ಹಾಲಾಡಿ ಶ್ರೀನಿವಾಸ ಶೆಟ್ರಿಗೆ, ರವಿ ಪೂಜಾರಿಯಿಂದ ಬೆದರಿಕೆ ಕರೆ

ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಭೂಗತ ಪಾತಕಿ ರವಿ ಪೂಜಾರಿಯಿಂದ ಬೆದರಿಕೆಯ ಕರೆ

ಕುಂದಾಪುರ: ಕುಂದಾಪುರ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಇಂದು ಭೂಗತ ಪಾತಕಿ ರವಿ ಪೂಜಾರಿಯಿಂದ ಹಣದ ಬೇಡಿಕೆ ಇಟ್ಟ ಬೆದರಿಕೆ ಕರೆ ಬಂದಿದ್ದು ಈ ಬಗ್ಗೆ ಶಂಕರನಾರಾಯಣ ಠಾಣೆಯಲ್ಲಿ ಶಾಸಕರು ದೂರು ದಾಖಲಿಸಿದ್ದು, ಕರೆಯ ಸತ್ಯಾಸತ್ಯತೆಗಳ ಬಗ್ಗೆ ಪೊಲೀಸರು ತನಿಕೆ ನಡೆಸುತ್ತಿದ್ದಾರೆ.
ಶಾಸಕರು ಸೋಮವಾರ ಮಧ್ಯಾಹ್ನ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಅವರ ಮೊಬೈಲಿಗೆ ಆಸ್ಟ್ರೇಲಿಯಾದ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದ್ದು, ಅತ್ತ ಕಡೆಯಿಂದ ಮಾತನಾಡಿದ ವ್ಯಕ್ತಿಯು ತಾನು ಡಾನ್ ರವಿ ಪೂಜಾರಿ ಎಂದು ತುಳುವಿನಲ್ಲಿ ಮಾತು ಆರಂಭಿಸಿದ್ದಾನೆ. ತಮ್ಮ ಬಳಿ ಸಾಕಷ್ಟು ಭೂಮಿ ಇರುವುದರಿಂದ ತನಗೆ 10ಕೋಟಿ ರೂ. ಹಣ ನೀಡಬೇಕು ಎಂದು ಶಾಸಕರ ಬಳಿ ಬೇಡಿಕೆಯಿಟ್ಟಿದ್ದಾನೆ. ಮಾತನಾಡುತ್ತಿದ್ದಂತೆಯೇ ಕರೆ ಕಡಿತಗೊಂಡಿದ್ದು ಸ್ಪಲ್ಪ ಹೊತ್ತಿನ ಬಳಿಕ ಬೆರೋಂದು ಸಂಖ್ಯೆಯಿಂದ ಕರೆ ಮಾಡಿದ ಅದೇ ವ್ಯಕ್ತಿ ತನಗೆ ಮೂರು ದಿನದೊಳಗೆ ಹಣ ನೀಡುವಂತೆ ಹೇಳಿದ್ದಾನೆ.

ಆತನ ಮಾತಿಗೆ ಸೊಪ್ಪು ಹಾಕದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು, ತನ್ನದು ಯಾವುದೇ ಅವ್ಯವಹಾರವಿಲ್ಲ. ತಾನು ಯಾರಿಗೂ ಹಣ ನೀಡುವುದೂ ಇಲ್ಲ. ತನ್ನಲ್ಲಿ ಅಷ್ಟು ಹಣವೂ ಇಲ್ಲ ಎಂದು ಹೇಳಿದಾಗ, ಮೂರು ದಿನದಲ್ಲಿ 10 ಕೋಟಿ ನೀಡುವ ಬಗ್ಗೆ ಯೋಚಿಸಿ ತಿಳಿಸಬೇಕು. ಹಣ ನೀಡದಿದ್ದರೆ ಕೊಲೆಗೈಯುವುದಾಗಿ ಅತ್ತಕಡೆಯಿಂದ ಬೆದರಿಕೆವೊಡ್ಡಿದ್ದಾನೆ. 

ಸರಳ ಶಾಸಕರಿಗೆ ಮೊದಲ ಭಾರಿಗೆ ಬೆದರಿಕೆ ಕರೆ
ತನ್ನ ಸರಳ ಸಜ್ಜನಿಕೆಯಿಂದಲೇ ಮನೆಮಾತಾಗಿರುವ ಕುಂದಾಪುರದ ಕ್ಷೇತ್ರದ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಗೆ ಇದೇ ಮೊದಲ ಭಾರಿಗೆ ಭೂಗತ ಲೋಕದಿಂದ ಕರೆಬಂದಿದೆ ಎನ್ನಲಾಗಿದೆ. ಆಸ್ಟ್ರೇಲಿಯಾದ ತನ್ನ ಸಂಬಂಧಿಯ ಕರೆ ಎಂದು ಸ್ವೀಕರಿಸಿದ್ದ ಶಾಸಕರಿಗೆ ಆತಂಕಕಾರಿ ಧ್ವನಿಯೊಂದು ಕೇಳಿಸಿತ್ತು. ಅತ್ತಲಿಂದ ಮಾತನಾಡಿದ ವ್ಯಕ್ತಿಯು ಕೊಲೆಯ ಬೆದರಿಕೆಯೊಡ್ಡಿದರೂ ತನ್ನ ನೇರವಾಗಿ ಹಣ ನೀಡುವುದಿಲ್ಲ ಎಂದು ಹೇಳುವ ಧೈರ್ಯ ತೋರಿದ್ದಾರೆ. 

ಶಾಸಕರಿಗೆ ಭದ್ರತೆ; ಎಸ್ಪಿ ಭೇಟಿ
ಬೆದರಿಕೆ ಕರೆ ಬಂದಿರುವ ಹಿನ್ನೆಲೆಯಲ್ಲಿ ಶಾಸಕರಿಗೆ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. ಶಂಕರನಾರಾಯಣ ಪೊಲೀಸರು ದೂರು ದಾಖಲಿಸಿಕೊಂಡಿದ್ದು ತನಿಕೆ ನಡೆಸುತ್ತಿದ್ದಾರೆ. ಉಡುಪಿ ಎಸ್ಪಿ ಅಣ್ಣಾಮಲೈ ಶಾಸಕರ ಮನೆಗೆ ಭೇಟಿ ನೀಡಿದ್ದು ಘಟನೆಯ ಮಾಹಿತಿ ಪಡೆದಿದ್ದಾರೆ. ಆಸ್ಟ್ರೇಲಿಯಾದಿಂದ ಮಾತನಾಡಿರುವ ವ್ಯಕ್ತಿಯು ಇಂಟರ್ನೆಟ್ ಮೂಲಕ ಕರೆ ಮಾಡಿದ್ದನೆಂದು ತಿಳಿದುಬಂದಿದ್ದು  ತನಿಕೆ ಮುಂದುವರಿಸಿದ್ದಾರೆ.

ಕುಂದಾಪ್ರ ಡಾಟ್ ಕಾಂ- editor@kundapra.com
threat-call-Kundapura-MLA-Shrinivas-Shetty-form-Ravi-Poojary-demanding-10crores