ಜಾತಿ-ಆದಾಯ ಪ್ರಮಾಣಪತ್ರಕ್ಕಾಗಿ ನಿತ್ಯ ನಿಲ್ಲದ ಗೋಳು

ಬೈಂದೂರು: ಜಾತಿ-ಆದಾಯ ಪ್ರಮಾಣ ಪತ್ರ ಸೇರಿದಂತೆ ಸರಕಾರದ ವಿವಿಧ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸುವ ಮತ್ತು ವಿಲೇವಾರಿ ಮಾಡುವ ಪ್ರಕ್ರಿಯೆ ತೀರಾ ವಿಳಂಬವಾಗುತ್ತಿರುವುದರಿಂದ ಜನಸಾಮಾನ್ಯರು ದಿನವಿಡಿ ತಹಶೀಲ್ದಾರರ ಕಛೇರಿಯ ಎದುರು ಸರತಿ ಸಾಲಿನಲ್ಲಿ ನಿಂತು ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ಪಡಸಾಲೆ ಮುಂದೆ ಪರದಾಟ:
ಶಾಲೆಗಳಿಗೆ ವಿದ್ಯಾರ್ಥಿಗಳು ಜಾತಿ ಹಾಗೂ ಆದಾಯ ಪ್ರಮಾಣಪತ್ರವನ್ನು ಸಲ್ಲಿಸುವುದು ಕಡ್ಡಾಯವಾಗಿರುವುರಿಂದ ಶಾಲೆ ಆರಂಭಗೊಳ್ಳುತ್ತಿರುವಂತೆ ವಿದ್ಯಾರ್ಥಿಗಳ ಪೊಷಕರು ಪ್ರಮಾಣಪತ್ರಕ್ಕಾಗಿ ಕಳೆದ ಕೆಲವು ದಿನಗಳಿಂದ ತಹಶಿಲ್ದಾರರ ಕಛೇರಿಯ ಪಡಸಾಲೆ ಎದುರು ಮುಗಿಬಿಳುತ್ತಿದ್ದಾರೆ. ಆದರೆ ಕಛೇರಿಯಲ್ಲಿ ಅರ್ಜಿ ಸ್ವೀಕರಿಸಲು ಒಂದೇ ಕಂಪ್ಯೂಟರ್ ವ್ಯವಸ್ಥೆ ಇರುವುದರಿಂದ ಜನರು ದಿನವಿಡಿ ಕಾಯುವಂತಾಗಿದೆ. ಅದೂ ಅಲ್ಲದೇ ಇಂಟರ್‌ನೆಟ್ ಹಾಗೂ ಸರ್ವರ್ ಸಮಸ್ಯೆಯಿಂದಾಗಿ ಒಂದು ಅರ್ಜಿ ಪಡೆದು ಸ್ವೀಕೃತಿ ಪತ್ರ ನೀಡಲು 15ರಿಂದ 20ನಿಮಿಷ ತಗಲುತ್ತಿದೆ.

ಬೈಂದೂರು ವಿಶೇಷ ತಹಶೀಲ್ದಾರರ ಕಛೇರಿಯಲ್ಲಿ ಜಾತಿ ಆದಾಯ ಪ್ರಮಾಣ ಪತ್ರ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ಜನನ ಮರಣ ಪ್ರಮಾಣ ಪತ್ರ ಸೇರಿದಂತೆ ಎಲ್ಲದಕ್ಕೂ ಇರುವ ಒಂದು ಕಂಪ್ಯೂಟರನ್ನು ಮಾತ್ರವೇ ಅವಲಂಬಿಸಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಆರಂಭಗೊಳ್ಳುವ ಸಾಲು ಸಂಜೆ 5:30 ತನಕವೂ ಕರಗುವುದಿಲ್ಲ. ದಿನವೊಂದಕ್ಕೆ ನಾಲ್ಕುನೂರರಿಂದ ಐನೂರು ಜನ ನಿಲ್ಲುತ್ತಾರಾದರೂ ಗರಿಷ್ಠ 250 ಅರ್ಜಿಗಳನ್ನು ಮಾತ್ರ ಕಛೇರಿಯಲ್ಲಿ ಸ್ವೀಕರಿಸಲು ಸಾಧ್ಯವಾಗುತ್ತಿದೆ. ಕುಂದಾಪುರ ತಹಶೀಲ್ದಾರರ ಕಛೇರಿಯಲ್ಲಿಯೂ ಇದೇ ಸ್ಥಿತಿ ಇದೆ. 

ಶಾಲಾ ಮಟ್ಟದಲ್ಲಿ ಆದಾಯ ಪ್ರಮಾಣಪತ್ರ ಮಾಡುತ್ತಿಲ್ಲ:
ಕಳೆದ ವರ್ಷ ಐಎಎಸ್‌ ಅಧಿಕಾರಿ ಪೊನ್ನುರಾಜ್‌ ಅವರು 'ಭೂಮಿ' ಕೇಂದ್ರದ ಮುಖ್ಯಸ್ಥರಾಗಿದ್ದಾಗ ದೂರದೃಷ್ಠಿತ್ವದಿಂದ ಶಾಲಾ ಮಟ್ಟದಲ್ಲಿಯೇ ಮಕ್ಕಳ ಜಾತಿ-ಆದಾಯ ಪ್ರಮಾಣಪತ್ರದ ಅರ್ಜಿಗಳನ್ನು ಸಂಗ್ರಹಿಸಿ ವಿಲೆವಾರಿ ಮಾಡುವ ವ್ಯವಸ್ಥೆ ಮಾಡಿದ್ದರು. ಇದರಿಂದ ಪೋಷಕರಿಗೆ ತಾಲೂಕು ಕಚೇರಿಯ ಅಲೆದಾಟ ತಪ್ಪಿತ್ತು. ಆದರೆ ಈ ವರ್ಷ ಆದೇಶ ರದ್ದಾಗದಿದ್ದರೂ ಪಾಲನೆ ಮಾತ್ರ ಆಗಿಲ್ಲ. ಒಂದನೆಯ ತರಗತಿಗೆ ಸೇರುವವರಿಗೆ ಜಾತಿ ಮತ್ತು ಆದಾಯ ಪ್ರಮಾಣಪತ್ರ ತರಲು ತಾಲೂಕು ಕಚೇರಿಗೆ ಅಲೆದಾಡಬೇಕಾಗಿದೆ. ಆದಾಯ ಪ್ರಮಾಣ ಪತ್ರ ಹಾಗೂ ಹೋದ ವರ್ಷ ತಿರಸ್ಕೃತರಾದವರು ಈ ಬಾರಿ ಹೊಸ ಅರ್ಜಿ ಸಲ್ಲಿಸಬೇಕಾಗಿದೆ.

ಜನರಿಂದ ಹಿಡಿಶಾಪ:
ಬೈಂದೂರು ವಿಶೇಷ ತಹಶೀಲ್ದಾರರ ಕಛೇರಿಯ ಎದುರು ಜನರು ದಿನವಿಡಿ ಕೆಲಸ ಕಾರ್ಯಗಳನ್ನು ಬಿಟ್ಟು ಬಿಸಿಲಿನಲ್ಲಿ ನಿಂತು ಕಾಯುವಂತಾಗಿದೆ. ಒಂದು ಪ್ರಮಾಣ ಪತ್ರ ಮಾಡಿಸಲು ಹೀಗೆ ನಿಲ್ಲುವಂತಾದರೇ, ನಮ್ಮ ಹೊಟ್ಟೆಪಾಡಿನ ಗತಿಯೇನು ಎಂದು ಪ್ರಶ್ನಿಸುತ್ತಿದ್ದಾರೆ. 5:30ರ ನಂತರವೂ ಇರುವವರಿಗೆ ಮರುದಿನ ಬರಲು ಕೂಪನ್ ನೀಡಿ ಆದರೆ ಮರುದಿನ ಹೋದರೆ ಕೂಪನ್ ನಡೆಯುವುದಿಲ್ಲ ಸಾಲಿನಲ್ಲಿಯೇ ನಿಲ್ಲಬೇಕು ಎನ್ನುತ್ತಿದ್ದಾರೆ. ಹೀಗೆ ಪ್ರಮಾಣಪತ್ರ ಸ್ವೀಕರಿಸಲು ಒಂದು ದಿನ ಕಾಯಿಸುವ ಬದಲಿಗೆ, ಬರುವ ಅರ್ಜಿಗಳನ್ನು ಒಮ್ಮೆಲೆ ಸ್ವೀಕರಿಸಿದರೆ ಸಾಕು. ಕಂಪ್ಯೂಟರಿನಲ್ಲಿ ನಮೂದಿಸಿದ ಬಳಿಕ ಸಂದೇಶ ಬರುವುದರಿಂದ ಸ್ವೀಕೃತಿಯ ದೃಢೀಕರಣ ಮಾಡಿಕೊಳ್ಳಬಹುದು ಎನ್ನುತ್ತಿದ್ದಾರೆ. 

** ವಿದ್ಯಾರ್ಥಿಗಳ ಆದಾಯ ಪ್ರಮಾಣಪತ್ರ ಹಾಗೂ ಇನ್ನಿತರ ಸೌಲಭ್ಯಗಳಿಗಾಗಿ ಒಂದೇ ಭಾರಿ ಜನ ಈ ರೀತಿಯಲ್ಲಿ ಮುಗಿಬೀಳುತ್ತಿದ್ದಾರೆ. ಇದು ಕೆಲವು ದಿನಗಳು ಮಾತ್ರವೇ ಇರುತ್ತದೆ. ಮತ್ತೆ ಯಥಾಸ್ಥಿತಿಗೆ ಬರುವುದರಿಂದ ಬದಲಿ ಕಂಪ್ಯೂಟರ್ ವ್ಯವಸ್ಥೆಯನ್ನು ಮಾಡಿಲ್ಲ. ಆದಾಗ್ಯೂ 5:30 ನಂತರ ನಿಲ್ಲುವವರಿಗೆ ಕೂಪನ್ ನೀಡಿ ಮರುದಿನ ಬೇರೊಂದು ಕಂಪ್ಯೂಟರ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಆದರೆ ಎಲ್ಲಿ ಅರ್ಜಿ ಸಲ್ಲಿಸಿದರೂ ಸ್ವೀಕೃತಿ ಪತ್ರವನ್ನು ಒಂದು ಕಡೆ ನೀಡಲು ಮಾತ್ರ ಸಾಧ್ಯ. ಜಾತಿ ಪ್ರಮಾಣಪತ್ರ ಕಳೆದ ಬಾರಿ ಪಡೆದ ವಿದ್ಯಾರ್ಥಿಗಳೂ ಕೂಡ ಮತ್ತೆ ಅರ್ಜಿ ಸಲ್ಲಿಸುತ್ತಿದ್ದಾರೆ. ಇದು ಅಗತ್ಯವಿಲ್ಲ. ಈ ಬಗ್ಗೆ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಬೇಕು. - ಕಿರಣ್ ಜಿ. ಗೌರಯ್ಯ, ವಿಶೇಷ ತಹಶೀಲ್ದಾರರು ಬೈಂದೂರು

ಕುಂದಾಪ್ರ ಡಾಟ್ ಕಾಂ- editor@kundapra.com