ಗಂಗೊಳ್ಳಿ ಅಳಿವೆ ಹೂಳೆತ್ತಲು ಕೂಡಿಬಂತು ಕಾಲ

ಗಂಗೊಳ್ಳಿ: ಗಂಗೊಳ್ಳಿಯ ಮೀನುಗಾರರ ಬಹುಕಾಲದ ಬೇಡಿಕೆ ಕೊನೆಗೂ ಈಡೇರುವ ದಿನ ಸನ್ನಿಹಿತವಾಗಿದೆ. ಅನೇಕ ಬಾರಿ ಅವಘಡಗಳು ಸಂಭವಿಸಿದ ಮೇಲೆ ಮೀನುಗಾರರ ಹೋರಾಟದ ನಿರಂತರ ಫಲವಾಗಿ ಎಚ್ಚೆತ್ತುಕೊಂಡ ಸರಕಾರಗಳು, ಗಂಗೊಳ್ಳಿ ಅಳಿವೆಯಲ್ಲಿ ಹೂಳೆತ್ತುವ ಕಾರ್ಯಕ್ಕೆ ಅನುಮೋದನೆ ನೀಡಿದೆ. ಈಗಾಗಲೇ ಹೂಳೆತ್ತಲು ಬೃಹತ್  ಯಂತ್ರಗಳು ಗಂಗೊಳ್ಳಿ ಬಂದರುವಿನಲ್ಲಿ ಲಂಗರು ಹಾಕಿದ್ದು ಎಪ್ರಿಲ್ 5ರಿಂದ ಕೆಲಸ ಆರಂಭಿಸುವ ಲಕ್ಷಣಗಳು ಗೋಚರಿಸುತ್ತಿದೆ.

1972ರಲ್ಲಿ ಹೂಳೆತ್ತಿದ್ದರು:
      ಗಂಗೊಳ್ಳಿ ಅಳಿವೆಯಲ್ಲಿ ಡ್ರೆಜ್ಜಿಂಗ್ ಸಮಸ್ಯೆ ಇಂದು ನಿನ್ನೆಯದಲ್ಲ. 1972ರಲ್ಲಿ ಮ್ಯಾಂಗನೀಸ್ ಅದಿರನ್ನು ಸಾಗುಸುವ ಸಂದರ್ಭದಲ್ಲಿ ಹೂಳು ತೆಗೆಯಲಾಗಿತ್ತು. ಆನಂತರದಲ್ಲಿ  ಹೂಳು ತೆಗೆಯಬೇಕೆಂಬ ಬೇಡಿಕೆಯನ್ನು  ಹಲವು ಬಾರಿ ಸರಕಾರದ ಮುಂದೆ ಇಟ್ಟಿದ್ದರಾದರೂ ಸ್ಪಂದನವಿರಲಿಲ್ಲ. ಮೂರು ವರ್ಷಗಳ ಹಿಂದೆ  ರಾಜ್ಯ ಹಾಗೂ ಕೇಂದ್ರ ಸರಕಾರದ ಅನುದಾನದಲ್ಲಿ ಬ್ರೇಕ್ ವಾಟರ್ ನಿರ್ಮಾಣದ ಯೋಜನೆ ಕೈಗೆತ್ತಿಕೊಂಡಿದ್ದರಿಂದ ಹೂಳೆತ್ತುವ ವಿಚಾರ ಮರೆಮಾಚುವಂತಾಗಿತ್ತು. ಆದರೆ ಬಂದರು ಹಾಗೂ ಅಳಿವೆ ಭಾಗದಲ್ಲಿ ಹೂಳು ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತಿದ್ದ ಕಾರಣ ಬೋಟುಗಳು ಅಪಘಾತಕ್ಕೆ ತುತ್ತಾಗುತ್ತಿದ್ದವು. ಅದು ಕೆಲವು ಮೀನುಗಾರರು ಜೀವವನ್ನೂ ಬಲಿ ತೆಗೆದುಕೊಂಡಿತು. ಹೂಳೆತ್ತುವ ಮನವಿಗೆ ಸರಕಾರ ಸರಿಯಾದ ಸ್ಪಂದಿಸದಿದ್ದಾಗ ಮತ್ತೆ ಹೋರಾಟದ ಎಚ್ಚರಿಕೆಯನ್ನೂ ನೀಡಿದ್ದರು. ಎಲ್ಲದರ ಫಲವಾಗಿ 2012ರಲ್ಲಿ ಸರಕಾರ ಅನುಮೋದನೆ ನೀಡಿತ್ತಾದರೂ ಕಾಮಗಾರಿಯ ಗುತ್ತಿಗೆ ಪಡೆಯುತ್ತಿದ್ದ ಕಂಪೆನಿಗಳ ನಡುವಿನ ಕಿತ್ತಾಟದಿಂದ ಹೂಳು ಅಳಿವೆಯಲ್ಲಿಯೇ ಉಳಿಯುವಂತಾಗಿ ಬಂದರಿಗೆ ಬಂದಿದ್ದ ಯಂತ್ರಗಳು ಹಿಂದಿರುಗಿದ್ದವು..
     ಇದೀಗ ಮತ್ತೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ ದೊರೆತಿದೆ. ಸುಮಾರು 1.77 ಕೋಟಿ ರೂ. ವೆಚ್ಚದಲ್ಲಿ ಡ್ರೆಜ್ಜಿಂಗ್ ಕಾಮಗಾರಿಯನ್ನು ಗಂಗೊಳ್ಳಿ ಅಳಿವೆ, ಗಂಗೊಳ್ಳಿಯ ಹೊಸ ಮೀನುಗಾರಿಕಾ ಜೆಟ್ಟಿ ಪ್ರದೇಶ ಹಾಗೂ ಕೋಡಿಯ ಜೆಟ್ಟಿ ಪ್ರದೇಶದಲ್ಲಿ ಕೈಗೆತ್ತಿಕೊಂಡು ಪೂರ್ಣಗೊಳಿಸಿಕೊಡಲು ಸೀ ಈಗಲ್ ಕಂಪೆನಿಯು ಗುತ್ತಿಗೆ ಪಡೆದುಕೊಂಡಿದೆ. ಮೀನುಗಾರಿಕೆಯ ತೊಂದರೆಯಾಗದ ಹಾಗೆ ಹೂಳೆತ್ತುವ ಕೆಲಸವನ್ನು ನಡೆಯಲಿದ್ದು, ಈ ಬಗ್ಗೆ ಅಧಿಕಾರಿಗಳು ಮೀನುಗಾರ ಮುಖಂಡರುಗಳೊಂದಿಗೆ ಸಮಾಲೋಚಿಸಿ ಅವರ ಸಹಕಾರವನ್ನೂ ಕೋರಿದ್ದಾರೆ.


       ಗಂಗೊಳ್ಳಿಯಲ್ಲಿ ಡ್ರೆಜ್ಜಿಂಗ್ ಕಾಮಗಾರಿಯ ಬಳಿಕ, ಬ್ರೇಕ್ ವಾಟರ್ ಕಾಮಾರಿಯನ್ನು ಪೂರ್ಣಗೊಳಿಸುವುದು, ಬೋಟುಗಳು ಲಂಗರು ಹಾಕಲು ಸರಿಯಾದ ವ್ಯವಸ್ಥೆ ಕಲ್ಪಿಸುವುದು, ಬಂದರಿಗೆ ತೆರಳುವ ರಸ್ತೆಗಳನ್ನು ಅಭಿವೃದ್ಧಿ ಪಡಿಸುವುದು ಅಗತ್ಯ. ಆ ಮೂಲಕ ಮೀನುಗಾರಿಕೆಗೆ ಅಗತ್ಯವಾದ ಮೂಲಸೌಕರ್ಯವನ್ನು ಒದಗಿಸುವಂತಾಗಬೇಕು. ಈ ನಿಟ್ಟಿನಲ್ಲಿ ಕೆಲವು ಕಾಮಗಾರಿಗೆ ಸರಕಾರ ಅನುಮೋದನೆ ನೀಡಿದೆ ಎಂಬುದು ಸಂತಸದ ವಿಚಾರ. ಒಟ್ಟಿನಲ್ಲಿ ನಿಶ್ಚಿಂತೆಯಿಂದ ಮೀನುಗಾರಿಕೆಗೆ ತೆರಳುವಂತಾದರೆ ಸಾಕು ಎನ್ನುತ್ತಾರೆ ಮೀನುಗಾರರು.










ಕುಂದಾಪ್ರ ಡಾಟ್ ಕಾಂ- editor@kundapra.com