ಗ್ರಾಮ ಸರಕಾರಕ್ಕೆ ಆಯ್ಕೆಯಾದರು ಪ್ರತಿನಿಧಿಗಳು

ಕಾಂಗ್ರೆಸ್ ಬೆಂಬಲಿತ -29, ಬಿಜೆಪಿ ಬೆಂಬಲಿತ - 24 ಅತಂತ್ರ - 5, ಅವಿರೋಧ ಆಯ್ಕೆ - 4
ಕುಂದಾಪುರ: ಗ್ರಾಮ ಸರಕಾರವನ್ನು ಆಯ್ಕೆ ಮಾಡಲು ರಾಜ್ಯದಲ್ಲಿ ನಡೆದ ಎರಡು ಹಂತತದ ಚುನಾವಣೆಯ ಫಲಿತಾಂಶ ಇಂದು( ಜೂ.5) ಹೊರಬಿದ್ದಿದ್ದು, ಕುಂದಾಪುರ ತಾಲೂಕಿನ 62 ಗ್ರಾಮ ಪಂಚಾಯತಿಗಳ ಪೈಕಿ 58 ಪಂಚಾಯತಿಗಳ ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಯಿತು.

ಕಂದಾಯ ಉಪವಿಭಾಗದ ಸಹಾಯಕ ಆಯುಕ್ತೆ ಚಾರುಲತಾ ಸೋಮಲ್ ಹಾಗೂ ತಹಶೀಲ್ದಾರ್ ಗಾಯತ್ರಿ ನಾಯಕ್ ಮಾರ್ಗದರ್ಶನದಲ್ಲಿ  ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಬೆಳಿಗ್ಗೆ 8 ಗಂಟೆಗೆ ಬೀಗು ಬಂದೋವಸ್ತಿನಲ್ಲಿ ಆರಂಭಗೊಂಡ ಮತ ಎಣಿಕೆ ರಾತ್ರಿ 8 ಗಂಟೆಯ ತನಕ ಸಾಗಿತ್ತು.  ತಾಲೂಕಿನ 58 ಪಂಚಾಯತಿಗಳ 283 ಕ್ಷೇತ್ರಗಳಲ್ಲಿ ಚಲಾವಣೆಯಾದ 1,75,015 ಮತಗಳನ್ನು 125 ಟೇಬಲುಗಳಲ್ಲಿ 552 ಸಿಬ್ಬಂದಿಗಳ ಮೂಲಕ ಏಣಿಕೆ ಮಾಡಲಾಗಿತ್ತು. ಮತ ಎಣಿಕೆ ಕೇಂದ್ರ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿತ್ತು. ಕುಂದಾಪುರದ ಡಿವೈಎಸ್ಪಿ ಎಂ. ಮಂಜುನಾಥ ಶೆಟ್ಟಿ ಹಾಗೂ ವೃತ್ತ ನಿರೀಕ್ಷಕ ಪಿ. ಎಂ. ದಿವಾಕರ ಅವರ ನೇತೃತ್ವದಲ್ಲಿ ಆಯೋಜಿಸಲಾಗ ಬಂದೋವಸ್ತಿನಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಗೃಹರಕ್ಷಕ ದಳದ ಭಾಗವಹಿಸಿದ್ದರು.  


ತಾಲೂಕಿನಲ್ಲಿ ಕಾಂಗ್ರೆಸ್ ಮೈಲುಗೈ, 24 ಪಂಚಾಯತಿಗಳು ಬಿಜೆಪಿ ತೆಕ್ಕೆಗೆ
ಕುಂದಾಪುರ ತಾಲೂಕಿನ ಕುಂದಾಪುರ ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು 29 ಪಂಚಾಯತಿಗಳನ್ನು ತಮ್ಮ ತೆಕ್ಕೆಗೆ ಸೇರಿಸಿಕೊಂಡೇ, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 24 ಪಂಚಾಯತಿಗಳನ್ನು ಪಡೆದಿದ್ದಾರೆ. ಉಳಿದ 5 ಗ್ರಾಮ ಪಂಚಾಯತಿಗಳಲ್ಲಿ ತ್ರಿಶಂಕು ಸ್ಥಿತಿ ನಿರ್ಮಾಣವಾಗಿದೆ.

ತಾಲೂಕಿನ ಬೇಳೂರು, ತೆಕ್ಕಟ್ಟೆ, ಹೆಂಗವಳ್ಳಿ, ಶಿರೂರು, ಉಪ್ಪುಂದ, ಹೇರೂರು, ಕೊಲ್ಲೂರು, ವಂಡ್ಸೆ, ಯೆಡಮೊಗೆ, ಇಡೂರು ಕುಜ್ಞಾಡಿ, ಕಟ್ಬೆಲ್ತೂರು, ಹೆಮ್ಮಾಡಿ, ತ್ರಾಸಿ, ಹೊಸಾಡು, ಶಂಕರನಾರಾಯಣ, ಅಂಪಾರು, ಕಾವ್ರಾಡಿ, ನಾವುಂದ, ಕೆರ್ಗಾಲು, ಉಳ್ಳುರು 74, ಆಲೂರು, ಕಂಬದಕೋಣೆ, ಕರ್ಕುಂಜೆ, ಕಾಲ್ತೋಡು, ನಾಡಾ, ಆಲೂರು, ಹಕ್ಲಾಡಿ ಹಾಗೂ ಗುಲ್ವಾಡಿ ಗ್ರಾಮ ಪಂಚಾಯತಿಗಳು ಕಾಂಗ್ರೆಸ್ ಅಭ್ಯರ್ಥಿಗಳ ವಶವಾದರೇ, ಕುಂಭಾಶಿ, ಗೋಪಾಡಿ, ಕೋಟೇಶ್ವರ, ಹಂಗಳೂರು, ಕೋಣೆ, ಹಾಲಾಡಿ, ಹೊಂಬಾಡಿ-ಮಂಡಾಡಿ, ಪಡುವರಿ, ಅಮಾಸೆಬೈಲು, ಮಡಾಮಕ್ಕಿ, ಜಡ್ಕಲ್, ಹೊಸಂಗಡಿ, ಹಳ್ಳಿಹೊಳೆ, ಆಜ್ರಿ, ಕೆರಾಡಿ, ಗೋಳಿಹೊಳೆ, ಕಿರಿಮಂಜೇಶ್ವರ, ಮರವಂತೆ, ಬಸ್ರೂರು, ಬಳ್ಕೂರು, ಗುಜ್ಜಾಡಿ, ಹಟ್ಟಿಯಂಗಡಿ, ಕಂದಾವರ ಹಾಗೂ ಬೆಳ್ವೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ವಶವಾಗಿದೆ. 

ಉಳಿದ ಬಿಜೂರು ಹಾಗೂ ಬಿಜಾಡಿ ಗ್ರಾಮ ಪಂಚಾಯತಿಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಸಮಬಲ ಸಾಧಿಸಿದರೆ, ಕಾಳವಾರ ಪಂಚಾಯತಿಯಲ್ಲಿ ನಾಗರೀಕ ವೇದಿಕ ಸದಸ್ಯರು ಹೆಚ್ಚಿನ ಸ್ಥಾನ ಪಡೆದುಕೊಂಡಿದ್ದಾರೆ.  

ಲಾಟರಿ ಅದೃಷ್ಟಶಾಲಿಗಳು
ಕುಂದಾಪುರ ತಾಲೂಕಿನ 3 ಗ್ರಾಮ ಪಂಚಾಯತಿಗಳ ಅದೃಷ್ಟಶಾಲಿ ಸದಸ್ಯರುಗಳು, ಲಾಟರಿ ಮೂಲಕ ವಿಜೇತರಾಗಿ ಫಲಿತಾಂಶದಲ್ಲಿ ದಾಖಲೆ ಮೂಡಿಸಿದ್ದಾರೆ. ಕೋಟೇಶ್ವರ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಗಣೇಶ್ ಹಾಗೂ ಬಿಜೆಪಿಯ ಚಂದ್ರ ದೇವಾಡಿಗ 179 ಮತ, ಕಟ್ಬೆಲ್ತೂರಿನ ಕಾಂಗ್ರೆಸ್ ಬೆಂಬಲಿತ ಅಶೋಕ್ ಹಾಗೂ ಬಿಜೆಪಿ ಬೆಂಬಲಿತ ನಾಗರಾಜ ಪುತ್ರನ್ 280 ಮತಗಳು ಹಾಗೂ ನಾಡ ಗ್ರಾಮ ಪಂಚಾಯತಿಯ ಸಿಪಿಎಂ ಬೆಂಬಲಿತ ನಾಗರತ್ನ ಹಾಗೂ ಬಿಜೆಪಿ ಬೆಂಬಲಿತ ಯಶೋಧ 249 ಮತಗಳನ್ನು ಪಡೆದಿದ್ದರು. ಲಾಟರಿ ಮೂಲಕ ಆಭ್ಯರ್ಥಿಗಳನ್ನು ಪರೀಕ್ಷೆಗೊಡ್ಡಿದಾಗ ಗಣೇಶ್, ಅಶೋಕ್ ಹಾಗೂ ನಾಗರತ್ನ ಅವರಿಗೆ ಅದೃಷ್ಟ ಒಲಿಯಿತು.

ಬೆಂಬಲಿಗರ ವಿಜಯೋತ್ಸವ
ಬೆಳಿಗೆನಿಂದಲೂ ಅಭ್ಯರ್ಥಿಗಳ ಜಯದ ಬಗ್ಗೆ ಘೋಷಣೆಯಾಗುತ್ತಿದ್ದಂತೇ ಅವರವರ ಬೆಂಬಲಿಗರ ವಿಜಯೋತ್ಸವ ಮುಗಿಲುಮುಟ್ಟಿತ್ತು. ವಿಜಯರಾದ ಅಭ್ಯರ್ಥಿಗಳಿಗೆ ಹಾರ ತುರಾಯಿ ಹಾಕಿ, ಸಿಹಿ ಹಂಚಿ ಸಂಭ್ರಮಿಸಿದ್ದು ಅಲ್ಲದೇ ಅಭ್ಯರ್ಥಿಗಳಿಗೆ ಜೈಕಾರ ಹಾಕುವ ಮೂಲಕ ಸಂಭ್ರಮಾಚಿಸಿದರು. ಸ್ಥಳದಲ್ಲಿ ಹಾರಗಳ ವ್ಯಾಪಾರವೂ ಭರ್ಜರಿಯಾಗಿತ್ತು.

ಇದನ್ನೂ ಓದಿ - ಕುಂದಾಪುರ ತಾಲೂಕಿನ ಗ್ರಾ.ಪಂ ಚುನಾಯಿತ ಅಭ್ಯರ್ಥಿಗಳು
                   - ಕುಂದಾಪುರದಲ್ಲಿ ಚುರುಕುಗೊಂಡ ಮತ ಏಣಿಕೆ: ನಿರ್ಧಾರಗೊಳ್ಳಿತ್ತಿದೆ ಅಭ್ಯರ್ಥಿಗಳ ಭವಿಷ್ಯ