ಸ್ವಾತಂತ್ರೋತ್ಸವ: ಅಂದಿನ ಶಾಲಾ ದಿನಗಳು

“ಅಬ್ಬಾ.. ಈ ತಿಂಗಳ್ ಒಂದ್ extra ರಜೆ ಸಿಕ್ಕತ್ತ್...” ಜುಲೈ ತಿಂಗಳು ಮುಗಿದ ಕೂಡ್ಲೆ ನೆನಪಾಪುದೆ ಅದೇ. ಈಗೀಗ ಆಫೀಸಿನ ಅದೇ routine ಕೆಲಸ ಮಾಡಿ ಮಾಡಿ ಬೇಜಾರ್ ಆದ ಕೂಡ್ಲೆ calendarಗೆ ಈ ತಿಂಗಳು ಎಲ್ಲಿ extra ಕೆಂಪು number ಇತ್ತ್ ಅಂದೇಳಿ ಕಾಂಬುಕೆ ಶುರು ಮಾಡ್ದಾಗಳಿಕೆಲ್ಲಾ, ಆಗಸ್ಟ್ ತಿಂಗಳ 15 ನೇ ತಾರೀಕು ಏಗಳಿಕೂ ಕೆಂಪಲ್ಲೆ ಇರತ್ತ್. ನಮ್ಮ ಸೌಭಾಗ್ಯ ಒಂದ್ ದಿನ like ಮಾಡಿ 11 ಗಂಟಿ ವರಿಗೆ ನಿದ್ರೆ ಮಾಡ್ಲಕಲಾ ಅಂದೇಳಿ. ಆದ್ರೂ ಆಗಸ್ಟ್ ತಿಂಗಳು ಬಂದ ಕೂಡ್ಲೆ ನೆನಪಾಪುದೆ primary ಶಾಲಿಯ ಆ ದಿನಗಳು. ಉಳ್ತೂರು ಶಾಲೆಯಲ್ಲಿ ವಿಜ್ರಂಭಣೆಯಿಂದ ಮಾಡುತಿದ್ದ ಸ್ವಾತಂತ್ರ್ಯೋತ್ಸವ. ಪ್ರತಿ ವಿಧ್ಯಾರ್ಥಿಗಳಿಗೆ ದೇಶ ಪ್ರೇಮದ ಕಿಚ್ಚನ್ನ ಪುಟಿದೆಳಿಸುವಂತೆ ಮಾಡುವ ಸ್ವಾತಂತ್ರ್ಯದ ಸ್ವತಂತ್ರ ದಿನಗಳು. ಮಕ್ಕಳಿಗೆ ವಿಧ್ಯಾರ್ಥಿಗಳಾಗಿ ಇಪ್ಪುವತಿಗೆ ಅವರಿಗೆ ದೇಶದ ಬಗ್ಗೆ, ದೇಶದ ವಿಶಿಷ್ಟತೆಯ ಬಗ್ಗೆ ಅಚ್ಚುಕಟ್ಟಾಗಿ ಹೇಳಿಕೊಡ್ತಿದ್ದ ಆ ದಿನಗಳು. 

ಆಗಳಿಕೆ ಆಗಸ್ಟ್ 15 ಕ್ಕೆ ಒಂದು ತಿಂಗಳು ಇಪ್ಪತಿಗೆ ಎಲ್ಲಾ ಸಿದ್ದತೆಗಳು ಶುರು ಆತಿದಿತ್. ಸ್ವಾತಂತ್ರ್ಯ ದಿನವನ್ನ ಶಾಲಿ ಮಿತಿಯಲ್ಲಿ ಎಷ್ಟ್ ಲೈಕ್ ಮಾಡ್ಲಕೋ ಅಷ್ಟ್ ಲೈಕ್ ಮಾಡುಕೆ ಶಾಲೆಯ ಎಲ್ಲ ಶಿಕ್ಷಕರು ಕಷ್ಟಪಡ್ತಿದಿರ್. ನಮಗೊ ಖುಷಿಯೋ ಖುಷಿ. Home-work ಮಾಡ್ಕ್ ಅಂದೇಳಿ ಇಲ್ಲ, ಪ್ರಶ್ನೆ ಕೆಂತ್ರ್ ಅಂದೇಳಿ ಇಲ್ಲ, ಮಾಷ್ಟ್ರು ಹೊಡಿತ್ರ್ ಅಂದೇಳಿ ಇಲ್ಲ. ಎಲ್ಲರೂ ನಾಟಕ, ನೃತ್ಯ, ಅದೂ-ಇದೂ ಅಂದೇಳಿ ಫುಲ್ busy. ಕ್ಲಾಸಿಗ್ ಕ್ಲಾಸೆ ಕಾಲಿ ಕಾಲಿ. ದಿನ ಬೆಳಿಗ್ಗೆ assembly. ಸ್ವಾತಂತ್ರ್ಯದ ದಿನದ rehearsals. Assembly ಸೇರುದೆ ಮಜ. ಪ್ರತಿ ಕ್ಲಾಸಿನ ಎಲ್ಲ ವಿಧ್ಯಾರ್ಥಿಗಳು ಬಂದು ಅವರವರ ದಳಗಳ line ಅಲ್ಲಿ height ಪ್ರಕಾರ ನಿಂತ್ಕಂಡ್ರ ಮೇಲೆ SPL (ವಿಧ್ಯಾರ್ಥಿ ಮುಖಂಡ) ಎಲ್ಲ ದಳಗಳ ಮುಖಂಡರಿಗೆ salute ಮಾಡಿ, ಕಾರ್ಯಕ್ರಮ ಶುರು ಮಾಡ್ಕ್. Line ಅಲ್ಲಿ ನಿಂತ್ ಮಾತಾಡ್ತಾ ಇದ್ರೆ ಪಟ್ಟಂದೇಳಿ ಮಂಡಿ ಮೇಲೆ ಬಡ್ಗಿ. ಲೈನ್ ವಾರಿ-ಪೀರಿ ಇದ್ರೆ ಅದಕ್ಕೂ ಬಿತ್ತ್ ಬಡ್ಗಿ. Uniform ಹೈಕಂಡ್ ಬರ್ಲ್ಯಾ ತಕೋ ಇನ್ನೊಂದ್ ಬಡ್ಗಿ, ಬಪ್ಪುದ್ ತಡ ಆಯ್ತಾ ತಪ್ಪದ್ದಲ್ಲ ಬಡ್ಗಿ. ಒಂದ್ ರೀತಿ ಬೆನ್ನ್ ಗಟ್ಟಿ ಆತಿತ್ತ್.  ನಾನ್ ಆಗ SPL. ಶ್ರೀದರ್ ಮಾಷ್ಟರ ಹತ್ರ ನಿತ್ಕಂಡ್ ಅಲ್ಲಿಂದ ಸಾವ್ದಾನ್- ವಿಶ್ರಾಮ್ ಅಂದೇಳಿ command ಕೊಡ್ಕಿದಿತ್. ನಮ್ಗೆ ಅವರ ಹತ್ರ ನಿತ್ಕಂಬುದೇ ಕಷ್ಟವಾತಿದಿತ್, ಇನ್ನೂ ವಿಶ್ರಾಮ್, ಸಾವ್ದಾನ್ ಎಲ್ಲಿ.? ಹಾಂಗೂ-ಹೀಂಗೂ ತಪ್ಪ್ ಮಾಡಿ ಮಾಡಿ ಕಡಿಕೆ ಸೋಲೆ ಗೆಲುವಿನ ಸೋಪಾನ ಅನ್ನೊ ಹಾಗೆ ಹೇಳಿಕೊಟ್ಟದ್ದನ್ನ ಸರಿಯಾಯಿ ಮಾಡುಕ್ ಶುರು ಮಾಡಿದೆವು. ಕೈ ಬಿಸುತ್ತಾ, ಎಲ್ಲರಿಗೂ salute ಕೊಡ್ತಾ ಹೋತಾ ಇದ್ರೆ ಒಳ್ಳೆ military ಯಲ್ಲಿ ಪೆರೇಡ್ ಮಾಡದ್ದ್ ಅನುಭವ. ಆಮೇಲೆ ಪ್ರಾರ್ಥನೆ, ದ್ವಜ ಗೀತೆ ಹೀಗೆ ಎಲ್ಲವನ್ನೂ rehearsal ಮಾಡಿ ಕ್ಲಾಸಿಗ್ ಹ್ವಾತಿದಿತ್. ನಾಟಕ ಹೇಳಿಕೊಡುಕೆ ಐತಾಳರು ಬತ್ತಿದಿರ್. ನಾನಂತೂ ಅವರು ಬಪ್ಪುದನ್ನೇ ಕಾಯ್ತಿದಿದಿ. ಎಷ್ಟ್ ಬೇಗಾ ಕ್ಲಾಸ್ಸಿಂದ ಹಾರುದ್ ಅಂದೇಳಿ. ಐತಾಳರ ನಾಟಕಗಳು ಆಗ ಬಯಂಕರ. Luna ದಲ್ಲಿ ಪುರ್ರ್ ಅಂದೆಳಿ ಬತ್ತಿದಿರ್.  ನಮ್ಗೆ ಕ್ಲಾಸ್ ತಪ್ಪತ್ತಲ ಅನ್ನೊ ಕುಷಿ. ಐತಾಳರು ಬಂದ್ರು, ಚಾ, ಗೋಲಿಬಜೆ ತಿಂದ್ರು, ನಾಟಕದ rehearsal ಶುರು. 

ಅಂತೂ ಇಂತೂ ಕಷ್ಟಪಟ್ಟ್ ಬಾಯಿಪಾಠ ಮಾಡಿ, ಆಗಸ್ಟ್ 15 ಕ್ಕೆ ತಯಾರ್ ಆಯ್ತ್. ಧ್ವಾಜಾರೋಹಣ, ಮೆರವಣಿಗೆ ಆದ್ಮೆಲೆ ಸಭಾ ಕಾರ್ಯಕ್ರಮ. ಬೆಳ್ಳಿಗ್ಗೆ ಬೇಗೆ ಬಂದ್ ಧ್ವಜಸ್ಥಂಬ ಪೂರಾ clean ಮಾಡಿ ಸುತ್ತಲೂ ಹೂಗಳನ್ನ ಹಾಕಿ ಅಲಂಕಾರ ಮಾಡ್ತ್. ಬೆಳಿಗ್ಗೆ ಬಪ್ಪತಿಗೆ ಮನಿ, ಬೇಲಿ ಎಲ್ಲ ಬದೆಗ್ ಹುಡ್ಕಿ, ಸುಮಾರ್ ಹೂ ತಕಂಡ್ ಬಂತ್.  ಶ್ರೀಧರ್ ಮಾಷ್ಟರು ಧ್ವಜವನ್ನ ಸಿದ್ದಮಾಡಿ, ಹೂವನ್ನೆಲ್ಲಾ ಹಾಕಿ ಧ್ವಜನ ಕಂಬಕ್ಕೆ ಸರಿಯಾಗಿ ಕಟ್ಟಿದ್ರ್. ಅವರು ಧ್ವಜನ ಹ್ಯಾಗೆ ಮಡಚಿ ಕಟ್ಟ ಬೇಕು ಅಂದೇಳಿ ಹೇಳಿ ಕೊಡ್ತಿದೀರ್.  ಎಲ್ಲ ಮಕ್ಕಳು ಸೇರಿದರು. ಸುಮಾರ್ ಮಕ್ಕಳು ಸಣ್ಣ ಸಣ್ಣ ತ್ರಿವರ್ಣ ಧ್ವಜನ ಬಪ್ಪತಿಗೆ ತಕಂಡ್ ಬಂದಿರ್. Essembly ಶುರು ಆಯಿತ್. ಊರಿನ ಗಣ್ಯರು ಧ್ವಜ ಹಾರಿಸಿದ್ರು. ಎಲ್ಲ ಕಡೆ ದೇಶ ಭಕ್ತಿಯ ಕಳೆ ನಲಿತಿತ್ತ್. 

ಧ್ವಜಾರೋಹಣ ಆದ ಕೂಡ್ಲೆ ಒಂದನೇ ಕ್ಲಾಸ್ಸಿಂದ ಹಿಡಿದು ಏಳನೇ ಕ್ಲಾಸಿನ ವರೆಗೂ ಎಲ್ಲ ಮಕ್ಕಳೂ ತ್ರಿವರ್ಣ ಧ್ವಜ ಹಿಡ್ಕಂಡ್ ಮೆರವಣಿಗೆ ಹೊರಟರು. ಅವರವರ ದಳಗಳ ಮುಖಂಡರು ಎಲ್ಲರನ್ನ ಒಟ್ಟು ಮಾಡಿ ಉಳ್ತೂರ್ ಪ್ಯಾಟಿ ಕಡಿಗೆ ಹೆಜ್ಜೆ ಹಾಕುಕ್ ಶುರು ಮಾಡಿದ್ರು. ದೇಶ ಭಕ್ತಿ ಗೀತೆ ಪ್ಯಾಟಿ ಇಡೀ ತುಂಬು ಹಾಂಗೆ ಮಕ್ಕಳೆಲ್ಲಾ ಹಾಡುಕ್ ಶುರು ಮಾಡ್ರ್. ಅವರವರ ದಳದವರು ಒಂದೊಂದು ಹಾಡನ್ನ ಹಾಡ್ತಾ ಇದ್ರೆ, ಒಂದನೇ ಕ್ಲಾಸ್, ಎರಡನೇ ಕ್ಲಾಸ್ ಮಕ್ಕಳು ಯಾವುದನ್ನ ಹೆಳ್ಬೆಕು ಅಂತ ಗೊತ್ತಾಯ್ದೆ ಅವರ ಮನಸಿಗೆ ಬಂದದ್ದನ್ನ ಮಣ-ಮಣ ಅಂಬುಕ್ ಶುರು ಮಾಡ್ರ್. ಮೊದ್ಲಿಗೆ ಮೆರವಣಿಗೆ ಮಲ್ಯಾಡಿ ಬದಿಗೆ diversion ತಕಂತ್. ಉಳ್ತೂರ್ ಪ್ಯಾಟಿಯಿಂದ ಮಲ್ಯಾಡಿ ಹ್ವಾಪಾಲೋರಿಗೂ ಯಾಕೊ ದೇಶ ಭಕ್ತಿ ಗೀತೆ ಸ್ವಲ್ಪ ನೀರಸ ಅನ್ನಸ್ತಿತ್ತ್. ಗಂಟಲು ಕಿರ್ಚ್ಕಂಡ್ ಹಾಡಿದವರಿಗೆ ಸ್ವಲ್ಪ ಸುಸ್ತ್ ಆದಂಗ್ ಅನ್ನಸ್ತಿತ್ತ್. ಯಾವಾಗ ಒಬ್ರ್ ಮನೆಗ್ ಚಾಕ್ಲೆಟ್ ಕೊಟ್ರೊ, ತಕೊ ಬಿಡ್ಬೆಡಾ, ಮತ್ತೆ ಹಾಡು ತೆಕ್ಕಟ್ಟೆವರಿಗೂ ಕೆಂಬುಕ್ ಶುರು ಮಾಡ್ತ್. ಹಾಗೆ ಮೆರವಣಿಗೆ ಮುತ್ತು ಮಾಷ್ಟರ ಮನೆ ದಾಟಿ ಸ್ವಲ್ಪ ದೂರ ಮುಂದೆ ಹೋಗಿ U turn ತಕಂಡ್ ಮತ್ತೆ ಉಳ್ತೂರ್ ಪ್ಯಾಟಿ ಕಡೆಗೆ ಹೊರ್ಟತ್. ಮುತ್ತು ಮಾಷ್ಟರ ಮನೆಗೆ ಎಲ್ಲರಿಗೂ ಒಂದ್ ಲಾಡಿನ ಪ್ಯಾಕೆಟ್ ಕೊಟ್ರ್. ಆ ಚೀಲ ಒಳ್ಳೆ ಅಜ್ಜಿ ಎಲೆ-ಅಡಿಕೆ ಚೀಲದ ಕಂಡೆಗ್ ಇದಿತ್. ಬೇರೆ ಚಾಕ್ಲೇಟ್ ಎಲ್ಲ ಆ ಚೀಲದೊಳಗೆ ತುಂಬ್ಕಂಡ್ ಜೋರಾಯಿ ಹಾಡು ಹೇಳ್ತಾ ಉಳ್ತೂರ್ ಪ್ಯಾಟಿ ಹತ್ರ ಬಂತ್. ಉಳ್ತೂರ್ ಪ್ಯಾಟೆಗ್ ಅಂತೂ ಪ್ರತಿ ಅಂಗಡಿಯವರೂ ಬಗಿ-ಬಗಿ ಚಾಕ್ಲೇಟ್, ಲಾಡು ಎಲ್ಲ ಕೊಡ್ತರ್ ಅಂದೆಳಿ ಮೊದ್ಲೆ ಗೊತ್ತಿಪುಕೊಯಿ ಶಾಲಿ uniform ಖಾಕಿ ಚಡ್ಡಿ ಜೇಬನ್ನ ದೊಡ್ಡದ್ ಮಾಡಿ ಹೋಲುಕ್ ಹೇಳಿದ್ದಿ. ಈಗ ಅದಕ್ಕ್ ಕೆಲ್ಸ ಬಂತ್ ಕಾಣಿ. 

ಎಲ್ಲೆಲ್ಲಿ ಚಾಕ್ಲೇಟ್ ಕೊಡ್ತಾರೆ ಅಂದೆಳಿ ಗೊತಾತಿತ್ತೋ, “ಬೋಲೋ ಭಾರತ್ ಮಾತಾ ಕೀ..... ಜೈ.. ” ಅಂದೆಳಿ sound ಆಕಾಶಕ್ಕೆ ಮುಟ್ಟುತಾ ಇತ್ತ್. ಈಗ ಬೇರೆ ಶಾಲೆ ಮಕ್ಕಳನ್ನ ಕಂಡ್ರೆ ಶಾಲೆಗಳ, ವಿಧ್ಯಾರ್ಥಿಗಳ ಪರಿಸ್ಥಿತಿ ಆಗಳಿನ ತರ ಇಲ್ಲ ಅನ್ಸುತ್ತೆ. ದೇಶಭಕ್ತಿ, ದೇಶ ಪ್ರೇಮ, ನಾಡು, ನುಡಿ ಇವು ಯಾವುದು ಮಕ್ಕಳಿಗೆ ಗೊತ್ತೇ ಇಲ್ಲಿಯೋ ಏನೋ ಅನ್ಸುತ್ತೆ. ನಾಳೆ ಅನ್ನೋ raceಗೆ ಎಲ್ಲರೂ ತಯಾರಾಗ್ತ ಇದಾರೆ ಅನ್ಸುತ್ತೆ. ಶಾಲೆ ಅನ್ನೋದು factory ಹಾಗೆ ಆಗಿದೆ. ಮನೋರಂಜನೆ ಇಲ್ಲ, ಆಟ ಇಲ್ಲ, ಪಟ್ಯೆತರ ಚಟುವಟಿಕೆಗಳಿಲ್ಲ, ಬರಿ ಓದು, ಓದು, ಓದು. ಹೊಯ್ಲಿಬಿಡಿ ಯಾಕೆ ಗಾಯವನ್ನ ಕೆರೆದು ನೋವು ಮಡ್ಕಂಬುದು. ಅಂತೂ ಮೆರವಣಿಗೆ ಹಾಗೆ ಉಳ್ತೂರಿಂದ ಹಲ್ತೂರಿಗ್ ಹ್ವಾಪು ದಾರೆಗೆ ಹೊಯಿ ಅಲ್ಲಿ ಒಂದ್ ಲಾಡನ್ನ ಕಿಸಿಗೆ ಹೈಕಂಡ್ ವಾಪಾಸ್ ತಿರ್ಕಂಡ್ ಬಂದ್ ಹೆಗ್ಡೆಯರ್ ಅಂಗಡಿ ಹತ್ರ ಬಂತ್. ಅಷ್ಟೊತ್ತಿಗಾಗ್ಲೆ ಚಾಕ್ಲೇಟ್, ಲಾಡು ತಿಂಬುದ್ರೊಳ್ಗೆ ಭಕ್ತಿ ಗೀತೆ ಶಕ್ತಿ ಕಡ್ಮಿ ಆಯ್ತ್. ಮಾಷ್ತ್ರೆಲ್ಲ ಹಾಡಿನಿ ಅಂದೇಳಿ ಕೊಲ್ ಹಿಡ್ಕಂಡ್ರೆ ಅಲ್ಲ್ ಸ್ವಲ್ಪ ಶಬ್ದ ಬತ್ತಿದಿತ್. ಹೆಗ್ದೆಯರ್ ಅಂಗಡೆಗ್ ಚಾಕ್ಲೇಟ್ ತಕಂಬತಿಗೆ ಮಕ್ಕಳ ಮುಖ ಬಾಡುಕ್ ಶುರು ಆಯ್ತ್. ಎಲ್ಲರ ಕಿಸಿ ಬಸ್ರಿ ಹೊಟ್ಟಿ ಕಂಡೆಗೆ ದೊಡ್ಡದಾಗಿ ಹರ್ದು ಹ್ವಾಪುಕ್ ಶುರು ಆಯ್ತ್. ಪಾಪ ಮಕ್ಕಳಿಗೆ ಅಷ್ಟ್ ಬಾರ ಹೊತ್ತಕಂಡ್ ಊರ್ ತಿರ್ಗಕ್ ಅಂದ್ರೆ ತಮಾಷಿಯಾ??. next ವರ್ಷದಿಂದ ಚಾಕ್ಲೇಟ್ ಹಾಕುಕೆ ಒಂದ್ ಗೂಡ್ ರಿಕ್ಷಾಕ್ಕೆ ಹೇಳುವ ಅಂದೇಳಿ ನಾನು ಪ್ರವೀಣ ಮಾತಾಡ್ಕಂತ್. “ಹ್ವಾ ಇವನನ್ನ ನಂಬಬೇಡ. ಕಡಿಕ್ ಚಾಲ್ಕೆಟ್ ಎಲ್ಲ ಸೀದಾ ಗುಳ್ಳಾಡಿಗೆ ತಕಂಡ್ ಹ್ವಾತ ” ಅಂದೇಳಿ pin ಇಟ್ಟ ಸುಶಾಂತ. ಅಂತೂ ಇಂತೂ ಎಲ್ಲ ಅಂಗಡಿ ಚಾಕ್ಲೇಟ್, ಲಾಡು ತುಂಬುಸ್ಕಂಡ್ ಮತ್ತೆ ವಾಪಾಸ್ ಶಾಲಿಗೆ ಸೇರುವತಿಗೆ ಯುದ್ದ ಮಾಡಿ ಬಂದ ಅನುಭವ. ಅಂತ ದೇಶ ಭಕ್ತಿ. ಎಲ್ಲರ ಕೆಮೆಗೆ ಧೇಶ ಪ್ರೇಮದ ಹಾಡುಗಳು ಗುಯಿ ಗುಡುತಿತ್ತ್. 

ಮೆರವಣಿಗೆ ಆದ ಮೇಲೆ ಸಾಂಸ್ಕೃತಿಕ ಕಾರ್ಯಕ್ರಮ, 7ನೇ ತರಗತಿಯಲ್ಲಿ ಬೇಜಾನ್ ಓದಿ ಜಾಸ್ತಿ ಮಾರ್ಕ್ಸ್ ತಕಂಡರಿಗೆ ವಿಧ್ಯಾರ್ಥಿ ವೇತನ, ನಾಟಕ ನೃತ್ಯ ಎಲ್ಲ ನಡಿತ್. ಹೀಗೆ ಪ್ರತಿ ಸ್ವಾತಂರ್ತ್ಯವೂ ಅರ್ಥಪೂರ್ಣವಾಗಿ, ಪರಿಪೂರ್ಣವಾಗಿ ಆಚರಣೆ ಮಾಡ್ತೀದಿತ್.  ಈಗೆಲ್ಲ ಸ್ವಾತಂತ್ರೋತ್ಸವ ಅಂದ್ರೆ 11 ಗಂಟೆ ವರೆಗೂ ನಿದ್ರೆ, ಆಮೇಲೆ ಸ್ವಲ್ಪ news, rest rest rest. ಕಾಲ ಬದ್ಲಾಯ್ತೆ ಅಲ್ಲಲ್ಲ ನಾವು ಬದ್ಲಾಯ್ತೆ . ಎನಂತ್ರಿ?? 
-ದಿಲೀಪ್ ಕುಮಾರ್ ಶೆಟ್ಟಿ
ಚಿತ್ರ: ನಿತೀಶ್ ಪಿ ಬೈಂದೂರು

ಕುಂದಾಪ್ರ ಡಾಟ್ ಕಾಂ- editor@kundapra.com