ವಾಸದೇವ ಭಟ್ ಅವರಿಗೆ ಪತ್ರಿಕಾ ದಿನದ ಗೌರವ ಪ್ರದಾನ

ಉಡುಪಿ: ಬಹುಮುಖ ಪ್ರತಿಭೆಯ ನಾದವೈಭವಂ ಉಡುಪಿ ವಾಸುದೇವ ಭಟ್ಟರು ಪತ್ರಕರ್ತರಾಗಿ ಕೂಡ ಅಂದಿನ ಕಾಲದಲ್ಲಿ ಸಾರ್ಥಕ ಕೀರ್ತಿಯನ್ನು ಪಡೆದಿದ್ದಾರೆ. ಅವರಿಗೆ ರಾಜ್ಯೋತ್ಸವದಂತಹ ಪ್ರಶಸ್ತಿಗಳು ಯಾವಾಗಲೋ ಒಲಿದು ಬರಬೇಕಿತ್ತು ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು. 
ಅವರು ಪತ್ರಕರ್ತರ ವೇದಿಕೆ ಬೆಂಗಳೂರು ಇದರ ಉಡುಪಿ ಜಿಲ್ಲಾ ಘಟಕದ ಆಶ್ರಯದಲ್ಲಿ 'ಕುಂದಾಪ್ರ ಡಾಟ್ ಕಾಂ' ಸಹಯೋಗದೊಂದಿಗೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ನಾದವೈಭವಂ ಉಡುಪಿ ವಾಸುದೇವ ಭಟ್ ಅವರಿಗೆ ’ಪತ್ರಿಕಾ ದಿನದ ಗೌರವ’ವನ್ನು ಅವರ ನಿವಾಸದಲ್ಲಿಯೇ ಪ್ರಧಾನ ಮಾಡಿ ಮಾತನಾಡಿದರು.

ಸರಕಾರದ ಯಾವುದೇ ಪ್ರಶಸ್ತಿಗಳು ಲಾಭಿ ಇಲ್ಲದೆ ಸಿಗದ ಪರಿಸ್ಥಿತಿ ಇದೆ. ಇದರಲ್ಲಿ ಮುಚ್ಚುಮರೆ ಎಂಬುದಿಲ್ಲ. ವಾಸುದೇವ ಭಟ್ ಅವರನ್ನು ಸರಕಾರ ಗುರುತಿಸಿ ಸೂಕ್ತ ಗೌರವ ನೀಡಬೇಕೆಂದು ಆಶಿಸಿದರು.  ಕಲ್ಪವೃಕ್ಷ, ಲೇಖನ ಸಾಮಾಗ್ರಿ, ಸ್ಮರಣಿಕೆ ಹಾಗೂ ಮಾನಪತ್ರ ಸಹಿತ ಅವರನ್ನು ಗೌರವಿಸಲಾಯಿತು.

ಗೌರವವನ್ನು ಸ್ವೀಕರಿಸಿದ ನಾದವೈಭವಂ ಉಡುಪಿ ವಾಸುದೇವ ಭಟ್ ಮಾತನಾಡಿ ಪ್ರಶಸ್ತಿ-ಗೌರವಗಳ ಬಗೆಗೆ ನನಗೆ ಅಂತಹ ವ್ಯಾಮೋಹಗಳಿಲ್ಲ. ಜನರ ಪ್ರೀತಿಯಿಂದ ಸಿಗುವ ಇಂತಹ ಗೌರವಗಳು ನನಗೆ ಅತಿ ಸಂತೋಷವನ್ನು ತಂದಿವೆ. ಪ್ರತಿಯೊಬ್ಬರೂ ಕೂಡ ಜೀವನೋತ್ಸಾಹನ್ನು ಉಳಿಸಿಕೊಳ್ಳಬೇಕು ಎಂದರು.

ಗ್ರಾಮೀಣ ಮತ್ತು ಸ್ವತಂತ್ರ ಪತ್ರಕರ್ತರಿಗೆ ಆರ್ಥಿಕ ಬಲವನ್ನು ಅವರು ಕೆಲಸ ಮಾಡುತ್ತಿರುವ ಸಂಸ್ಥೆಗಳು ತುಂಬಬೇಕು. ತುಳುವರ ನಾಡಿ ಮಿಡಿತವಾಗಿ ಒಂದು ತುಳು ದೈನಿಕ ಹಾಗೂ ತುಳು ಸ್ಯಾಟಲೈಟ್ ಚಾನೆಲ್ ಆರಂಭವಾಗಲಿ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತರ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷ ಶೇಖರ ಅಜೆಕಾರು ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಉಡುಪಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ| ನಿಕೇತನಾ, ಟೈಮ್ಸ್ ಆಫ್ ಕುಡ್ಲ ವಾರಪತ್ರಿಕೆಯ ಸಂಪಾದಕರಾದ ಎಸ್.ಆರ್. ಬಂಡಿಮಾರ್, ಉಡುಪಿ ತುಳುಕೂಟದ ಅಧ್ಯಕ್ಷರಾದ ಇಂದ್ರಾಳಿ ಜಯಕರ ಶೆಟ್ಟಿ ಉಪಸ್ಥಿತರಿದ್ದರು.
ಇನ್ನರ್‌ವಿಲ್‌ನ ಗಿರಿಜಾ ರಾವ್, ರಶ್ಮಿ ಹೊಳ್ಳ, ರೋಟರಿ ಉಡುಪಿಯ ನೂತನ ಪದಾಧಿಕಾರಿಗಳಾದ ಪ್ರಭಾಕರ ಮಲ್ಯ, ರಾಮಚಂದ್ರ ಉಪಾಧ್ಯಾಯ, ಕೊಡವೂರು ಶಂಕರನಾರಾಯಣ ದೇವಸ್ಥಾನದ ಮೊಕ್ತೇಸರರಾದ ಟಿ. ರಾಘವೇಂದ್ರ ರಾವ್, ಉಡುಪಿ ಸಹೇಲಿ ಎವರ್ ಗ್ರೀನ್‌ನ ಜಯಶ್ರೀ ಪತ್ರಕರ್ತ ದಿನದ ಗೌರವ ಸ್ವೀಕರಿಸಿದ ವಾಸುದೇವ ಭಟ್ ದಂಪತಿಗಳನ್ನು ಗೌರವಿಸಿದರು. ವಾಸುದೇವ ಭಟ್ ಅವರ ಮಡದಿ ಸುನಂದಾ ವಾಸುದೇವ ಭಟ್, ಮಗಳು ಶುಭಾ ಎಸ್. ಬಾಸ್ರಿ, ಕಸಾಪ ಉಡುಪಿಯ ಕೋಶಾಧಿಕಾರಿ ಸುಬ್ರಮಣ್ಯ ಬಾಸ್ರಿ, ವಿಶ್ವಕರ್ಮ ಡಾಟ್ ಕಾಂ ನ ಉಮಾಧರ ಎಸ್. ವಿಶ್ವಕರ್ಮ, ರಾಘವ ನಂಬಿಯಾರ್, ಬಾ ಸಾಮಗ, ಕು.ಗೋ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

'ಕುಂದಾಪ್ರ ಡಾಟ್ ಕಾಂ'ನ ಸಂಪಾದಕ ಸುನಿಲ್ ಹೆಚ್. ಜಿ. ಬೈಂದೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶ್ರಾವ್ಯಾ ಎಸ್. ಬಾಸ್ರಿ ಪ್ರಾರ್ಥಿಸಿದರು. ಕೋಸ್ಟಲ್ ವೈವ್‌ನ ಬಾಲಕೃಷ್ಣ ಧನ್ಯವಾದ ಸಮರ್ಪಿಸಿದರು.

ಪೋಟೋಗಳು: ಜನಾರ್ಧನ ಕೊಡವೂರು ಹಾಗೂ ಮನೋಹರ ಕುಂದರ್

ಕುಂದಾಪ್ರ ಡಾಟ್ ಕಾಂ- editor@kundapra.com