ಕುಂದಾಪುರಲ್ಲಿ ಒಮ್ಮೆಲೆ ಹೆಚ್ಚಿದ ವಾಹನ ದಟ್ಟಣೆ. ಅಲ್ಲಲ್ಲಿ ಟ್ರಾಫಿಕ್ ಜಾಮ್

ಕುಂದಾಪುರ.ಮೇ.1: ಇಂದು ನಗರದಲ್ಲಿ ಹೆಚ್ಚಿದ ವಾಹನ ದಟ್ಟಣೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ ಹಾಗೂ ನಗರದ ಮುಖ್ಯರಸ್ತೆಯಲ್ಲಿ ಸಾಲು ಸಾಲು ವಾಹನಗಳು ಕೆಲಹೊತ್ತು ಜಾಮ್ ಆಗಿ ನಿಲ್ಲುವ ದೃಶ್ಯ ಕಂಡುಬಂತು. ವಾಹನ ದಟ್ಟಣೆಯನ್ನು ನಿಯಂತ್ರಣಕ್ಕೆ ತರಲು ಕುಂದಾಪುರದ ಟ್ರಾಫಿಕ್ ಪೊಲೀಸರು ಹರಸಾಹಸ ಪಡುತ್ತಿದ್ದರು.
ಇಂದು ಕುಂದಾಪುರದಲ್ಲಿ ಕಾರ್ಮಿಕ ದಿನಾಚರಣೆ ಪ್ರಯುಕ್ತ ಸಿಐಟಿಯುನಿಂದ ಬೃಹತ್ ಬೈಕ್, ರಿಕ್ಷಾ ರ್ಯಾಲಿ, ಕಾಲ್ನಡಿಗೆಯ ಜಾಥಾ ಇದ್ದ ಕಾರಣ ಸಾವಿರ ಸಂಖ್ಯೆಯ ಮಂದಿ ಶಾಸ್ತ್ರಿ ವೃತ್ತ ಹಾಗೂ ನೆಹರು ಮೈದಾನದ ಸುತ್ತ ನೆರೆದಿದ್ದರು. ಇನ್ನೊಂದೆಡೆ ಕುಂದಾಪುರ, ಹಂಗಳೂರು ಮುಂತಾದೆಡೆ ಅನೇಕ ಶುಭ ಸಮಾರಂಭಗಳೂ ನಡೆಯುತ್ತಿದ್ದವು. ಪರಿಣಾಮವಾಗಿ ಅಧಿಕ ಸಂಖ್ಯೆಯ ಜನರು ಇಂದು ನಗರಲ್ಲಿ ಆಗಮಿಸುತ್ತಿದ್ದರು. ಇದರಿಂದಾಗಿ ಬೆಳ್ಳಿಗ್ಗೆ 9:30ರಿಂದ ಮಧ್ಯಾಹ್ನ 12:45ರ ತನಕ ಭಾರಿ ಜನಸಂದಣಿ ಕಂಡುಬಂತು. ಇಂದು ಸರಕಾರಿ ರಜಾದಿನವಾದ್ದರಿಂದ ದಿನನಿತ್ಯ ಕಛೇರಿಗೆ ತೆರಳುವ ನೌಕರರ ಸಂಖ್ಯೆ ಕಡಿಮೆ ಇತ್ತು.
ಕುಂದಾಪುರ ಗಾಂಧಿ ಮೈದಾನದ ಎದುರು ಚತುಷ್ಪತ ಕಾಮಗಾರಿ ಕಳೆದ 2-3ವರ್ಷಗಳಿಂದ ನಡೆಯುತ್ತಲೇ ಇರುವುದರಿಂದ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ವಾಹನ ಸಂಚಾರಕ್ಕೆ ಭಾರಿ ತೊಡಕುಂಟಾಗುತ್ತಿದೆ. ಈ ಭಾಗದಲ್ಲಿ ಹೆದ್ದಾರಿಯ ಇಕ್ಕೆಲಗಳಲ್ಲಿ ಸ್ಥಳವೇ ಇಲ್ಲದಂತಾಗಿದೆ. ಇದೇ ಸ್ಥಳದಲ್ಲಿಯೇ ಹಂಪ್ ಕೂಡ ಇರುವುದರಿಂದ ಘನ ವಾಹನಗಳು ನಿಧಾನವಾಗಿ ಚಲಿಸುವುದರಿಂದಾಗಿ ವಾಹನ ದಟ್ಟಣೆ ಜಾಸ್ತಿಯಾದಾಗ ಅಲ್ಲಲ್ಲಿ ಜಾಮ್ ಆಗುವ ಪ್ರಸಂಗ ಎದುರಾಗುತ್ತಿದೆ. ವಾಹನ ದಟ್ಟಣೆ ಇರುವ ಪ್ರದೇಶದಲ್ಲಿ ಟ್ರಾಫಿಕ್ ಸಿಗ್ನಲ್ ಕೂಡ ಇಲ್ಲದಿರುವುದರಿಂದ ಪೇಟೆಯನ್ನು ಪ್ರವೇಶಿಸುವವರು ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ತೆರಳುವವರು ಕೊಂಚ ದಿಕ್ಕು ತಪ್ಪುತ್ತಾರೆ.
ವಾಹನ ದಟ್ಟಣೆಯ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಕುಂದಾಪುರ ಟ್ರಾಫಿಕ್ ಪೊಲೀಸರು ಅಲ್ಲಲ್ಲಿ ನಿಂತು ಸುಗಮ ಸಂಚಾರಕ್ಕೆ ಅನುವು ಮಾಡುಕೊಡುತ್ತಿದ್ದುದು ಕಂಡುಬಂತು. ಮಧ್ಯಾಹ್ನದ ಬಳಿಕ ಎಂದಿನಂತೆ ಮಿತ ಸಂಖ್ಯೆಯಲ್ಲಿ ವಾಹನ ಸಂಚಾರವಿತ್ತು.