ಅಬ್ಬರಿಸಿದ ಮಳೆಗೆ ತತ್ತರಗೊಂಡ ಕುಂದಾಪುರ

ನಗರದಲ್ಲಿ ರಸ್ತೆಯಲ್ಲಿಯೇ ನಿಂತ ನೀರು, ಕೆಲವೆಡೆ ಮನೆಗಳು ಜಲಾವೃತ

ಕುಂದಾಪುರ: ಮಳೆಯಿಲ್ಲ ಎಂದು ಕಂಗಾಲಾಗಿದ್ದ ಕುಂದಾಪುರ ತಾಲೂಕಿನ ಜನತೆ ಮಂಗಳವಾರ ರಾತ್ರಿಯಿಂದ ಒಂದೇ ಸವನೇ ಸುರಿದ ಧಾರಾಕಾರ ಮಳೆ ಸಂತಸವನ್ನುಂಟುಮಾಡಿತ್ತಾದರೂ ಹಲವೆಡೆ ಮನೆ, ರಸ್ತೆ, ಕೃಷಿ ಭೂಮಿ, ತಗ್ಗು ಪ್ರದೇಶಗಳು ಜಲಾವೃತಗೊಂಡು ಆತಂಕ ಮೂಡಿಸಿತು.

ಕುಂದಾಪುರ ನಗರ ಸೇರಿದಂತೆ ತಾಲೂಕಿನ ಗಂಗೊಳ್ಳಿ, ನಾವುಂದ, ಮರವಂತೆ, ತೆಕ್ಕಟ್ಟೆ, ಕೊಟೇಶ್ವರ, ಬಸ್ರೂರು, ಅಮಾಸೆಬೈಲು, ಸಿದ್ಧಾಪುರ, ಹಳ್ಳಿಹೊಳೆ,  ಕೊಲ್ಲೂರು, ಜಡ್ಕಲ್, ಬೆಳ್ವೆ, ಗೊಳಿಯಂಗಡಿ ಮುಂತಾದೆಡೆ ಭಾರಿ ಮಳೆ ಸುರಿದಿದೆ. ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದರೇ, ಕೆಲವೆಡೆ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೇ ಕೃತಕ ನೆರೆ ಸೃಷ್ಟಿಯಾಯಿತು.

ಮುಖ್ಯರಸ್ತೆ ಸೇರಿದಂತೆ ಹಲವು ರಸ್ತೆಗಳ ಮೇಲೆ ಭಾರಿ ಪ್ರಮಾಣದಲ್ಲಿ ನೀರು ನಿಂತುಕೊಂಡ ದೃಶ್ಯ ಸಾಮಾನ್ಯವಾಗಿತ್ತು. ಸ್ಥಳೀಯ ಪುರಸಭೆ ಹಾಗೂ ಗ್ರಾಮ ಪಂಚಾಯತ್ ಚರಂಡಿ ಶುಚಿಗೊಳಿಸದ ಹಾಗೂ ಚರಂಡಿ ಒತ್ತುವರಿಯನ್ನು ತೆರವುಗೊಳಿಸದ ಹಿನ್ನಲೆಯಲ್ಲಿ ಮಳೆ ನೀರು ರಸ್ತೆ ಮೇಲೆ ನಿಲ್ಲುವಂತಾಗಿತ್ತು. ಇದರಿದಾಗಿ ವಾಹನ ಸಂಚಾರಕ್ಕೆ ತೀವ್ರ ತೊಡಕುಂಟಾಗಿದೆ. 

ನಾವುಂದದ ಸಾಲ್ಬುಡದಲ್ಲಿ ಸೌಪರ್ಣಿಕ ನದಿಗೆ ಸೇರುವ ಕಿರುಹೊಳೆಯಲ್ಲಿ ನೀರು ತುಂಬಿ ಕೃಷಿ ಗದ್ದೆ ಹಾಗೂ ಮನೆಯ ಅಂಗಳ ಮುಳುಗಿ ಹೋಗಿದ್ದವು. ಗಂಗೊಳ್ಳಿಯ ಅರೆಕಲ್ಲು ಸಮೀಪದ ನಿವಾಸಿ ಶಾಂತಾರಾಮ ಶೆಣೈ ಎಂಬುವರ ಹೊಟೇಲ್ ಹಾಗೂ ಮನೆಗೆ ಮಳೆ ನೀರುನುಗ್ಗಿ ಅಪಾರ ಹಾನಿ ಉಂಟಾಗಿದೆ ಅಲ್ಲದೆ ಸುತ್ತಮುತ್ತಲಿನ ಅಂಗಡಿ ಹಾಗೂ ಮನೆಗಳಿಗೆ ಕೂಡ ನೀರು ನುಗ್ಗಿದೆ. ಕುಂದಾಪುರದ ಚಿಕ್ಕನ್ ಸಾಲು ರಸ್ತೆಯ ಸುಲೋಚನಾ ನಾರಾಯಣ ಎಂಬುವವರ ಮನೆಗೆ ನೀರು ನುಗ್ಗಿ ಭಾರಿ ನಷ್ಟ ಉಂಟಾಗಿದೆ.  ನೆಲ್ಲಿಬೆಟ್ಟು ಎಂಬಲ್ಲಿಯ 2-3 ಮನೆಗಳಿಗೂ ಚರಂಡಿಯ ನೀರು ನುಗ್ಗಿದ ಬಗ್ಗೆ ವರದಿಯಾಗಿದೆ.

ಕೋಟೇಶ್ವರ ದೇವಸ್ಥಾನದ ಬಳಿಯ ಚರಂಡಿ ಬ್ಲಾಕ್ ಆದ ಕಾರಣ ದೇವಸ್ಥಾನ ಹಾಗೂ ರಸ್ತೆಯ ಬಳಿ ನೀರು ತುಂಬಿಕೊಂಡಿತ್ತು. ಖಾಸಗಿ ವ್ಯಕ್ತಿಯೊಬ್ಬರ ಬ್ಲಾಕ್ ಮಾಡಿದ ಜಾಗದಲ್ಲಿನ ಚರಂಡಿಯಲ್ಲಿ ನೀರು ಹರಿಯಲು ಮಾಡುವಂತೆ ಸ್ಥಳಕ್ಕೆ ಬಂದ ಕುಂದಾಪುರದ ತಹಶೀಲ್ದಾರರು ಹಾಗೂ ಖಾಸಗಿ ಜಾಗದ ಮಾಲಿಕರ ನಡುವೆ ಮಾತಿನ ಚಕಮಕಿ ನಡೆದು ಮಾಲಕರು ಅಲ್ಲಿಯೇ ಮಲಗಿ ಪ್ರತಿಭಟಿಸಿದ ಘಟನೆ ನಡೆಯಿತು. ಕೊನೆಗೂ ತಹಶೀಲ್ದಾರರು ಪೊಲೀಸರ ಮಧ್ಯಸ್ಥಿಕೆಯಲ್ಲಿ ಅಲ್ಲಿನ ಚರಂಡಿಗೆ ಹಾಕಿದ್ದ ಕಟ್ಟನ್ನು ತೆರವುಗೊಳಿಸಿದರು.

ಹೊಸಾಡು ಗ್ರಾಮದ ಪುರಾತನ ಕಡುಕೆರೆ ತುಂಬಿ ಹರಿದ ಪರಿಣಾಮ ಕೆರೆಯ ದಂಡೆ ಕುಸಿದು ಪಕ್ಕದ ನೂರಾರು ಎಕರೆ ಕೃಷಿಭೂಮಿಗೆ ನೀರು ನುಗ್ಗಿ ಹಾನಿ ಸಂಭವಿಸಿದೆ. ಕೆರೆಯ ಪಶ್ಚಿಮಕ್ಕೆ ಹಣಿನಮಕ್ಕಿಯಿಂದ ಗಾಣದಮಕ್ಕಿ, ಹೊಕ್ಕೊಳಿ, ದೇವಳಿ ಮೊದಲಾದೆಡೆ 300 ಎಕರೆಗೂ ಅಧಿಕ ಕೃಷಿಭೂಮಿ ನೀರಿನಲ್ಲಿ ಮುಳುಗಿದೆ.

ಹಂಗ್ಳೂರು ಗ್ರಾ.ಪಂ. ವ್ಯಾಪ್ತಿಯ ಹುಣ್ಸೆಕಟ್ಟೆ ಸೇತುವೆ ಬಳಿ ನೀರು ಹರಿಯುವ ಕೊಡ್ಲಾಗಾರ ಹಾಗೂ ಚೊಕ್ಕಾಡಿ ಸಾಲ್‌ ಮುಚ್ಚಿದ್ದು ವಿಪರೀತ ಮಳೆಯಿಂದ ನೀರು ಸರಾಗವಾಗಿ ಹರಿಯದೇ ಕೃತಕ ನೆರೆ ಉಂಟಾಯಿತು.

ಗಂಗೊಳ್ಳಿ ಸಮೀಪದ ಕಂಚುಗೋಡು, ಹೊಸಾಡು ಮೊದಲಾದ ಕಡೆಗಳಲ್ಲಿ ಕೂಡ ಮಳೆಯಿಂದ ಭಾರಿ ಹಾನಿ ಸಂಭವಿಸಿದೆ. ಮಳೆ ನೀರು ಮನೆಗಳಿಗೆ ನುಗ್ಗಿದ ಹಾಗೂ ತಗ್ಗುಪ್ರದೇಶಗಳು ಜಲಾವೃತಗೊಂಡಿರುವುದು ವರದಿಯಾಗಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ತಾಲೂಕಿನ ಕರಾವಳಿ ಭಾಗದ ಕೆಲವು ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು.

ಕೆಲವೆಡೆ ರಸ್ತೆಯಲ್ಲಿ ನೀರು ತುಂಬಿದ್ದರಿಂದ ಜೆಸಿಬಿಯ ಮೂಲಕ ಚರಂಡಿಯನ್ನು ಸರಿಪಡಿಸುವ ಕೆಲಸ ಮಳೆಯಲ್ಲಿಯೇ ನಡೆಯಿತು. ಬುಧವಾರ 10ಗಂಟೆಯ ನಂತರ ಮಳೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಇಳಿಯಾದರೂ ಸಹಿತ ಸಂಜೆಯ ತನಕ ಮಧ್ಯ ಮಧ್ಯ ಹನಿ ಮಳೆ ಸುರಿಯುತ್ತಲೇ ಇತ್ತು.
ಕುಂದಾಪ್ರ ಡಾಟ್ ಕಾಂ- editor@kundapra.com