ಕುಂದಾಪುರ ವಿವಿಧೆಡೆ 'ವಾರಿಯರ್' ಚಿತ್ರೀಕರಣ

ಕುಂದಾಪುರ: ಕನ್ನಡ ಚಿತ್ರರಂಗದಲ್ಲಿ ಈಗ ಹೊಸಬರು ಹೆಚ್ಚು ಸದ್ದು ಮಾಡುತ್ತಿದ್ದಾರೆ. ಹೊಸಬರ ಚಿತ್ರಗಳು ಹೊಸ ಭರವಸೆಯನ್ನೂ ಮೂಡಿಸಿದೆ. ಅಂತಹದೇ ಒಂದು ಭರವಸೆಯನ್ನು ಮೂಡಿಸಲು 'ವಾರಿಯರ್' ಸಿನೆಮಾದ ಚಿತ್ರತಂಡ ಹೊರಟಿದೆ. ದೈನಂದಿನ ಬದುಕಿನ ಆಗುಹೋಗುಗಳನ್ನಾಧರಿಸಿದ ಚಿತ್ರಕಥೆಯ ಚಿತ್ರೀಕರಣ ಕುಂದಾಪುರ ತಾಲೂಕಿನ ವಿವಿಧೆಡೆ ಕಳೆದ ಮೂರು ದಿನಗಳಿಂದ ಭರದಿಂದ ಸಾಗುತ್ತಿದೆ.
ಈಗಾಗಲೇ ಕೆಲವಷ್ಟು ಸಿನೆಮಾಗಳಲ್ಲಿ ದುಡಿದು ಈಗ ತನ್ನದೇ ಕಥೆ, ಚಿತ್ರಗಥೆ ಹಾಗೂ ನಿರ್ದೇಶನದಲ್ಲಿ ಸಿನೆಮಾ ಮಾಡಲು ಹೊರಟಿರುವ ಆರ್ಯ ಅವರಿಗೆ ಆದಿಶಕ್ತಿ ಎಂಟರ್ಪ್ರೈಸಸ್ ನ ಪ್ರಕಾಶ್ ಎಸ್. ಬಂಡವಾಳ ಹೂಡಿ ಸಾಥ್ ನೀಡಿದ್ದರೇ, ವಿನ್ಯಾಸ್ ಮೂರ್ತಿ ಅವರ ಕ್ಯಾಮರಾ ಹಿಡಿದು, ಗಿರೀಶ್ ನೃತ್ಯ ನಿರ್ದೇಶನ ಮಾಡಿದ್ದಾರೆ.

ಮೂವರು ನಾಯಕಿಯರು ಹಾಗೂ ಇಬ್ಬರು ನಾಯಕರುಗಳು ವಾರಿಯರ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ನಾಯಕಿಯರ ಕಾರಣದಿಂದಾಗಿ ನಡೆಯುವ ಘಟನೆಗಳು ಹಾಗೂ ನಾಯಕರು ಅದನ್ನು ನಿಭಾಯಿಸುವ ರೀತಿಯ ನಡುವೆ ಚಿತ್ರಕಥೆ ಸಾಗುತ್ತದೆ.

ಚಿತ್ರದಲ್ಲಿ ನಾಯಕರಾಗಿ ಪ್ರಣವ್ ಹಾಗೂ ಪ್ರಶಾಂತ್ ಮುಖ್ಯಭೂಮಿಕೆಯಲ್ಲಿದ್ದರೇ, ನಾಯಕಿಯರಾಗಿ ಪಾವನ, ವೇದಿಕಾ ಶೆಟ್ಟಿ ಹಾಗೂ ಸೋನು ಕಾಣಿಸಿಕೊಂಡಿದ್ದಾರೆ. ಖಳನಾಯಕನಾಗಿ ರಂಗಭೂಮಿ ಹಿನ್ನೆಲೆಯ ಸಂಜಯ್ ಅಭಿನಯಿಸಿದ್ದಾರೆ.
ಇನ್ನು ಹಿರಿಯ ನಟರಾದ ಭವ್ಯ, ಎಂ.ಕೆ. ಮಠ, ಹಾಸ್ಯ ನಟರಾದ ರಘು ಪಾಂಡೇಶ್ವರ್, ಶೋಭಾ ಮುಂತಾದವರು ಚಿತ್ರದಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಲಿದ್ದಾರೆ. 

ಚಿತ್ರದಲ್ಲಿ ಒಟ್ಟು 5 ಹಾಡುಗಳಿಂದು ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ಅನುರಾಧ ಮುಂತಾದವರು ಹಾಡಿದ್ದಾರೆ. ರಾಮದೇವ್ ಅವರ ನಿರ್ದೇಶನದಲ್ಲಿ ಚಿತ್ರದ ಸಾಹಸ ದೃಶ್ಯಗಳು ಮೂಡಿಬಂದಿದೆ. 

ಶಿವಮೊಗ್ಗ, ಹೊಸನಗರ, ನಗರ, ನಿಟ್ಟೂರು, ಕೊಲ್ಲೂರು ಹಾಗೂ ಕುಂದಾಪುರ ವಿವಿಧೆಡೆ ಒಟ್ಟು ನಲವತ್ತೈದು ದಿನಗಳ ಚಿತ್ರೀಕರಣ ನಡೆದಿದ್ದು, ಒಂದೇ ಹಂತದಲ್ಲಿ ಚಿತ್ರೀಕರಣವನ್ನು ಮುಗಿಸಿ ಜುಲೈ ಅಂತ್ಯದ ವೇಳೆಗೆ ಚಿತ್ರವನ್ನು ತೆರೆಯ ಮೇಲೆ ತರುವ ಇಂಗಿತವನ್ನು ನಿರ್ದೇಶಕ ಆರ್ಯ ಅವರದ್ದು. ಎಲ್ಲರಲ್ಲೂ ಒಂದು ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಎತ್ತಿ ಹಿಡಿಯಬೇಕು. ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಎಂಬ ಉದ್ದೇಶದಿಂದ ಈ ಚಿತ್ರದ ನಿರ್ಮಾಣಕ್ಕೆ ಒಪ್ಪಿಕೊಂಡೆ ಎನ್ನುತ್ತಾರೆ ನಿರ್ಮಾಪಕ ಮೈಸೂರಿನ ಪ್ರಕಾಶ್ ಎಸ್. 

ಕಮಲಶಿಲೆಯಲ್ಲಿ ಚಿತ್ರೀಕರಣದ ನಡುವೆ ನಡೆದ ಪತ್ರಿಕಾಗೋಷ್ಠಿಯಲ್ಲಿ ವಾರಿಯರ್ ಚಿತ್ರತಂಡವನ್ನು ಮ್ಯಾನೇಜರ್ ಶಿವಮೊಗ್ಗ ರಾಮಣ್ಣ ಪರಿಚಯಿಸಿದರು. ಕ್ಯಾಷಿಯರ್ ದಿನೇಶ್ ಜೋಗಿ ಜೋತೆಗಿದ್ದರು.


ಕುಂದಾಪ್ರ ಡಾಟ್ ಕಾಂ- editor@kundapra.com