ಆರಿದ ಅಕ್ಷತಾ ಎಂಬ ಬೆಳಕು ಮತ್ತು ಹೊಲಸು ರಾಜಕಾರಣ

'ನಾನು ಆದರ್ಶ ಇಂಜಿನಿಯರ್ ಆಗಿಯೇ ಆಗುವೆ. ನನ್ನ ಸಮಯ ಅತ್ಯಮೂಲ್ಯ. ಏನನ್ನಾದರೂ ಸಾಧಿಸಬಲ್ಲ ಶಕ್ತಿಯ ಚಂಡು ನಾನು' ಹೀಗೆ ತನ್ನ ಡೈರಿಯ ಪುಟಗಳಲ್ಲಿ ಬರೆದುಕೊಂಡು, ನೂರಾರು ಕನಸುಗಳನ್ನು ಹೊತ್ತು, ಪ್ರತಿದಿನವೂ ದುರ್ಗಮ ಕಾಡು ಹಾದಿಯನ್ನು ದಾಟಿ ಕಾಲೇಜಿಗೆ ಬರುತ್ತಿದ್ದ ಆ ಶಕ್ತಿಯ ಚಂಡು ಇಂದು ತನ್ನ ಕನಸುಗಳೊಂದಿಗೇ ಮರೆಯಾಗಿ ಹೋಗಿದೆ.

ಅಕ್ಷತಾ ದೇವಾಡಿಗ ಎಂಬ ದಿಟ್ಟ ನಿಲುವಿನ ಆ ಹೆಣ್ಣುಮಗಳೊಬ್ಬಳನ್ನು ಕಳೆದುಕೊಂಡ ದುಃಖದಲ್ಲಿ ಇಡೀ ಊರೇ ಮುಳುಗಿದೆ. ದುಷ್ಕೃತ್ಯ ಮಾಡಿದಾತನೇನೊ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಆದರೆ ಅಕ್ಷತಾಳಂತಹ ಪ್ರತಿಭಾವಂತೆಯನ್ನು ಮತ್ತೆ ಪಡೆಯಲು, ಅವಳ ಬೆಟ್ಟದಷ್ಟು ಕನಸುಗಳನ್ನು ನನಸಾಗಿಸಲು ಯಾರಿಂದ ಸಾಧ್ಯವಾದಿತು?


ಅಕ್ಷತಾ ಎಂಬ ಪ್ರತಿಭಾನ್ವಿತೆ:
ಬೈಂದೂರು ಕ್ಷೇತ್ರದ ಹೇನಬೇರು ಹೊಸಹಕ್ಲುವಿನ ಬಾಬು ದೇವಾಡಿಗ ಹಾಗೂ ರಾಧಾ ದಂಪತಿಗಳ ಮೂವರು ಮಕ್ಕಳಲ್ಲಿ ಹಿರಿಯ ಮಗಳಾದ ಅಕ್ಷತಾ ದೇವಾಡಿಗ ತಾನು ಇಂಜಿನೀಯರ್ ಆಗಬೇಕು ಎಂಬ ಮಹದಾಸೆಯನ್ನು ಹೊತ್ತಿದ್ದಳು. ಪ್ರತಿದಿನವೂ ಕಾಡು ಹಾದಿಯನ್ನು ಕಾಲ್ನಡಿಗೆಯಲ್ಲಿಯೇ ದಾಟಿ ನಡೆದು ಶಾಲೆಗೆ ಹೋಗಿ ಎಸ್.ಎಸ್.ಎಲ್.ಸಿ ಕನ್ನಡ ಮಾಧ್ಯಮದಲ್ಲಿ ಓದಿ ಶೇ.94.76 ಅಂಕಗಳನ್ನು ಪಡೆದು ತನ್ನೂರಿಗೆ ಕೀರ್ತಿ ತಂದಿದ್ದಳು. ಓದು, ಕ್ರೀಡೆ, ಆಚಾರ-ವಿಚಾರದಲ್ಲಿ ಅಕ್ಷತಾ ಎಲ್ಲರಿಗಿಂತ ಒಂದು ಹೆಜ್ಜೆ ಮುಂದು. (ಓದಿ ಕುಂದಾಪ್ರ ಡಾಟ್ ಕಾಂ) ಬೈಂದೂರು ಪದವಿಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಷಯವನ್ನು ಆಯ್ದುಕೊಂಡ ಬಳಿಕವಂತೂ ತನ್ನ ಸಮಯವನ್ನು ಸ್ವಲ್ಪವೂ ಹಾಳು ಮಾಡುತ್ತಿರಲಿಲ್ಲ. ಮನೆಯಲ್ಲಿ ಆಕೆಯ ಓದು, ದೇವರ ಪೂಜೆ, ಊಟತಿಂಡಿಗಳು ತನ್ನ ಟೈಮ್ ಟೇಬಲಿನಂತೆ ಚಾಚು ತಪ್ಪದೇ ನಡೆಯುತ್ತಿತ್ತು. (ಓದಿ ಕುಂದಾಪ್ರ ಡಾಟ್ ಕಾಂ) ತನ್ನ ಕನಸುಗಳನ್ನು ನನಸಾಗಿಸಿಕೊಳ್ಳಲು ಪ್ರತಿದಿನವೂ ಅಮೂಲ್ಯವೆಂಬಂತೆ ತಯಾರಿ ನಡೆಸುತ್ತಿದ್ದಳು. ಕನಸು ಸಾಕಾರಗೊಂಡ ಬಳಿಕ ತನ್ನಿಬ್ಬರು ತಂಗಿಯರನ್ನೂ ಓದಿಸುತ್ತೇನೆ ಎನ್ನುತ್ತಿದ್ದಳು. ಆದರೆ ವಿಧಿ ನಿಯಮವೇ ಬೇರೆ ಇತ್ತು. ಮನೆಗೆ ಬೆಳಕಾಗಬೇಕಿದ್ದವಳು ವಿಧಿಯ ಕ್ರೂರ ಆಟಕ್ಕೆ ನಲುಗಿ ಮಾಯವಾದಳು. ಮೊಬೈಲ್ ಜಮಾನದಲ್ಲಿ ತನ್ನ ಚಂದದ ಅಕ್ಷರಗಳಿಂದ ಡೈರಿಯಲ್ಲಿ ಬರೆಯುತ್ತಿದ್ದ ಅಕ್ಷತಾಳ ಬರಹವನ್ನು ನೋಡಿದವರಿಗೆ ಅವಳು ಪ್ರತಿಭಾನ್ವಿತೆ ಮಾತ್ರವಾಗಿರಲಿಲ್ಲ, ಒಬ್ಬ ದಿಟ್ಟ ನಿಲುವಿನ ಹೆಣ್ಣ ಮಗಳಾಗಿದ್ದಳು ಎಂಬುದು ತಿಳಿಯುತ್ತೆ. (ಓದಿ ಕುಂದಾಪ್ರ ಡಾಟ್ ಕಾಂ) ಸಣ್ಣ ವಯಸ್ಸಿಗೇ ತಾನೇನಾಗಬೇಕು ಎಂಬ ಸ್ಪಷ್ಟ ಕಲ್ಪನೆಯೊಂದಿಗೆ ಬದುಕಿನ ಪ್ರತಿ ಹಂತದಲ್ಲೂ ಅದನ್ನು ಗಟ್ಟಿಮಾಡಿಕೊಳ್ಳುತ್ತಾ ಆಕೆ ಮುಂದವರಿಯುತ್ತಿದ್ದಳು.

                
ಹೆಣ್ಣು ಎಂದು ಬೆಳೆಸಿರಲಿಲ್ಲ.
ಅಕ್ಷತಾಳ ತಂದೆ-ತಾಯಿಗೆ ಮೂವರು ಹೆಣ್ಣ ಮಕ್ಕಳಿದ್ದರೂ ಅವರನ್ನೆಂದೂ ಹೆಣ್ಣು ಎಂಬ ಅಸಡ್ಡೆಯಿಂದ ಬೆಳೆಸಿದವರಲ್ಲ. ಕೂಲಿ ಕೆಲಸ ಮಾಡಿಕೊಂಡು ಬಡತನದಿಂದ ಬದುಕು ಸಾಗಿಸುತ್ತಿದ್ದರೂ ಕೂಡ ತಮ್ಮ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬುದು ಅವರ ಉದ್ದೇಶವಾಗಿತ್ತು. ತಾವು ಕಷ್ಟಪಟ್ಟು ಮಕ್ಕಳನ್ನು ಓದಿಸುತ್ತಿದ್ದರು. (ಓದಿ ಕುಂದಾಪ್ರ ಡಾಟ್ ಕಾಂ) ಅಕ್ಷತಾ ಕೂಡ ಕನ್ನಡ ಮಾಧ್ಯಮದಲ್ಲಿ ಓದಿದರೂ ಕೂಡ ಉತ್ತಮ ಅಂಕಗಳಿಸಿದ್ದಳು. ಹೊಸಹಕ್ಲುವಿನಿಂದ ತಂಗಿಯರೊಂದಿಗೆ ನಡೆದುಕೊಂಡು ಶಾಲೆಗೆ ಬರುತ್ತಿದ್ದಳು. ಎಸ್.ಎಸ್.ಎಲ್.ಸಿ ಯಲ್ಲಿ ಉತ್ತಮ ಅಂಕ ಗಳಿಸಿದ್ದಾಗ ಊರವರೂ ಕೂಡ ತಮ್ಮ ಮನೆಯ ಹೆಣ್ಣು ಮಗಳಂತೆ ಸಂತೋಷ ಪಟ್ಟಿದ್ದರು. ಅಕ್ಷತಾಳ ಮುಂದಿನ ಶಿಕ್ಷಣಕ್ಕೆ ಅನುಕೂಲವಾಗುವಂತೆ ಲ್ಯಾಪ್‌ಟಾಪ್, ಮೊಬೈಲ್ ಕೊಡಿಸಿದ್ದರು.

ಕ್ರೂರಿಯಾಗಿ ಜೀವವನ್ನೇ ತೆಗೆದ ಪಡ್ಡೆ ಹುಡುಗ
ಅಂದು ಬುಧವಾರ ಸಂಜೆ ಅಕ್ಷತಾ ಕಾಲೇಜು ಮುಗಿಸಿ ಮನೆಗೆ ತೆರಳುತ್ತಿರುವಾಗ ಗುಡ್ಡದ ಮೇಲೇರುತ್ತಿದ್ದಂತೆ ಅಲ್ಲಿಯೇ ಕಾದು ಕುಳಿತಿದ್ದ ಸುನಿಲ್ ಎಂಬ ಪಡ್ಡೆ ಹುಡುಗನ ಕಣ್ಣಿಗೆ ಬಿದ್ದಿದ್ದಾಳೆ. ಅಕ್ಷತಾಳನ್ನು ಏಕಮುಖವಾಗಿ ಪ್ರೀತಿಸುತ್ತಿದ್ದ ಮತ್ತು ಆಕೆಯ ಸ್ನೇಹಿತೆಯಂತೆಯೇ ಕರೆದೆಡೆ ಬರುತ್ತಾಳೆಂದು ತಪ್ಪು ತಿಳಿದಿದ್ದ ಸುನಿಲ, ಅಕ್ಷತಾ ಬರುತ್ತಿದ್ದಂತೆಯೇ ಚುಡಾಯಿಸಿದ್ದಾನೆ. ಅಕ್ಷತಾ ಆತನಿಗೆ ಸ್ಪಂದಿಸದೇ ಸ್ವಲ್ಪ ಮುಂದೆ ಹೋಗುವವರೆಗೆ ಸುಮ್ಮನೆ ಕುಳಿತಿದ್ದವನು ಗುಡ್ಡದ ಮೇಲಿನ ಬಯಲು ಪ್ರದೇಶ ಮುಗಿದು ಅಕೇಶಿಯಾ ತೋಪು ಆರಂಭಗೊಳ್ಳುವ ಹೊತ್ತಿಗೆ ಆಕೆಯನ್ನು ಹಿಂಬಾಲಿಸಿದ್ದಾನೆ. ಆವನು ಹಿಂಬಾಸುತ್ತಿರುವುದನ್ನು ಗಮನಿಸಿದ ಅಕ್ಷತಾ ಓಡಲು ಆರಂಭಿಸಿದಾಗ ಹಿಂದಿನಿಂದ ಚೂಡಿದಾರದ ಶಾಲನ್ನು ಗಟ್ಟಿಯಾಗಿ ಹಿಡಿದು ಎಳೆದಿದ್ದಾನೆ. ಅದು ಆಕೆಯ ಕುತ್ತಿಗೆ ಬಿಗಿದು ಉಸಿರುಗಟ್ಟಿ ಬಿದ್ದಿದ್ದಾಳೆ. ಬಿದ್ದವಳನ್ನು ಕೂಡಲೇ ಅಲ್ಲಿಂದ ಎತ್ತಿಕೊಂಡು ಅಕೇಶಿಯಾ ತೋಪಿನ ಒಳಗೆ ಮಲಗಿಸಿದ ಕಟುಕ ಯುವಕ, ಹಾದಿಯಲ್ಲಿ ಬಿದ್ದಿದ್ದ ಕೊಡೆ, ನೀರಿನ ಬಾಟೆಲ್‌ನ್ನು ಎತ್ತಿಕೊಂಡು ಬಂದು ಆಕೆಯ ಪಕ್ಕದಲ್ಲಿಟ್ಟು ಅರೆಪ್ರಜ್ಞಾವಸ್ಥೆಯಲ್ಲಿದ್ದ ಆಕೆಯ ಮೇಲೆ ಲೌಂಗಿಕ ದೌರ್ಜನ್ಯ ಎಸಗಿದ್ದಾನೆ. (ಓದಿ ಕುಂದಾಪ್ರ ಡಾಟ್ ಕಾಂ) ಬಳಿಕ ಚುಡಿದಾರದ ಶಾಲಿನಿಂದಲೇ ಕತ್ತು ಹಿಸುಕಿ ಕೊಲೈಗೈದು ಮತ್ತೆ ಆಕೆಯ ಮೈಮೆಲೆ ಮಲಗಿದ್ದಾನೆ. ಆಕೆ ಮೃತಪಟ್ಟಿರುವುದು ದೃಡವಾದಾಗ ಅಲ್ಲಿಂದ ಕಾಲ್ಕಿತ್ತು ಆಕೆಯ ಮನೆಯ ಹಾದಿಯಲ್ಲಿರುವ ತೋಡಿನಲ್ಲಿ ಕೈಕಾಲು ತೊಳೆದುಕೊಂಡು ಅಡ್ಡದಾರಿಯಲ್ಲಿ ಯೋಜನಾನಗರದ ತನ್ನ ಮನೆಗೆ ತೆರಳಿದ್ದಾನೆ.

ಮನೆಗೆ ಬಂದ ಸುನಿಲ್ ತನ್ನ ಸ್ನೇಹಿತ ಮಂಜುನಾಥನಿಗೆ ಕರೆ ಮಾಡಿ ಆತನೊಂದಿಗೆ ಬೈಂದೂರಿನ ಸೆಲೂನಿಗೆ ಬಂದು ತನ್ನ ಹೇರ್‌ಸ್ಟೈಲ್ ಬದಲಿಸಿಕೊಂಡಿದ್ದಾನೆ. ಅಲ್ಲಿಂದ ತನ್ನ ಸಂಬಂಧಿ ಅಕ್ಷಯನಿರುವ ಗ್ಯಾರೇಜಿಗೆ ತೆರಳಿ ರಾತ್ರಿ 9 ಗಂಟೆಯ ತನಕ ಸ್ನೇಹಿತರೊಂದಿಗೆ ಹರಟೆ ಹೊಡೆದಿದ್ದಾನೆ. ಇತ್ತ ಮಗಳು ದಿನವೂ ಬರುವ ಸಮಯಕ್ಕೆ ಮನೆಗೆ ಬಾರದಿದ್ದಾಗ ಗಾಬರಿಗೊಂಡ ಪೋಷಕರು ಹುಡುಕಾಟ ನಡೆಸಿದಾಗ 6:15ರ ವೇಳೆಗೆ ಮಗಳ ಶವ ಅಕೇಶಿಯಾ ತೋಪಿನಲ್ಲಿ ಪತ್ತೆಯಾಗಿತ್ತು. (ಓದಿ ಕುಂದಾಪ್ರ ಡಾಟ್ ಕಾಂ) ಈ ವಿಚಾರ ಆತನಿಗೆ ತಿಳಿದರೂ ಕೂಡ ಆತ ಸಹಜವಾಗಿ ಇರುವವನಂತೆ ವರ್ತಿಸಿದ್ದ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು:
ರತ್ನಾ ಕೊಠಾರಿಯ ನಿಗೂಢ ಸಾವು ಸಂಭವಿಸಿ ಒಂದು ವರ್ಷದ ಮೊದಲೇ ಈ ಪ್ರಕರಣ ನಡೆದದ್ದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು. ಪ್ರಕರಣವನ್ನು ಭೇದಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಿಂದ ಹಿಡಿದು ಎಲ್ಲಾ ಅಧಿಕಾರಿಗಳು ಬೈಂದೂರಿನಲ್ಲಿ ಬೀಡುಬಿಟ್ಟಿದ್ದರು. ಮೂರು ಪೊಲೀಸ್ ತಂಡಗಳನ್ನು ರಚಿಸಿ ವಿಚಾರಣೆ ಕೈಗೆತ್ತಿಕೊಂಡಿದ್ದರು. ಭಟ್ಕಳ, ಗಂಗೊಳ್ಳಿ ಮತ್ತು ಬೈಂದೂರು ಠಾಣೆ ವ್ಯಾಪ್ತಿಯಲ್ಲಿರುವ 213 ಮಂದಿ ರೌಡಿಶೀಟರ್‌ಗಳು, ಒತ್ತಿನೆಣೆಯಲ್ಲಿ ರುವ ಬಿಹಾರ, ಒರಿಸ್ಸಾ, ಜಾರ್ಖಂಡ್‌ನ ಕಾರ್ಮಿಕರು, ಲಾರಿ ಚಾಲಕರು ಬಹಿರ್ದೆಸೆಗಾಗಿ ಇದೇ ಪ್ರದೇಶಗಳಿಗೆ ಬರುತ್ತಿರುವುದರಿಂದ ಆ 117 ಮಂದಿಯ ವಿಚಾರಣೆ ನಡೆಸಿ ಈ ಕೃತ್ಯ ನಡೆದ ಹೊತ್ತಿನಲ್ಲಿ ಎಲ್ಲಿದ್ದರು ಎಂದು ಖಚಿತಪಡಿಸಲಾಯಿತು. (ಓದಿ ಕುಂದಾಪ್ರ ಡಾಟ್ ಕಾಂ) ಹೇನಬೇರಿನಲ್ಲಿರುವ 38 ದೇವಾಡಿಗ ಕುಟುಂಬಗಳ ನಡುವೆ ಯಾವುದೇ ವಿವಾದಗಳಿದೆಯೇ ಎಂದು ಪರಿಶೀಲಿಸಿದ್ದರು. ಬಳಿಕ ಯೋಜನಾನಗರದ ಕಾಲೊನಿಯ 227 ಕುಟುಂಬಗಲ್ಲಿರುವ 16ರಿಂದ 25 ವರ್ಷದ ಒಳಗಿನ ಯುವಕರನ್ನು ಪ್ರತಿ ಮನೆಯಲ್ಲಿ ಹುಡುಕಿ ವಿಚಾರಿಸಿದ್ದರು.

ಪೊಲೀಸರಿಗೆ ಮೊದಲ ದಿನದಿಂದ ಸುನಿಲನ ಮೇಲೆ ಸಂಶಯವಿತ್ತು. ಆತನನ್ನು ಪೊಲೀಸರು ಠಾಣೆಗೆ ಬರಹೇಳಿದಾಗ ಅಕ್ಷಯನ ಬಳಿ ನಡೆದ ಘಟನೆಯನ್ನು ವಿವರಿಸಿದ್ದ ಸುನಿಲ್, ಘಟನೆ ನಡೆದ ದಿನ 4:30ವರೆಗೆ ನಾವಿಬ್ಬರು ಕುಂದಾಪುರದಲ್ಲಿಯೇ ಇದ್ದೆವು ಎಂದು ಹೇಳುವಂತೆ ಪುಸಲಾಯಿಸಿದ್ದ. ಅಕ್ಷಯ್ ಕೂಡ ಇದಕ್ಕೆ ಒಪ್ಪಿದ್ದ. ಆದರೆ ವಿಚಾರಣೆಯ ವೇಳೆ ಘಟನೆ ನಡೆದ ಸಮಯದಲ್ಲಿ ಸುನಿಲ್ ಬೈಂದೂರಿನಲ್ಲಿ ಅಕ್ಷಯ್ ಕುಂದಾಪುರದಲ್ಲಿ ಇದ್ದುದು ದೃಢಪಟ್ಟಿತು. (ಓದಿ ಕುಂದಾಪ್ರ ಡಾಟ್ ಕಾಂ) ಪ್ರತ್ಯೇಕವಾಗಿ ವಿಚಾರಿಸಿದಾಗ ಅವರ ಹೇಳಿಕೆಗಳು ತಾಳೆಯಾಗದಿರುವುದು ಕಂಡು ಬಂತು. ಬಳಿಕ ಪೊಲೀಸರ ಭಾಷೆಯಲ್ಲಿ ವಿಚಾರಿಸಿದಾಗ ಸತ್ಯ ಹೊರಬಂತು. ಎಲ್ಲವನ್ನು ತಾನೋಬ್ಬನೇ ಮಾಡಿರುವುದಾಗಿ ಸುನಿಲ್ ಒಪ್ಪಿಕೊಂಡ. ಆತನಿಗೆ ಸಹಕರಿಸಿದ್ದಕ್ಕಾಗಿ ಅಕ್ಷಯ್ ಕೂಡ ಆತನೊಂದಿಗೆ ಜೈಲು ಸೇರಿದ. ಒಟ್ಟಿನಲ್ಲಿ ತನ್ನ ಕಾಮತೃಷೆಗೆ ಅಮಾಯಕ ಹೆಣ್ಣೊಬ್ಬಳ ಜೀವ ತೆಗೆದ.


ಮಾತು ಊಳಿಸಿಕೊಂಡ ಎಸ್ಪಿ ಅಣ್ಣಾಮಲೈ 
ರತ್ನಾ ಕೊಠಾರಿ ಸಾವಿನ ಘಟನೆಯನ್ನು ಮರೆಯುವ ಮುನ್ನವೇ ಇನ್ನೊಬ್ಬಳು ವಿದ್ಯಾರ್ಥಿನಿ ಬಲಿಯಾದುದು ಬೈಂದೂರಿನ ಜನತೆಯಲ್ಲಿ ದಿಗಿಲು ಹುಟ್ಟಿಸಿತ್ತು. ಪೊಲೀಸ್ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಪ್ರಕರಣವನ್ನು ಭೇದಿಸುವಂತೆ ಎಲ್ಲೆಡೆ ತೀವ್ರ ಸ್ವರೂಪದ ಪ್ರತಿಭಟನೆಗಳು ನಡೆದವು. (ಓದಿ ಕುಂದಾಪ್ರ ಡಾಟ್ ಕಾಂ) ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಲಾಗಿತ್ತು. ಆದರೆ ಘಟನೆ ನಡೆದಾಗಿನಿಂದಲೂ ಬೈಂದೂರಿನಲ್ಲಿಯೇ ಮೊಕ್ಕಾಂ ಹೂಡಿದ್ದ ಎಸ್ಪಿ ಅಣ್ಣಾಮಲೈ ಪ್ರಕರಣವನ್ನು ಭೇದಿಸಿಯೇ ಸಿದ್ದ ಎಂದು ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದ್ದರು. (ಓದಿ ಕುಂದಾಪ್ರ ಡಾಟ್ ಕಾಂ) ಮೂರು ದಿನಗಳ ಕಾಲವಕಾಶವನ್ನೂ ಕೇಳಿದ್ದರು. ವಿವಿಧ ದಿಕ್ಕಿನಲ್ಲಿ ಪ್ರಕರಣದ ತನಿಕೆಯನ್ನು ನಡೆಸಿದ ಅಣ್ಣಾಮಲೈ ಅವರ ತಂಡ ಅರೋಪಿಯನ್ನು ಕೂಡಲೇ ಬಂಧಿಸಿದ್ದರು. ಕೊನೆಗೂ ಕೊಟ್ಟ ಮಾತನ್ನು ಉಳಿಸಿಕೊಂಡು ತನ್ನ ಕಾರ್ಯದಕ್ಷತೆಯನ್ನು ತೋರಿಸಿಕೊಟ್ಟಿದ್ದರು. ಇವರಿಗೆ ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ವೃತ್ತ ನಿರೀಕ್ಷಕರಾದ ಸುದರ್ಶನ್, ದಿವಾಕರ್, ಡಿಸಿಬಿಐ ಜೈಶಂಕರ್ ಉಪನಿರೀಕ್ಷಕರುಗಳಾದ ಸಂತೋಷ್ ಕಾಯ್ಕಿಣಿ, ಸುಬ್ಬಣ್ಣ ಸೇರಿದಂತೆ ದೊಡ್ಡ ಪೊಲೀಸ್ ಪಡೆಯೇ ಸಾಥ್ ನೀಡಿತ್ತು.

ಸಾವಿನ ಮನೆಯಲ್ಲಿ ರಾಜಕೀಯ
ಅಕ್ಷತಾ ಪ್ರಕರಣದಲ್ಲಿ ರಾಜಕೀಯ ಕಾರಣದಿಂದ ಜನರಲ್ಲಿ ತಪ್ಪು ಮಾಹಿತಿ ಹರಡುವಂತಾಯಿತು. ಕೆಲ ಸಂಘಟನೆಗಳು ವಿದ್ಯಾರ್ಥಿಗಳನ್ನು ದಾಳವನ್ನಾಗಿಸಿಕೊಂಡು ಹೊಲಸು ರಾಜಕೀಯದಲ್ಲಿ ತೊಡಗಿತು. ಮೊದಲ ದಿನ ಪ್ರತಿಭಟನೆ ಹಾಗೂ ರಾಷ್ಟ್ರೀಯ ಹೆದ್ದಾರಿ ತಡೆದು ವಿದ್ಯಾರ್ಥಿಗಳು ತಮ್ಮ ಆಕ್ರೋಶ ಹೊರಗೆಡವಿದರು. ಇವರ ನಡುವೆ ಕೆಲವು ರಾಜಕೀಯ ನಾಯಕರು ತಮ್ಮ ಬೇಳೆ ಬೆಯಿಸಿಕೊಳ್ಳಲು ಬಂದರಾದರೂ ವಿದ್ಯಾರ್ಥಿಗಳು ಇದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಇಲ್ಲಿ ರಾಜಕೀಯ ಮಾಡಲು ಬರಬೇಡಿ ಎಂದು ಅವರನ್ನು ಓಡಿಸಿದರು. ಪರಿಸ್ಥಿತಿಯ ಗಂಭೀರತೆ ಅರಿತು ಸ್ಥಳಕ್ಕಾಗಮಿಸಿದ ಎಸ್ಪಿ ಮೂರು ದಿನ ಕಾಲಾವಕಾಶ ಕೋರಿ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿದರು. ಆದರೆ ಅಲ್ಲಿ ನೆರೆದಿದ್ದ ಗುಂಪು ಅವರ ಸ್ಥಾನಕ್ಕೂ ಒಂದು ಬೆಲೆ ಕೊಡದೇ ದೂಡಾಡಿಕೊಂಡು ಗಲಭೆ ಎಬ್ಬಿಸಲು ಹೊರಟಿತ್ತು.

ಅಂದಿಗೆ ಪ್ರತಿಭಟನೆ ತಣ್ಣಗಾಗಿತ್ತು. ಪ್ರತಿಭಟನೆಗೆ ಬೆಂಬಲಿಸುವುದೂ ಸಮಂಜಸವಾದುದು. ಆದರೆ ಸಮಯಾವಕಾಶ ಕೋರಿದ ಮೇಲೂ ಮರುದಿನ ಮತ್ತೆ ವಿದ್ಯಾರ್ಥಿಗಳು ಪ್ರತಿಭಟನೆಗಿಳಿದರು. ಗಾಂಧಿಮೈದಾನದಲ್ಲಿ ಕುಳಿತು ಪ್ರತಿಭಟಿಸುತ್ತಿದ್ದವರನ್ನು ಮತ್ತೆ ತಹಶೀಲ್ದಾರರ ಕಛೇರಿಗೆ ಅಲೆಸಿ, ಅಲ್ಲಿಂದ ಪೊಲೀಸ್ ಠಾಣೆಯನ್ನು ಮುತ್ತಿಗೆ ಹಾಕುವಂತೆ ಮಾಡಿದ್ದು ಹೊಸಲು ರಾಜಕೀಯವೇ. ಆದರೆ ಇಲ್ಲಿ ರಾಜಕೀಯ ಮುಖಂಡರುಗಳು ಬರುವ ಬದಲಿಗೆ ತಮ್ಮ ಚೇಳಾಗಳನ್ನು ಬಿಟ್ಟು ಆಟ ನೋಡಿದರು. ಪ್ರಕರಣದ ತನಿಖೆ ನಡೆಸಬೇಕಾದ ಪೊಲೀಸರಿಗೆ ಪ್ರತಿಭಟನಾಕಾರರನ್ನು ಕಾಯುವುದೇ ಕೆಲಸವಾಯಿತು. ಒಂದು ದಿನದೊಳಗೆ ಮರಣೋತ್ತರ ವರದಿ ನೋಡಬೇಕು, ಶಂಕಿತರ ಹೆಸರುಗಳನ್ನು ಬಹಿರಂಗಗೊಳಿಸಬೇಕು ಎಂದು ವಿನಾಕಾರಣ ಪಟ್ಟು ಹಿಡಿದು ಎಸ್ಪಿಯನ್ನು ಕರೆಸಿಕೊಂಡರು. ಕಾನೂನಿನ ಕನಿಷ್ಠ ಜ್ಞಾನವೂ ಇಲ್ಲದ ಚೇಳಾಗಳು ಎಸ್ಪಿ ದಬಾಯಿಸಿದ ಮೇಲೆ ಬಾಯಿ ಮುಚ್ಚಿಕೊಂಡರು.

ಈ ಎರಡೂ ದಿನದ ಪ್ರತಿಭಟನೆಯನ್ನು ಊರವರೂ ವಿರೋಧಿಸಿರಲಿಲ್ಲ. ಕಾಲೇಜಿನ ಉಪನ್ಯಾಸಕರೂ ತಡೆದಿರಲಿಲ್ಲ. ಆದರೆ ಆರೋಪಿ ಯಾರು ಎಂದು ಬಹಿರಂಗಗೊಂಡು ಆತನನ್ನು ಬಂಧಿಸಿದ ಮೇಲೂ ಪ್ರತಿಭಟನೆಗಿಳಿದದ್ದು ಮಾತ್ರ ಉದ್ದೇಶಪೂರ್ವಕವಾಗಿ ಸಮಾಜದ ಸ್ವಾಸ್ಥ್ಯ ಕೆಡಿಸಲು ನಡೆಸಿದ್ದು ಎಂಬುದು ತಿಳಿದುಹೋಗಿತ್ತು. ಆರೋಪಿ ಸಿಕ್ಕ ಮೇಲು ಪ್ರತಿಭಟನೆ ನಡೆಸುವುದು ಸರಿಯಲ್ಲ ಎಂದಿದ್ದನ್ನೂ ಕಿವಿಗೊಡದೆ ವಿದ್ಯಾರ್ಥಿಗಳನ್ನು ಮುಂದಿಟ್ಟುಕೊಂಡು ತಮ್ಮ ಕೀಳು ಬುದ್ಧಿ ತೋರಿಸಿದರು. ತೀರಾ ಹಾಸ್ಯಾಸ್ಪದವೆನಿಸಿದ್ದು ಆರೋಪಿಯನ್ನು ಬಂಧಿಸಿ ಒಂದು ದಿನವಾದ ಬಳಿಕ ಸಮಾಜ ವಿವಿಧ ಸಂಘಟನೆಗಳನ್ನು ಒಗ್ಗೂಡಿಸಿಕೊಂಡು ಪ್ರತಿಭಟನೆಗಿಳಿದ್ದು. ಈ ಎಲ್ಲಾ ವಿದ್ಯಾಮಾನಗಳು ಪ್ರಕರಣವು ಮೂರು ದಿನಗಳಲ್ಲಿ ಭೇದಿಸಿದ್ದೇ ತಪ್ಪಾಯಿತು. ಒಂದಿಷ್ಟು ದಿನ ಆಡಳಿತ, ಪೊಲೀಸರ ವಿರುದ್ಧ ಘೋಷಣೆ ಕೂಗುತ್ತಾ ಕಾಲಕಳೆಯುತ್ತಿದ್ದೇವು ಎನ್ನುವಂತಿತ್ತು.

ಅಕ್ಷತಾ ಕುಟುಂಬಕ್ಕೆ ಸಹಾಯ ಮಾಡಿದವರ ತೇಜೋವಧೆ!
 ಅಕ್ಷತಾಳಂತಹ ಪ್ರತಿಭಾವಂತ ಹೆಣ್ಣು ಮಗಳನ್ನು ಕಳೆದುಕೊಂಡವರಿಗೆ ಬೇಕಿರುವುದು ಸಾಂತ್ವಾನದ ಮಾತುಗಳಾಗಿತ್ತು. ಪ್ರಕರಣ ನಡೆದಾಗಿನಿಂದಲೂ ಆಕೆಯ ಕುಟಂಬಕ್ಕೆ ನೈತಿಕ ಸ್ಥೈರ್ಯ ತುಂಬುತ್ತಾ ಬಂದಿದ್ದ ಕೆಲ ನಾಯಕರುಗಳು ಸರಕಾರದಿಂದ ಆಕೆಯ ಮನೆಯವರಿಗೆ ದೊರೆಯಬಹುದಾದ ಎಲ್ಲಾ ತರಹದ ನೆರವನ್ನು ದೊರಕಿಸಿಕೊಡಲು ಮುಂದಾಗಿದ್ದರು. ಇಲ್ಲಿನ ಪರಿಸ್ಥಿತಿ ಅರ್ಥವಾಗಬೇಕೆಂದು ರಾಜ್ಯದ ಶಿಕ್ಷಣ ಸಚಿವರನ್ನು, ಮಾಜಿ ಕೇಂದ್ರ ಮಂತ್ರಿಯನ್ನು ಆಕೆಯ ಮನೆಗೆ ಬರುವಂತೆ ಮಾಡಿದರು. ಪರಿಣಾಮವಾಗಿ ಅಕ್ಷತಾ ಕುಟುಂಬಕ್ಕೆ ಆರ್ಥಿಕ ಸಹಾಯ, ಆಕೆಯ ಸಹೋದರಿಯರ ಶಿಕ್ಷಣಕ್ಕೆ ನೆರವು, ಊರಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸಹಕಾರ ದೊರೆಯಿತು. ನೊಂದ ಈ ಕುಟುಂಬಕ್ಕೆ ನ್ಯಾಯ ಹಾಗೂ ನೆರವು ದೊರಕಿಸಿಕೊಡುವಲ್ಲಿ ವಿಚಾರದಲ್ಲಿ ರಾಜಕೀಯ ಮಾಡಿಲ್ಲ ಎಂಬುದನ್ನು ಪ್ರಕರಣದ ಸ್ಪಷ್ಟ ಅರಿವಿರುವ ಎಲ್ಲರಿಗೂ ತಿಳಿದಿದೆ.

ಆದರೆ ಜನರಿಗೆ ಮಾತ್ರ ಇವರುಗಳ ಬಗ್ಗೆ ತಪ್ಪು ಮಾಹಿತಿ ಹರಡಿದ ಕಿಡಿಗೇಡಿಗಳು ಫೇಸ್‌ಬುಕ್, ವಾಟ್ಸ್‌ಪ್‌ಗಳನ್ನು ತಮ್ಮ ಅಪಪ್ರಚಾರಗಳಿಗೆ ಬಳಸಿಕೊಂಡರು. ಸಾವಿನ ಮನೆಗೆ ಬಂದು ಶಿಕ್ಷಣ ಸಚಿವರನ್ನು ಕೆಣಕಿ ಅದನ್ನು ಚಿತ್ರೀಕರಿಸಿ ಎಲ್ಲೆಡೆ ಹರಡಿದರು. ಆರೋಪಿಯ ಬಂಧನವಾದಾಗಲೂ ಅದರಲ್ಲಿ ಶಾಸಕರ ಕೈವಾಡವಿದೆ ಅವರ ಕಡೆಯವರನ್ನು ರಕ್ಷಸುತ್ತಿದ್ದಾರೆಂದು ಗಾಸಿಪ್ ಹುಟ್ಟಿಸಿದರು. ವಿನಾಕಾರಣ ಕೆಲವು ನಾಯಕರುಗಳನ್ನು ಪ್ರಕರಣದಲ್ಲಿ ಎಳೆತಂದರು. ಯಾವುದೋ ಪ್ರಕರಣಗಳೊಂದಿಗೆ ಈ ಪ್ರಕರಣವನ್ನೂ ಸಿಲುಕಿಸಿ ಜನರನ್ನು ಸುಲಭವಾಗಿ ನಂಬಿಸಿದರು.

ಪಕ್ಷ, ರಾಜಕೀಯದ ಹೊರತಾಗಿ ಹೀಗೆ ಸಂತ್ರಸ್ಥರ ರಕ್ಷಣೆಗೆ ನಿಂತವರನ್ನು ವಿನಾಕಾರಣ ತೇಜೋವಧೆ ಮಾಡುತ್ತಾ ಹೋದರೆ ಮುಂದೆ ಬಡಕುಟುಂಬಕ್ಕೆ ಸಾಂತ್ವಾನ ಹೇಳಲು ಯಾರು ಬಂದಾರು? ಬಾಯಿ ಹರಿದು ಮಾತನಾಡುವುದರಿಂದ ಬಡ ಕುಂಟುಂಬಕ್ಕೆ ನ್ಯಾಯ ದೊರಕುವುದೆ?

ಬೆಳಕು ಕಂಡಿತೆ ಬೈಂದೂರಿನ ಕುಗ್ರಾಮ?
ಬೈಂದೂರಿನಿಂದ ಹತ್ತಿರವೇ ಇರುವ ಕುಗ್ರಾಮವಾದ ಹೇನಬೇರು. ಕಳೆದ ಭಾರಿ ದನಗಳ ಸರಣಿ ಸಾವಿನಿಂದಾಗಿ ಸುದ್ದಿಯಾಗಿತ್ತು. ಅಂದು ಅಲ್ಲಿಗೆ ದೌಡಾಯಿಸಿದ್ದ ಮಂತ್ರಿ ಮಹೋದಯರುಗಳು ಕಣ್ಣುಮುಚ್ಚಿಕೊಂಡೇ ಹಿಂತಿರುಗಿದ್ದರು. (ಓದಿ ಕುಂದಾಪ್ರ ಡಾಟ್ ಕಾಂ) ಸರಿಯಾದ ರಸ್ತೆ, ವಿದ್ಯುತ್ ದೀಪ, ಬಸ್ ವ್ಯವಸ್ಥೆ ಇಲ್ಲದೇ ಇಲ್ಲಿನ ಜನ ರೋಸಿಹೋಗಿದ್ದರು. ಅಕ್ಷತಾ ಪ್ರಕರಣ ನಡೆದ ಬಳಿಕ ಇಲ್ಲಿನ ಮಕ್ಕಳು ಕಾಲುದಾರಿಯಲ್ಲಿ ಶಾಲೆಗೆ ಹೋಗಲು ಹೆದರುತ್ತಿದ್ದರು. (ಓದಿ ಕುಂದಾಪ್ರ ಡಾಟ್ ಕಾಂ) ಇದೀಗ ಇಲ್ಲಿನ ರಸ್ತೆಗಳನ್ನು ಅಭಿವೃದ್ಧಿಪಡಿಸಲು, ಬಸ್ ವ್ಯವಸ್ಥೆ, ಪೊಲೀಸ್ ಗಸ್ತು, ಅಕೇಶಿಯಾ ತೋಪು ತೆರವು ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಜನಪ್ರತಿನಿಧಿಗಳು ಭರವಸೆ ನೀಡಿದ್ದಾರೆ. ಅವುಗಳಲ್ಲಿ ಕೆಲವೊಂದು ಈಡೇರುತ್ತಿದೆ ಕೂಡ. ಆದರೆ ಇವೆಲ್ಲವೂ ಅಂದೇ ಆಗಿದ್ದರೇ ಅಕ್ಷತಾಳಂತಹ ಪ್ರತಿಭಾವಂತ ಹೆಣ್ಣಮಗಳು ಜೀವತೆರಬೇಕಾದ ಸಂದರ್ಭ ಬರುತ್ತಿರಲಿಲ್ಲ. (ಓದಿ ಕುಂದಾಪ್ರ ಡಾಟ್ ಕಾಂ) ಇನ್ನಾದರೂ ಅಕ್ಷತಾಳಂತೆ ನೂರಾರು ಕನಸುಗಳನ್ನು ಹೊತ್ತು, ಶಿಕ್ಷಣ-ಜೀವನದ ನಡೆವೆ ಅಸುರಕ್ಷೆಯಿಂದಯೇ ನಡೆಯುತ್ತಿರುವ ನೂರಾರು ಹೆಣ್ಣಮಗಳನ್ನು ರಕ್ಷಿಸುವ ಕೆಲಸವಾಗಲಿ.