ಅಮ್ಮನವರ ತೊಪ್ಲು ಶಾಲೆ ಬಿದ್ದು ಹೋದರೂ ಕೇಳುವವರೇ ಇಲ್ಲ!


ಬೈಂದೂರು: ಆ ಶಾಲೆಯ ಕಟ್ಟಡದ ಒಂದು ಬದಿ ಸಂಪೂರ್ಣ ಬಿದ್ದು ಹೋಗಿದೆ. ವಿದ್ಯುತ್ ಸಂಪರ್ಕದ ತಂತಿಗಳು ಕಿತ್ತು ಹೋಗಿದೆ. ಆದರೂ ಸಹ ಇಲ್ಲಿನ ಶಿಕ್ಷಕರು ಮತ್ತೊಂದು ಕಟ್ಟಡದ ಇರುವ ಎರಡು ಕೊಠಡಿಗಳಲ್ಲಿಯೇ ಮಕ್ಕಳನ್ನು ತುಂಬಿಸಿಕೊಂಡು ನಿಶ್ಚಿಂತೆಯಿಂದ ಪಾಠ ಮಾಡುತ್ತಿದ್ದಾರೆ. ದುರಸ್ತಿಗಳೊಸಬೇಕಾದ ಇಲಾಖೆ ಸುಮ್ಮನೆ ಕುಳಿತಿದೆ.

ಬೈಂದೂರು ವಲಯ ಉಪ್ಪುಂದ ಗ್ರಾಮದ ಅಮ್ಮನವರ ತೊಪ್ಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 5ನೇ ತರಗತಿಯವರೆಗೆ ಪ್ರಸಕ್ತ ಸಾಲಿನಲ್ಲಿ 42 ಮಕ್ಕಳು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಮೂವರು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. 1ರಿಂದ 3ನೇ ತರಗತಿಯವರೆಗಿನ ಮಕ್ಕಳಿಗೆ ನಲಿಕಲಿ ಯೋಜನೆಯಡಿಯಲ್ಲಿ ಒಂದೇ ತರಗತಿಯಲ್ಲಿ ಪಾಠ ಮಾಡಬೇಕಾದುದರಿಂದ ಹೊಸ ಕಟ್ಟಡದ ಒಂದು ಕೊಠಡಿಯನ್ನು ಬಳಸಿಕೊಂಡಿದ್ದಾರೆ. ಆದರೆ ಸಮುದ್ರ ತೀರಕ್ಕೆ ಹತ್ತಿರವೇ ಇರುವ ಶಾಲೆಯ ಹಳೆಯ ಕಟ್ಟಡದ ಒಂದು ಒದಿ ಬಿದ್ದು ಹೋಗಿರುವುದರಿಂದ ಮತ್ತು ಮಳೆ-ಗಾಳಿಯ ರಭಸಕ್ಕೆ ಅದೇ ಕಟ್ಟಡದ ಇನ್ನೊಂದು ಬದಿಯಲ್ಲಿ ಮಕ್ಕಳನ್ನು ಕುರಿಸಿಕೊಂಡು ಪಾಠ ಮಾಡುವುದು ಕಷ್ಟವಾದ್ದರಿಂದ 4 ಮತ್ತು 5ನೇ ತರಗತಿಯ ಮಕ್ಕಳನ್ನು ಒಟ್ಟಾಗಿಸಿ ಹೊಸ ಕಟ್ಟಡದ ಇನ್ನೊಂದು ಕೊಠಡಿಯಲ್ಲಿ ಕುಳ್ಳಿರಿಸಕೊಂಡು ಪಾಠ ಮಾಡುವ ಸ್ಥಿತಿ ಇದೆ. ಶಾಲೆಯಲ್ಲಿ ಮೂವರು ಶಿಕ್ಷಕರಿದ್ದರೂ ಅವರಿಗೊಂದು ಆಫೀಸ್ ರೂಮ್ ಕೂಡ ಇಲ್ಲದಂತಾಗಿದೆ.

ಕಟ್ಟಡ ದುರಸ್ತಿಯೂ ಇಲ್ಲ ಕೆಡವಲೂ ಇಲ್ಲ:
ಸಮುದ್ರ ತೀರದಲ್ಲೇ ಇರುವ ಶಾಲೆಯ ಹಳೆ ಕಟ್ಟಡದ ಒಂದು ಬದಿಯ ಗೋಡೆ ಕಳೆದ ಬಾರಿ ಬಿದ್ದು ಹೋಗಿತ್ತು. ಗೋಡೆ ಬಿದ್ದಿರುವ ಕೊಠಡಿಯನ್ನು ದುರಸ್ತಿಗೊಳಿಸುವಂತೆ ತಿಳಿಸಿದ್ದರಾದರೂ ಶಾಲೆಯಲ್ಲಿ ಹೆಚ್ಚು ಮಕ್ಕಳಿಲ್ಲದ ಕಾರಣ ಅದನ್ನು ಕೆಡವುದೇ ಸೂಕ್ತ ಎಂಬ ತೀರ್ಮಾನಕ್ಕೆ ಬಂದಿದ್ದರು. ಆದರೆ ಈವರೆಗೂ ಎರಡನ್ನೂ ಮಾಡದೇ ಯಥಾ ಸ್ಥಿತಿಯಲ್ಲಿ ಕಟ್ಟಡವಿದೆ. ಕಟ್ಟಡದ ವಿದ್ಯುತ್ ವಯರ್‌ಗಳು ಕಿತ್ತು ಬಂದಿರುವುದರಿಂದ ಅದರ ಅಪಾಯವೂ ಇದೆ. ಅದೇ ಕಟ್ಟಡದ ಉಳಿದ ಮೂರು ಕೊಠಡಿಗಳು ದುರಸ್ಥಿಯಲ್ಲಿಲ್ಲ. ಮಳೆಗಾಲದಲ್ಲಿ ಹಾಗೂ ಸಮುದ್ರದ ಗಾಳಿ ಇರುವಾಗ ಅಲ್ಲಿ ಕಾಲ ಕಳೆಯುವುದೇ ಕಷ್ಟ. ಹಾಗಾಗಿ 4ಮತ್ತು 5ನೇ ತರಗತಿಗಳನ್ನು ಒಟ್ಟಾಗಿ ನಡೆಸುತ್ತಿದ್ದೇವೆ ಎನ್ನುತ್ತಾರೆ ಅಲ್ಲಿನ ಶಿಕ್ಷಕರು. 

ಮಕ್ಕಳು ಬರುವುದಿಲ್ಲ ಎಂದು ಕಥೆ ಹೇಳುವವರಿಗೆ ಮೂಲಭೂತ ಸೌಕರ್ಯಗಳೊಂದಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂಬುದು ಮರೆತೇ ಹೋಗಿರುತ್ತದೆ. ಉಡುಪಿ ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಸ್ಥಾಯಿ ಸಮಿತಿಯ ಅಧ್ಯಕ್ಷರ ಕ್ಷೇತ್ರದಲ್ಲಿಯೇ ಇಂತಹ ಸ್ಥಿತಿ ಇದ್ದರೇ, ಉಳಿದೆಡೆಯ ಪರಿಸ್ಥಿತಿ ಏನು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.

* ಸಂಬಂಧಿತರಿಗೆ ತಿಳಿಸಿದರೂ ಕೂಡ ಶಾಲೆಯ ಕಟ್ಟಡಕ್ಕೆ ಈವರೆಗೆ ದುರಸ್ತಿಯಿಲ್ಲ. ಮಳೆಗಾಲದಲ್ಲಿ ಮಕ್ಕಳನ್ನು ಅಲ್ಲಿ ಕೂರಿಸುವುದಕ್ಕೆ ಹೆದರಿಕೆಯಾಗುತ್ತದೆ. ಶಾಲೆಯ ಆವರಣಕ್ಕೆ ಕಾಪೌಂಡ್ ಬೇಕಿದ್ದು ಅದನ್ನು ಒಂದು ಬದಿಯಲ್ಲಿ ಮಾತ್ರ ನಿರ್ಮಿಸಲಾಗಿದೆ. ಅದನ್ನೂ ಕೂಡ ಪೂರ್ಣಗೊಳಿಸಬೇಕಿದೆ. - ಶಾರದಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ

ಕುಂದಾಪ್ರ ಡಾಟ್ ಕಾಂ- editor@kundapra.com