ಪಿಯುಸಿಯಲ್ಲಿ ಡಿಸ್ಟಿಕ್ಷನ್ ಪಡೆಯಲು ಅಂಧತ್ವ ಅಡ್ಡಿಯಾಗಲಿಲ್ಲ

ಕುಂದಾಪುರ: ಅಂಧತ್ವ ಎನ್ನುವುದು ಶಾಪವಲ್ಲ. ಮನಸ್ಸು ಮಾಡಿದರೆ ಒಳಗಣ್ಣಿನಿಂದಲೇ ಪ್ರಪಂಚವನ್ನೇ ಗೆಲ್ಲಬಹುದು ಎಂಬುದಕ್ಕೆ ದ್ವಿತೀಯ ಪಿಯುಸಿಯಲ್ಲಿ ಡಿಸ್ಟಿಂಕ್ಷನ್ ಪಡೆದ ಅಂಧ ವಿದ್ಯಾರ್ಥಿ ವಿಖ್ಯಾತ ಎಸ್. ಶೆಟ್ಟಿ ಒಂದು ಉತ್ತಮ ನಿದರ್ಶನ.  

ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಈ ಭಾರಿ ದ್ವಿತೀಯ ಪಿಯುಸಿ ಪೂರೈಸಿರುವ, ಕುಂದಾಪುರ ತಾಲೂಕಿನ ಉಪ್ಪುಂದ ಗ್ರಾಮದ ಅಂಧ ವಿದ್ಯಾರ್ಥಿ ವಿಖ್ಯಾತ ಎಸ್. ಶೆಟ್ಟಿ ಕಲಾ ವಿಭಾಗದಲ್ಲಿ ಶೇ. 92.33 ಅಂಕ (ಇಂಗ್ಲೀಷ್ 89, ಕನ್ನಡ 95, ಸಮಾಜಶಾಸ್ತ್ರ 90, ಇತಿಹಾಸ 96, ಅರ್ಥಶಾಸ್ತ್ರ 91, ರಾಜ್ಯಶಾಸ್ತ್ರ 93 ಒಟ್ಟು 554 ಅಂಕ)ಪಡೆಯುವುದರ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾನೆ. ಬಾಲ್ಯದಲ್ಲಿಯೇ ಚುರುಕಿನ ಸ್ವಭಾವದವನಾಗಿದ್ದ ವಿಖ್ಯಾತ, ಅಂಧತ್ವವೆನ್ನುವುದು ನ್ಯೂನ್ಯತೆ ಎಂದು ತಿಳಿಯದೇ ಕಲಿಕೆಯಲ್ಲಿ ಸದಾ ಮುಂದಿದ್ದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 96.6 ಅಂಕ ಪಡೆದಿದ್ದರು. ಈತನ ಪ್ರತಿಭೆಯನ್ನು ಗುರುತಿಸಿ ಮೂಡುಬಿದಿರೆಯ ಆಳ್ವಾಸ್ ಕಾಲೇಜಿಗೆ ದಾಖಲಿಸಲಾಗಿತ್ತು. ತರಗತಿಯಲ್ಲಿ ಶಿಕ್ಷಕರು ಹೇಳುವ ಪಾಠಗಳನ್ನೇ ಕೇಳುತ್ತಿದ್ದ ವಿಖ್ಯಾತ್, ಅಂದಿನ ಪಾಠಗಳನ್ನು ಬ್ರೈಲ್ ಬರಹದ ಮೂಲಕ ಬರೆದು ಅಭ್ಯಾಸ ಮಾಡುತ್ತಿದ್ದರು. ಈ ಬಾರಿಯ ಪರೀಕ್ಷೆಯಲ್ಲಿ ಶೇ.95 ಅಂಕ ಪಡೆಯುವ ನಿರೀಕ್ಷೆ ಹೊಂದಿದ್ದರು. ಮುಂದೆ ಐ‌ಎಎಸ್ ಮಾಡಬೇಕೆಂಬ ಅಭಿಲಾಷೆ ಹೊಂದಿದ್ದು, ಆ ಬಳಿಕ ಜನರ ಸೇವೆ ಮಾಡುವ ಹಾಗೂ ಜನರಿಗೆ ರಾಜಕೀಯ ಪ್ರಜ್ಞೆ ಮೂಡಿಸುವ ಇಂಗಿತ ಹೊಂದಿದ್ದನು.

ಮೂಲತಹ ಬಿಜೂರು ಗ್ರಾಮದ ಗಂಟಿಹೊಳೆಯವರಾದ ಶಿವರಾಮ ಶೆಟ್ಟಿ ಹಾಗೂ ಸುಜಾತ ಆರ್. ಶೆಟ್ಟಿ ದಂಪತಿಯ ಪುತ್ರನಾದ ವಿಖ್ಯಾತನ ತಂದೆ ಶಿವರಾಮ ಶೆಟ್ಟಿ ಪ್ರಸ್ತುತ ಉಪ್ಪುಂದದಲ್ಲಿ ನೆಲೆಸಿದ್ದಾರೆ. ಶಿವರಾಮ ಶೆಟ್ಟಿ ಹುಟ್ಟು ಕೃಷಿಕರಾಗಿದ್ದು, ಈಗ ಕೃಷಿಯೊಂದಿಗೆ ಸಣ್ಣಪುಟ್ಟ ವ್ಯವಹಾರ ನಡೆಸುತ್ತಿದ್ದಾರೆ. ಶಿವರಾಮ ಶೆಟ್ಟಿ ಹಾಗೂ ಸುಜಾತ ಶೆಟ್ಟಿ ದಂಪತಿಗೆ ಮೂವರು ಮಕ್ಕಳಲ್ಲಿ ವಿಖ್ಯಾತ ಎರಡನೆಯವನಾಗಿದ್ದು, ಅವರ ಮೂರನೆಯ ಪುತ್ರಿಗೂ ಶ್ರವಣದೋಷವಿದ್ದು, ಆಕೆ ಶಿವಮೊಗ್ಗದಲ್ಲಿ 9ನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ. ಮಕ್ಕಳ ನ್ಯೂನ್ಯತೆಯ ಬಗ್ಗೆ ಯಾವುದೇ ಚಿಂತೆ ವ್ಯಕ್ತಪಡಿಸದ ದಂಪತಿ, ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆಂಬ ಬಯಕೆ ಹೊಂದಿದ್ದಾರೆ. ಆದರೆ ಅವರನ್ನು ಬಿಟ್ಟಿರುವುದೇ ಕಷ್ಟವಾಗುತ್ತದೆ ಎನ್ನುತ್ತಾರೆ.
ಕುಂದಾಪ್ರ ಡಾಟ್ ಕಾಂ- editor@kundapra.com