ಹೇಗಿದ್ದವ ಹೇಗಾದ ಕುಂದಾಪುರ ಕಂಡ ಈ ರಾಜ..!

ಕುಂದಾಪುರ: ಇಂದಿಗೆ ಬರೋಬ್ಬರೀ 33 ವರ್ಷಗಳ ಕೆಳಗೆ ಅಮಾಯಕ ವಿದ್ಯಾರ್ಥಿಯಾಗಿ, ಕುಂದಾಪುರದಲ್ಲಿಯೇ ಶಾಲೆಗೆ ಹೋಗಿ ಹೊತ್ತಲ್ಲದ ಹೊತ್ತಿನಲ್ಲಿ ಕುಂದಾಪುರದ ಅಂಗಳವನ್ನು ದಾಟಿದ ಬಾಲಕನೋರ್ವ ಕಾಲನ ಬರ್ಬರ ಹಿತ್ತಲಿನಲ್ಲಿ ಹಜ್ಜೆಯಿಕ್ಕಿ ರಕ್ತ ರಂಜಿತ ಭೂಗತ ಲೋಕದ ಅನಭಿಷಿಕ್ತ ರಾಜನಾಗಿ ಎರಡೂ ಕೈಗಳಿಗೆ ಪಾತಕ ಪ್ರಪಂಚದ ನೆತ್ತರನ್ನು ಅಂಟಿಸಿ ಕೊಂಡು ಇದೀಗ ಪೋಲಿಸರ ಬಂಧಿಯಾಗಿ ಗುರುತು ಸಿಗದಂತೇ ಬದಲಾಗಿ ಹೋಗಿದ್ದಾನೆ. ಒಂದು ಕಾಲದ ಅಮಾಯಕ ಬಾಲಕ, ನಂತರದ ಸುಂದರ ಸುರದ್ರೂಪಿ ಯುವಕ ಇವನೇನಾ ಅಂತಾ ಕುಂದಾಪುರ ಮಾತನಾಡಿಕೊಳ್ಳುತ್ತಿದೆ. ಬನ್ನಂಜೆ ರಾಜ ಗುರತೇ ಸಿಗದಂತೆ ಬದಲಾಗಿದ್ದಾನೆ. ಮೊರಕ್ಕೋದಲ್ಲಿ ಬೆಂಗಳೂರು ಪೊಲೀಸರಿಂದ ಬಂಧನಕ್ಕೊಳಗಾಗಿ ಶುಕ್ರವಾರ ಬೆಳಗಾವಿಗೆ ಕರೆತರಲಾದ ಬನ್ನಂಜೆ ರಾಜ(47)ನನ್ನು ಶನಿವಾರ ಉಡುಪಿಗೆ ಕರೆತಂದು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. (ಕುಂದಾಪ್ರ ಡಾಟ್ ಕಾಂ)

ಕುಂದಾಪುರದ ನಂಟು:
ಕಂದಾಯ ಇಲಾಖೆಯಲ್ಲಿ ನೌಕರರಾಗಿದ್ದ ಸುಂದರ ಶೆಟ್ಟಿಗಾರ್ ಹಾಗೂ ಶಿಕ್ಷಕಿಯಾಗಿದ್ದ ವಿಲಾಸಿನಿ ದಂಪತಿಗಳ ಮೂವರು ಗಂಡು ಮಕ್ಕಳಲ್ಲಿ ಕೊನೆಯವನು ರಾಜೇಂದ್ರ ಕುಮಾರ್ ಯಾನೆ ಬನ್ನಂಜೆ ರಾಜ. ಅವರದ್ದು ಸಭ್ಯ ಕುಟುಂಬ. ತಾಯಿಯ ವರ್ಗವಣೆಯಾದಂತೆಲ್ಲಾ ಮಕ್ಕಳೂ ಅವರೊಂದಿಗೆ ತೆರಳಬೇಕಾದ ಅನಿವಾರ್ಯತೆ ಇತ್ತು. ಮೂರನೇ ತರಗತಿಯವರೆಗೆ ಮಲ್ಪೆಯಲ್ಲಿ ಓದಿದ್ದ ಬನ್ನಂಜೆ ರಾಜ ನಾಲ್ಕನೇ ತರಗತಿಗೆ ಕುಂದಾಪುರದ ಶಾಲೆಗೆ ಸೇರಿಕೊಂಡ. ಅವರು ಖಾರ್ವಿಕೇರಿಯ ಬಾಡಿಗೆ ಮನೆಯಲ್ಲಿ ಊಳಿದುಕೊಂಡಿದ್ದರು. ಚಿಕ್ಕಂದಿನಲ್ಲಿ ರಾಜ ತೀರಾ ಅಂತರ್ಮುಖಿಯಾಗಿರುತ್ತಿದ್ದ, ಮಾತ್ರವಲ್ಲ ಸಂಕೋಚದ ಸ್ವಭಾವದವನಾಗಿದ್ದನೆಂದು ಅಂದು ಅವನನ್ನು ಹತ್ತಿರದಿಂದ ಕಂಡು ಬಲ್ಲವರು ಹೇಳುತ್ತಾರೆ. ಪ್ರೈಮೆರಿಯಿಂದ ಮುಗಿಸಿ ಹೈಸ್ಕೂಲ್ ಮೆಟ್ಟಿಲೇರಿದ ರಾಜ ತನ್ನ ನೆಚ್ಚಿನ ಶಾಂಭವಿ ಟೀಚರ್ ಯಾವುದೋ ವಿಚಾರಕ್ಕೆ ಬೈದರೆಂಬ ಕಾರಣಕ್ಕೆ ಅವರ ಮಾತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದ. 9ನೇ ತರಗತಿಯಲ್ಲಿ ಫೇಲ್ ಆದ. ಅದೇ ಸಿಟ್ಟಿಗೆ ಟೀಚರನ್ನೇ ಅಡ್ಡಗಟ್ಟಿ ಹೊಡೆಯಲು ಮುಂದಾಗಿದ್ದ! ಈತನ ತಾಯಿ ರಗಳೆ ಬೇಡವೆಂದು ಉಡುಪಿಗೆ ವರ್ಗವಣೆ ಪಡೆದು ಹೋಗಿದ್ದರು.  (ಕುಂದಾಪ್ರ ಡಾಟ್ ಕಾಂ)

ಅಲ್ಲಿಂದ ಮುಂದೆ ಕಾಲೇಜು, ಲಾ ಕಾಲೇಜುಗಳಲ್ಲಿ ಈತನದ್ದೇ ದರ್ಬಾರು. ಬನ್ನಂಜೆ ಪರಿಸರದ ಮಾವನ ಮನೆಯಲ್ಲೇ ಹೆಚ್ಚು ಉಳಿಯುತ್ತಿದ್ದರಿಂದ ಬನ್ನಂಜೆ ರಾಜ ಎಂದು ಗುರುತಿಸಿಕೊಂಡ. ಯಾರೇ ಅನ್ಯಾಯವಾಯಿತು ಎಂದು ಹೇಳಲಿ ಅಲ್ಲಿಗೆ ಧಾವಿಸಿ ಎಂಥ ಹೊಡೆದಾಟಕ್ಕೂ ಸೈ ಎಂದು ಎದೆ ಒಡ್ಡಿ ನಿಲ್ಲುತ್ತಿದ್ದ ರಾಜ ತನ್ನ ಎದೆಗಾರಿಕೆಯಿಂದ ಉಡುಪಿ-ಮಂಗಳೂರು ಮತ್ತು ಕುಂದಾಪುರದಲ್ಲಿ ಸ್ನೇಹಿತರ ಭಾರೀ ಬಳಗ ಹೊಂದಿದ್ದಷ್ಟೇ ಅಲ್ಲ, ಅಪರಾಧ ಲೋಕಕ್ಕೂ ನಿಧಾನ ತನಗರಿವಿಲ್ಲದಂತೆಯೇ ಹೆಜ್ಜೆ ಹಾಕಿದ. ಎಸ್.ಟಿ.ಡಿ ಬೂತ್ ಇಟ್ಟುಕೊಂಡು, ಖಾಸಗಿ ಬಸ್ ಓಡಿಸಿಕೊಂಡು ಬರುತ್ತಿದ್ದ ರಾಜ ಭೂಗತ ಲೋಕದ ನಂಟನ್ನು ನಿಧಾನವಾಗಿ ಬೆಳೆಸಿಕೊಂಡಿದ್ದ. ಬ್ರಹ್ಮಾವರದ ಕುಶಲ ಶೆಟ್ಟಿ ಎಂಬುವವರನ್ನು ಗುಂಟಿಕ್ಕಿ ಕೊಂದು ಪ್ರಥಮ ಭಾರಿಗೆ ಈ ಭಾಗದಲ್ಲಿ ಗುಂಡಿನ ಸದ್ದು ಕೇಳಿಸುವಂತೆ ಮಾಡಿದ್ದಲ್ಲದೇ, ಭೂಗತ ಲೋಕಕ್ಕೂ ಸಂಪೂರ್ಣವಾಗಿ ಎಂಟ್ರಿ ಕೊಟ್ಟದ್ದ. ಮಲ್ಪೆಯಿಂದ ಬೆಂಗಳೂರು, ದುಬೈ, ಮೊರಾಕ್ಕೊದಲ್ಲಿದ್ದುಕೊಂಡು ದೊಡ್ಡ ಉದ್ಯಮಿಗಳ ಪಾಲಿಗೆ ದುಸ್ವಪ್ನನಾಗಿದ್ದ.  (ಕುಂದಾಪ್ರ ಡಾಟ್ ಕಾಂ)

ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ್ ಗೆ ಕರೆ ಮಾಡುತ್ತಿದ್ದ!
ಕುಂದಾಪುರದ ಪ್ರಸಿದ್ಧ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ್ ಅವರಿಗೆ ದುಬೈ ಅಪರಿಚಿತ ನಂಬರಿಂದ ಆಗಾಗ ಕರೆ ಮಾಡುತ್ತಿದ್ದ ರಾಜ ತನಗೆ ಬೇಕಾದ ಕಾನೂನು ಸಲಹೆಯನ್ನು ಅವರಿಂದ ಪಡೆಯಲು ಪ್ರಯತ್ನಿಸುತ್ತಿದ್ದ ಎಂಬ ವಿಚಾರ ಆತನ ಬಂಧನವಾದ ಬಳಿಕ ಬೆಳಕಿಗೆ ಬಂದಿತ್ತು.  (ಕುಂದಾಪ್ರ ಡಾಟ್ ಕಾಂ)

ಅಂದು ಅಂಕೋಲದ ಬೀದಿಯಲ್ಲಿ ಗಣಿ ದೊರೆ ಆರ್. ಎನ್. ನಾಯ್ಕ ಅವರ ದೇಹ ಉರುಳುತ್ತಲೇ, ಇತ್ತ ಕುಂದಾಪುರದ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಕರೆ ಮಾಡಿದ್ದ ರಾಜ, ಹತ್ಯೆಗೈದ ಆರೋಪ ಹೊತ್ತ ತನ್ನ ಹುಡುಗರ ಪರವಾಗಿ ವಕಾಲತ್ತನ್ನು ವಹಿಸುವಂತೆ ಬೇಡಿಕೊಂಡಿದ್ದ. ಮುಂದೆ ಅನೇಕ ಸಲ ಅಪರಿಚಿತ ಸಂಖ್ಯೆಗಳಿಂದ ರಾಜ ಕರೆ ಮಾಡಿ ಕಾನೂನು ಸಲಹೆ ಪಡೆದುಕೊಳ್ಳುತ್ತಿದ್ದ ಎನ್ನಲಾಗಿದೆ.  (ಕುಂದಾಪ್ರ ಡಾಟ್ ಕಾಂ)

ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟರನ್ನು ಟಚ್ ಮಾಡಲು ಹೋಗಿ ಸಿಕ್ಕಿಬಿದ್ದ.
ದುಬೈನಲ್ಲಿ ಫಾರ್ಚುನ್ ಗ್ರೂಪ್ ಆಫ್ ಹೊಟೇಲ್ ಉದ್ಯಮವನ್ನು ನಡೆಸುತ್ತಿರುವ ಕುಂದಾಪುರ ಮೂಲದ ಖ್ಯಾತ ಉದ್ಯಮಿ ವಕ್ವಾಡಿ ಪ್ರವೀಣ್ ಶೆಟ್ಟಿಯವರಿಗೆ 2014ರ ಡಿಸೆಂಬರಿನಲ್ಲಿ ಕರೆ ಮಾಡಿದ ರಾಜ, ಐದು ಕೋಟಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದ. ಮೊದಲ ಎರಡು ಕರೆಗಳನ್ನು ನಿರ್ಲಕ್ಷಿಸಿದ್ದ ಪ್ರವೀಣ್ ಶೆಟ್ಟಿಯವರು ಮೂರನೇ ಕರೆಯನ್ನು ಗಂಭೀರವಾಗಿ ಪರಿಗಣಿಸಿ ದುಬೈ ಪೊಲೀಸರಲ್ಲಿ ದೂರು ದಾಖಲಿಸಿದ್ದರು.  (ಕುಂದಾಪ್ರ ಡಾಟ್ ಕಾಂ)

ಪ್ರವೀಣ್ ಶೆಟ್ಟಿಯವರು ದೂರು ದಾಖಲಿಸಿದ ಸುದ್ದಿ ತಿಳಿದೊಡನೆ ದೂರು ಹಿಂದೆಗೆಯುವಂತೆ ದುಂಬಾಲು ಬಿದ್ದ ರಾಜ, ದೂರು ವಾಪಾಸ್ ಪಡೆದರೆ ಮತ್ತೆ ಅವರ ತಂಟೆಗೆ ಬರುವುದಿಲ್ಲ, ವಾಪಾಸ್ ಪಡೆಯಲು ತಾನೇ ಹಣ ಬೇಕಿದ್ದರೆ ನೀಡಲು ಸಿದ್ಧ ಎಂದು ಅಂಗಲಾಚಿಕೊಂಡಿದ್ದ ಎಂದು ತಿಳಿದುಬಂದಿದೆ. ಆದರೆ ಅಷ್ಟರಲ್ಲೇ ಕಾಲ ಮೀರಿ ಹೋಗಿತ್ತು. ವಕ್ವಾಡಿ ಪ್ರವೀಣ್ ಶೆಟ್ಟಿಯವರಿಗೆ ಬೆದರಿಕೆ ಒಡ್ಡಿದ್ದೇ, ಬನ್ನಂಜೆ ರಾಜನನ್ನು ಪೊಲೀಸ್ ಕೈಗೆ ಸಿಲುಕಿಸಲು ಪ್ರಮುಖ ಕಾರಣವಾಯಿತು ಎಂದು ಹೇಳಲಾಗುತ್ತಿದೆ. 

ಹೆಗಡೆ ಎಂಬ ಹೆಸರಲ್ಲಿ ಮೊರಕ್ಕೊದಲ್ಲಿ ತಲೆಮರೆಸಿಕೊಂಡಿದ್ದ ಬನ್ನಂಜೆ ರಾಜ ಆಲಿಯಸ್ ರಾಜೇಂದ್ರ ಕುಮಾರನನ್ನು ಮೊರಕ್ಕೊ ದೇಶದ ಕಸಾಬ್ಲಾಂಕಾ ಎಂಬಲ್ಲಿ ಸಿಬಿಐನ ವಿಶೇಷ ತನಿಖಾ ತಂಡದ ಪೊಲೀಸರು ಅಲ್ಲಿನ ಪೊಲೀಸರ ಸಹಾಯದಿಂದ ಫೆ.10ರಂದು ಬಂಧಿಸಿದ್ದರು. ಬೆಂಗಳೂರು ಪೊಲೀಸರು ಈತ ಮೊರಕ್ಕೋದಲ್ಲಿ ಅಡಗಿರುವ ಕುರಿತು ನೀಡಿದ್ದ ಮಹತ್ವದ ಸುಳಿವನ್ನು ಆಧರಿಸಿ ಬಂಧನ ಕಾರ್ಯಾಚರಣೆ ನಡೆಸಿದ್ದರು.  (ಕುಂದಾಪ್ರ ಡಾಟ್ ಕಾಂ)

ಭಾರತದ ಮನವಿಯನ್ನು ಮೊರಕ್ಕೋದ ಸುಪ್ರೀಂಕೋರ್ಟ್ ಪುರಸ್ಕರಿಸಿ ಆತನ ಹಸ್ತಾಂತರಕ್ಕೆ 2015ರ ಜೂನ್ 15 ರಂದು ಆದೇಶಿಸಿತ್ತು. ಹಸ್ತಾಂತರ ಬಗ್ಗೆ ಅಧಿಕೃತ ಮಾಹಿತಿಯನ್ನು ಆಗಸ್ಟ್ 6ರಂದು ಭಾರತಕ್ಕೆ ರವಾನಿಸಿತ್ತು. ಮೊರಕ್ಕೋಗೆ ತೆರಳಿದ್ದ ಬೆಂಗಳೂರು ಹೆಚ್ಚುವರಿ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹಾಗೂ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ನೇತೃತ್ವದ ತಂಡ ಬನ್ನಂಜೆ ರಾಜನನ್ನು ಶುಕ್ರವಾರ ಭಾರತಕ್ಕೆ ಕರೆತಂದಿತ್ತು  (ಕುಂದಾಪ್ರ ಡಾಟ್ ಕಾಂ)

ಸದ್ಯ ಉಡುಪಿಯಲ್ಲಿರುವ ಭೂಗತ ಪಾತಕಿ ಅಂಕೋಲದ ಉದ್ಯಮಿ ಆರ್.ಎನ್.ನಾಯಕ್ ಕೊಲೆ ಪ್ರಕರಣ ಸೇರಿದಂತೆ 47 ಅಪರಾಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ನಾಯಕ್ ಪ್ರಕರಣದಲ್ಲಿ ಆತನನ್ನು ಬೆಳಗಾವಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಪಿ. ಕೃಷ್ಣಭಟ್ ಮುಂದೆ ಹಾಜರುಪಡಿಸಲಾಗಿತ್ತು. ಬನ್ನಂಜೆಯನ್ನು ನ್ಯಾಯಾಲಯವು 28ರ ತನಕ ಪೊಲೀಸ್ ವಶಕ್ಕೆ ಒಪ್ಪಿಸಿದೆ. ಬನ್ನಂಜೆ ರಾಜನ ವಿರುದ್ಧ ಪೊಲೀಸರು ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಕೋಕಾ)ಯಡಿ ಪ್ರಕರಣ ಹೂಡಿದ್ದಾರೆ.  (ಕುಂದಾಪ್ರ ಡಾಟ್ ಕಾಂ)



ಕುಂದಾಪ್ರ ಡಾಟ್ ಕಾಂ- editor@kundapra.com