ಕುಸಿಯುವ ಭೀತಿಯಲ್ಲಿ ಕೊಡೇರಿ ಶಾಲೆ ಕಟ್ಟಡ

ಬೈಂದೂರು: ಸರಕಾರಿ ಶಾಲೆಗಳಿಗೆ ಮಕ್ಕಳು ಬರೋದಿಲ್ಲ ಎಂಬ ದೂರು ಸಾಮಾನ್ಯವಾದುದು. ಆದರೆ ಎಷ್ಟು ಸರಕಾರಿ ಶಾಲೆಗಳು ಮಕ್ಕಳಿಗೆ ಪೂರಕವಾದ ವಾತಾವರನ್ನು ಕಲ್ಪಿಸಿವೆ ಎಂದು ಲೆಕ್ಕ ಹಾಕಿ ನೋಡಿದರೂ ಅವುಗಳ ಸಂಖ್ಯೆ ಎರಡಂಕಿ ದಾಟುವುದಿಲ್ಲ.

ಕಡಲತಡಿಯಲ್ಲಿರುವ ಕೊಡೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಥಿತಿಯನ್ನು ಕಂಡವರು ಮಕ್ಕಳನ್ನು ಕಳುಹಿಸಲು ಹೆದರುತ್ತಾರೆ.  ಈ ಶಾಲೆಯ ಸುಮಾರು 30 ವರ್ಷದ ಹಿಂದಿನ ಕಟ್ಟಡ ಈಗ ದುಸ್ಥಿತಿ ತಲುಪಿದ್ದು, ಕಳೆದ ಮಳೆಗಾಲದಲ್ಲಿ ಕಟ್ಟಡವು ಬಿರುಗಾಳಿಯ ರಭಸಕ್ಕೆ ತುತ್ತಾಗಿ ಮೇಲ್ಛಾವಣೆ ಸಂಪೂರ್ಣ ಕುಸಿದಿದೆ. ಮೇಲ್ಛಾವಣೆಯ ಮರದ ಪಕಾಸು, ರೀಪು ಹಾಗೂ ಹಂಚುಗಳು ಗಾಳಿಗೆ ಹಾರಿಹೋಗಿವೆ. ಈ ಸಂದರ್ಭದಲ್ಲಿ ಶಾಲೆಗೆ ಭೇಟಿ ನೀಡಿದ ಇಲಾಖಾಧಿಕಾರಿಗಳು ಕಟ್ಟಡಕ್ಕೆ ತಾತ್ಕಲಿಕವಾಗಿ ಟರ್ಪಾಲು ಹೊದಿಸಲು ಸೂಚನೆ ನೀಡಿದರು, ಅದರಂತೆ ಶಿಥಿಲಗೊಂಡ ಕಟ್ಟಡಕ್ಕೆ ತಾತ್ಕಲಿಕವಾಗಿ ಟರ್ಪಾಲು ಹೊದಿಸಿ, ಹಾಗೂ ಹೀಗೂ ಕಳೆದ ಮಳೆಗಾಲವಂತೂ ದೂಡಲಾಯಿತು. ಆ ಬಳಿಕ ಕಡಲ ತೀರದ ಗಾಳಿಯ ರಭಸಕ್ಕೆ ಟರ್ಪಾಲು ಹಾರಿಹೋಗಿ ಸಮುದ್ರ ಪಾಲಾಯಿತು. ಪ್ರಸ್ತುತ ಶಾಲಾ ಕಟ್ಟಡ ಹಾಗೇ ಬಾಯ್ತೆರೆದುಕೊಂಡಿದ್ದು, ಮಳೆಯ ನೀರು ಶಾಲಾ ಕೊಠಡಿಯ ಒಳಗೆ ಬೀಳುತ್ತಿದೆ, ಇದರಿಂದಾಗಿ ಕಟ್ಟಡ ಗೋಡೆಯು ಶಿಥಿಲಗೊಂಡಿದೆ.

ಕೊಡೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 8ನೇ ತರಗತಿಯವರೆಗೆ ಒಟ್ಟು 188 ವಿದ್ಯಾರ್ಥಿಗಳು ಪ್ರಸ್ತುತ ವ್ಯಾಸಂಗ ಮಾಡುತ್ತಿದ್ದು, ಈ ಬಾರಿ 24 ಮಕ್ಕಳು ಹೆಚ್ಚಿಗೆ ದಾಖಲಾಗಿದ್ದಾರೆ. ಶಾಲಾ ತರಗತಿಗನುಗುಣವಾಗಿ ಈ ಶಾಲೆಗೆ 9 ತರಗತಿ ಕೊಠಡಿಗಳ ಅಗತ್ಯವಿದೆ, ಆದರೆ ಇಲ್ಲಿ ಕೇವಲ 5 ಕೊಠಡಿಗಳು ಮಾತ್ರ ಸುಸ್ಥಿತಿಯಲ್ಲಿವೆ. ಉಳಿದ ಕೊಠಡಿಯಲ್ಲಿ ಮಕ್ಕಳನ್ನು ಕುಳ್ಳಿರಿಸಲು ಸಾಧ್ಯವಿಲ್ಲ, ಏಕೆಂದರೆ ಯಾವ ಸಂದರ್ಭದಲ್ಲಿ ಕೊಠಡಿಯ ಗೋಡೆ ಬೀಳುತ್ತದೆ ಎನ್ನುವ ಆತಂಕದಿಂದ ಪೋಷಕರು ಜೀವಕ್ಕಿಂತ ಪಾಠ ಮುಖ್ಯವಲ್ಲ ಎಂದು ತಮ್ಮ ಮಕ್ಕಳನ್ನು  ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ, ಈ ಬಗ್ಗೆ ಇಲಾಖೆ ಮಾತ್ರ ಅನುದಾನದ ಕೊರತೆಯಿಂದ ಕೊಠಡಿ ದುರಸ್ತಿಯ ಬಗ್ಗೆ ದಿವ್ಯ ಮೌನವಹಿಸಿರುವುದು ವಿದ್ಯಾರ್ಥಿ ಪೋಷಕರನ್ನು ಕೆರಳಿಸಿದೆ.

 ಇಲ್ಲಿನ ಶಾಲಾ ಕಟ್ಟಡವನ್ನು ಮಳೆಗಾಲದೊಳಗೆ ದುರಸ್ತಿಗೊಳಿಸಿ ಎಂದು ಇಲ್ಲಿನ ಎಸ್‌ಡಿಎಂಸಿ ಸಹಿತ ವಿದ್ಯಾರ್ಥಿ ಪೋಷಕರು ಕಳೆದ ಒಂದು ವರ್ಷದಿಂದ ಜನಪ್ರತಿನಿಗಳ ಹಾಗೂ ಸಂಬಂಧಿತ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ತರಲಾಗಿದೆ. ಆದರೆ ಇದುವರೆಗೂ ಜನಪ್ರತಿನಿಗಳು ಸೇರಿದಂತೆ ಯಾವುದೇ ಅಧಿಕಾರಿಗಳು ಸ್ಪಂಧಿಸಿಲ್ಲ, ಇವರು ಕನಿಷ್ಠ ಸೌಜನ್ಯಕ್ಕಾದರೂ ಇಲ್ಲಿಗೆ ಭೇಟಿ ನೀಡಿ ಇಲ್ಲಿನ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಲಿಲ್ಲ. ಅಧಿಕಾರಿಗಳಿಗೆ ಬಡವರ ಮಕ್ಕಳ ಬಗ್ಗೆ ಕಾಳಜಿಯಿಲ್ಲ ಎಂದು ವಿದ್ಯಾರ್ಥಿ ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.

 ಶಾಲೆಯ ಕೊಠಡಿಯ ಮೇಲ್ಛಾವಣಿ ಸಂಪೂರ್ಣ ಕುಸಿದ ಪರಿಣಾಮ ಮಳೆಯ ನೀರು ರೂಮಿಗೆ ನುಗ್ಗುತ್ತಿದೆ, ಇದರಿಂದಾಗಿ ಕಟ್ಟಡ ಕುಸಿಯುವ ಭೀತಿಯಿಂದ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕಿದ ಪರಿಣಾಮ ಶಾಲೆಯನ್ನು ಕಳೆದ ವಾರ ನಾಲ್ಕು ದಿನಗಳ ಕಾಲ ಮುಚ್ಚಲಾಗಿತ್ತು.

ಶಿಥಿಲಗೊಂಡ ಶಾಲಾ ಕಟ್ಟಡವನ್ನು ಮಳೆಗಾಲದೊಳಗೆ ದುರಸ್ತಿಗೊಳಿಸುವಂತೆ ಶಾಸಕರು, ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರು, ಜಿ.ಪಂ. ಸದಸ್ಯರು ಸೇರಿದಂತೆ ಜನಪ್ರತಿನಿಧಿಗಳಿಗೆ ಹಾಗೂ ಡಿಡಿಪಿಐ ಮತ್ತು ಬಿಇಂ ಗಮನಕ್ಕೆ ತರಲಾಗಿದೆ, ಆದರೆ ಅವರು ಇದವರೆಗೂ ಭರವಸೆ ಮಾತ್ರ ನೀಡುತ್ತಾರೆ. ಡಿಡಿಪಿಐ ಅವರನ್ನು ದೂರವಾಣಿಯ ಮೂಲಕ ಸಂಪರ್ಕಿಸಿದಾಗ ಶಾಲೆ ಮುಚ್ಚಿ ಬಿಡಿ ಎನ್ನುತ್ತಾರೆ, ಜವಾಬ್ದಾರಿಯುತ ಅಧಿಕಾರಿಗಳು ಈ ರೀತಿ ಹೇಳಿಕೆ ನೀಡುವುದು ಎಷ್ಟರ ಮಟ್ಟಿಗೆ ಸರಿ, ಜೀವಕ್ಕಿಂತ ಶಿಕ್ಷಣ ಮುಖ್ಯವಲ್ಲ, ಹಾಗಾಗಿ ನಾವು ಕಳೆದ ಮೂರು ದಿನದಿಂದ ಶಾಲೆಗೆ ಕಳುಹಿಸುತ್ತಿಲ್ಲ, ಸೋಮವಾರ ತನಕ ಕಾದು ನೋಡುತ್ತೇವೆ,  ಆ ಬಳಿಕ ಮುಂದಿನ ಹೋರಾಟದ ರೂಪುರೇಷೆ ಸಿದ್ದಪಡಿಸುತ್ತೇವೆ ಎನ್ನುತ್ತಾರೆ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಶೇಷು ಪೂಜಾರಿ.

ಕಳೆದ ಮೂರು ದಿನದಿಂದ ಶಾಲೆಗೆ ಮಕ್ಕಳು ಬರುತ್ತಿಲ್ಲ, ನಾವು ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮೌಖಿಕವಾಗಿ ಹಾಗೂ ಲಿಖಿತವಾಗಿ ಗಮನಕ್ಕೆ ತಂದಿದ್ದೇವೆ, ಈ ಬಗ್ಗೆ ನಾವು ಅಸಹಾಯಕರು - ನಾಗರಾಜ ಶೆಟ್ಟಿ, ಪ್ರಭಾರ ಮುಖ್ಯ ಶಿಕ್ಷಕ.

ಒಣ ಪ್ರತಿಷ್ಠೆಗಾಗಿ ಶಾಲೆ ಮುಚ್ಚಿದ್ದಾರೆ, ಇದರಿಂದ ಅವರ ಮಕ್ಕಳಿಗೆ ತೊಂದರೆಯಾಗುತ್ತದೆ, ಶಾಲೆಗೆ ಭೇಟಿ ನೀಡುವ ಅಗತ್ಯ ನನಗಿಲ್ಲ, ಇಲಾಖೆಯಲ್ಲಿ ಅನುದಾನದ ಕೊರತೆಯಿದೆ, ನಾವು ಶಾಲಾ ಕಟ್ಟಡ ದುರಸ್ತಿಯ ಹಣಕ್ಕಾಗಿ ನೋಟ್ ಪ್ರಿಂಟ್ ಮಾಡುವುದಿಲ್ಲ, ಪೋಷಕರಿಗೂ ಇಲಾಖೆಯ ಸಮಸ್ಯೆಯ ಬಗ್ಗೆ ಅರಿವಿರಬೇಕು, ಇಲಾಖೆಯಿಂದ ಅನುದಾನ ಬಂದಾಗ ದುರಸ್ತಿ ಮಾಡುತ್ತೇವೆ, ಅಲ್ಲಿಯವರೆಗೂ ಇರುವ ಕೊಠಡಿಯಲ್ಲಿ ಅಡ್ಜಸ್ಟ್ ಮಾಡಿಕೊಳ್ಳಲಿ - ದಿವಾಕರ ಶೆಟ್ಟಿ, ಡಿಡಿಪಿಐ ಉಡುಪಿ.

ಕುಂದಾಪ್ರ ಡಾಟ್ ಕಾಂ- editor@kundapra.com