ರಕ್ತದಾನಕ್ಕಾಗಿಯೇ ಬದುಕು ಮುಡಿಪಾಗಿಟ್ಟ ಶಿವಕುಮಾರ್

ಕುಂದಾಪುರ: ರಕ್ತದಾನವೆಂಬುದು ಶ್ರೇಷ್ಠ ದಾನಗಳಲ್ಲೊಂದು. ನಮ್ಮ ಕರ್ನಾಟಕದಲ್ಲಿಯೇ ಯುನಿಟ್ ರಕ್ತಕ್ಕೆ ವರ್ಷವಿಡಿ ಬೇಡಿಕೆ ಇರುತ್ತದೆ. ಹಾಗಂತ ರಕ್ತದಾನಿಗಳಿಗೇನು ಬರವಿಲ್ಲ. ಆದರೂ ಒಟ್ಟು ಬೇಡಿಕೆಯ ಶೇಕಡಾ ಎಂಬತ್ತರಷ್ಟು ಮಾತ್ರ ರಕ್ತ ಪೂರೈಕೆಯಾಗುತ್ತದೆ ಎಂದರೆ ನಂಬಲೇಬೇಕು. ರಕ್ತದಾನದ ಬಗೆಗೆ ಸಾಕಷ್ಟು ಅರಿವೂ ಮೂಡಿಸುತ್ತಿದ್ದರೂ ಕೂಡ ಜನರಲ್ಲಿರುವ ತಪ್ಪ ಕಲ್ಪನೆಗಳಿಂದಾಗಿ ರಕ್ತಕ್ಕಾಗಿ ಪರದಾಡಬೇಕಾದ ಸ್ಥಿತಿ ಇದೆ. ಇದು ಬದಲಾಗಬೇಕು. ರಕ್ತವನ್ನು ಸ್ವಯಂ ಪ್ರೇರಿತರಾಗಿ ಎಲ್ಲರೂ ನೀಡುವಂತಾಗಬೇಕು. ಆ ಬಗ್ಗೆ ಜನರಲ್ಲಿ ನಿರಂತರವಾಗಿ ಜಾಗೃತಿ ಮೂಡಿಸಬೇಕು ಎಂದು ಪಣತೊಟ್ಟಿರುವ ದಾವಣಗೆರೆಯ ಮಹಡಿ ಶಿವಕುಮಾರ್ ಎಂಬುವವರು ಕಳೆದ 20 ವರ್ಷಗಳಿಂದ ಊರೂರು ಸುತ್ತುತ್ತಾ ರಕ್ತದಾನದ ಬಗ್ಗೆ ಅರಿವು ಮೂಡಿಸುತ್ತಾ ಬರುತ್ತಿದ್ದಾರೆ. ಇತ್ತಿಚಿಗೆ ಕುಂದಾಪುರಕ್ಕೆ ಬಂದಿದ್ದಾಗ 'ಕುಂದಾಪ್ರ ಡಾಟ್ ಕಾಂ' ಭೇಟಿ ಮಾಡಿದ ಅವರು ತಮ್ಮ ಉದ್ದೇಶ, ಅನುಭವ-ಕನಸುಗಳನ್ನು ಬಿಚ್ಚಿಟ್ಟರು. 

  ಸರ್ವಶಿಕ್ಷಣ ಅಭಿಯಾನದ ಪುಸ್ತಕ ವ್ಯಾಪಾರಿಯಾಗಿದ್ದ 45 ವರ್ಷ ವಯಸ್ಸಿನ ಶಿವಕುಮಾರ್ ರಕ್ತದಾನದ ಬಗ್ಗೆ ಅರಿವು ಮೂಡಿಸುವುದಕ್ಕಾಗಿಯೇ ತನ್ನ ಬದುಕನ್ನು ಮುಡಿಪಾಗಿಟ್ಟು ರಕ್ತದ ಕೊರತೆಯನ್ನು ನೀಗಿಸಲು ಪಣತೊಟ್ಟಿದ್ದಾರೆ. ದಾವಣಗೆರೆಯ ಡಾ| ಶಶಿಕಲಾ ಕೃಷ್ಣಮೂರ್ತಿ ಅವರ ಸಲಹೆಯಿಂದ ಪ್ರೇರಿತರಾದ ಶಿವಕುಮಾರ್ ಈವರೆಗೆ 55 ಭಾರಿ ರಕ್ತದಾನ ಮಾಡಿದ್ದಾರೆ. ಜೊತೆಗೆ ಉಳಿದವರಿಗೂ ರಕ್ತದಾನ ಮಾಡುವಂತೆ ಪ್ರೆರೇಪಿಸುತ್ತಾ ಬಂದಿದ್ದಾರೆ. ಕಾಲ್ನಡಿಗೆಯ ಜಾಥಾ, ಸೈಕಲ್ ಜಾಥಾ, ಸ್ಕೂಟರ್ ಜಾಥಾ ಹಾಗೂ ಸಭೆ ಸಮಾರಂಭಗಳ ಮೂಲಕ ರಕ್ತದಾನದ ಮಹತ್ವವನ್ನು ಸಾರಿ ಹೇಳುತ್ತಿದ್ದಾರೆ.  ಕೆಂಪು ಟಿಶರ್ಟ್ ಹಾಕಿಕೊಂಡು ರಕ್ತದಾನದ ಬಗೆಗಿನ ಒಂದಿಷ್ಟು ಮಾಹಿತಿಗಳನ್ನು ಬಗಲಲ್ಲಿ ಸಿಕ್ಕಿಸಿಕೊಂಡು ಹೊರಡುವ ಶಿವಕುಮಾರ್ ಅವರನ್ನು ದಾವಣಗೆರೆಯ ಮಂದಿಯೂ ಗೌರವಿಸುತ್ತಾರೆ.

     ರಕ್ತದಾನದ ಅರಿವೂ ಮೂಡಿಸಲಿಕ್ಕಾಗಿಯೇ ವೆಬ್ಸೈಟ್ ಆರಂಭಿಸಿ ಅದರ ಮೂಲಕ ರಕ್ತದಾನದ ಮಹತ್ವವನ್ನು ತಿಳಿಸುವುದು, ರಕ್ತದಾನಿಗಳ ವಿವರಗಳನ್ನು ಅಗತ್ಯವಿರುವವರಿಗೆ ತಲುಪುವಂತೆ ಮಾಡುವುದು ಮುಂತಾದ ದೊಡ್ಡ ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಇದೇ ಕಾರಣಕ್ಕೆ ಪ್ರಪಂಚ ಪರ್ಯಟನೆ ಮಾಡಬೇಕೆಂಬ ಇಂಗಿತ ಅವರದ್ದು. ಅದಕ್ಕೆ ಸಾಮಾಜಿಕ ಸೇವಾ ಸಂಸ್ಥೆಗಳು ಹಾಗೂ ಸರಕಾರದ ನೆರವನ್ನು ಕೋರಿರುವ ಅವರು ನೆರವು ದೊರೆಯದಿದ್ದರೆ ತನ್ನ ಸ್ವಂತ ಮನೆಯನ್ನಾದರೂ ಮಾರಿ ಪರ್ಯಟನೆ ಮಾಡುವುದು ಖಂಡಿತ ಎನ್ನುತ್ತಾರೆ.

ಶಿವಕುಮಾರ್ ರಕ್ತದಾನಕ್ಕಷ್ಟೇ ಸೀಮಿತವಾಗಿರದೇ ತನ್ನ ಕಣ್ಣ ಹಾಗೂ ದೇಹವನ್ನು ಮರಣೋತ್ತರ ದಾನ ಮಾಡಲು ನಿರ್ಧರಿಸಿದ್ದಾರೆ. ಇತರರಿಗೂ ಪ್ರೇರೆಪಿಸಿ ಒಂದು ಜೀವವನ್ನು ಉಳಿಸಿದ್ದಾರೆ. ದಾವಣಗೆರೆಯಲ್ಲಿ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿರುವ ಶಿವಕುಮಾರ್ ಈವರೆಗೆ ಸಾವಿರಾರು ಕಾರ್ಯಕ್ರಮಗಳಲ್ಲಿ ರಕ್ತದಾನದ ಬಗೆಗಿನ ಅರಿವು ಮೂಡಿಸುತ್ತಾ ಬಂದಿದ್ದು,  ರಕ್ತಕ್ಕಾಗಿಯೇ ಬದುಕು ಎಂಬ ಅವರ ಸಮರ್ಪಣ ಭಾವ ಮಾತ್ರ ಮೆಚ್ಚುವಂತದ್ದು. 

ಕುಂದಾಪ್ರ ಡಾಟ್ ಕಾಂ- editor@kundapra.com