ತಾಲೂಕಿನಲ್ಲಿ ನಿಷೇಧಗೊಂಡಿದ್ದ ಮರಳುಗಾರಿಕೆ ಪುನರಾರಂಭ


ಕುಂದಾಪುರ: ಕಳೆದ ಒಂದೂವರೆ ತಿಂಗಳುಗಳಿಂದ ತಲೆದೂರಿದ್ದ ಮರಳಿನ ಅಭಾವ ಇನ್ನುಮುಂದೆ ಕೊನೆಗೊಳ್ಳಲಿದ್ದು, ತಾಲೂಕಿನಲ್ಲಿ ಅರ್ಧಕ್ಕೆ ನಿಂತಿದ್ದ ಅಭಿವೃದ್ಧಿ ಕಾಮಗಾರಿಗಳಿಗೆ ಮತ್ತೆ ಚಾಲನೆ ದೊರಕುವ ಲಕ್ಷಣ ಕಂಡುಬಂದಿದೆ. ಮೀನುಗಳ ಸಂತಾನೋತ್ವತ್ತಿಯ ಕಾರಣವೊಡ್ಡಿ ಮರಳುಗಾರಿಕೆಯನ್ನು ನಿಷೇಧಿಸಿದ್ದರಿಂದ ವಿವಿಧ ಕಾಮಗಾರಿಗಳಿಗೆ ಅಗತ್ಯವಿರುವ ಮರಳಿಗೆ ಕೊರತೆ ಉಂಟಾಗಿ, ಸಂಗ್ರಹಿಸಿಟ್ಟ ಮರಳಿನ ಬೆಲೆಯೂ ಗಗನಕ್ಕೇರಿತ್ತು. ಇದೀಗ ಮರಳುಗಾರಿಕೆಯನ್ನು ಮತ್ತೆ ಆರಂಭಿಸಲು ಸಾರ್ವಜನಿಕ ವಲಯದಿಂದ ಯಾವುದೇ ಆಕ್ಷೇಪವಿಲ್ಲದಿರುವುದರಿಂದ ಮರಳುಗಾರಿಕೆಗೆ ಚಾಲನೆ ದೊರೆಯಲಿದೆ. 

ಸ್ಥಳೀಯ ಪರಿಸ್ಥಿತಿಯನ್ನು ಮನಗಂಡು ಮಳೆಗಾಲ ಹಾಗೂ ಮೀನು ಸಂತಾನೋತ್ಪತ್ತಿ ಸಮಯದಲ್ಲಿ ಸಿಆರ್‌ಝಡ್‌ ಪ್ರದೇಶದಲ್ಲಿ ಮರಳುಗಾರಿಕೆಯಿಂದ ತೊಂದರೆಯಿಲ್ಲದಿದ್ದರೇ, ಮರಳುಗಾರಿಕೆಗೆ ಅವಕಾಶ ನೀಡಬಹುದೆಂದು ಜಿಲ್ಲಧಿಕಾರಿಗಳಿಗೆ ರಾಜ್ಯ ಪರಿಸರ ಆಘಾತ ಅಂದಾಜೀಕರಣ ಪ್ರಾಧಿಕಾರ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಸಿಆರ್‌ಝಡ್‌ ಮರಳು ಉಸ್ತುವಾರಿ ಸಮಿತಿ ಸಭೆ ಮಳೆಗಾಲದಲ್ಲಿ ಮರಳು ತೆಗೆಯುವುದನ್ನು ಜು.16ರಿಂದ ಆರಂಭಿಸಲು ನಿರ್ಧರಿಸಿತ್ತು. ಇದಕ್ಕೆ ಆಕ್ಷೇಪಣೆಗಳಿದ್ದಲ್ಲಿ ಸಾರ್ವಜನಿಕರು ನಿರ್ದಿಷ್ಟ ಕಾರಣಗಳೊಂದಿಗೆ ಜು. 15ರೊಳಗೆ ಜಿಲ್ಲಾಧಿಕಾರಿಯವರಿಗೆ ಸಲ್ಲಿಸಬಹುದು ಎಂದು ಸಮಿತಿ ಸದಸ್ಯ ಕಾರ್ಯದರ್ಶಿಯಾದ ಹಿರಿಯ ಭೂವಿಜ್ಞಾನಿಯವರ ಪ್ರಕಟನೆಯಲ್ಲಿ ತಿಳಿಸಲಾಗಿತ್ತು. ಆದರೆ ನಿಷೇಧವನ್ನು ಜೂನ್ 30ರ ತನಕವೂ ಮುಂದೂಡಿದ್ದರು. ಇತ್ತಿಚಿಗೆ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆಯಲ್ಲಿ  ಆ. 1ರಿಂದ ಅನ್ವಯವಾಗುವಂತೆ ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಗುರುತಿಸಿರುವ ಮರಳು ದಿಬ್ಬಗಳಿಂದ ನೋಂದಾಯಿತ ಪರವಾನಿಗೆದಾರರು ಮಾತ್ರ ಮರಳು ತೆಗೆಯಲು ಅವಕಾಶ ನೀಡಲಾಗಿತ್ತು. 

ಮರಳು ಸ್ಥಗಿತ-ಬಾರಿ ಹೊಡೆತ
ಮರಳುಗಾರಿಕೆ ಸ್ಥಗಿತಗೊಂಡದ್ದರಿಂದ ಮರಳಿನ ಅಭಾವದಿಂದಾಗಿ ಹಲವು ಕಾಮಗಾರಿಗಳು ಸ್ಥಗಿತಗೊಂಡಿದ್ದವು. ಬೇರೆ ಬೇರೆ ಊರುಗಳಿಂದ ಬಂದಿದ್ದ ನೂರಾರು ಕೂಲಿ ಕಾರ್ಮಿಕರು ತಮ್ಮ ಸ್ವಸ್ಥಾನಗಳಿಗೆ ತೆರಳಿದ್ದರು. ನಿರ್ಮಾಣ ಕ್ಷೇತ್ರವೇ ಬಹುಪಾಲು ಸ್ಥಗಿತಗೊಂಡು ಇದಕ್ಕೆ ಸಂಬಂಧಿಸಿದ್ದ ಉದ್ಯಮಗಳಿಗೂ ಹಿನ್ನಡೆಯುಂಟಾಗಿತ್ತು. ಈಗ ಮರಳುಗಾರಿಕೆಗೆ ಮತ್ತೆ ಅನುಮತಿ ನೀಡಿರುವುದು ಉದ್ಯಮವನ್ನು ಚೇತರಿಸಿಕೊಳ್ಳುವಂತೆ ಮಾಡಿದೆ. ಮನೆ, ಸೇತುವೆ, ಕಟ್ಟಡ ಸೇರಿದಂತೆ ನೂರಾರು ಸರಕಾರಿ ಹಾಗೂ ಸರಕಾರೇತರ ಕಾಮಗಾರಿಗಳೂ ಮತ್ತೆ ಚುರುಕುಗೊಳ್ಳುವ ಸಾಧ್ಯತೆ ಇದೆ.

ದುಪ್ಪಟ್ಟು ತೆತ್ತರು-ಮರಳು ಹೊತ್ತರು!
ಮರಳುಗಾರಿಕೆ ನಿಷೇಧದಿಂದಾಗಿ ದಾಸ್ತಾನು ಮಾಡಲಾಗಿದ್ದ ಮರಳಿನ ಬೆಲೆ ಗಗನಕ್ಕೇರಿತ್ತು. ನಿಷೇಧದ ನಡುವೆಯೂ ಕೆಲವೆಡೆ ಪೊಲೀಸರ ಕಣ್ತಪ್ಪಿಸಿ ದೂರದ ಊರುಗಳಿಗೆ ಸಾಗಾಟವೂ ನಡೆಯುತ್ತಿತ್ತು. ಇದರಿಂದ ಸರಕಾರದ ಬೊಕ್ಕಸಕ್ಕೂ ನಷ್ಟವಾಗುತ್ತಿತ್ತು. ನಿಷೇಧ ತೆರವಿನಿಂದಾಗಿ ಬಿಲ್ ಪಾವತಿಸಿ ಕಾನೂನು ಬದ್ದವಾಗಿಯೇ ಮರಳು ಸಾಗಿಸಬಹುದಾಗಿದೆ.

ಅನಧಿಕೃತ ಹೊಯಿಗೆ ಕಡುವಿನ ಬಗ್ಗೆ ಆಕ್ಷೇಪದ ಹೊಗೆ
ಕುಂದಾಪುರ ತಾಲೂಕಿನಲ್ಲಿರುವ ಅನಧಿಕೃತವಾಗಿ ಕಾರ್ಯಾಚರಿಸುತ್ತಿರುವ ಮರಳಿನ ಕಡುವಿನ ಬಗ್ಗೆ ಜನರು ಆಕ್ಷೇಪ ವ್ಯಕ್ತಪಡಿಸಿದ್ದರು. ಎಲ್ಲೆಡೆಯೂ ಹಗಲು ರಾತ್ರಿಯೆನ್ನದೇ ಅವ್ಯಹತವಾಗಿ ಮರಳು ಸಾಗಾಟವಾಗುತ್ತಿತ್ತು. ತಾಲೂಕಿನ 4-5 ಹೊಯಿಗೆ ಕಡುವುಗಳು ಮಾತ್ರ ಅಧಿಕೃತವಾದದ್ದು ಎನ್ನಲಾಗಿದೆ. ಆದರೆ 10ಕ್ಕೂ ಹೆಚ್ಚು ಹೊಂಗೆ ಕಡಲು ಕುಂದಾಪುರದ ತಾಲೂಕಿನಲ್ಲಿದೆ. ಈ ಬಗ್ಗೆ ಕುಂದಾಪುರ ಪುಸಭೆಯ ಸಾಮಾನ್ಯ ಸಭೆಯಲ್ಲಿಯೂ ಕೋಲಾಹಲವೆದ್ದಿತ್ತು. ರಸ್ತೆ, ಜನಜೀವನಕ್ಕೆ ತೊಂದರೆಯಾಗುವ ಹಾಗೂ ಅನಧಿಕೃತವಾಗಿ ಬೇರೆ ಸರ್ವೆ ನಂಬರಿನಲ್ಲಿ ಮರಳುಗಾರಿಕೆ ನಡೆಸುತ್ತಿರುವ ಪ್ರದೇಶವನ್ನು ಗುರುತಿಸಿ ಅಲ್ಲಿ ನಿಷೇಧ ಹೇರಬೇಕೆಂದು ಪುರಸಭೆ ಸದಸ್ಯರು ಆಗ್ರಹಿಸಿದ್ದರು.

ಜಿಪಿಸ್ ಅಳವಡಿಕೆ ಕಡ್ಡಾಯ
ಜಿಲ್ಲೆಯಲ್ಲಿ ಮರಳು ಸಾಗಾಟ ಮಾಡುವ ವಾಹನಗಳು ಕಡ್ಡಾಯವಾಗಿ ಜಿಪಿಎಸ್‌ ಅಳವಡಿಸಿರಬೇಕು ಹಾಗೂ ಖನಿಜ ಸಾಗಾಟ ಪರವಾನಿಗೆ  (ಟ್ರಿಪ್‌ ಶೀಟ್‌) ಹೊಂದಿರಬೇಕು. ಮರಳನ್ನು ಟರ್ಪಾಲಿನಿಂದ ಮುಚ್ಚಬೇಕು ಎಂದು ನಿಯಮಾವಳಿ ಹೇಳುತ್ತದೆ.

ಹೊರಜಿಲ್ಲೆಗೆ ಮರಳು ಸಾಗಾಟ ಬೇಡವೇ?
ಕುಂದಾಪುರ ತಾಲೂಕಿನ ಮರಳು ಸ್ಥಳೀಯರಿಗಿಂತ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ಹೆಚ್ಚು ಸಾಗಿಸಲ್ಪಡುತ್ತಿದೆ. ಇದರಿಂದ ಮರಳಿನ ಬೆಲೆಯೂ ಗಗನಕ್ಕೇರಿದೆ. ಕಟ್ಟಡ  ಮಾಲಕರು ಹಾಗೂ ಸಾರ್ವಜನಿಕರಿಗೆ ಮರಳಿನ ಅಭಾವ ಉಂಟಾಗಿ ದುಪ್ಪಟ್ಟು ಹಣವನ್ನು ನೀಡಿ ಮರಳು ಖರೀದಿಸಬೇಕಾದ ಸ್ಥಿತಿ ಇದೆ.  ಹೊರ ಜಿಲ್ಲೆಗಳಿಗೆ ಹೋಗುವ ಮರಳನ್ನು ನಿಷೇಧಿಸಿ ಇಲ್ಲಿನವರಿಗೇ ಮರಳು ದೊರೆಯುವಂತೆ ಮಾಡಬೇಕು ಹಾಗೂ ಮರಳಿಗೆ ಸರಕಾರವೇ ದರ ನಿಗದಿ ಮಾಡಬೇಕು ಎಂದು ಪ್ರತಿಭಟಿಸಿ ಆಗ್ರಹಿಸಿದ್ದರು. ಆದರೆ ಹೊರಜಿಲ್ಲೆಗಳಲ್ಲಿ ಮರಳಿನ ಅಭಾವವಿರುವುದರಿಂದ ಸಹಜವಾಗಿ ಇಲ್ಲಿನ ಮರಳಿಗೆ ಬೇಡಿಕೆ ಹೆಚ್ಚಿದೆ. ಅನ್ಯಜಿಲ್ಲೆಯವರಿಗೆ ಮರಳು ನಿಷೇಧಿಸುವುದಕ್ಕಿಂತ ಹೊರ ಜಿಲ್ಲೆಯವರಿಗೆ ಹಾಗೂ ಜಿಲ್ಲೆಯವರಿಗೆ ಬೇರೆ ಬೇರೆ ದರ ನಿಗದಿ ಮಾಡುವುದಲ್ಲದೇ, ಹೊರಜಿಲ್ಲೆಗೆ ಸಾಗಾಟವಾಗುವ ಮರಳಿನ ಪ್ರಮಾಣದಲ್ಲಿ ಸ್ಪಲ್ಪ ಕಡಿಮೆ ಮಾಡಿದರೆ ಎಲ್ಲರಿಗೂ ನ್ಯಾಯ ದೊರೆತಂತಾಗುವುದು ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.
ಕುಂದಾಪ್ರ ಡಾಟ್ ಕಾಂ- editor@kundapra.com