ಹಣ ಬೇಡವೆಂದು ಹಾಲಾಡಿಗೆ ಶರಣಾದ ರವಿ ಪೂಜಾರಿ

ಕುಂದಾಪುರ: ಕುಂದಾಪುರ ಕ್ಷೇತ್ರದ ಜನಪ್ರಿಯ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಕಳೆದ ಎರಡು ದಿನಗಳಿಂದ ಬರುತ್ತಿದ್ದ ಬೆದರಿಕೆಯ ಕರೆಗೆ ಅಂತೂ ಒಂದು ಅಂತ್ಯ ದೊರೆತಿದೆ. 10ಕೋಟಿ ಹಣದ ಬೇಡಿಕೆ ಇಟ್ಟಿದ್ದ ಭೂಗತ ಪಾತಕಿ ರವಿ ಪೂಜಾರಿಯು, ಹಣ ನೀಡದಿದ್ದರೆ ಕೊಲೆ ಮಾಡುತ್ತೇನೆಂದು ಬೆದರಿಕೆಯೊಡ್ಡಿದ್ದು ಶಾಸಕರ ಆಪ್ತ ವಲಯದಲ್ಲಿ ತೀವ್ರ ಸಂಚಲನವನ್ನುಂಟುಮಾಡಿತ್ತಲ್ಲದೇ ಅವರ ಅಪಾರ ಸಂಖ್ಯೆಯ ಅಭಿಮಾನಿಗಳಲ್ಲೂ ಆತಂಕ ಮನೆಮಾಡಿತ್ತು.

ಮೊದಲ ದಿನ ಕರೆ ಮಾಡಿ ಹಣ ನೀಡಲು ಮೂರು ದಿನದ ಗಡುವು ನೀಡಿದ್ದ ವ್ಯಕ್ತಿಯು, ಎರಡನೇ ದಿನವೂ ಕರೆ ಮಾಡಿದ್ದ. ಆದರೆ ಶ್ರೀನಿವಾಸ ಶೆಟ್ಟರು ಆತನೊಂದಿಗೆ ಮಾತನಾಡಿರಲಿಲ್ಲ. ಮೂರನೇ ದಿನ ಮತ್ತೆ ಕರೆ ಮಾಡಿದ ರವಿ ಪೂಜಾರಿ ಹಣದ ಬೇಡಿಕೆಯನ್ನು ಹಿಂತೆಗೆದುಕೊಂಡು ಶಾಸಕರಲ್ಲಿ ಕ್ಷಮೆಯಾಚಿಸಿ ಅಚ್ಚರಿ ಮೂಡಿಸಿದ್ದಾನೆ. 

ಕೊನೆಯ ಭಾರಿ ಆತನ ಕರೆಯನ್ನು ಹಾಲಾಡಿಯವರು ಸ್ವೀಕರಿಸಿದಾಗ ಮಾತನಾಡಿದ ರವಿ ಪೂಜಾರಿ, 'ನಿಮ್ಮ ಬಗ್ಗೆ ತಿಳಿದಿದ್ದೇನೆ. ನಿಮ್ಮ ಬಳಿ ನಾನು ಕೇಳಿದಷ್ಟು ಹಣವಿಲ್ಲ ಎಂದು ಗೊತ್ತಿದೆ. ಆದರೇ ನಿಮ್ಮ ಹೆಸರು ಹೇಳಿಕೊಂಡು ಭೂಗತ ಲೋಕದಲ್ಲಿ ಕೆಲವರು ಬಾಲ ಬಿಚ್ಚುತ್ತಿದ್ದಾರೆ. ನನ್ನ ವಿರೋಧಿ ನಿಮ್ಮ ಹೆಸರನ್ನು ಹೇಳಿಕೊಂಡು ತಿರುಗುವುದು ಒಳ್ಳೆಯದಲ್ಲ. ನೀವು ನನಗೆ ಹಣ ಕೊಡುವದು ಬೇಡ,  ಇನ್ನು ಮುಂದೆ ಕರೆಯನ್ನೂ ಮಾಡುವುದಿಲ್ಲ. ಆದರೇ ನಿಮ್ಮ ಹೆಸರು ಹೇಳಿಕೊಂಡು ನನ್ನ ವಿರುದ್ದ ಆಟ ಆಡುವವರ ಬಗ್ಗೆ ಜಾಗೃತೆ ವಹಿಸಿ ಎಂದು ಹೇಳಿದ್ದಾನೆಂದು ಅವರ ಆಪ್ತವಲಯದಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.

ಮೇ.25ರ ಸೋಮವಾರ ಮಧ್ಯಾಹ್ನ ಶಾಸಕರು ಕಾರ್ಯಕ್ರಮವೊಂದಕ್ಕೆ ಭಾಗವಹಿಸಲು ಹೊರಟ್ಟಿದ್ದ ವೇಳೆ ಕರೆ ಮಾಡಿದ್ದ ವ್ಯಕ್ತಿಯು ತನಗೆ 10 ಕೋಟಿ ನೀಡುವಂತೆ ಬೇಡಿಕೆ ಇಟ್ಟಿದ್ದ. ಅದರೆ ಹಣ ನೀಡಲು ಶಾಸಕರು ನಿರಾಕರಿಸಿದ್ದರು. ಆದರೆ 3 ದಿನದೊಳಗೆ ಹಣ ನೀಡುವ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಬೇಕು ಇಲ್ಲದಿದ್ದರೆ ಕೊಲೆಗೈಯುವುದಾಗಿ ಬೆದರಿಕೆಯೊಡ್ಡಿದ್ದ. 

ಬೆದರಿಕೆಯ ಹಿನ್ನೆಲೆಯಲ್ಲಿ ಶಾಸಕರಿಗೆ ಭದ್ರತೆಯನ್ನು ನೀಡಲಾಗಿತ್ತು. ಉಡುಪಿ ಎಸ್ಪಿ ಅಣ್ಣಾಮಲೈ ಶಾಸಕರ ಮನೆಗೆ ಭೇಟಿ ಪ್ರಕರಣದ ಬಗ್ಗೆ ತನಿಕೆ ನಡೆಸಿದ್ದರು. ಪ್ರಕರಣ ದಾಖಲಿಸಿಕೊಂಡ ಬಳಿಕ ಕರೆ ಮಾಡಿದ ಸಂಖ್ಯೆ ಹಾಗೂ ಏರಿಯಾವನ್ನೂ ಪತ್ತೆಹಚ್ಚಲಾಗಿತ್ತು. ಕರೆಮಾಡಿದಾತ ಬ್ಯಾಂಕಾಂಕ್ ನಲ್ಲಿರುವುದು ತಿಳಿದು ಬಂದಾಗ ಇದು ರವಿ ಪೂಜಾರಿಯದೇ ಕೆಲಸವೆಂದು ದೃಢವಾಗಿತ್ತು. ಪ್ರಕರಣ ತನಿಕೆಯ ಹಂತದಲ್ಲಿರುವಾಗಲೇ ಶಾಸಕರ ಬಳಿ ರವಿ ಪೂಜಾರಿ ಕ್ಷಮೆಯಾಚಿಸುವ ಮೂಲಕ ಪ್ರಕರಣಕ್ಕೊಂದು ಸುಖಾಂತ್ಯ ದೊರಕಿಸಿಕೊಟ್ಟಿದ್ದಾನೆ.
ಇದನ್ನೂ ಓದಿ> ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಭೂಗತ ಪಾತಕಿ ರವಿ ಪೂಜಾರಿಯಿಂದ ಬೆದರಿಕೆಯ ಕರೆ
                     ಹಾಲಾಡಿ ಶ್ರೀನಿವಾಸ ಶೆಟ್ಟರಿಗೆ ಮತ್ತೆ ಬೆದರಿಕೆಯ ಕರೆ

 ಕುಂದಾಪ್ರ ಡಾಟ್ ಕಾಂ- editor@kundapra.com