ಕುಂದಾಪುರ ಮುಖ್ಯರಸ್ತೆ ಬದಿಯ ಅನಧಿಕೃತ ಕಟ್ಟದ ಛಾವಣಿ ತೆರವು

ಕುಂದಾಪುರ: ನಗರ ಭಾಗದಲ್ಲಿ ಸುಗಮ ಸಂಚಾರ ಹಾಗೂ ಪಾರ್ಕಿಂಗ್ ಗೆ ಅನುವುಮಾಡಿಕೊಡುವ ನಿಟ್ಟಿನಲ್ಲಿ ಇಲ್ಲಿನ ಪುರಸಭೆ ವತಿಯಿಂದ ಕುಂದಾಪುರ ಮುಖ್ಯರಸ್ತೆಯ ಇಕ್ಕೆಲದ ಸರಕಾರಿ ಜಾಗದಲ್ಲಿ ಅತಿಕ್ರಮಿತ ಕಟ್ಟಡದ ಛಾವಣಿಯನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದೆ. 
ಕುಂದಾಪುರದ ಜ್ಯೂನಿಯರ್ ಕಾಲೇಜು ರಸ್ತೆ ಹಾಗೂ ಪುರಸಭೆಯ ರಸ್ತೆಯ ಎರಡೂ ಇಕ್ಕೆಲಗಳಲ್ಲಿ 6 ಗಡಿಗಳನ್ನು ಗುರುತಿಸಿ ಕಳೆದ ಒಂದು ವಾರದಿಂದ ಸರ್ವೇ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಇಂದು ಬೆಳಿಗ್ಗೆ ಜೆಸಿಬಿ ಸಹಾಯದಿಂದ ಜಯಾ ಫರ್ನಿಚರ್, ಕರ್ನಾಟಕ ಬ್ಯಾಂಕ್, ಶ್ರೀ ಶೈಲಾ ಫ್ಯಾನ್ಸಿ ಆರ್ಟ್ಸ್ ಸೇರಿದಂತೆ ಹಲವು ಅಂಗಡಿ ಮುಂಗಟ್ಟುಗಳ ಎದುರಿನ ಸರಕಾರಿ ಆಕ್ರಮಿತ ಜಾಗದಲ್ಲಿರುವ ತಗಡಿನ ಶೀಟು, ಟಾರ್ಪಲ್ ಗಳನ್ನು ತೆರವುಗೊಳಿಸಲಾಯಿತು. 
ಯಾಕೀ ತೆರವು ಕಾರ್ಯಚರಣೆ?
ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನ ಸಂದಣಿಯಿಂದಾಗಿ ಪಾರ್ಕಿಂಗ್ ದೊಡ್ಡ ಸಮಸ್ಯೆ ಎದುರಾಗಿತ್ತು. 2014 ಸೆಪ್ಂಬರ್ ತಿಂಗಳಿನಲ್ಲಿಯೇ ಉಡುಪಿಯ ಜಿಲ್ಲಾಧಿಕಾರಿ ಸರಕಾರಿ ಜಾಗದ ಅತಿಕ್ರಮಿತ ಕಟ್ಟಡವನ್ನು ತೆರವುಗೊಳಿಸುವಂತೆ ಆದೇಶಿಸಿದ್ದರು. ಇತ್ತಿಚಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿಯೂ ಕೂಡ ಈ ಬಗ್ಗೆ ತಿಳಿಸಿದ್ದರೆನ್ನಲಾಗಿದೆ. ಅದರಂತೆ ರಸ್ತೆಯ ಸರ್ವೇ ಕಾರ್ಯ ಕೈಗೊಂಡು ಸರಕಾರಿ ಜಾಗದಲ್ಲಿ ಅತಿಕ್ರಮಿತ ಕಟ್ಟಡವನ್ನು ತೆರವುಗೊಳಿಸಲು ಪುರಸಭೆ ಮುಂದಾಗಿದೆ. ಕಟ್ಟಡಗಳನ್ನು ತೆರವುಗೊಳಿಸುವ ಮೊದಲು ಕಟ್ಟಡದ ಮಾಲಿಕರಿಗೆ ನೋಟಿಸ್ ನೀಡಲಾಗಿದೆ. ಆದರೆ ಸರ್ಕಾರಿ ಜಾಗದಲ್ಲಿರುವ ಸರ್ಕಾರಿ ಜಾಗದಲ್ಲಿನ ಮೇಲ್ಛಾವಣಿಯನ್ನು ತೆರವುಗೊಳಿಸಲು ನೋಟಿಸ್ ನೀಡಬೇಕಾದ ಅಗತ್ಯವಿಲ್ಲ. ಆದ್ದರಿಂದ ತಕರಾರಿಲ್ಲದ ಅತಿಕ್ರಮಿತ ಜಾಗವನ್ನು ಮೊದಲು ತೆರವುಗೊಳಿಸುತ್ತಿರುವುದಾಗಿ ಪುರಸಭೆಯ ಮಖ್ಯಾಧಿಕಾರಿ ಗೋಪಾಲ ಶೆಟ್ಟಿ ತಿಳಿಸಿದ್ದಾರೆ.

ಕುಂದಾಪುರ ನಗರದಲ್ಲಿ ಹೆಚ್ಚುತ್ತಿರುವ ವಾಹನ ಸಂದಣಿಯನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಹರಸಾಹಸ ಪಡುತ್ತಿದೆ. ಅಂಗಡಿ ಮಂಗಟ್ಟುಗಳ ಮುಂದೆ ಸೂಕ್ತ ಪಾರ್ಕಿಂಗ್ ಇಲ್ಲದೇ ನಾಗರೀಕರೂ ಪರದಾಡುವ ಪರಿಸ್ಥಿತಿ ಇದೆ. ಪುರಸಭೆಯ ತೆರವು ಕಾರ್ಯಾಚರಣೆ ಉತ್ತಮ ಕೆಲಸವೇ ಸರಿ. ಆದರೆ ತೆರವು ಕಾರ್ಯ ಕೆಲವು ಕಟ್ಟಡಗಳಿಷ್ಟೇ ಸೀಮಿತವಾಗದೇ ನಗರದಲ್ಲಿರುವ ಎಲ್ಲಾ ಅನಧಿಕೃತ ಕಟ್ಟಡಗಳಿಗೂ ಅನ್ವಯವಾಗಬೇಕಿದೆ. 

ಕುಂದಾಪ್ರ ಡಾಟ್ ಕಾಂ- editor@kundapra.com