ಬೈಂದೂರು-ಕಲ್ಲಣ್ಕಿ ಜನರಿಗಿಲ್ಲ ಮರದ ಸೇತುವೆಯಿಂದ ಮುಕ್ತಿ

ಬೈಂದೂರು: ಮಳೆಗಾಲವೆಂದಾಕ್ಷಣ ಅಲ್ಲಿನ ಜನರಲ್ಲೊಂದು ಸಣ್ಣ ಆತಂಕ ಶುರುವಾಗುತ್ತದೆ. ತಮ್ಮೂರಿಗೊಂದು ಸೇತುವೆಯಾಗಬೇಕೆಂಬ ಬೇಡಿಕೆ ಇಟ್ಟು ವರ್ಷಗಳೇ ಕಳೆದರೂ ಇನ್ನೂ ಅದು ಕನಸಾಗಿಯೇ ಉಳಿದು ಅನ್ಯ ಮಾರ್ಗವಿಲ್ಲದೇ ಗಂಗಾನಾಡು ಹೊಳೆಯಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿಕೊಂಡಿರುವ ಮರದ ಹಲಗೆಯ ಸೇತುವೆಯ ಮೂಲಕವೇ ದಾಟುವ ಅನಿವಾರ್ಯತೆ ಅವರದ್ದು. ಸರಕಾರ ಗ್ರಾಮೀಣ ಭಾಗದ ಅಭಿವೃದ್ಧಿಗಾಗಿ ಹತ್ತಾರು ಯೋಜನೆಗಳನ್ನು ಜಾರಿಗೆ ತಂದರೂ ಸಹಿತ ಸಂಪರ್ಕ ಸೇತುವೆಗಾಗಿ ಹೋರಾಟ ನಡೆಸುತ್ತಿಸುತ್ತಿರುವ ಕಲ್ಯಾಣ್ಕಿ - ಕುಂಜಳ್ಳಿನ ಜನತೆಗೆ ಮಾತ್ರ ಈ ತಾತ್ಕಲಿಕ ಕಾಲುಸಂಕದಿಂದ ಇನ್ನೂ ಮುಕ್ತಿ ದೊರೆಯತಿಲ್ಲ.

    ಬೈಂದೂರು ಹಾಗೂ ಯಡ್ತರೆ ಗ್ರಾಮ ಪಂಚಾಯತ್ ಗಡಿಭಾಗದಲ್ಲಿರುವ  ಕಲ್ಯಾಣ್ಕಿ, ಕುಂಜಳ್ಳಿ, ಮದ್ದೋಡಿ, ತೋಕ್ತಿ ಸೇರಿದಂತೆ ಮೊದಲಾದ ಕುಗ್ರಾಮಗಳು ಬೈಂದೂರು ಪೇಟೆಯಿಂದ ಸುಮಾರು 13 ಕಿ.ಮೀ. ದೂರದಲ್ಲಿದೆ. ಇಲ್ಲಿನ ಸಾರ್ವಜನಿಕರು, ವಿದ್ಯಾರ್ಥಿಗಳು ಪ್ರತಿದಿನ ಬೈಂದೂರಿಗೆ ಬರಬೇಕಾದರೆ ಗಂಗನಾಡು ಹೊಳೆಯನ್ನು ದಾಟಿ ಬರಬೇಕಾಗಿದೆ. ಆದರೆ ಮಳೆಗಾಲದಲ್ಲಿ ಈ ಹೊಳೆಯಲ್ಲಿ ನೀರಿನ ಸೆಳೆತ ಹೆಚ್ಚಾಗಿದ್ದು ಹೊಳೆ ದಾಟಲು ಇಲ್ಲಿನ ಸ್ಥಳೀಯರು ಮರದ ದಿಮ್ಮಿಗಳನ್ನು ಬಳಸಿ ತಾತ್ಕಲಿಕ ಕಾಲು ಸಂಕ ನಿರ್ಮಿಸಿಕೊಂಡಿದ್ದಾರೆ. ಆದರೆ ಕೆಲವೊಮ್ಮೆ ಮಳೆ ಹೆಚ್ಚಾದಾಗ ಈ ಮರದ ಕಾಲುಸಂಕ ಕೊಚ್ಚಿ ಹೋಗಿ ಜನತೆ ದಿಗ್ಬಂಧನಕ್ಕೀಡಾಗುತ್ತಾರೆ. 

    ಈ ಭಾಗದಲ್ಲಿ ಸುಮಾರು 400 ಪರಿಶಿಷ್ಠ ಜಾತಿ ಸೇರಿದಂತೆ ನಾನಾ ಸಮುದಾಯಕ್ಕೆ ಸೇರಿದ ಮನೆಗಳಿದ್ದು, ಸುಮಾರು ಒಂದು ಸಾವಿರಕ್ಕೂ ಅಧಿಕ ಜನಸಂಖ್ಯೆಯಿದೆ. ಇಲ್ಲಿ ಪ್ರತಿದಿನ ನೂರಾರು ವಿದ್ಯಾರ್ಥಿಗಳು ಈ ಕಾಲುಸಂಕದ ಮೂಲಕವೇ ಶಾಲಾ ಕಾಲೇಜಿಗೆ ಹೋಗಬೇಕಾಗಿದ್ದು, ಮಳೆ ಅಧಿಕವಾದಾಗ ಇವರು ಶಾಲಾ ಕಾಲೇಜಿಗೆ ಹೋಗಬೇಕಾದರೆ ಈ ಮರದ ಕಾಲುಸಂಕದಲ್ಲಿ ಭಯದ ನೆರಳಿನಲ್ಲಿ ಸಂಚಾರ ಮಾಡಬೇಕಾಗಿದೆ. ಇಲ್ಲಿ ಇತಿಹಾಸ ಪ್ರಸಿದ್ದ ಗಂಗನಾಡಿನ ವನಕೊಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕುಂಜಳ್ಳಿ ದುರ್ಗಾಪರಮೇಶ್ವರಿ ದೇವಸ್ಥಾನವಿದ್ದು ಈ ದೇವಾಲಯಕ್ಕೆ ಪ್ರತಿ ವಾರ ನೂರಾರು ಭಕ್ತರು ಕಾಲ್ನಡಿಗೆಯಲ್ಲಿಯೇ ಸಂಚರಿಸಬೇಕಾಗಿದೆ.  ಮಳೆಗಾಲದಲ್ಲಿ ಪ್ರತಿದಿನವೂ ಇಲ್ಲಿನ ಜನಜೀವನ ಮತ್ತಷ್ಟು ಕಷ್ಟ.

    ಕಳೆದ ಭಾರಿ ಈ ಪ್ರದೇಶಕಕ್ಕೆ ವಿದ್ಯುತ್ ಸೌಲಭ್ಯ ದೊರೆತಿದ್ದು, ದುರ್ಗಮ ಪ್ರದೇಶವಾದ ಕಾರಣ ಇಲಾಖೆಯ ನಿರ್ವಹಣೆಯ ಕೊರತೆಯಿಂದ ಸಮರ್ಪಕ ಸೇವೆ ದೊರೆಯುತ್ತಿಲ್ಲ ಎನ್ನುತ್ತಾರೆ ಇಲ್ಲಿನ ಸ್ಥಳೀಯರು. ಬೈಂದೂರಿನಿಂದ ಮದ್ದೋಡಿಯ ತನಕ ಡಾಂಬರೀಕರಗೊಂಡ ರಸ್ತೆಯಿದ್ದು, ಕಲ್ಯಾಣ್ಕಿ, ಕುಂಜಳ್ಳಿ, ತೋಕ್ತಿ ಮೊದಲಾದ ಊರುಗಳಿಗೆ ರಸ್ತೆಯು ಇಲ್ಲ, ಸೇತುವೆಯೂ ಇಲ್ಲವಾಗಿದೆ. ಈಗಾಗಲೇ ಶಾಸಕರು, ಸಂಸದರು, ಉಸ್ತುವಾರಿ ಸಚಿವರು ಸೇರಿದಂತೆ ಎಲ್ಲ ಜನಪ್ರತಿನಿಧಿಗಳಿಗೂ ಮನವಿ ಸಲ್ಲಿಸಿದ್ದು, ಭರವಸೆ ಹೊರತುಪಡಿಸಿ ಬೇಡಿಕೆ ಮಾತ್ರ ಇಡೇರದೆ ಹಾಗೆ ಉಳಿದಿದೆ ಎನ್ನುವುದು ಇಲ್ಲಿನ ಜನತೆಯ ಅಳಲಾಗಿದೆ.

    ಮುಂದಿನ ದಿನದಲ್ಲಾದರೂ ಕ್ಷೇತ್ರದ ನೂತನ ಶಾಸಕರು ಸೇರಿದಂತೆ ಸಂಬಂಧಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳು ಇಲ್ಲಿನ ಜನತೆಯ ಮಳೆಗಾಲದ ಭವಣೆಯನ್ನು ಹೋಗಲಾಡಿಸುವ ನೆಲೆಯಲ್ಲಿ ಕುಂಜಳ್ಳಿ - ಕಲ್ಯಾಣ್ಕಿ ಸೇತುವೆ ನಿರ್ಮಿಸಿಕೊಡುವ ಮೂಲಕ ಅವರ ಬಹುಕಾಲದ ಬೇಡಿಕೆಗೆ ಶಾಶ್ವತ ಮುಕ್ತಿ ನೀಡಬೇಕಾಗಿದೆ.

*-* ಕಳೆದ ಹತ್ತಾರು ವರ್ಷಗಳಿಂದ ಇಲ್ಲಿನ ಹೊಳೆಗೆ ಸೇತುವೆ ನಿರ್ಮಿಸಿಕೊಡುವಂತೆ ಜನಪ್ರತಿನಿಧಿಗಳೂ ಸೇರಿದಂತೆ ಇಲಾಖೆಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ದು ಎನೂ ಪ್ರಯೋಜನವಾಗಿಲ್ಲ. ಇದರಿಂದಾಗಿ ಈ ಭಾಗದ ಜನರಿಗೆ ತುಂಬಾ ತೊಂದರೆಯಾಗಿದ್ದು, ಈ ಭಾರಿ ಅದರೂ ಕ್ಷೇತ್ರದ ಶಾಸಕರು ಈ ಬಗ್ಗೆ ಗಮನಹರಿಸಿ ಸೇತುವೆ ನಿರ್ಮಿಸಿಕೊಡಬೇಕಾಗಿದೆ - ಜೋಸೆಫ್ ಸ್ಥಳೀಯರು 






ಕುಂದಾಪ್ರ ಡಾಟ್ ಕಾಂ- editor@kundapra.com