ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನ ಮರವಂತೆ

ಪುನಃ ಪ್ರತಿಷ್ಠೆ, ಅಷ್ಟಬಂಧ, ಸಹಸ್ರಕಲಸ ಬ್ರಹ್ಮಕುಂಭಾಭಿಷೇಕ ಮಹೋತ್ಸವ 
     ಅಸಂಖ್ಯ ಭಕ್ತಜನರ ಆರಾಧ್ಯ ದೇವರಾಗಿರುವ ಮರವಂತೆ ಮಹಾರಾಜ ಸ್ವಾಮಿ ಶ್ರಿ ವರಾಹ ದೇವಸ್ಥಾನದಲ್ಲಿ ಮೇ.3ರಿಂದ 5ನೇ ತಾರೀಕಿನ ವರೆಗೆ ಶ್ರೀ ದೇವರ ಪುನಃ ಪ್ರತಿಷ್ಠೆ, ಅಷ್ಟಬಂಧ, ಸಹಸ್ರಕಲಸ ಬ್ರಹ್ಮಕುಂಭಾಭಿಷೇಕ ಮಹೋತ್ಸವ ನಡೆಯಲಿದ್ದು, ಭಾರಿ ಸಂಖ್ಯೆಯ ಭಕ್ತ ಸಮೂಹ ಪುಣ್ಯಕಾರ್ಯದಲ್ಲಿ ಭಾಗಿಯಾಗಲು ಎದುರು ನೋಡುತ್ತಿದ್ದಾರೆ. 

ದೇವಳದ ಐತಿಹ್ಯ:
     ಮರವಂತೆ ಧಾರ್ಮಿಕವಾಗಿ ಅತ್ಯಂತ ಪವಿತ್ರವಾದ ಕ್ಷೇತ್ರ. ಗತ ಪೂರ್ವದಲ್ಲಿ ದೇವೇಂದ್ರನು ಗೌತಮ ಮುನಿಯ ಪತ್ನಿ ಅಹಲ್ಯೆಯಲ್ಲಿ ಕಾಮಾತುರನಾಗಿ ಗೌತಮ ಋಷಿಯ ಶಾಪಕ್ಕೀಡಾಗಿ ಭೂಲೋಕದ ಸೌಪರ್ಣಿಕ ನದಿಯ ತಟದಲ್ಲಿ ವಾಸಿಸುತ್ತಿದ್ದನು. ಆ ಸಮಯದಲ್ಲಿ ಗುಹೇಶ್ವರ ಲಿಂಗವನ್ನು ಪೂಜಿಸಿ, ತಪಸ್ಸು ಮಾಡುತ್ತಾ, ಸಮಯ ಕಳೆದ ದೇವೇಂದ್ರನು ಶಾಪ ವಿಮುಕ್ತಿಯಾದ ನಂತರ ಬ್ರಹಸ್ಪತಿ ಆಚಾರ್ಯರ ನೇತೃತ್ವದಲ್ಲಿ ಗಂಗಾಧರನೆಂಬ ಲಿಂಗವನ್ನು ಸ್ಥಾಪಿಸಿ, ದೇವಲೋಕಕ್ಕೆ ಮರಳಿದನು. ಈ ಲಿಂಗವೇ ಶ್ರೀ ಗಂಗಾಧರೇಶ್ವರ ದೇವಸ್ಥಾನ. 
     ಪಯಸ್ವಿನಿ ಎಂಬ ನದಿ ತೀರದಲ್ಲಿ ಕ್ಷಾತ್ರ ವಂಶಸ್ಥನಾದ ಅರಸನೊಬ್ಬ ತನ್ನ ವಿಚಾರ ಹೀನತನದಿಂದ ಪುತ್ರ ಹತ್ಯೆಯ ಪಾಪಕ್ಕೊಳಗಾಗಿ ಅದರ ಪ್ರಾಯಶ್ಚಿತಕ್ಕಾಗಿ ವಿವಿಧ ಧಾರ್ಮಿಕ ಕ್ಷೇತ್ರಗಳನ್ನು ಸಂದರ್ಶಿಸಿ, ಗೋಕರ್ಣದಲ್ಲಿ ತಂಗಿರುವಾಗ ಆತನಿಗೆ ಸ್ವಪ್ನ ಸಂದೇಶವಾಗುತ್ತದೆ. ನದಿ ಸಮುದ್ರದ ಸಂಗಮದಲ್ಲಿ ಶ್ರೀ ಗಂಗಾಧರೇಶ್ವರ ದೇವಸ್ಥಾನವಿದೆ. ಆ ದೇವಸ್ಥಾನದ ದಕ್ಷಿಣಕ್ಕೆ ವರಾಹ, ವಿಷ್ಣು, ನಾರಸಿಂಹ ಮೂರು ಮೂರ್ತಿಗಳನ್ನು ವಿಧಿವತ್ತಾಗಿ ಸ್ಥಾಪಿಸುವಂತೆ ಆತನಿಗೆ ದೈವೀ ಪ್ರೇರಣೆ ಆಗುತ್ತದೆ. ಹಾಗೆ ಅರಸನು ಗುಹೇಶ್ವರನನ್ನು ಪೂಜಿಸಿ ವೈವಸ್ವತ ಮನ್ವಂತರದ 28ನೇ ಕಲಿಯುಗದ ಪ್ರಥಮ ಪಾದದಲ್ಲಿ 3300 ವರುಷ ಕಳೆಯುವ ಶುಕ್ಲ ಸಂವತ್ಸರದ ಉತ್ತರಾಯುಣ ವಸಂತ ಋತುವಿನ ವೈಶಾಖ ಶುದ್ಧ ತದಿಗೆ ಪೂರ್ವಾಹ್ನ ಗುರುವಾರ ವೃಷಭ ಲಗ್ನ ಚಂದ್ರ ಕೇಂದ್ರ ಭ್ರಹಸ್ಪತಿ ಇರುವ ಶುಭ ಮುಹೂರ್ತದಲ್ಲಿ ವಿಧಿವತ್ತಾಗಿ ಮೂರ್ತಿತ್ರಯರನ್ನು ಪ್ರತಿಷ್ಠಾಪಿಸಿದನು. ಹೀಗೆ ಒಬ್ಬ ರಾಜನಿಂದ ಪ್ರತಿಷ್ಠಾಪಿಸಲ್ಪಟ್ಟ ಈ ದೇವಸ್ಥಾನವು ಮಹಾರಾಜಸ್ವಾಮಿ ಶ್ರೀ ವರಾಹ ದೇವಸ್ಥಾನ ಎಂದು ಹೆಸರು ಪಡೆಯಿತು.  
     ಶ್ರೀ ವಿಷ್ಣು ಹಾಗೂ ಶ್ರೀ ವಿಷ್ಣುವಿನ ದಶವತಾರಗಳಲ್ಲಿ ಎರಡು ಮುಖ್ಯ ಅವತಾರಗಳಾದ ಶ್ರೀ ವರಾಹ ಮತ್ತು ಶ್ರೀ ನರಸಿಂಹ ದೇವರು ಈ ಮೂರು ದೇವರ ಮೂರ್ತಿಗಳು ಒಂದೇ ಗರ್ಭಗುಡಿಯಲ್ಲಿ ಸಾಲಾಗಿ ಸ್ಥಾಪಿಸಲ್ಪಟ್ಟಿರುವುದು ಈ ದೇವಾಲಯದ ವೈಶಿಷ್ಟ್ಯ. ಮೂರು ಮೂರ್ತಿಗಳಿಗೆ ಪ್ರತ್ಯೇಕ ಪ್ರವೇಶ ದ್ವಾರಗಳಿದ್ದರೂ ಎಡನಾಳಿ ಮತ್ತು ಮುಖಮಟಂಪ ಮಾತ್ರ ಒಂದೇ. ಮೂರು ದೇವರಿಗೆ ಆಗಮವಿದೆಯಂತೆ ಹಗಲು ಮತ್ತು ರಾತ್ರಿ ಪೂಜೆ ನಡೆಯುತ್ತದೆ. ಈ ದೇವಸ್ಥಾನಕ್ಕೆ ತ್ರಿಕೂಟಚಲ ದೇವಸ್ಥಾನವೆಂಬ ಇನ್ನೊಂದು ಹೆಸರು ಇದೆ. ಭರತ ಭೂಮಿಯಲ್ಲಿನ ಏಳು ವರಾಹ ದೇವಸ್ಥಾನಗಳಲ್ಲಿ ಮರವಂತೆಯ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನವು ಒಂದಾಗಿದೆ.

ಅಭಾರಿ ಸೇವೆ:
     ಇಲ್ಲಿನ ಇನ್ನೊಂದು ವೈಶಿಷ್ಟವೆಂದರೆ ಅಭಾರಿ ಎಂಬ ದೇವತಾ ಕಾರ್ಯ. ಭಕ್ತರು ಶ್ರೀ ವರಾಹ ದೇವರು ತಮಗೆ ಕಾಲಕಾಲಕ್ಕೆ ಮಳೆ ಬೆಳೆಯನ್ನೊದಗಿಸಿ, ತಮ್ಮನ್ನು ನೆರೆ ಪ್ರವಾಹಗಳಿಂದ ರಕ್ಷಿಸಿದ್ದಕ್ಕೆ ಮತ್ತು ಮೀನುಗಾರರು ತಮ್ಮ ಉದ್ಯಮದಲ್ಲಿ ಲಾಭಗಳಿಸುವಲ್ಲಿ ಯಶಸ್ವಿಯಾಗಿದಕ್ಕೆ ದೇವರಿಗೆ ತಾವು ಋಣಿ ಆಗಿದ್ದೇವೆ ಎಂಬ ತಮ್ಮ ಅಭಾರವನ್ನು, ಕೃತಜ್ನತೆಯನ್ನು ಪ್ರಕಟಪಡಿಸುವ ಹರಕೆಗಳನ್ನು ಸಲ್ಲಿಸುವುದೇ ಅಭಾರಿ. ಇದು ಪ್ರತಿ ಮೂರು ವರ್ಷಗಳಿಗೊಮ್ಮೆ ಗ್ರಾಮಸ್ಥರಿಂದ ನೆರವೇರುತ್ತದೆ. ದೇವರ ಮಹಿಮೆ ಎನ್ನುವುದು ಅಪರಿಮಿತ. ಈ ದೇವಸ್ಥಾನ ಮೀನುಗಾರರ ಇಷ್ಟಾರ್ಥ ಸಿದ್ಧಿ ಸ್ಥಾನವಾಗಿದೆ.


ವಾರ್ಷಿಕ ಜಾತ್ರೆ:
     ಪ್ರತಿ ವರ್ಷ ಅಷಾಢ ಮಾಸದಲ್ಲಿ ಕರ್ಕಾಟಕ ಅಮಾವಾಸ್ಯೆಯಂದು ಸಂಪನ್ನವಾಗುವ  ಈ ಜಾತ್ರೆಯ ದಿನ ನವ ದಂಪತಿಗಳು ಹಾಗೂ ಭಕ್ತ ಸಮೂಹ ನಾನಾ ಮೂಲೆಗಳಿಂದ ದೇವರ ದರ್ಶನ ಪಡೆಯಲು ಭಾರೀ ಉತ್ಸಾಹದಿಂದ ಆಗಮಿಸಿ ತಮ್ಮ ಎಲ್ಲಾ ಕಷ್ಟಗಳನ್ನು ಮರೆತು ದೇವದರ್ಶನ ಪಡೆದು ಧನ್ಯರಾಗುತ್ತಾರೆ. ಮರವಂತೆ ಜಾತ್ರೆ ಕೇವಲ ಕುಂದಾಪುರ ತಾಲೂಕಿಗೆ ಮಾತ್ರವಲ್ಲದೇ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಜಾತ್ರೆಗಳಲ್ಲೊಂದೇನಿಸಿದೆ. 

     ಈ ವರಾಹ ದೇವಾಲಯ ಇರುವ ಮಾರಸ್ವಾಮಿ ಎಂದು ಗುರುತಿಸುವ ಮರವಂತೆ ಪ್ರದೇಶವು ಅರಬ್ಬೀಸಮುದ್ರ ಮತ್ತು ಸೌಪರ್ಣಿಕ ನದಿಗಳ ನಡುವಿನ ಕಿರಿದಾದ ಭೂಭಾಗ. ದೇವಾಲಯವು ನದಿಯ ದಂಡೆಯಲ್ಲಿದ್ದರೆ, ಅಲ್ಲಿಂದ ಸಮುದ್ರಕ್ಕಿರುವ ಅಂತರ ಕೇವಲ 150 ಮೀಟರಗಳು. ಸಮುದ್ರ ಮತ್ತು ನದಿಗಳ ನಡುವೆ ರಾಷ್ಟ್ರೀಯ ಹೆದ್ದಾರಿ ಸಾಗುತ್ತದೆ. ಸಮುದ್ರ ಮತ್ತು ನದಿಗಳು ಇಷ್ಟು ನಿಕಟವಾಗಿದ್ದು ಒಂದನ್ನೊಂದು ಸೇರದ ವಿದ್ಯಮಾನ ಒಂದು ಭೌಗೋಳಿಕ ಅಚ್ಚರಿ ಎಂಬಂತೆ ಇದೆ. ಸುತ್ತಲಿನ ಹಸಿರು ಮತ್ತು ದೂರದ ಸಹ್ಯಾದ್ರಿಯ ನೋಟ ಮೇಳೈಸಿ ಇಲ್ಲಿ ಸೃಷ್ಠಿಯಾದ ಪ್ರಕೃತಿ ರಮ್ಯನೋಟ ಚಿತ್ತಾಕರ್ಷಕ. ಆ ಕಾರಣದಿಂದ ಮರವಂತೆಗೆ ದೇಶದ ಪ್ರವಾಸೀ ಭೂಪಟದಲ್ಲಿ ಸ್ಥಾನ ದೊರಕಿದೆ.
ಪುನಃ ಪ್ರತಿಷ್ಠೆ-ಅಷ್ಟಬಂಧ-ಸಹಸ್ರಕಲಸ ಬ್ರಹ್ಮಕುಂಭಾಭಿಷೇಕ ಮಹೋತ್ಸವ:
     ಸರ್ವರ ಸಂಕಷ್ಟಗಳನ್ನು ಪರಿಹರಿಸುವ ಆದಿನಾರಾಯಣ ಸ್ವಾಮಿಯು ಗಂಗಾಧರ ಸ್ವಾಮಿಯೊಂದಿಗೆ ಶ್ರೀ ವರಾಹ, ಶ್ರೀ ವಿಷ್ಣು, ಶ್ರೀ ನಾರಸಿಂಹ ಅವತಾರದಲ್ಲಿ ನೆಲೆನಿಂತಿರುವ ದೇವರಿಗೆ ಮೇ.3ರ ಭಾನುವಾರದಿಂದ ಮೊದಲ್ಗೊಂಡು ವೇ.7ರ ಗುರುವಾರದ ತನಕ ಶ್ರೀ ಕ್ಷೇತ್ರದಲ್ಲಿ ಪುನಃ ಪ್ರತಿಷ್ಠೆ-ಅಷ್ಟಬಂಧ- ಬ್ರಹ್ಮಕುಂಭಾಭಿಷೇಕ ಮಹೋತ್ಸವು ವೇ.ಮೂ ಜಯರಾಮ ಅಡಿಗರ ನೇತೃತ್ವದಲ್ಲಿ, ಸರ್ವ ಭಕ್ತ ಸಮೂಹದ ಸಹಕಾರದೊಂದಿಗೆ ನಡೆಯಲಿದ್ದು ಈ ಅವಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ. 
     ಈ ಎಲ್ಲಾ ಕಾರ್ಯಕ್ರಮಗಳಿಗೂ ಕುಟುಂಬ ಸಮೇತರಾಗಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕೆ. ರಾಮಚಂದ್ರ ಹೆಬ್ಬಾರ್ ಹಾಗೂ ಸಮಿತಿಯ ಸದಸ್ಯರು ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಎಂ. ರಾಜಶೇಖರ ಹೆಬ್ಬಾರ್ ಹಾಗೂ ಸಮಿತಿಯ ಪದಾಧಿಕಾರಿಗಳು ವಿನಂತಿಸಿಕೊಂಡಿದ್ದಾರೆ.