ನಿತೀಶ್ ಸಾಧನೆಯ ಓಘಕ್ಕೆ ವೇಗ ಹೆಚ್ಚಿಸಿದ ಬೆಳದಿಂಗಳ ಗೌರವ

ಬೈಂದೂರಿನ ಉದಯೋನ್ಮಖ ಛಾಯಾಚಿತ್ರಗಾರ ನಿತೀಶ್ ಬೈಂದೂರು

ಬೈಂದೂರು: ಅವಕಾಶವನ್ನು ಸರಿಯಾಗಿ ಬಳಸಿಕೊಂಡರೆ ಆಕಾಶವನ್ನೇರೋದು ಕೂಡ ದೊಡ್ಡ ವಿಷಯವೇನಲ್ಲ. ಬದುಕಿನಲ್ಲಿ ಆಗಸದಷ್ಟು ಕನಸುಗಳನ್ನು ಕಂಡು ನನಸು ಮಾಡಿಕೊಳ್ಳಲು ಹೆಣಗಾಡುವವರ ನಡುವೆ ಕಂಡ ಕನಸುಗಳನ್ನು ಸಾಕಾರಗೊಳಿಸುತ್ತಾ, ಸಾಧನೆಯ ಒಂದೊಂದೇ ಮೆಟ್ಟಿಲುಗಳನ್ನೇರುತ್ತಿರುವ ಬೈಂದೂರಿನ ಹುಡುಗ ನಿತೀಶ್ ಎಲ್ಲರಿಗಿಂತ ಕೊಂಚ ಭಿನ್ನವಾಗಿ ನಿಲ್ಲತ್ತಾನೆ. 

       ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಥಮ ಎಂಸಿಜೆ ವಿದ್ಯಾರ್ಥಿಯಾಗಿರುವ ನಿತೀಶ್ ಪಿ. ಬೈಂದೂರು ಛಾಯಾಗ್ರಹಣದಲ್ಲಿ ಉತ್ಕಟ ಆಸಕ್ತಿ ಹೊಂದಿರುವ ಯುವಪ್ರತಿಭೆ. ಆತ ಪೋಟೋಗಳನ್ನು ಸುಂದರವಾಗಿಸುವಷ್ಟು ತಯಾರಿ ನಡೆಸಿ, ಅದರಲ್ಲಿಯೇ ತಲ್ಲಿನನಾಗುವ ಪರಿ ವೃತ್ತಿಪರ ಛಾಯಾಗ್ರಾಹಕರೂ ಬೆರಗು ಪಡುವಂತದ್ದು. ಬೆಳಕನ್ನು ಸೆರೆಹಿಡಿವ ಆಟದೊಂದಿಗೆ ಆತ ಸದಾ ತಲ್ಲೀನ.

       ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿ ಬೈಂದೂರು ಪಡುವರಿಯ ಸುಬ್ರಾಯ ಪಿ. ಮತ್ತು ಕಲಾವತಿ ದಂಪತಿಗಳ ಪುತ್ರನಾದ ನಿತೀಶ್ ಹವ್ಯಾಸದೊಂದಿಗೆ ಓದಿಗೂ ಸಮಾನ ಪ್ರಾಶಸ್ತ್ಯ ನೀಡಿದ್ದಾರೆ.  .ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆಯುತ್ತಿರುವ ಅವಧಿಯಲ್ಲಿ ಕರ್ನಾಟಕ ಫೋಟೋ ನ್ಯೂಸ್, ದಿ ಹಿಂದೂ, ಸ್ವಂದನ ವಾಹಿನಿಗಳಲ್ಲಿ ಇಂಟರ್‌ಶಿಫ್ ವಿದ್ಯಾರ್ಥಿಯಾಗಿ ದುಡಿದು ಸೈ ಏನಿಸಿಕೊಂಡಿದ್ದಾರೆ. ಪ್ರಮುಖ ದಿನಪತ್ರಿಕೆಗಳಲ್ಲಿ ಅವರ ಫೋಟೋಗಳು ಆಗಾಗ ಕಾಣಿಸಿಕೊಳ್ಳುತ್ತಿರುತ್ತವೆ. ಪೋಟೋಗ್ರಫಿಯೊಂದಿಗೆ ಪದವಿ ಪಡೆಯುತ್ತಿದ್ದ ದಿನಗಳಲ್ಲಿಯೇ ಮೀನಿನ ಹೆಜ್ಜೆ-ಬೆಸ್ತರ ಲೋಕ, ದುರ್ಗದ ಅವಾಂತರ, ಡಾ. ಎಂ. ಮೊಹನ ಆಳ್ವ ಕಿರುಚಿತ್ರಗಳನ್ನು ತನ್ನದೇ ನಿರ್ದೇಶನದಲ್ಲಿ ನಿರ್ಮಿಸಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. 

ಪೋಟೋಗ್ರಫಿಯಲ್ಲಿ ಸಾಧನೆ:
     ಅಂತಿಮ ಪದವಿಯಲ್ಲಿರುವಾಗ ವಿಶ್ವವಿದ್ಯಾನಿಲಯ ಮಟ್ಟದ ಸ್ಪಾಟ್ ಫೋಟೊಗ್ರಫಿಯಲ್ಲಿ ಪ್ರಥಮ ಬಹುಮಾನ ಪಡೆದಿದ್ದ ಈ ಕಿರಿಯನ ಪೋಟೋಗಳು ಸಾಗರ್ ಪೋಟೋಗ್ರಾಫಿಕ್ ಸೊಸೈಟಿ ಮತ್ತು ಫಿಶ್ರಿ ಪೋಟೋಗ್ರಫಿ ಕ್ಲಬ್‌ನ ಫೋಟೊ ಪ್ರದರ್ಶನದಲ್ಲಿ ಸ್ಥಾನ ಪಡೆದಿತ್ತು. 
    ಸ್ನಾತಕೋತ್ಸವ ಪದವಿ ಪಡೆಯುತ್ತಿರುವಾಗಲೇ 2015ರಲ್ಲಿ ಸತತವಾಗಿ ಐದಕ್ಕೂ ಹೆಚ್ಚು ಸ್ವರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ. ಬೆಂಗಳೂರಿನ ಅಭಿನಂದನಾ ಸಾಂಸ್ಕೃತಿಕ ಟ್ರಸ್ಟ್‌ ನ ನಮ್ಮೂರ ಹಬ್ಬ-2015ರಅಂಗವಾಗಿ ಆಯೋಜಿಸಿದ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ದ್ವಿತೀಯ, ಆಳ್ವಾಸ್ ಕಾಲೇಜಿನಲ್ಲಿ ಆಯೋಜಿಸಿದ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ದ್ವಿತೀಯ, ಸೈಂಟ್ ಅಲೋಷಿಯಸ್ ಕಾಲೇಜು ಮಂಗಳೂರಿನಲ್ಲಿ ನಡೆಸಲಾದ ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯ ವಿಂಟೇಜ್ ವಿಭಾಗದಲ್ಲಿ ಹಾಗೂ ಅದೇ ಕಾಲೇಜಿನಲ್ಲಿ ಜನವರಿ ನಡೆದ ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯ ಪ್ರಥಮ ಸ್ಥಾನಿಯಾಗಿ, ಕೂರ್ಗ ಟುಡೇ ಆಯೋಜಿಸಿದ ಛಾಯಾಚಿತ್ರ ಸ್ವರ್ಧೆಯ ಇಪ್ರೆಷನ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಹೊಸ ಭರವಸೆ ಮೂಡಿಸಿದ್ದಾರೆ.

ಸಾಧನೆಗೊಂದು ಪುರಸ್ಕಾರ
  ನಿತೀಶ್ ಬೈಂದೂರು ಅವರು ಪೋಟೋಗ್ರಫಿಯಲ್ಲಿನ ಸಾಧನೆಯನ್ನು ಪರಿಗಣಿಸಿ ಎಪ್ರಿಲ್ 4ರಂದು ಕಾರ್ಕಳದ ಎಣ್ಣೆಹೊಳೆಯಲ್ಲಿ ನಡೆದ 6ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ಪ್ರತಿಭಾರತ್ನ ಗೌರವವನ್ನು ನೀಡಿ ಪುರಸ್ಕರಿಸಿರುವುದು ಅವರ ಸಾಧನೆಯ ಓಘಕ್ಕೆ ಮತ್ತಷ್ಟು ವೇಗ ಸಿಕ್ಕಂತಾಗಿದೆ. 

       ಕುಂದಾಪ್ರ ಡಾಟ್ ಕಾಂ ಹೆಮ್ಮೆಯ ಛಾಯಾವರದಿಗಾರರಾದ ನಿತೀಶ್ ಅವರು ಮತ್ತಷ್ಟು ಯಶಸ್ಸನ್ನು ಕಾಣಲಿ ಎಂದು ನಮ್ಮ ತಂಡ ಹಾರೈಸುತ್ತದೆ.

ನಿತೀಶ್ ಅವರ ಕೆಲವು ಛಾಯಾಚಿತ್ರಗಳು






ಕುಂದಾಪ್ರ ಡಾಟ್ ಕಾಂ- kundapra.com@gmail.com