ಮಾತೆಯರ ಹಬ್ಬ: ವರಮಹಾಲಕ್ಷ್ಮೀ ವ್ರತ

 ಆಷಾಢ ಮಾಸದ ಕೊನೆಯ ದಿನ ಭೀಮನ ಅಮವಾಸ್ಯೆ ಕಳೆಯುತ್ತಿದ್ದ ಹಾಗೆ ಶ್ರಾವಣ ಮಾಸ ಪ್ರಾರಂಭ. ಈ ಹಿಂದೂ ಮಾಸದಲ್ಲಿ ಹಬ್ಬಗಳ ಸಾಲೇ ಸಾಲು ಎದಿರುಗೊಳ್ಳುತ್ತದೆ. ಈ ಮಾಸದಲ್ಲಿ ಬರುವ ಹಬ್ಬಗಳು ಮತ್ತು ವ್ರತಗಳು ಬೇರೆ ಯಾವ ಮಾಸದಲ್ಲಿಯೂ ಬರುವುದಿಲ್ಲ. ಆದ್ದರಿಂದಲೇ ಈ ಮಾಸ ಹಬ್ಬಗಳ ಮಾಸ ಎನ್ನುವರು.

ವರಮಹಾಲಕ್ಷ್ಮಿ ವೃತ:
      ಶುಭ ಶ್ರಾವಣ ಮಾಸದ ಶುಕ್ರವಾರವಾದ ಇಂದು ವರ ಮಹಾಲಕ್ಷ್ಮಿ ಹಬ್ಬ. ದಕ್ಷಿಣ ಭಾರತದ ಪ್ರಮುಖವಾದ ಹಬ್ಬಗಳಲ್ಲಿ ವರ ಮಹಾಲಕ್ಷ್ಮಿ ಹಬ್ಬವೂ ಒಂದು. ಸಕಲ ಐಶ್ವರ್ಯವನ್ನೂ ಕರುಣಿಸುವ ಮಹಾಲಕ್ಷ್ಮಿಗೆ ಮನೆಮನೆಯಲ್ಲಿ ಸಂಭ್ರಮದ ಪೂಜೆ ನಡೆಯುತ್ತದೆ. ಎಲ್ಲೆಲ್ಲೂ ಸುಖ, ಸಂಪತ್ತು, ಸಮೃದ್ಧಿಯನ್ನು ಕರುಣಿಸೋ ಭಾಗ್ಯದಾತೆಯ ಆರಾಧನೆ ನಡೆಯುತ್ತದೆ. ಶ್ರೀ ಮಹಾವಿಷ್ಣುವಿನ ಪತ್ನಿ ವರ ಮಹಾಲಕ್ಷ್ಮಿಯನ್ನು ಪೂಜಿಸಿದರೆ, ಸಕಲ ಸೌಭಾಗ್ಯವೂ ದೊರೆಯುತ್ತದೆ ಎಂಬ ನಂಬಿಕೆ ಜನರಲ್ಲಿದೆ. (ಕುಂದಾಪ್ರ ಡಾಟ್ ಕಾಂ)

ಪೂಜಾ ವಿಧಾನ : ಅಂದಿನ ದಿನ ಮುಂಜಾನೆ ಚುಮುಚುಮು ಬೆಳಕಿರುವಾಗಲೇ ಎದ್ದು, ಮನೆಯ ಮುಂದಿನ ಬಾಗಿಲಿಗೆ ಥಳಿ ರಂಗೋಲಿ ಹಾಕಿ, ಬಾಗಿಲಿಗೆ ಹಸಿರು ತೋರಣ ಕಟ್ಟಿದಾಗ ಮನೆಗೆ ಒಂದು ಬಗೆಯ ಕಳೆ. ಹೆಣ್ಣುಮಕ್ಕಳು ಅಭ್ಯಂಜನ ಮುಗಿಸಿಕೊಂಡು ರೇಷಿಮೆ ಬಟ್ಟೆ ಧರಿಸಿಕೊಂಡು ಸರಬರ ಓಡಾಡುತ್ತಾ ಪೂಜಾ ಸಾಮಗ್ರಿಗಳನ್ನೆಲ್ಲಾ ತಯಾರು ಮಾಡಿಕೊಂಡು ಪೂಜೆಗೆ ಸಿದ್ಧರಾಗುತ್ತಾರೆ.
ಆಭರಣಗಳಿಂದ ಭೂಷಿತೆಯಾದ ಲಕ್ಷ್ಮಿದೇವಿಯ ಮುಖವಾಡವನ್ನು ಒಂದು ಕಲಶದಲ್ಲಿರಿಸಿ ಅದಕ್ಕೆ ಚೆಂದವಾದ ಜರತಾರಿಯ ಅಂಚು ಸೆರಗು ಇರುವ ಸೀರೆಯನ್ನು ಉಡಿಸಲಾಗುತ್ತದೆ. ಹೀಗೆ ಅಲಂಕೃತಳಾದ ಶ್ರೀವಲ್ಲಭೆ ಬಾಳೆಯ ದಿಂಡಿನಿಂದ ಶೋಭಿತವಾದ ಒಂದು ಮಂಟಪದಲ್ಲಿ ಸ್ಥಾಪಿತಳಾಗುತ್ತಾಳೆ. ಆ ಮಂಟಪದ ಮೇಲ್ಭಾಗಕ್ಕೆ ಕಟ್ಟಿದ ಮಾವಿನ ತೋರಣ ಅದರ ಸೊಬಗನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಹೀಗೆ ಸ್ಥಾಪಿತವಾದ ಹರಿದ್ರಕುಂಕುಮಶೋಭಿತಳಾದ ಲಕ್ಷ್ಮಿದೇವಿಗೆ ಅರಿಶಿನ ಕುಂಕುಮ ಗೆಜ್ಜೆ ವಸ್ತ್ರ ಏರಿಸಿ ಪೂಜೆ ಮಾಡಲಾಗುತ್ತದೆ. ಸುಮಧುರ ಸುವಾಸನೆಯುಳ್ಳ ಸೇವಂತಿಗೆ, ಮಲ್ಲಿಗೆ, ಸಂಪಿಗೆ ಹೂವುಗಳಿಂದ ತಾಯಿ ಅಲಂಕೃತಳಾಗುತ್ತಾಳೆ. ಭಾಗ್ಯದ ಲಕ್ಷ್ಮಿ ಬಾರಮ್ಮ... ಎಂದು ಹಾಡುತ್ತ ಅತ್ಯಂತ ಹರ್ಷದಿಂದ, ಭಕ್ತಿಭಾವದಿಂದ ತಮ್ಮ ತಮ್ಮ ಮನೆಗಳಲ್ಲಿ ಶಾಶ್ವತವಾಗಿ ನೆಲೆಸಿ ಹರಿಸಲಿ ಎಂದು ಆಕೆಯನ್ನು ಬರಮಾಡಿಕೊಳ್ಳುತ್ತಾರೆ. (ಕುಂದಾಪ್ರ ಡಾಟ್ ಕಾಂ)

ನೈವೇದ್ಯಕ್ಕಾಗಿ ವಿಧವಿಧವಾದ ಸಿಹಿತಿನಿಸುಗಳನ್ನು ಮಾಡಿ ಆಕೆಗೆ ಮೀಸಲಿಡಲಾಗುತ್ತದೆ. ಅದರಲ್ಲೂ ಪುಟಾಣಿ ಸಕ್ಕರೆಯೆಂದರೆ ಸರ್ವಾಲಂಕಾರಭೂಷಿತೆಗೆ ಬಹಳ ಪ್ರಿಯ. ಹೀಗೆ ಬಗೆಬಗೆಯ ಹಣ್ಣು, ಕಾಯಿ, ಸಿಹಿತಿನಿಸು, ಹಾಲುಸಕ್ಕರೆಗಳನ್ನು ಆಕೆಗೆ ಸಮರ್ಪಿಸಲಾಗುತ್ತದೆ. ಈ ದಿನ ಮುತ್ತೈದೆಯರನ್ನು ಮನೆಗೆ ಆಮಂತ್ರಿಸಿ ಅವರಿಗೆ ಅರಿಶಿನ ಕುಂಕುಮದ ಜೊತೆಗೆ ಮರದ ಬಾಗಣವನ್ನು ಕೊಡಲಾಗುತ್ತದೆ.

ನಂತರ ಕೊನಗೆ, ತಮ್ಮ ಸಂಕಷ್ಟಗಳನ್ನು ದೂರಮಾಡಿ ಸುಖ ಶಾಂತಿ ಶಾಶ್ವತವಾಗಿ ನೆಲೆಸಲಿ, ಸಮೃದ್ಧಿಯನ್ನು ದಯಪಾಲಿಸಲಿ ಎಂದು ಹೆಂಗಳೆಯರು ಆರತಿ ಬೆಳಗುತ್ತಾರೆ

ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು

ನಿಮ್ಮ ಪ್ರತಿಕ್ರಿಯೆ ಬರೆಯಿರಿ 
editor@kundapra.com