ಚುನಾವಣೆ: ತಾಲೂಕಿನಾದ್ಯಂತ ಶಾಂತಿಯುತ ಮತದಾನ

ಗ್ರಾ.ಪಂ ಚುನಾವಣೆ: ಹಲವು ಪಂಚಾಯತಿಗಳಲ್ಲಿ ರಾಜಿಯಾಟ, ಕೆಲವೆಡೆ ಮಳೆರಾಯನ ಆರ್ಭಟ, ಸಣ್ಣ ಪುಟ್ಟ ಹೊಡೆದಾಟ
ಕುಂದಾಪುರ: ರಾಜ್ಯದ ಗ್ರಾಮ ಪಂಚಾಯತ್‌ಗಳಲ್ಲಿ ಇಂದು(ಶುಕ್ರವಾರ) ಮೊದಲ ಹಂತದ ಚುನಾವಣೆ ನಡೆದಿದ್ದು, ಈ ಭಾರಿ ಕುಂದಾಪುರ ತಾಲೂಕಿನಲ್ಲಿ ಶೇ.71.19 ಮತದಾನವಾಗಿದೆ. ಅಲ್ಲಲ್ಲಿ ಮಾತಿನ ಚಕಮಕಿ, ಆರೋಪ-ಪ್ರತ್ಯಾರೋಪ ಹಾಗೂ ಒಂದೆರಡು ಕಡೆ ಹಲ್ಲೆ ಪ್ರಕರಣವನ್ನು ಹೊರತುಪಡಿಸಿದರೇ ಬಹುತೇಕ ಮತದಾನ ಶಾಂತಿಯುತವಾಗಿ ನಡೆದಿದೆ.

142 ಸ್ಥಾನಗಳಿಗೆ ಅವಿರೋಧ ಆಯ್ಕೆ:
ಕುಂದಾಪುರ ತಾಲೂಕಿನ ಒಟ್ಟು 62 ಪಂಚಾಯತ್‌ಗಳ 875 ಸ್ಥಾನಗಳಿಗೆ ಈ ಚುನಾವಣೆ ಘೋಷಣೆಯಾಗಿತ್ತು. ಇವುಗಳ ಪೈಕಿ 142 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, ಉಳಿದ 733 ಸ್ಥಾನಗಳಿಗೆ ಶುಕ್ರವಾರ ಚುನಾವಣೆ ನಡೆಯಿತು. ಈ ಬಾರಿ ಕುಂದಾಪುರ ತಾಲೂಕಿನಲ್ಲಿ 9 ಹೊಸ ಗ್ರಾಮಪಂಚಾಯತ್‌ಗಳ ರಚನೆಯಾಗಿತ್ತು. ಹೊಸ ಗ್ರಾಮ ಪಂಚಾಯತ್‌ಗಳಲ್ಲಿ ಕೊರ್ಗಿ ಗ್ರಾಮದ ಎಲ್ಲ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು ವಿಶೇಷವಾಗಿತ್ತು. ಉಳಿದಂತೆ ಶಿರೂರು ಗ್ರಾ.ಪಂ.ನ 44 ಸ್ಥಾನಗಳಲ್ಲಿ  2 ಸ್ಥಾನಗಳಿಗೆ, ಪಡುವರಿ  ಗ್ರಾ.ಪಂ.ನ 18 ಸ್ಥಾನಗಳಲ್ಲಿ ಒಂದು ಸ್ಥಾನಕ್ಕೆ, ಉಪ್ಪುಂದ ಗ್ರಾ.ಪಂ.ನ 28 ಸ್ಥಾನಗಳಲ್ಲಿ ಒಂದು ಸ್ಥಾನಕ್ಕೆ, ಕೆರ್ಗಾಲ್ ಗ್ರಾ.ಪಂ.ನ 12 ಸ್ಥಾನಗಳಲ್ಲಿ  ಒಂದು ಸ್ಥಾನಕ್ಕೆ, ಕಾಲ್ತೋಡು ಗ್ರಾ.ಪಂ.ನ 13 ಸ್ಥಾನಗಳಲ್ಲಿ 4  ಸ್ಥಾನಗಳಿಗೆ, ಕಂಬದಕೋಣೆ ಗ್ರಾ.ಪಂ.ನ 14 ಸ್ಥಾನಗಳಲ್ಲಿ ಎರಡು ಸ್ಥಾನಗಳಿಗೆ, ನಾವುಂದ ಗ್ರಾ.ಪಂ.ನ 15 ಸ್ಥಾನಗಳಲ್ಲಿ 2 ಸ್ಥಾನಕ್ಕೆ, ಮರವಂತೆ ಗ್ರಾ.ಪಂ.ನ 14 ಸ್ಥಾನಗಳಲ್ಲಿ ಒಂದಕ್ಕೆ, ನಾಡ ಗ್ರಾ.ಪಂ.ನ  25 ಸ್ಥಾನಗಳಲ್ಲಿ  5 ಸ್ಥಾನಕ್ಕೆ,  ಆಲೂರು ಗ್ರಾ.ಪಂ.ನ 14 ಸ್ಥಾನಗಳಲ್ಲಿ 11 ಸ್ಥಾನಗಳಿಗೆ, ಹಕ್ಲಾಡಿ ಗ್ರಾ.ಪಂ.ನ 16 ಸ್ಥಾನಗಳಲ್ಲಿ  8 ಸ್ಥಾನಗಳಿಗೆ, ತ್ರಾಸಿ ಗ್ರಾ.ಪಂ.ನ 8 ಸ್ಥಾನಗಳಲ್ಲಿ 3 ಸ್ಥಾನಗಳಿಗೆ, ಹೆಮ್ಮಾಡಿ ಗ್ರಾ.ಪಂ.ನ 11 ಸ್ಥಾನಗಳಲ್ಲಿ  4 ಸ್ಥಾನಗಳಿಗೆ,  ಹಟ್ಟಿಯಂಗಡಿ ಗ್ರಾ.ಪಂ.ನ 14 ಸ್ಥಾನಗಳಲ್ಲಿ  4 ಸ್ಥಾನಗಳಿಗೆ, ಕಾವ್ರಾಡಿ ಗ್ರಾ.ಪಂ.ನ 16ಸ್ಥಾನಗಳಲ್ಲಿ  2 ಸ್ಥಾನಗಳಿಗೆ , ಆನಗಳ್ಳಿ ಗ್ರಾ.ಪಂ.ನ 8 ಸ್ಥಾನಗಳಲ್ಲಿ ಒಂದು ಸ್ಥಾನಕ್ಕೆ,  ಕೋಣಿ ಗ್ರಾ.ಪಂ.ನ 10 ಸ್ಥಾನಗಳಲ್ಲಿ ಒಂದು ಸ್ಥಾನಕ್ಕೆ,  ತೆಕ್ಕಟ್ಟೆ ಗ್ರಾ.ಪಂ. 14 ಸ್ಥಾನಗಳಲ್ಲಿ ಒಂದು ಸ್ಥಾನಕ್ಕೆ, ಬೇಳೂರು ಗ್ರಾ.ಪಂ.ನ 9 ಸ್ಥಾನಗಳಲ್ಲಿ 2 ಸ್ಥಾನಗಳಿಗೆ,  ಕೆದೂರು ಗ್ರಾ.ಪಂ.ನ 10 ಸ್ಥಾನಗಳಿಗೆ,  ಕಾಳಾವರ ಗ್ರಾ.ಪಂ.ನ 17 ಸ್ಥಾನಗಳಲ್ಲಿ 7 ಸ್ಥಾನಗಳಿಗೆ,  ಹೊಂಬಾಡಿ-ಮಂಡಾಡಿ ಗ್ರಾ.ಪಂ.ನ 17 ಸ್ಥಾನಗಳಲ್ಲಿ ಒಂದು ಸ್ಥಾನಕ್ಕೆ,  ಮೊಳಹಳ್ಳಿ ಗ್ರಾ.ಪಂ.ನ ಎಲ್ಲ 11 ಸ್ಥಾನಗಳಿಗೆ, ಹಾರ್ದಳ್ಳಿ-ಮಂಡಳ್ಳಿಯ ಎಲ್ಲಾ 13 ಸ್ಥಾನಗಳಿಗೆ, ಹಾಲಾಡಿ ಗ್ರಾ.ಪಂ.ನ 11 ಸ್ಥಾನಗಳಲ್ಲಿ 7 ಸ್ಥಾನಗಳಿಗೆ,  ಬೆಳ್ವೆ ಗ್ರಾ.ಪಂ.ನ 18 ಸ್ಥಾನಗಳಲ್ಲಿ 17 ಸ್ಥಾನಗಳಿಗೆ, ಅಮಾಸೆಬೈಲು ಗ್ರಾ.ಪಂ.ನ ಒಟ್ಟು 19 ಸ್ಥಾನಗಳಲ್ಲಿ 2 ಸ್ಥಾನಗಳಿಗೆ,  ಈಡೂರು ಕುಂಜ್ಞಾಡಿ ಗ್ರಾ.ಪಂ.ನ 12 ಸ್ಥಾನಗಳಲ್ಲಿ 1 ಸ್ಥಾನಕ್ಕೆ, ಕಟ್‌ಬೆಲ್ತೂರಿನ ಗ್ರಾ.ಪಂ.ನ 13 ಸ್ಥಾನಗಳಲ್ಲಿ ಒಂದು ಸ್ಥಾನಕ್ಕೆ, ಗುಲ್ವಾಡಿ ಗ್ರಾ.ಪಂ.ನ 13 ಸ್ಥಾನಗಳಲ್ಲಿ  ಒಂದು ಸ್ಥಾನಕ್ಕೆ, ಗೋಪಾಡಿಯ  ಒಂಭತ್ತು ಸ್ಥಾನಗಳಲ್ಲಿ ಒಂದು ಸ್ಥಾನಕ್ಕೆ  ಹಾಗೂ ಕೊರ್ಗಿಯ ಎಲ್ಲ 9 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ. ಈ ಪೈಕಿ ಕೊರ್ಗಿ ಗ್ರಾ.ಪಂ.ನ 9, ಮೊಳಹಳ್ಳಿ  ಗ್ರಾ.ಪಂ.ನ 11, ಕೆದೂರಿನ ಗ್ರಾ.ಪಂ.ನ 10, ಹಾರ್ದಳ್ಳ್ಪಿ ಮಂಡಳ್ಳಿ ಗ್ರಾ.ಪಂ.ನ 13 ಸ್ಥಾನಗಳಿಗೆ ಪೂರ್ಣ ಪ್ರಮಾಣದ ಅವಿರೋಧ ಆಯ್ಕೆ ನಡೆದಿರೋದು ವಿಶೇಷವಾಗಿದೆ.  
ಕುಂದಾಪುರ ತಾಲೂಕಿನ ಕೋಟೇಶ್ವರ, ತೆಕ್ಕಟ್ಟೆ, ಜಪ್ತಿ, ತಲ್ಲೂರು, ಬಸ್ರೂರು, ಬೇಳೂರು, ಜಪ್ತಿ, ಪಡುವರಿ, ಶಿರೂರು,  ಮುಂತಾದೆಡೆ ಬೆಳಿಗ್ಗೆಯಿಂದಲೇ ಜನ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿರುವುದು ಕಂಡುಬಂತು. ಕೊಟೇಶ್ವರ, ಕಾಳವಾರ, ಬಿಜೂರು, ಶಂಕರನಾರಾಯಣ ಮುಂತಾದೆಡೆ ಮತದಾನ ನಿಧಾನಗತಿಯಲ್ಲಿ ಸಾಗುತ್ತಿತ್ತು. 

ಜನಪ್ರತಿನಿಧಿಗಳ ಮತದಾನ:
ಕನ್ಯಾನ ಗ್ರಾಮದ ಒಂದನೇ ವಾರ್ಡಿನಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲ ಪೂಜಾರಿ ಮತ ಚಲಾಯಿಸಿದರೇ, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಕೊಟತಟ್ಟು ಗ್ರಾಮದಲ್ಲಿ, ಬಿಜೆಪಿ ಮುಖಂಡ ಸುಕುಮಾರ ಶೆಟ್ಟಿ ಬೆಳ್ಳಾಲ ಗ್ರಾಮದಲ್ಲಿ ಮತ ಚಲಾಯಿಸಿದರು. ಹಾಲಾಡಿ ಗ್ರಾ.ಪಂ ನಲ್ಲಿ ಅಭ್ಯರ್ಥಿಗಳ ನಡುವೆ ರಾಜಿಯಾದುದರಿಂದ ಕುಂದಾಪುರ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಹಾಗೂ ಕೊರ್ಗಿ ಪಂಚಾಯತ್ ಅವಿರೋಧ ಆಯ್ಕೆಗಳಾದ ಕಾರಣ ಮಾಜಿ ಸಂಸದ ಕೆ. ಜಯಪ್ರಕಾಶ ಹೆಗ್ಡೆ ಅವರು ಕೊರ್ಗಿ ಗ್ರಾಮದಲ್ಲಿ ಮತ ಚಲಾಯಿಸುವ ಅವಕಾಶ ಕಳೆದುಕೊಂಡರು. 

ಮಳೆಗೆ ಮತದಾರ ಕಂಗಾಲು:
 ತಾಲೂಕಿನಾದ್ಯಂತ ಬೆಳಿಗ್ಗೆಯಿಂದ ಮೊಡ ಕವಿದ ವಾತಾವರಣವಿದ್ದು, ತಾಲೂಕಿನ ಹಲವೆಡೆ ಮಧ್ಯಾಹ್ನದ ಸುಮಾರಿಗೆ ಗುಡುಗು, ಮಿಂಚು ಸಹಿತ ಬಾರೀ ಮಳೆಯಾಗಿದೆ. ಶಿರೂರು ಬೈಂದೂರು ಕೊಲ್ಲೂರು ನಾಗೂರು, ಕೋಟೇಶ್ವರ, ಕುಂಭಾಸಿ, ತೆಕ್ಕಟ್ಟೆ, ಕೋಟ, ಕೆದೂರು, ತಲ್ಲೂರು, ಹಟ್ಟಿಯಂಗಡಿ, ಅಮಾಸೆಬೈಲು ಮೊದಲಾದೆಡೆ ಭಾರೀ ಮಳೆಯಾಗಿತ್ತು. ಮಧ್ಯಾಹ್ನ ೩ ಗಂಟೆ  ಬಳಿಕ ನಂತರ ಮೋಡವಿದ್ದರೂ ಮಳೆ ನಿಂತಿದ್ದರಿಂದ ಮತದಾನ ಬಿರುಸುಗೊಂಡಿತು. ಒಟ್ಟಿನಲ್ಲಿ ಯಾವುದೇ ಗಂಭೀರ ಅಡಚಣೆಯಿಲ್ಲದೆ ಮತದಾನ ಶಾಂತಿಯುತವಾಗಿ ನಡೆಯಿತು. 

ವ್ಯಕ್ತಿಗೆ ಹಲ್ಲೆ: 
ಬೆಳ್ಳಾಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡುಮುಂದ ಶಾಲೆಯ ಮತಗಟ್ಟೆಯೊಂದರಲ್ಲಿ ಮತದಾನದ ವೇಳೆ ನಡೆದ ಚಕಮಕಿ ಹಲ್ಲೆಗೆ ತಿರುಗಿ ಬಾಲಕೃಷ್ಣ ಶೆಟ್ಟಿ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ತಾನು ಪಕ್ಷವೊಂದರ ಅಭ್ಯರ್ಥಿಯ ಜತೆ ಮಾತನಾಡುತ್ತಿದ್ದಾಗ ವಿರೋಧಿಗಳು ಹಲ್ಲೆ ನಡೆಸಿದರು ಎಂದು ಇವರು ಆರೋಪಿಸಿದ್ದಾರೆ. ತಲೆಗೆ ಗಂಭೀರ ರಕ್ತಗಾಯ ಉಂಟಾದ ಅವರು ಕುಂದಾಪುರ ಆಸ್ಪತ್ರೆಗೆ ಸೇರಿದ್ದಾರೆ. ಕುಂದಾಪುರ ಡಿ.ವೈ.ಎಸ್.ಪಿ. ಮಂಜುನಾಥ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೋರ್ಟುವಿನಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ಆರಂಭಗೊಳ್ಳಲಿದ್ದ ಗುಂಪು ಘರ್ಷಣೆಯನ್ನು ಮಧ್ಯಪ್ರವೇಶಿಸಿದ ಪೊಲೀಸರು ತಡೆದರು.

















ಕುಂದಾಪ್ರ ಡಾಟ್ ಕಾಂ- editor@kundapra.com