ಕೊನೆಗೂ ಕಾಲುವೆಯಲ್ಲಿ ಹರಿಯಿತು ವಾರಾಹಿ ನೀರು

ಕುಂದಾಪುರ: ಅಂತೂ ಇಂತೂ ವಾರಾಹಿ ನೀರಾವರಿ ಕಾಲುವೆಯಲ್ಲಿ ಪ್ರಾಯೋಗಿಕವಾಗಿ ನೀರು ಹರಿಸುವ ಮೂಲಕ 36 ವರ್ಷಗಳಿಂದ ಆಮೆ ನಡಿಗೆಯಂತೆ ಸಾಗಿಬಂದ ಯೋಜನೆಗೆ ಹಸಿರು ನಿಶಾನೆ ತೋರಿಸುವ ಸೂಚನೆ ದೊರೆತಿದೆ. ಯೋಜನೆಯ ಆರಂಭದ ಪ್ರದೇಶವಾದ ಹೊಳೆ ಶಂಕರನಾರಾಯಣದಲ್ಲಿರುವ ಮುಖ್ಯ ಅಣೆಕಟ್ಟಿನಿಂದ 0.36ಕಿ.ಮೀ ದೂರದವರೆಗೆ ಪ್ರಾಯೋಗಿಕವಾಗಿ ಎರಡು ದಿನದ ಹಿಂದೆ ನೀರು ಹಾಯಿಸಲಾಗಿದ್ದು ವಾರಾಹಿ ಕಾಲುವೆಯ ಕನಸು ಕಾಣುತ್ತಿದ್ದ ರೈತರಲ್ಲಿ ಹೊಸ ಹುರುಪು ಮೂಡಿದೆ. ಸಾಕಷ್ಟು ಹೋರಾಟಗಳ ಬಳಿಕ ಸುಧೀರ್ಘ ಯೋಜನೆಗೊಂದು ಅಂತ್ಯ ಹಾಡಲು ಅಂತಿಮ ಹಂತದ ಸಿದ್ಧತೆಗಳು ನಡೆದಿದ್ದು ಎಪ್ರಿಲ್ ತಿಂಗಳಿನಲ್ಲಿಯೇ ಉದ್ಘಾಟನೆಗೊಳ್ಳುವ ಲಕ್ಷಣಗಳು ಗೋಚರಿಸಿವೆ. 

ವಾರಾಹಿ ಯೋಜನೆ: 36 ವರ್ಷಗಳ ಕನಸು
      1979ರಲ್ಲಿ ಸುಮಾರು 15,702 ಹೆಕ್ಟೆರ್‌ ಪ್ರದೇಶಕ್ಕೆ ನೀರುಣಿಸುವ ಉದ್ದೇಶದಿಂದ ಮಹತ್ವಾಕಾಂಕ್ಷೆಯ ವಾರಾಹಿ ನೀರಾವರಿ ಯೋಜನೆಯನ್ನು ಕೈಗೆತ್ತಿಗೊಳ್ಳಲಾಗಿತ್ತು.  ಹೊಸಂಗಡಿ ಗ್ರಾಮದ ಹೊಳೆಶಂಕರನಾರಾಯಣದ ಮೂಲಕ ಹರಿಯುವ ವಾರಾಹಿ ನದಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟಿ ರೈತರ ಜಮೀನಿಗೆ ವಾರಾಹಿ ನದಿಯ ಎರಡೂ ದಿಕ್ಕಿನಲ್ಲಿ 0.42 ಕಿಮೀ ಉದ್ದದ ಬಲದಂಡೆ ಹಾಗೂ 0.36 ಕಿಮೀ ಉದ್ದದ ಎಡದಂಡೆ ನಿರ್ಮಿಸಿ ಆ ಮೂಲಕ ರೈತರ ಭೂಮಿಗೆ ನೀರು ಹಾಯಿಸುವ ಯೋಜನೆಗೆ ಚಾಲನೆ ನೀಡಲಾಯಿತು. ಆದರೆ ನಾನಾ ಕಾರಣಗಳಿಂದಾಗಿ ಮುಂದೂಡುತ್ತಲೇ ಬಂದ 9 ಕೋಟಿ ರೂ. ವೆಚ್ಚದ ಈ ಯೋಜನೆಗೆ 36 ವರ್ಷಗಳಲ್ಲಿ 589 ಕೋಟಿ ರೂ. ವ್ಯಯಿಸಲಾಗಿದೆ. 15,702 ಹೆಕ್ಟೇರ್ ಪ್ರದೇಶಕ್ಕಾಗಿ ಸಿದ್ಧಗೊಂಡ ಯೋಜನೆಯು ಸದ್ಯ ಮೊದಲ ಹಂತದಲ್ಲಿ 3 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸಲು ಸಜ್ಜಾಗಿದೆ.

ಭರವಸೆಗೆ ಈಡೇರಿತು. ಹೋರಾಟಕ್ಕೆ ಕೊನೆಗೂ ದೊರೆಯಿತು ಮನ್ನಣೆ 
    ಯೋಜನೆಯ ಆರಂಭದಿಂದಲೂ ಆಮೆ ನಡಿಗೆಯಲ್ಲಿ ಸಾಗಿಬಂದ ಬಗ್ಗೆ ಆರೋಪಗಳು ಕೇಳಿ ಬಂದಿದ್ದವು. ಯೋಜನೆಯ ನಿಧಾನಗತಿಯನ್ನು ಪ್ರಶ್ನಿಸಿ ಸಾಕಷ್ಟು ಬಾರಿ ಹೋರಾಟಗಳು ನಡೆದಿದ್ದವು. ಪರಿಸ್ಥಿತಿಯ ಲಾಭವನ್ನು ಎಲ್ಲಾ ರಾಜಕೀಯ ಪಕ್ಷಗಳು ಪಡೆದುಕೊಂಡು ಯೋಜನೆಯು ಮಂದಗತಿಗೆ ಪರೋಕ್ಷವಾಗಿ ಕಾರಣವಾಗಿದ್ದವು. ಆದರೆ ಕಳೆದ ಒಂದು ವರ್ಷದಿಂದ ಈಚೆಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಯೋಜನಾ ಪ್ರದೇಶಕ್ಕೆ ಭೇಟಿ ನೀಡಿದ್ದ ವಿನಯ ಕುಮಾರ್ ಸೊರಕೆ ಯೋಜನೆಯನ್ನು ಪೂರ್ಣಗೊಳಿಸುವ ಭರವಸೆ ನೀಡಿದ್ದರು.  ನೀರಾವರಿ ಸಚಿವ ಎಂ.ಬಿ. ಪಾಟೀಲ್ ಅವರೊಂದಿಗೆ ಆಗಮಿಸಿದ ಸಂದರ್ಭದಲ್ಲಿಯೂ 2014ರ ಡಿಸೆಂಬರ್ ಅಂತ್ಯದೊಳಗೆ ನೀರು ನೀಡುವುದಾಗಿ ಸೊರಕೆ ಮತ್ತೆ ಭರವಸೆ ನೀಡಿದರು. ಈ ಭರವಸೆಯೂ ಹುಸಿಯಾಗಿತ್ತು.
        ಸರಕಾರ, ಮಂತ್ರಿಗಳು ನೀಡುತ್ತಿರುವ ಭರವಸೆ ನಂಬಿಕೊಂಡಿದ್ದ ರೈತರು ಕಂಗೆಟ್ಟು 2015ರ ಜ.1ರಂದು ಉಡುಪಿ ಜಿಲ್ಲಾ ರೈತ ಸಂಘ ಸಾರಥ್ಯದಲ್ಲಿ ಅನಿರ್ದಿಷ್ಟಾವಧಿ ಸತ್ಯಾಗ್ರಹವನ್ನು 15 ದಿನಗಳ ಕಾಲ ಅವಿರತವಾಗಿ ನಡೆಸಿದರು. ಹೋರಾಟಕ್ಕೆ ಮಣಿದ ರಾಜ್ಯ ನೀರಾವರಿ ಸಚಿವ ಎಂ.ಬಿ. ಪಾಟೀಲ್, ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್, ಅರಣ್ಯ ಸಚಿವ ರಮಾನಾಥ ರೈ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ, ಏಪ್ರಿಲ್ ಅಂತ್ಯದೊಳಗೆ ವಾರಾಹಿ ಕಾಲುವೆಯಲ್ಲಿ ನೀರು ಹರಿಸುವ ಭರವಸೆ ನೀಡಿದ್ದರಿಂದಾಗಿ ರೈತರು ಹೋರಾಟ ಹಿಂಪಡೆದುಕೊಂಡಿದ್ದರು.  ಎಪ್ರಿಲ್‌ ಅಂತ್ಯದ ಒಳಗೆ ಕಾಲುವೆಯಲ್ಲಿ ನೀರು ಹರಿಸುವ ಭರವಸೆಯನ್ನು ಸಚಿವರು ನೀಡಿದರು.   
   2012ರಲ್ಲಿಯೇ ಮಂದಗತಿಯ ಕಾಮಗಾರಿಗೆ ಎಸ್‌ಎನ್‌ಸಿ ಕಂಪೆನಿಯ ಗುತ್ತಿಗೆ ನೀಡಿ ಮರುಚಾಲನೆ ನೀಡಲಾಗಿತ್ತಾದರೂ ನಿರೀಕ್ಷಿತ ಪ್ರಗತಿ ಕಂಡಿರಲಿಲ್ಲ. ಮಾರ್ಚ್ ತಿಂಗಳಲ್ಲಿ ಕಾಲುವೆಯ ಕಾಮಗಾರಿಯನ್ನು ಮುಗಿಸುವ ಭರವಸೆ ನೀಡಿದ ಎಸ್‌ಎನ್‌ಸಿ ಕಂಪನಿ ಭರದಿಂದ ಕಾಮಗಾರಿ ನಡೆಸಿದೆ. ಈಗ ಇಲಾಖೆಯು ಪ್ರಾಯೋಗಿಕವಾಗಿ ಒಂದು ತಿಂಗಳ ಮುಂಚಿತವಾಗಿ ಕಾಲುವೆಯಲ್ಲಿ ನೀರು ಹರಿಸಿ, ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿರುವುರ ಸೂಚನೆ ನೀಡಿದೆ.

ಕುಂದಾಪ್ರ ಡಾಟ್ ಕಾಂ- editor@kundapra.com