ವಿಶ್ವ ಪರಿಸರ ದಿನ: ಉಳಿಸುವುದೊಂದೇ ದಾರಿ

        ಸಂಭ್ರಮಿಸುವ ದಿನವಲ್ಲ ಇದು. ಹವಮಾನ ಹದಗೆಟ್ಟಿದೆ, ಕಾಡು ಮಾಯವಾಗುತ್ತಿದೆ,ವೈವಿಧ್ಯಮಯ ಜೀವ ಸಂಕುಲಗಳು ಕಣ್ಮರೆಯಾಗಿದೆ. ಕಾಂಕ್ರಿಟ್ ಕಟ್ಟಡಗಳು ಸುತ್ತೆಲ್ಲಾ ಹರಡಿವೆ. ತಿನ್ನಲು ಆಹಾರವಿಲ್ಲ. ತಿನ್ನೋಣವೆಂದರೂ ಆರೋಗ್ಯವಿಲ್ಲ. 
      ಇದು ನಮ್ಮ ಸದ್ಯದ ಸ್ಥಿತಿ. ದಿನೇ ದಿನೇ ನಮ್ಮ ಅನುಕೂಲತೆಗೆ ತಕ್ಕಂತೆ ಜೀವನ ಸಾಗಿಸುತ್ತಿರುವ ನಾವುಗಳು ಪರಿಸರದ ಬಗ್ಗೆಯೂ ಒಂದಿಷ್ಟು ಗಮನ ಹರಿಸಬೇಕಾದ ಅಗತ್ಯತೆ ಇಂದು ಹೆಚ್ಚಾಗಿಯೇ ಇದೆ.
      ವಿಶ್ವದ ಜೀವ ವೈವಿಧ್ಯದ ಸಂರಕ್ಷಣೆ, ಪರಿಸರ ಸಂಬಂಧಿ ಸಮಸ್ಯೆಗಳನ್ನು ಪತ್ತೆಹಚ್ಚುವುದು ಹಾಗೂ ಅವುಗಳನ್ನು ಸರಿಪಡಿಸುವ ಮಾರ್ಗೋಪಾಯಗಳನ್ನು ಕಂಡು ಹಿಡಿಯುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಯತ್ನವಾಗಿ ಪ್ರತಿವರ್ಷ ಜೂನ್ 5ರಂದು ‘ವಿಶ್ವ ಪರಿಸರ ದಿನ’ವನ್ನು ಆಚರಿಸಲಾಗುತ್ತದೆ.
       1972ರ ಜೂನ್ 5ರಂದು ಮಾನವ ಪರಿಸರಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಅಧಿವೇಶನವನ್ನು ನಡೆಸಲಾಗಿತ್ತು. 1973ರಲ್ಲಿ ಮೊದಲ ವಿಶ್ವ ಪರಿಸರ ದಿನ ಆಚರಿಸಲಾಗಿತ್ತು. ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ, ನೈಸರ್ಗಿಕ ವಿಪತ್ತುಗಳು, ಪರಿಸರ ನಿರ್ವಹಣೆ, ಸಂಪನ್ಮೂಲ ಕ್ಷಮತೆ ಮೊದಲಾದ ವಿಷಯಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲು ಉಪಾಯಗಳನ್ನು ಕಂಡುಹಿಡಿಯುವ ನಿಟ್ಟಿನಲ್ಲಿ ಈ ದಿನವನ್ನು ಆಚರಿಸಲಾಗುತ್ತಿದೆ. 'ಯೋಚಿಸು, ತಿನ್ನು, ಉಳಿಸು' ಈ ಬಾರಿಯ ಪರಿಸರ ದಿನದ ಘೋಷವಾಕ್ಯವಾಗಿದೆ. 
      ಜಗತ್ತಿನಲ್ಲಿ ಉತ್ಪಾದಿತ ಆಹಾರದಲ್ಲಿ ಶೇ. 50ರಷ್ಟು ಮನುಷ್ಯನ ಹೊಟ್ಟೆ ಸೇರುವ ಮೊದಲೇ ವ್ಯರ್ಥವಾಗುತ್ತಿದೆ. ಈ ಹಿನ್ನೆಲೆಯಲ್ಲಿ ನೀರಿನ ಸದ್ಭಳಕೆ, ಆಹಾರದ ಸದುಪಯೋಗದ ಚಿಂತನೆ ಅಗತ್ಯ. ಇದು ಹಸಿದವರಿಗೆ, ಮುಂದಿನ ಪೀಳಿಗೆಗೆ ನಾವು-ನೀವು ನೀಡಬಹುದಾದ ದೊಡ್ಡ ಕೊಡುಗೆ. 
      ಒಂದು ಸಮೀಕ್ಷೆಯ ಪ್ರಕಾರ ಭಾರತೀಯರು ತಿನ್ನುವುದಕ್ಕಿಂತಲೂ ಆಹಾರ-ನೀರು ವ್ಯರ್ಥ ಮಾಡುವುದೇ ಹೆಚ್ಚು. ಜಗತ್ತಿನ 700 ಕೋಟಿ ಜನಸಂಖ್ಯೆ 2050 ರಲ್ಲಿ 900 ಕೋಟಿಗೇರಲಿದೆ. ಆದರೆ ಭೂಮಿ ಮಾತ್ರ ಒಂದಿಷ್ಟೂ ಹೆಚ್ಚದು. ಹೀಗಾಗಿ ಆಹಾರ, ನೀರು ವ್ಯರ್ಥ ಮಾಡೋದು ಮುಂದಿನ ಜನಾಂಗದ ತುತ್ತು-ಜಲ ಕಸಿದಂತೆ.  ಹೀಗೆ ನಡೆದರೆ ನಮ್ಮ ದೈನಂದಿನ ಬದುಕು ಸಮಾಜಕ್ಕೆ, ಸರಕಾರಕ್ಕೂ ಹೊರೆಯಾಗಲಿದೆ, ಪರಿಸರಕ್ಕೆ ಮಾರಕವಾಗಲಿದೆ. 
       ಗಿಡ ನೆಟ್ಟು, ಭಾಷಣ ಬಿಗಿಯುವ ಬದಲು ನೆಡುವ ಗಿಡಗಳನ್ನು ಪೋಷಿಸುವ ಕೆಲಸ ಮಾಡೋಣ. ಇರುವ ಸಂಪನ್ಮೂಲಗಳನ್ನು ವಿತವಾಗಿ ಬಳಕೆ ಮಾಡುವ ಕುರಿತು ಯೋಚಿಸೋಣ. ಏನಂತಿರಾ?
-ಸಂ
                                                                        ****

* ನೀರನ್ನು ಅವಶ್ಯಕತೆಗನುಗುಣವಾಗಿ ಬಳಸಿ.
* ಮಳೆ ನೀರನ್ನು ಸಾಧ್ಯವಾದಷ್ಟು ಬಳಸಿ ಹಾಗು ಅಂತರ್ಜಲದ ವೃದ್ಧಿಗೆ ಯೋಜನೆಗಳನ್ನು ರೂಪಿಸಿ.
*ನೀರಿನ ಮೊಲಗಳಾದ ಕೆರೆ, ಬಾವಿ, ಕೊಳ ಹಾಗು ನದಿಗಳ ಮಾಲಿನ್ಯವನ್ನು ತಡೆಯಿರಿ.
*ವಿಧ್ಯುಚ್ಚಕ್ತಿಯನ್ನು ಮಿತವಾಗಿ ಬಳಸಿ.
* ಆಹಾರ ಪದಾರ್ಥಗಳನ್ನು ಅನಗತ್ಯವಾಗಿ ಪೋಲುಮಾಡಿವುದು ಬೇಡ
* ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆಮಾಡಿ.
* ಮರ-ಗಿಡಗಳನ್ನು ಹೆಚ್ಚಾಗಿ ಬೆಳಸಿ.
* ಕಸವನ್ನು ವಿಂಗಡನೆ ಮಾಡಿ ವಿಲೇವಾರಿ ಮಾಡಿ.
* ಬೈಸಿಕಲ್ ಅಥವಾ ನಡೆಯುವ ಹವ್ಯಾಸದಿಂದ ಆರೋಗ್ಯವೂ ವೃದ್ಧಿಸುತ್ತದೆ ಹಾಗು ಪರಿಸರ ಮಾಲಿನ್ಯವೂ ತಪ್ಪುತ್ತದೆ.
* ವಾರದಲ್ಲಿ ಒಂದು ದಿನವಾದರೂ ಸಾರ್ವಜನಿಕ ವಾಹನ ಬಳಸಿ.
* ಜವಾಬ್ದಾರಿಯುತ ನಾಗರೀಕರಾಗಿ ನಿಮ್ಮ ಹಕ್ಕು ಹಾಗು ಜವಾಬ್ದಾರಿಯನ್ನು ಅರಿತುಕೊಳ್ಳಿ.
* ಹಸಿರೇ ಉಸಿರು ಎಂಬ ತತ್ವದಲ್ಲಿ ನಂಬಿಕೆಯಿಡಿ.
* ಜನ ಸಾಮಾನ್ಯರಲ್ಲಿ ಪರಿಸರದ ಕಾಳಜಿಯ ಬಗ್ಗೆಅರಿವು ಮೂಡಿಸಿ.