ರಂಗು ರಂಗಾಗಿ ಮೂಡಿಬಂತು ರಂಗರಂಗು ರಜಾಮೇಳ


      ಮಕ್ಕಳಿಗೆ ಬೇಸಿಗೆ ರಜೆ ಆರಂಭವಾಗುತ್ತಿದ್ದಂತೆಯೇ ಸಮ್ಮರ್ ಕ್ಯಾಂಪು, ಟ್ರೆನಿಂಗು, ಕೋಚಿಂಗ್ ಎಂದು ಮತ್ತೊಂದು ಬಗೆಯಲ್ಲಿ ತರಗತಿಗಳು ಆರಂಭಗೊಂಡುಬಿಡುತ್ತದೆ. ಎಲ್ಲಾ ಒತ್ತಡಗಳಿಂದ ಮುಕ್ತರಾಗಿ ಒಂದೆರಡು ತಿಂಗಳು ಅಜ್ಜಿ ಮನೆಯಲ್ಲೊ ಅಥವಾ ಮತ್ಯಾರೋ ಬಂಧು-ಸ್ನೇಹಿತರೊಂದಿಗೋ ಬಾಲ್ಯದ ಸವಿಯನ್ನು ಸವಿಯೋದಕ್ಕೂ ಬಿಡದೇ ಮತ್ತೆ ಬೋರ್ಡು, ಬ್ರಷ್ಗಳ ಮುಂದೆ ತಂದು ಕೂರಿಸುವ ಕಾರ್ಯಕ್ರಮಗಳಿಗೆ ಬರವಿಲ್ಲ. ಅಂಥಹದರಲ್ಲಿ ಅಲ್ಲೊಂದು ಇಲ್ಲೊಂದು ಎಂಬಂತೆ ಕೆಲವೊಂದು ಸಂಘ ಸಂಸ್ಥೆಗಳು ಮಕ್ಕಳನ್ನು ಮಕ್ಕಳನ್ನಾಗಿ ನೋಡಿ, ಅವರು ಆಡುತ್ತಾ, ಓಡುತ್ತಾ, ಕುಣಿದು ಕುಪ್ಪಳಿಸುತ್ತಾ ಕಲಿಯುವಂತೆ ಮಾಡಿ ಬಾಲ್ಯವನ್ನು ಬೆರಗುಗಣ್ಣಿನಿಂದ ನೋಡುವಂತೆ ಮಾಡುವಲ್ಲಿ ಶ್ರಮಿಸಿ ಯಶಸ್ಸನ್ನೂ ಕಾಣುತ್ತದೆ. ಇಲ್ಯಾರು ಮೇಷ್ಟ್ರುಗಳಾಗೊದಕ್ಕೆ ಬಯಸೊಲ್ಲ ಬದಲಿಗೆ ಮಕ್ಕಳದೇ ಪ್ರಪಂಚದಲ್ಲಿ, ಮಕ್ಕಳೊಂದಿಗೆ ಮಕ್ಕಳಾಗಿ ಒಂದಿಷ್ಟು ಕಲಿಸಿ, ಕಲಿತು ನಿಜಾರ್ಥದಲ್ಲಿ ಶಿಬಿರವನ್ನು ಸಾರ್ಥಕ್ಯಗೊಳಿಸುವ ನಿಸ್ವಾರ್ಥ ಪ್ರಯತ್ನ ಮಾಡಿತ್ತಾರೆ.

      ಹೌದು. ಕುಂದಾಪುರದ 'ಸಮುದಾಯ' ಸಾಂಸ್ಕೃತಿಕ ಸಂಘಟನೆಯು ಕೆಲವು ವರ್ಷಗಳಿಂದ ಆಯೋಜಿಸುತ್ತಾ ಬಂದಿರುವ 'ರಂಗ ರಂಗು' ಬೇಸಿಗೆ ಶಿಬಿರ ಈ ಭಾರಿಯೂ ಹಲವು ವಿಶೇಷತೆಗಳಿಂದ ಕೂಡಿತ್ತು. ವಡೇರಹೋಬಳಿ ಸ.ಹಿ.ಪ್ರಾ ಶಾಲೆಯಲ್ಲಿ ಕುಂದಾಪುರ ಜೆಸಿಐ ಸಿಟಿಯ ಸಹಯೋಗದೊಂದಿಗೆ ಆಯೋಜಿಸಿದ್ದ ರಂಗ ರಂಗುವಿನಲ್ಲಿ, ಮಕ್ಕಳ ಬಾಲ್ಯವನ್ನು ರಂಗು ರಂಗಾಗಿಡಲು ಶ್ರಮಿಸಿತ್ತು.  ಎಪ್ರಿಲ್ 19ರಿಂದ ಆರಂಭಗೊಂಡ 8 ದಿನಗಳ ಬೇಸಿಗೆ ಶಿಬಿರದಲ್ಲಿ ಹತ್ತನೇ ತರಗತಿಯೊಳಗಿನ ಸುಮಾರು 50ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ಅಲ್ಲಿ ಕೇವಲ ಖಾಸಗಿ ಶಾಲೆಯ ಮಕ್ಕಳಿಗೆ ಫೀಸ್ ತೆಗೆದುಕೊಂಡು ಶಿಬಿರವನ್ನು ಆಯೋಜಿಸುವ ಬದಲಿಗೆ ಸರಕಾರಿ ಶಾಲೆ ಹಾಗೂ ಟೆಂಟ್ ನ ಮಕ್ಕಳನ್ನು ಸೇರಿಸಿಕೊಂಡು ಎಲ್ಲರಿಗೂ ಉಚಿತವಾಗಿ ಶಿಬಿರವನ್ನು ಏರ್ಪಡಿಸಿದ್ದರು.

     ಎಲ್ಲಾ ರಜಾ ಶಿಬಿರಗಳಲ್ಲಿಯೂ ಇರುವಂತೆ ಇಲ್ಲಿಯೂ ಬಿತ್ರ ಬಿಡಿಸುವುದು, ಬಣ್ಣ ಬಳಿಯುವುದು, ಕ್ರಾಫ್ಟ್, ಮಾಸ್ಕ್ ಮಾಡುವುದು, ಹಾಡು, ನೃತ್ಯ ದಿನವೂ ಇತ್ತು. ಅದರ ನಡುವೆ ಬಂದ ತೆಂಗಿನ ಗರಿಗಳ ಮಾತ್ರ ಇಂದಿನ ಮಕ್ಕಳಿಗೆ ಒಂದು ಹೊಸ ಅನುಭವನ ನೀಡಿತು. ನೋಡುತ್ತಿದ್ದಂತೆಯೇ ವಾಚು, ಕನ್ನಡಕ, ಗಿರಿಗಿಟ್ಲೆ ಮೊದಲಾದವುಗಳು ಅದರಿಂದ ತಯಾರಾಗಿಬಿಟ್ಟವು. ಮತ್ತೆ ಶಿಬಿರದಲ್ಲಿ ಕಾಣಿಸಿಕೊಂಡಿದ್ದು 'ಕುಂಬಾರಿಕೆ'ಯ ಕಸರತ್ತು. ಮಕ್ಕಳು ವಿಧ ವಿಧದ ಮಣ್ಣಿಮ ಮಡಿಕೆಗಳನ್ನು ತಯಾರಿಸಿ ಖಷಿಪಟ್ಟದ್ದಕಿಂತ ಹೆಚ್ಚು, ಮಣ್ಣನ್ನು ಕೈತುಂಬಾ ಮೆತ್ತಿಕೊಂಡ ಸಂಭ್ರಮ ಅವರಲ್ಲಿತ್ತು. ಅಗ್ನಿಶಾಮಕ ದಳದವರ ಅಗ್ನಿ ಪ್ರಾತ್ಯಕ್ಷಿಕೆ ಮುಗಿದ ಬಳಿಕ ನಡೆದ ನೀರಾಟದಲ್ಲಿ ಮಕ್ಕಳು ಉತ್ಸಾಹದ ಚಿಲುಮೆಗಳಾಗಿ ಜಿನುಗಿದರು.

      ಈ ನಡುವೆ ಮಕ್ಕಳೊಂದಿಗೆ ಕೋಡಿ ಕಿನಾರೆಗೆ ಕಿರು ಪ್ರವಾಸ, ಅವರದ್ದೇ ಚೇಷ್ಟೆಗಳ ಚಿತ್ರವನ್ನು ತೋರಿಸುವ ಸಾಹಸವೂ ನಡೆದಿತ್ತು. ದಿನವೂ ಕಿರು ನಾಟಕಕ್ಕೊಂದು ತಾಲೀಮು ಕೂಡ ಸಲೀಸಾಗಿ ನಡೆದರೇ, ಮದ್ಯಾಹ್ನ ಊಟದ ನಂತರ ಅರ್ಧ ಘಂಟೆ ಗಾಂಧಿ ಪಾರ್ಕಿನಲ್ಲಿ ಒಂದಿಷ್ಟು ಹೊತ್ತು ಸಾಗಿತ್ತು. ಕೊನೆಯ ದಿನ ವಿಶೇಷವಾಗಿ ಆಯೋಜಿಸಿದ ಸಂತೆ, ಮಕ್ಕಳು ಸಾಮಾಜಿಕ ಬದುಕಿನೊಂದಿಗೆ ಸಂಭ್ರಮಿಸುವಂತೆ ಮಾಡಿತು. ಹಣ್ಣು, ತರಕಾರಿ, ದೋಸೆ ಕ್ಯಾಂಪ್, ಮೊಬೈಲ್ ಕರೆನ್ಸಿ, ಕಲಾಕೃತಿ, ಜ್ಯೂಸ್, ಬೇಕರಿ ತಿನಿಸುಗಳನ್ನು ಮಕ್ಕಳು ತಮಗೆ ನಿಗದಿಗೊಳಿಸಿದ ಅಂಗಡಿಯಲ್ಲಿಟ್ಟು ಮಾರುತ್ತಾ ತಮ್ಮ ವ್ಯವಹಾರ ಕೌಶಲ್ಯವನ್ನು ತೋರ್ಪಡಿಸಿದರು. ಮಕ್ಕಳೇ ಪೋಷಕರೇ ಇಲ್ಲಿ ಗ್ರಾಹಕರಾದರು.
      ಮನೆಯಲ್ಲಿ ಅಮ್ಮನಿಗೆ ತಾಕೀತು ಮಾಡಿದಂತೆ ತಾವು ಸೇವಿಸುವ ಉಪಹಾರ, ಊಟ, ಪಾನೀಯ ಯಾವುದಾಗಬೇಕೆಂದು ಈ ರಜಾಮೇಳದಲ್ಲಿ ಮಕ್ಕಳೇ ನಿರ್ಧರಿಸುತ್ತಿದ್ದರು.

      ಶಿಬಿರದಲ್ಲಿ ಎಂದಿನಂತೆ ಜಿ.ವಿ ಕಾರಂತ, ಉದಯ ಗಾಂವ್ಕರ್, ಬಾಲಕೃಷ್ಣ ಕೆ. ಎಂ, ವಾಸುದೇವ ಗಂಗೇರ, ಸದಾನಂದ ಬೈಂದೂರು, ಎಚ್ ನರಸಿಂಹ, ಸಂಧ್ಯಾ ನಾಯಕ್, ಸುಧಾಕರ ಕಾಂಚನ್, ಸಂದೇಶ ವಡೇರಹೋಬಳಿ, ವಿಕ್ರಮ್, ಅನಂತ ಪ್ರಭು, ಶಿವಾನಂದ, ಪೂರ್ಣಚಂದ್ರ, ನಿಶಾಂತ್ ಮೊದಲಾದವರು ಮಕ್ಕಳಿಗೆ ಜೊತೆಯಾದ್ದರೇ ಭೋಜ ಹಾಂಡ್, ರಘು ಕುಲಾಲ್, ಗೋಪಾಲಕೃಷ್ಣ ಮಂಗಳೂರು, ಅಶೋಕ್ ತೆಕ್ಕಟ್ಟೆ, ಚಿನ್ನಾ ವಾಸುದೇವ್, ರಾಘವೇಂದ್ರ ಉಡುಪಿ ಸತೀಶ್ ಶೆಟ್ಟಿಗಾರ್, ಮಾಲತಿ ನಾಯಕ್, ಸುಮನಾ ನಾರಾಯಣ ಅಡಿಗ, ದಿನೇಶ ಪ್ರಭು, ಶ್ರೀಧರ ಎಸ್, ಸೇರಿದಂತೆ ಒಂದಿಷ್ಟು ಯುವ ಬಳಗ ಎಲ್ಲರೂ ಮಕ್ಕಳೊಂದಿಗೆ ಸೇರಿ ಮಕ್ಕಳಾದರು.

     ಒಟ್ಟಿನಲ್ಲಿ ಮಕ್ಕಳಿಗಾಗಿಯೇ ಉಚಿತವಾಗಿ ಆಯೋಜಿಸಿ ಎಂಟು ದಿನಗಳ ಈ ಬೇಸಿಗೆ ಶಿಬಿರವು ಮಕ್ಕಳನ್ನು ಮಕ್ಕಳನ್ನಾಗಿಯೇ ನೋಡುವಂತೆ ಮಾಡುವಲ್ಲಿ, ಆ ಮೂಲಕ ಮಕ್ಕಳಿಗೂ ಒಂದು ಸುಂದರ ಬಾಲ್ಯವನ್ನು ಕಟ್ಟಿಕೊಡುವಲ್ಲಿ ಯಶಕಂಡಿದೆ.

► ಟೆಂಟ್ ಮಕ್ಕಳೂ ಶಿಬಿರಕ್ಕೆ ಬಂದರು!
     ಬಡತನದ ಬೇಗೆಯಲ್ಲಿ ಬೆಳೆಯುವ ಟೆಂಟ್ ಮಕ್ಕಳಿಗೆ ಒಂದು ಶಾಶ್ವತ ನೆಲೆಯೆಂಬುದಿಲ್ಲ. ಅವರು ಸ್ವಲ್ವ ದೊಡ್ಡವರಾಗುವುದೇ ತಡ, ಪೋಷಕರು ದುಡಿಯಲು ನೂಕುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಅವರು ಸುಂದರ ಬಾಲ್ಯದ ಕನಸು ಕಾಣುವುದೂ ಕಷ್ಟ. ಇತ್ತಿಚಿಗೆ ಅಲ್ಲಿಯೂ ಒಂದಿಷ್ಟು ಪರಿವರ್ತನೆಗಳಾಗಿ ಶಿಕ್ಷಕರ ನಿರಂತರ ಒತ್ತಾಯದ ಮೇರೆಗೆ ಮಕ್ಕಳನ್ನು ಶಾಲೆಗೆ ಕಳುಹಿಸುವ ಮನಸ್ಸು ಮಾಡುತ್ತಿದ್ದಾರೆ ಎನ್ನುವುದು ನೆಮ್ಮದಿಯ ಸಂಗತಿ. ಸಮುದಾಯ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆ ಮಕ್ಕಳನ್ನು ಬೇಸಿಗೆ ಶಿಬಿರಕ್ಕೂ ಕರೆತರುವ ಪ್ರಯತ್ನ ಮಾಡಿತ್ತು. ಶಿಬಿರದಲ್ಲಿ ಟೆಂಟ್ ನಿಂದ ಬರುವ ಮಕ್ಕಳು ನಮ್ಮ ಪೇಟೆ ಮಕ್ಕಳೊಂದಿಗೆ ಬೆರೆಯುವಂತೆ ಮಾಡಿದ ಈ ವಿಶೇಷ ಪ್ರಯತ್ನ ಮಾತ್ರ ಮೆಚ್ಚುವಂತದ್ದು.

► ನಕ್ಕಳಾ ರಾಜಕುಮಾರಿ?
ಎಂಟು ದಿನಗಳ ಬೇಸಿಗೆ ಶಿಬಿರದಲ್ಲಿ ನಾಟಕದ ತಾಲೀಮು ಕೂಡ ಸಲೀಸಾಗಿ ನಡೆದಿತ್ತು. ಪ್ರತಿಭಾವಂತ ನಿರ್ದೇಶಕ ವಾಸುದೇವ ಗಂಗೇರ ಅವರ ನಿರ್ದೇಶನದಲ್ಲಿ 'ನಕ್ಕಳಾ ರಾಜಕುಮಾರಿ' ನಾಟಕದ ಸಿದ್ಧಗೊಂಡಿದ್ದ, ಸಮಾರೋಪ ಸಮಾರಂಭದ ಬಳಿಕ ಪ್ರದರ್ಶನಗೊಳ್ಳಲಿದೆ. ಮಕ್ಕಳ ಪ್ರತಿಭೆಯೂ ಅಲ್ಲಿಗೆ ಬರುವ ಪೊಷಕರ ಮುಂದೆ ಅನಾವರಣಗೊಳ್ಳಲಿದೆ.

► ಹೆಚ್ಚಿನ ಸಹಕಾರ ಬೇಕು
ಬೆಸಿಗೆ ಶಿಬಿರಗಳನ್ನು ಆಯೋಜಿಸುವುದೆಂದರೆ ಸಣ್ಣ ವಿಷಯವಲ್ಲ. ಸಾವಿರಾರು ರೂಪಾಯಿ ಹಣದ ಅಗತ್ಯವಿರುತ್ತದೆ. ಮಕ್ಕಳ ಉಟ, ತಿಂಡಿ, ಶಿಬಿರದ ಸಾಮಾಗ್ರಿ, ಸಂಪನ್ಮೂಲ ವ್ಯಕ್ತಿಗಳ ಸಂಭಾವನೆ, ತಿರುಗಾಟ ಹೀಗೆ ಖರ್ಚಿನ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಅಂಥಹದರಲ್ಲಿ ಉಚಿತವಾಗಿ ಕುಂದಾಪುರದ ಸಮುದಾಯ ಶಿಬಿರಗಳನ್ನು ಆಯೋಜಿಸುತ್ತಾ ಬರುತ್ತಿದೆ. ಈ ದೊಡ್ಡ ಮೊತ್ತದ ಹೊರೆಯನ್ನು ಹೊರಲು ಈ ಬಾರಿ ಜೆಸಿಐ ಕುಂದಾಪುರ ಸಿಟಿ, ಹಾಗೂ ಕೆಲವು ಉತ್ಸಾಹಿಗಳು ಕೈಜೊಡಿಸಿದ್ದಾರೆ. ಆದರೆ ಮಕ್ಕಳಿಗೆ ಸುಂದರ ನೆನಪುಗಳನ್ನು ಕಟ್ಟಿಕೊಡಲು ಮತ್ತಷ್ಟು ಹಣವೂ ಅಗತ್ಯವಿರುತ್ತದೆ. ಅದನ್ನು ಬರಿಸುವಲ್ಲಿ ಸಹೃದಯಿಗಳು ಮುಂದೆಬರಬೇಕಾಗಿದೆ.


ವೈಯಕ್ತಿಕವಾಗಿ ಬೇಸಿಗೆ ಶಿಬಿರಗಳ ಬಗ್ಗೆ ನನ್ನ ಸಹಮತವಿಲ್ಲ. ಅಜ್ಜಿಯ ಮನೆಯಲ್ಲಿ ಆಟವಾಡಿಕೊಂಡಿರಬೇಕಾದವರು ಇಲ್ಲಿ ತಂದು ಕೂರಿಸುವುದು ಸರಿಯಲ್ಲ. ಆದರೆ ಪೇಟೆಯ ಮಕ್ಕಳಿಗೆ ಇಂತಹ ಶಿಬಿರಗಳನ್ನು ಬಿಟ್ಟರೆ ಬೇರೆಯ ಆಯ್ಕೆಗಳಿಲ್ಲ. ಆದ್ದರಿಂದ ಬೇಸಿಗೆ ಶಿಬಿರವನ್ನು ವ್ಯವಹಾರವನ್ನಾಗಿಸದೇ, ಮಕ್ಕಳ ನಿಜವಾದ ಬಾಲ್ಯವನ್ನು ಕಟ್ಟಕೊಡುವ ಸಣ್ಣ ಪ್ರಯತ್ನವನ್ನು ಮಾಡುತ್ತಾ ಬರುತ್ತಿದ್ದೇವೆ - ಉದಯ ಗಾಂವ್ಕರ್, ಅಧ್ಯಕ್ಷರು ಸಮುದಾಯ ಕುಂದಾಪುರ (ಫೇಸ್ಬುಕ್ ಸ್ಟೇಟಸ್) 

ಕುಂದಾಪ್ರ ಡಾಟ್ ಕಾಂ- editor@kundapra.com