ್ ಪ್ರಮಾಣಪತ್ರ ಪಡೆದಿರುವ ಸಂಸ್ಥೆಗೂ ದೂರು ನೀಡಿದ್ದಳು.

ಯುವತಿಯ ಪೋಷಕರು, ಸ್ನೇಹಿತರು, ಹಿತೈಷಿಗಳು ಆಕೆಯ ಹೋರಾಟದಲ್ಲಿ ಜೊತೆಯಾಗಿದ್ದಾರೆ. ಸಾಮಾಜಿಕ ಜಾಲಾ ತಾಣಗಳಲ್ಲಿ ಬ್ಲಾಗ್‌ ಪೋಸ್ಟ್‌  ಶೇರ್ ಆಗಿರುವುದರಿಂದ ಪ್ರಕರಣ ಸಮಾಜದ ಗಮನಕ್ಕೆ ಬಂದು ಬಾರಿ ಚರ್ಚೆಗೆ ಗ್ರಾಸವಾಗಿತ್ತು.

ಕುಂದಾಪ್ರ ಡಾಟ್ ಕಾಂ- editor@kundapra.com