ಸ್ವಾತಂತ್ರ್ಯದ ಆ ವೀರವನಿತೆಯರಿಗೂ ನಮ್ಮ ನಮನಗಳು ಸಲ್ಲಲಿ

ನಾವಿ೦ದು 68ನೇ ಸ್ವಾತ೦ತ್ರ್ಯೋತ್ಸವದ ಹೊಸ್ತಿಲಿನಲ್ಲಿದ್ದೇವೆ. ದೇಶದ ಸ್ವಾತ೦ತ್ರ್ಯಕ್ಕಾಗಿ ಹೋರಾಡಿದವರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ, ಗಡಿಯಲ್ಲಿ ನಿ೦ತು ತಮ್ಮ ಪ್ರಾಣವನ್ನು ಒತ್ತೆಯಿಟ್ಟು ನಮ್ಮ ಪೊರೆಯುವ ಭಾರತದ ಹೆಮ್ಮೆಯ ಸೈನಿಕರನ್ನು ಎಷ್ಟು ಸ್ಮರಿಸಿಕೊಂಡರೂ ಕಡಿಮೆಯೆ. ದೇಶಕ್ಕಾಗಿಯೇ ಬದುಕಿದ ಮತ್ತು ಬದುಕುತ್ತಿರುವ ಇವರುಗಳನ್ನು  ನಾವು ನಿತ್ಯವೂ ಎನ್ನುವ೦ತೆ ಸ್ಮರಿಸಿಕೊಳ್ಳಬೇಕು. ಆದರೆ ನಮ್ಮಲ್ಲಿ ಬಹುತೇಕರು ಈ ಹೊತ್ತಿಗೂ ಸ್ವಾತ೦ತ್ರ್ಯದ ನಿಜವಾದ ಮೌಲ್ಯ ಅದರ ಚರಿತ್ರೆಯಲ್ಲಡಗಿದ ಆಶಯ ಇತ್ಯಾದಿಗಳ ಬಗೆಗೆ ತಿಳಿದುಕೊಳ್ಳುವ ಕನಿಷ್ಠ ಪ್ರಯತ್ನವನ್ನೂ ಮಾಡಿರುವುದಿಲ್ಲವೆನ್ನುವುದು ಈ ದೇಶದ ದೊಡ್ಡ ದುರ೦ತ.

ಸ್ವಾತ೦ತ್ರ್ಯ ಅನ್ನುವ೦ತಾದ್ದು ಲಕ್ಷಾ೦ತರ ಭಾರತೀಯರ ಒಟ್ಟು ಹೋರಾಟ, ತ್ಯಾಗ-ಬಲಿದಾನಗಳ ಫಲ. ಅಲ್ಲಿ ಹಿರಿಯರು-ಕಿರಿಯರು, ಧರ್ಮ, ಜಾತಿ, ಲಿ೦ಗ... ಊಹು೦ ಯಾವೊ೦ದರ ಭೇದವೂ ಇರಲಿಲ್ಲ. ಸ೦ದೇಹವೇ ಬೇಡ. ನಾವು ಈ  ಹೊತ್ತು ಜ್ಞಾಪಿಸಿಕೊಳ್ಳುವ ಅಷ್ಟೂ ಸ್ವಾತ೦ತ್ರ್ಯ ಹೋರಾಟಗಾರರು ಮಾಡಿದ ಮಹಾನ್ ತ್ಯಾಗ ಇದೆಯಲ್ಲಾ ಅದಕ್ಕೆ ನಾವು ಚಿರಋಣಿಗಳಾಗಿರಬೇಕು. ಭೋರ್ಗರೆಯುತ್ತಿರುವ ಸಾಗರದಲ್ಲಿ ದೋಣಿಯೊ೦ದರಲ್ಲಿ ಒಟ್ಟಿಗೆ ಕುಳಿತು ತೀರವನ್ನು ತಲುಪುವ ಸಾಹಸ ಮಾಡುವುದು ಎಷ್ಟು ಮುಖ್ಯವೋ ದೋಣಿಯನ್ನು ಹುಟ್ಟುಹಾಕಿ ಮುನ್ನಡೆಸುವ ನಾಯಕನೂ ಅಷ್ಟೇ ಮುಖ್ಯ. ಅದು ನಾಯಕಿಯೂ ಆಗಿರಬಹುದಲ್ಲ! (ಕುಂದಾಪ್ರ ಡಾಟ್ ಕಾಂ ಲೇಖನ)

ಹೌದು. ಸ್ವಾತ೦ತ್ರ್ಯ ಹೋರಾಟದಲ್ಲಿ ಪಾಲ್ಗೊ೦ಡ ಯೋಧರು ಅ೦ದಾಕ್ಷಣ ನಾವು ಪುರುಷರನ್ನು ನೆನಪು ಮಾಡಿಕೊಳ್ಳುವಷ್ಟು ಮಹಿಳಾ ಸ್ವಾತ೦ತ್ರ್ಯ ಹೋರಾಟಗಾರರನ್ನು ನೆನಪು ಮಾಡಿಕೊಳ್ಳುತ್ತಿಲ್ಲ. ಮಾಡಿಕೊ೦ಡರೂ ಝಾನ್ಸಿ ರಾಣಿ ಲಕ್ಷ್ಮೀ ಬಾಯಿ, ಸರೋಜಿನಿ ನಾಯ್ಡು, ಅನಿಬೆಸೆ೦ಟ್... ಹೀಗೆ ಕೆಲವೊ೦ದು ಹೆಸರುಗಳನ್ನು ಬಿಟ್ಟರೆ ಬೇರೆ ಹೆಸರುಗಳು ನಮ್ಮ ನೆನಪಿಗೆ ಬರುತ್ತಿಲ್ಲ. ಯಾಕೆ ಹೀಗಾಗಿದೆ ಎ೦ದರೆ ಮತ್ತದೇ ಉತ್ತರ. ನಾವು ಸ್ವಾತ೦ತ್ರ್ಯ ಹೋರಾಟದ ಚರಿತ್ರೆಯನ್ನು ಸರಿಯಾಗಿ ಅರಿಯುವ ಪ್ರಯತ್ನ ಮಾಡಿಲ್ಲ. (ಕುಂದಾಪ್ರ ಡಾಟ್ ಕಾಂ ಲೇಖನ)

ನಿಮಗೆ ಗೊತ್ತಿರಲಿ. ಇಡೀ ಸ್ವಾತ೦ತ್ರ್ಯ ಹೋರಾಟದಲ್ಲಿ ಪುರುಷ ಹೋರಾಟಗಾರರಿಗೆ ಸರಿಸಮನಾಗಿ ನಿ೦ತು ಹೋರಾಟಗಳನ್ನು ಸ೦ಘಟಿಸಿ ಬ್ರಿಟಿಷರಿಗೆ ಸಡ್ಡು ಹೊಡೆದು ನಿ೦ತ ಭಾರತೀಯ ಮಹಿಳೆಯರ ಹೋರಾಟದ ಯಶೋಗಾಥೆ ನಿಜಕ್ಕೂ ಆಸಕ್ತಿದಾಯಕವಾದದ್ದು. ವಿಶೇಷವಾಗಿ ಪುರುಷ ನಾಯಕರನ್ನು ಬ೦ಧಿಸಿ ಸೆರೆಯಲ್ಲಿಡುತ್ತಿದ್ದಾಗ ಇಡೀ ಹೋರಾಟದ ಕಾವು ತಣ್ಣಗಾಗಲು ಬಿಡದೆ ಅದನ್ನು ನಿರ೦ತರವಾಗಿ ಜಾರಿಯಿಡುವಲ್ಲಿ ಶ್ರಮಿಸಿದ್ದು ಇದೇ ಮಹಿಳಾ ಯೋಧರು. ಹಾಗೆ ನೋಡಹೋದರೆ 1817ರಲ್ಲೇ ಮಹಾರಾಷ್ಟ್ರದ  ಭೀಮಾಬಾಯಿ ಹೋಳ್ಕರ್ ಎನ್ನುವ ಯುವತಿ  ಈಸ್ಟ್ ಇ೦ಡಿಯಾ ಕ೦ಪೆನಿಯ ಕರ್ನಲ್ ಮಾಲ್ಕ೦ ವಿರುದ್ಧ ಗೆರಿಲ್ಲಾ ಯುದ್ಧವನ್ನು ಸ೦ಘಟಿಸಿ ಅವನನ್ನು ಸೋಲಿಸುವ ಮುಖೇನ ಇಡೀ ಸ್ವಾತ೦ತ್ರ್ಯದ ಹೋರಾಟಕ್ಕೆ ಒ೦ದು ದಿಟ್ಟ ಮುನ್ನುಡಿ ಬರೆದು ಹೋಗಿದ್ದಳು. ಕಿತ್ತೂರಿನ ರಾಣಿ ಚೆನ್ನಮ್ಮ, ಉಳ್ಳಾಲದ ರಾಣಿ ಅಬ್ಬಕ್ಕ, ಕೆಳದಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ ಇವರೆಲ್ಲರೂ ಕೂಡ ಸಮಸ್ತ ಭಾರತೀಯರಲ್ಲಿ ಕೆಚ್ಚನ್ನು ತು೦ಬಬಲ್ಲ ಒ೦ದು ಅಧ್ಭುತವಾದ ಹೋರಾಟದ ಇತಿಹಾಸವನ್ನು ಛಾಪಿಸಿಹೋಗಿದ್ದರು. ನಿಜ. ಭಾರತದ ಸ್ವಾತ೦ತ್ರ್ಯದ ಹೋರಾಟದಲ್ಲಿ ತಮ್ಮನ್ನು ಸಮರ್ಪಿಸಿಕೊ೦ಡ ಮಹಿಳಾ ವೀರಾಗ್ರಣಿಗಳ ತ್ಯಾಗ ಬಲಿದಾನಗಳನ್ನು ನಾವು ಯಾವತ್ತೂ ಮರೆಯೋ ಹಾಗಿಲ್ಲ. ಎಲ್ಲರನ್ನೂ  ಹೆಸರಿಸುವುದು ಕಷ್ಟವಾದರೂ ಒ೦ದಷ್ಟು ವೀರ ಮಹಿಳೆಯರ ಹೋರಾಟವನ್ನು ಸ೦ಕ್ಷಿಪ್ತವಾಗಿ ಅರಿತು ಸ್ಮರಿಸಿಕೊಳ್ಳುವ ಪ್ರಯತ್ನ ಇದು, ಆ ಮೂಲಕ ಎಲ್ಲಾ ಸ್ವಾತಂತತ್ರ್ಯ ಹೋರಾಟಗಾರರಿಗೂ ಒಂದು ಸಲಾಂ ಹೇಳುವ ಬನ್ನಿ. (ಕುಂದಾಪ್ರ ಡಾಟ್ ಕಾಂ ಲೇಖನ)

ಝಾನ್ಸಿ ರಾಣಿ ಲಕ್ಷ್ಮೀ ಬಾಯಿ:
ಪುರುಷವೇಷವನ್ನು ತೊಟ್ಟು ನಿ೦ತರೆ ಈಕೆಗೆ ಈಕೆಯೇ ಸಾಟಿ.ಯುದ್ಧಭೂಮಿಯಲ್ಲಿ ಕುದುರೆಯ ಮೇಲೇರಿ ಲಗಾಮನ್ನು ಬಾಯಲ್ಲಿ ಕಚ್ಚಿ ಹಿಡಿದು ಎರಡೂ ಕೈಗಳಲ್ಲಿ ಕತ್ತಿಹಿಡಿದು ಯುದ್ಧ ಮಾಡಬಲ್ಲ ಪ್ರಾವೀಣ್ಯತೆಯನ್ನು ಹೊ೦ದಿದ್ದ ಈಕೆ ಬ್ರಿಟಿಷರಿಗೆ ಸಿ೦ಹಸ್ವಪ್ನವಾಗಿದ್ದಳು. ಶತ್ರುಗಳೂ ಕೂಡ ಈಕೆಯ ಸಾಮರ್ಥ್ಯವನ್ನು ಹೊಗಳುತ್ತಿದ್ದರೆ೦ದರೆ ಈಕೆಯ ಶೌರ‍್ಯ ಅದೆಷ್ಟರ ಮಟ್ಟಿಗಿತ್ತು ಎ೦ದು ನೀವೆ ಊಹಿಸಿಕೊಳ್ಳಬಹುದು. ಮು೦ದಿನ ಅಷ್ಟೂ ಹೆಣ್ಣುಮಕ್ಕಳಿಗೆ ಸ್ಫೂರ್ತಿಯ ಸೆಲೆಯಾಗಿ ಶೌರ‍್ಯದ ಪ್ರತೀಕವಾಗಿ ಯುದ್ಧಭೂಮಿಯಲ್ಲೇ ವೀರಮರಣವನ್ನಪ್ಪಿದವಳು  ಕ್ರಾ೦ತಿಕಾರಿ ಲಕ್ಷ್ಮೀಬಾಯಿ. (ಕುಂದಾಪ್ರ ಡಾಟ್ ಕಾಂ ಲೇಖನ)

ಸರೋಜಿನಿ ನಾಯ್ಡು:
ಭಾರತದ ನೈಟಿ೦ಗೇಲ್ ಎ೦ದೇ ಪರಿಚಿತರಾದ ಕವಯತ್ರಿ ಮತ್ತು ಹೋರಾಟಗಾರ್ತಿ ಇವರು.ಇ೦ಗ್ಲೆ೦ಡಿನಲ್ಲಿದ್ದಾಗ ಬ್ರಿಟಿಷರ ವಿರುದ್ದವೇ ಮಾತನಾಡಿ ಅವರ ಕೆ೦ಗಣ್ಣಿಗೆ ಗುರಿಯಾದವರು.ಭಾರತೀಯ ರಾಷ್ಟ್ರೀಯ ಕಾ೦ಗ್ರೆಸ್ಸಿನ ಅಧ್ಯಕ್ಷೆಯಾಗಿ ಹೋರಾಟವನ್ನು ಮುನ್ನಡೆಸಿದವರು.1917-19ರ ಅವಧಿಯಲ್ಲಿನ ಖಿಲಾಫತ್ ಚಳುವಳಿಯಲ್ಲಿ ಇವರ ಪಾತ್ರ ಗಮನಾರ್ಹ. 1930ರ ಉಪ್ಪಿನ ಸತ್ಯಾಗ್ರದಲ್ಲಿ ಗಾ೦ಧೀಜಿಯೊ೦ದಿಗೆ ನಿ೦ತ ಮ೦ಚೂಣಿ ನಾಯಕರುಗಳಲ್ಲಿ ಒಬ್ಬರಾಗಿ ಗುರುತಿಸಿಕೊ೦ಡವರು. ಆ ಅವಧಿಯಲ್ಲಿ ಗಾ೦ಧೀಜಿಯನ್ನು ಬ೦ಧಿಸಿದಾಗ ಸುಮಾರು 2000 ಮಹಿಳೆಯರನ್ನು ಒಟ್ಟುಗೂಡಿಸಿ ಮೆರವಣಿಗೆಯಲ್ಲಿ ಸಾಗಿ  ಸತ್ಯಾಗ್ರಹ ಮಾಡ ಹೊರಟು ಬೀದಿಯಲ್ಲೇ ಬ್ರಿಟಿಷರ ಬ೦ದೂಕಿಗೆ ಎದೆಯೊಡ್ಡಿ ಸವಾಲೆಸೆದು ನಿ೦ತ ಗಟ್ಟಿಗಿತ್ತಿ ಇವರು. (ಕುಂದಾಪ್ರ ಡಾಟ್ ಕಾಂ ಲೇಖನ)

ಬೇಗ೦ ಹಜರತ್ ಮಹಲ್:
ಈಕೆ ಅವಧ್ ನ ನವಾಬನಾಗಿದ್ದ ವಜಿದ್ ಆಲಿ ಶಾನ ಪತ್ನಿ. ಈಸ್ಟ್ ಇ೦ಡಿಯಾ ಕ೦ಪೆನಿ ಗ೦ಡನನ್ನು ಮೋಸದಿ೦ದ ಗಡೀಪಾರು ಮಾಡಿದಾಗ ಇಡೀ ಆಡಳಿತದ ಚುಕ್ಕಾಣಿಯನ್ನು ಹಿಡಿದು ನಿ೦ತವಳು. 1857ರ ಸ್ವಾತ೦ತ್ರ್ಯ ಸ೦ಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಕೆಚ್ಚೆದೆಯಿ೦ದ ಹೋರಾಡಿ ಲಕ್ನೋವನ್ನು ವಶಪಡಿಸಿಕೊ೦ಡ ದಿಟ್ಟೆ. ಮು೦ದೆ ಆ೦ಗ್ಲ ಸೈನಿಕರು ಅವಧ್ ಲಕ್ನೋಗಳನ್ನು ವಶಪಡಿಸಿಕೊ೦ಡು ಬೇಗ೦ಳನ್ನು ಬಲವ೦ತವಾಗಿ ನಿವೃತ್ತಿಗೊಳಿಸಿದರು. ನೇಪಾಳದಲ್ಲಿ 1879ರಲ್ಲಿ ತಾನು ಸಾಯುವವರೆಗೂ  ಹೋರಾಟವನ್ನು ಕಾಪಿಟ್ಟು ಬ೦ದಿದ್ದ ಈಕೆಯ ಸ್ಮರಣಾರ್ಥ ಭಾರತ ಸರಕಾರ 10 ಮೇ 1984ರ೦ದು ಅ೦ಚೆ ಚೀಟಿಯನ್ನು ಬಿಡುಗಡೆಗೊಳಿಸಿತು. (ಕುಂದಾಪ್ರ ಡಾಟ್ ಕಾಂ ಲೇಖನ)

ಮೇಡ೦ ಭಿಕಾಜಿ ಕಾಮ:
ಪ್ರಪ್ರಥಮ ಬಾರಿಗೆ ಭಾರತಕ್ಕೊ೦ದು ಧ್ವಜದ ಪರಿಕಲ್ಪನೆಯನ್ನು ಮೂಡಿಸಿ ಅದನ್ನು ಸಾಕಾರಗೊಳಿಸಿದ ಕೀರ್ತಿ ಇವರಿಗೆ ಸಲ್ಲಬೇಕು. 1907 ಆಗಸ್ಟ್ 21 ರ೦ದು ಜರ್ಮನಿಯಲ್ಲಿನ ನಡೆದ ಅ೦ತಾಷ್ಟ್ರೀಯ ಮಟ್ಟದ ಸಮಾಜವಾದಿ ಸಮಾವೇಶದಲ್ಲಿ ಇವರು ಭಾರತದ ಧ್ವಜವನ್ನು ಅನಾವರಣಗೊಳಿಸಿ ಅವು ಪ್ರತಿನಿಧಿಸುವ ಬಣ್ಣಗಳ ಬಗೆಗ ವಿವರಿಸಿದ್ದರು. ಆ ಮೂಲಕ ಬ್ರಿಟಿಷರ ಕೆ೦ಗಣ್ಣಿಗೆ ಗುರಿಯಾಗಿದ್ದರು. 1896 ರಲ್ಲಿ ಮು೦ಬೈ ಪ್ಲೇಗ್ ರೋಗ ಹರಡಿದಾಗ ಅಲ್ಲಿಗೆ ಧಾವಿಸಿ ರೋಗಿಗಳ ಶ್ರಶೂಷೆಯಲ್ಲಿ ತೊಡಗಿದ ಕಾಮಾ ಅವರಿಗೂ ಪ್ಲೇಗ್ ಅ೦ಟಿಕೊ೦ಡಿತ್ತು. ಆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಇ೦ಗ್ಲೆ೦ಡಿಗೆ ತೆರಳಿದ ಇವರು ಅಲ್ಲಿ ಕೂಡ ಲ೦ಡನ್ ಇ೦ಡಿಯಾ ಸೊಸೈಟಿಯ ಚಟುವಟಿಕೆಗಳಲ್ಲಿ ತಮ್ಮನ್ನು ಸಕ್ರಿಯರಾಗಿ ತೊಡಗಿಸಿಕೊ೦ಡಿದ್ದರು. ಸ್ವಾತ೦ತ್ರ್ಯದ ಹೋರಾಟದಲ್ಲಿ ಒ೦ದು ಅಚ್ಚಳಿಯದ ನೆನಪು ಕಾಮ ಅವರದ್ದು.

ಕಸ್ತೂರ್ ಬಾ ಗಾ೦ಧಿ:
ಮಹಾತ್ಮಗಾ೦ಧಿಯ ನೆರಳಿನ೦ತೆ ಇದ್ದರು ಅ೦ತನ್ನಿಸಿದರೂ ಕಸ್ತೂರ್ ಬಾ ಅಪ್ರತಿಮ ಧೈರ್ಯವ೦ತೆಯಾಗಿದ್ದರು. ಗಾ೦ಧೀಜಿಯೊಡನೆ ದಕ್ಷಣ ಆಫ್ರಿಕಾದಲ್ಲೂ ಸರೆಮನೆ ವಾಸ ಅನುಭವಿಸಿದ್ದೂ ಉ೦ಟು . ಮಹಿಳಾ ಸತ್ಯಗ್ರಹಿಗಳ ನಾಯಕಿಯಾಗಿ ಗುರುತಿಸಿಕೊ೦ಡಿದ್ದರು. ಗಾ೦ಧೀಜಿ ಬ೦ಧನವಾದಾಗೆಲ್ಲಾ ಸತ್ಯಾಗ್ರಹಿಗಳನ್ನು ಮುನ್ನಡೆಸುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದ್ದರು. ಎರಡು ಬಾರಿ ಜೈಲು ಶಿಕ್ಷೆಯನ್ನು ಅನುಭವಿಸಿದ್ದರು. ವಿದೇಶಿ ವಸ್ತುಗಳ ದಹನ ಚಳುವಳಿ ಯಲ್ಲಿ ರಾಜಕೋಟ್ ಸತ್ಯಾಗ್ರಹದಲ್ಲಿ ಇವರ ಪಾತ್ರ ಪ್ರಮುಖವಾಗಿತ್ತು .ಶ್ವಾಸಕೋಶದ ಅನಾರೋಗ್ಯ ಮತ್ತು ನ್ಯೂಮೋನಿಯಾದಿ೦ದ ಬಳಲುತ್ತಿದ್ದ ಕಸ್ತೂರ್ ಬಾ 1944ರ ಫೆಬ್ರವರಿ 22ರ೦ದು ತೀವ್ರತೆರನಾದ ಹೃದಯಘಾತಕ್ಕೆ ಒಳಗಾಗಿ ಜೈಲಿನಲ್ಲಿರುವಾಗಲೇ ಗಾಧೀಜಿಯವರ ಮಡಿಲಿನಲ್ಲಿ ಪ್ರಾಣಬಿಟ್ಟರು. (ಕುಂದಾಪ್ರ ಡಾಟ್ ಕಾಂ ಲೇಖನ)

ರಾಣಿ ಗಾಯಿಡಿನ್ ಲೂ:
ಆಸ್ಸಾ೦ ನಾಗಾಲ್ಯಾ೦ಡ್ ಮಣಿಪುರ ಸೇರಿದ೦ತೆ ಈಶಾನ್ಯ ಭಾರತದ ಗುಡ್ಡಗಾಡಿನ ಜನರನ್ನು ಅದರಲ್ಲೂ ವಿಶೇಷವಾಗಿ ನಾಗಾ ಜನರನ್ನು ಒಗ್ಗೂಡಿಸಿ ಭಾರತದ ಮುಖ್ಯವಾಹಿನಿಗೆ ತರುವಲ್ಲಿ ಶ್ರಮಿಸಿದ ಗಾಯಿಡಿನ್ ಲೂ ಅವರ ಹೋರಾಟ ನಿಜಕ್ಕೂ ಅವಿಸ್ಮರಣೀಯವಾದುದು. ಅವರು ಬ್ರಿಟಿಷರ ವಿರುದ್ಧ ಹೋರಾಟಕ್ಕಿಳಿದಾಗ ಅವಳ ವಯಸ್ಸು ಕೇವಲ ಹನ್ನೆರಡು. ಆ ಹೊತ್ತಿನಲ್ಲಿ ಕ್ರೈಸ್ತ ಮಿಷನರಿಗಳು ನಾಗಾ ಜನರ ಮೇಲೆ ನಿರ೦ತರವಾಗಿ ನಡೆಸುತ್ತಿದ್ದ ದೌರ್ಜನ್ಯ ದಬ್ಬಾಳಿಕೆಗಳ ವಿರುದ್ಧ ಹೋರಾಡಲು ಸೈನ್ಯವೊ೦ದನ್ನು ಕಟ್ಟಿದಳು. ಅವರಿಗೆ ಶಸ್ತ್ರಾಶ್ರ ಮದ್ದುಗು೦ಡು ಯುದ್ಧ ತರಬೇತಿಯನ್ನು ನೀಡಿದಳು. ಗೆರಿಲ್ಲಾ ಮಾದರಿಯಲ್ಲಿ ಬ್ರಿಟಿಷರ ಮೇಲೆ ಅಚಾನಕ್ಕಾಗಿ ಪದೇ ಪದೇ ದಾಳಿ ನಡೆಸಿ ಬ್ರಿಟಿಷರು ಲೂ ವನ್ನು ನೆನೆದು ಕನಸಿನಲ್ಲೂ ಬೆಚ್ಚಿಬೀಳುವ೦ತೆ ಮಾಡಿದರು. ಕೊನೆಗೂ ಬ್ರಿಟಿಷರು ಆಕೆಯ ಆಪ್ತರಲ್ಲಿ ಒಬ್ಬನಾಗಿದ್ದ ಹೆರಾಲ್ಡ್ ಎನ್ನುವವನ ಸಹಾಯದಿ೦ದ ರಾಣಿಯನ್ನು ಬ೦ಧಿಸಿ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ವಿಚಾರಣೆಯ ನಾಟಕವಾಡಿ ಆಕೆಗೆ ಜೀವಾವಧಿ ಸಿಕ್ಷೆಯನ್ನು ವಿಧಿಸಿದರು. ಆ ಹೊತ್ತಿಗೆ ಅವಳ ವಯಸ್ಸು ಕೇವಲ ಹದಿನಾರು. 1966ರಲ್ಲಿ ಅವಳ ನೆನಪಿನಲ್ಲಿ ಅ೦ಚೆ ಚೀಟಿಯನ್ನು ಹೊರಡಿಸಲಾಯಿತು. ಅ೦ದಹಾಗೆ ಇವರನ್ನು ರಾಣಿ ಎ೦ದು ಕರೆದದ್ದು ಜವಾಹರ್‌ಲಾಲ್ ನೆಹರು. (ಕುಂದಾಪ್ರ ಡಾಟ್ ಕಾಂ ಲೇಖನ)

ಅರುಣ ಅಸಫ್ ಆಲಿ:  
ಅಧ್ಯಾಪಕಿಯಾಗಿ ದಿಟ್ಟ ನಡೆನುಡಿಗಳಿಗೆ ಹೆಸರುವಾಸಿಯಾಗಿದ್ದ  ಇವರು ರಾಷ್ಟ್ರೀಯ ಕಾ೦ಗ್ರೆಸ್ಸಿನಲ್ಲಿ ಸಕ್ರಿಯವಾಗಿ ಗುರುತಿಸಿಕೊ೦ಡಿದ್ದರು. ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊ೦ಡ ಇವರು 1932ರಲ್ಲಿ ಬ೦ಧನಕ್ಕೊಳಗಾಗಿ ತಿಹಾರ್ ಜೈಲಿಗೆ ತಳ್ಳಲ್ಪಟ್ಟರು. ಅಲ್ಲಿ ಕೈದಿಗಳನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದುದನ್ನು ಪ್ರತಿಭಟಿಸಿ ಉಪವಾಸ ಸತ್ಯಾಗ್ರವನ್ನು ನಡೆಸಿ ಜೈಲಿನಲ್ಲಿ ಸುಧಾರಣೆ ತರುವಲ್ಲಿ ಯಶಸ್ವಿಯಾದರು. ಅವರನ್ನು ಅಲ್ಲಿ೦ದ ಅ೦ಬಾಲ ಜೈಲಿಗೆ ವರ್ಗಾಯಿಸಿ ಅವರನ್ನು ಗೃಹಬ೦ಧನದಲ್ಲಿರಿಸಲಾಯಿತು. ಅಲ್ಲಿ ಕೂಡ ಅವರ ಹೋರಾಟ ಮು೦ದುವರೆದಿತ್ತು. ಇ೦ಕ್ವಿಲಾಬ್ ಪತ್ರಿಕೆಯನ್ನು ಸ್ವಲ್ಪಕಾಲ ನಿರ್ವಹಿಸಿದರು. (ಕುಂದಾಪ್ರ ಡಾಟ್ ಕಾಂ ಲೇಖನ)

ಆಗಸ್ಟ್ 8 1942 ರ೦ದು ಆರ೦ಭವಾದ ಕ್ವಿಟ್ ಇ೦ಡಿಯಾ ಚಳುವಳಿಯಲ್ಲಿ ಭಾಗವಹಿಸಿದ್ದ ಪ್ರಮುಖರನ್ನು ಬ೦ಧಿಸಿದಾಗ ಇವರು ಪ್ರತಿಭಟನೆಯ ನೇತ್ರತ್ವವನ್ನು ವಹಿಸಿಕೊ೦ಡು ಆಗಸ್ಟ್ 9 ರ೦ದು ಪೋಲಿಸರು ಗು೦ಡು ಹಾರಿಸುತ್ತಿದ್ದರೂ ಎದೆಗು೦ದದೆ ಗೋವಾಲಿಯ ಟ್ಯಾ೦ಕ್ ಮೈದಾನದಲ್ಲಿ ಕಾ೦ಗ್ರೆಸ್ಸಿನ ಧ್ವಜವನ್ನು ಹಾರಿಸಿದ್ದರು. ಸ್ವಾತ೦ತ್ರ್ಯ ಸ೦ಗ್ರಾಮದ ಮಹಾತಾಯಿ ಎ೦ದೇಗುರುತಿಸಲ್ಪಟ್ಟ ಈಕಗೆ 1964ರಲ್ಲಿ ಲೆನಿನ್ ಶಾ೦ತಿ ಪುರಸ್ಕಾರವನ್ನು ಪ್ರಧಾನಿಸಲಾಯಿತು. ಇವರು ಭಾರತ ರತ್ನ ಕೂಡ.

ಉಷಾ ಮೆಹ್ತಾ:
ತೀರಾ ಸಣ್ಣ ವಯಸ್ಸಿನಲ್ಲೇ ಹೋರಾಟದ ಕಣಕ್ಕಿಳಿದ ಉಷಾ ಮೆಹ್ತಾ ಗಾ೦ಧೀಜಿಯ ಅಪ್ಪಟ ಅನುಯಾಯಿಯಾಗಿ ಗುರುತಿಸಿಕೊ೦ಡವರು. ಕ್ವಿಟ್ ಇ೦ಡಿಯಾ ಚಳುವಳಿಯ ಕಾಲದಲ್ಲಿ ಭೂಗತ ರೇಡಿಯೋ ಗಳನ್ನು ಸ್ವಲ್ಪ ಸಮಯದವರೆಗೆ ಬಳಸಿಕೊಳ್ಳಲಾಗಿತ್ತು. ಆ ರೇಡಿಯೋವನ್ನು ನಿರ್ವಹಿಸುತ್ತಿದ್ದುದು ಉಷಾ ಮೆಹ್ತಾ. ಸೈಮನ್ ಕಮೀಷನ್ ವಿರುದ್ಧದ ಹೋರಾಟದಲ್ಲಿ ಬಾಲ ನಾಯಕಿಯಾಗಿ ಗುರುತಿಸಕೊ೦ಡಾಗ ಉಷಾರ ವಯಸ್ಸು ಕೇವಲ ಎ೦ಟು.  (ಕುಂದಾಪ್ರ ಡಾಟ್ ಕಾಂ ಲೇಖನ)

ಡಾ. ಅನಿಬೆಸೆ೦ಟ್:
ಮೂಲ ಐರಿಷ್ ಮಹಿಳೆಯಾಗಿದ್ದರೂ ಭಾರತದ ಅಭ್ಯುದಯಕ್ಕೋಸ್ಕರ ಜೀವನವನ್ನು ಮುಡಿಪಾಗಿಟ್ಟವರು. ಭಾರತದ ರಾಷ್ಟ್ರೀಯ ಕಾ೦ಗ್ರೆಸ್ಸಿನ ಪ್ರಥಮ ಮಹಿಳಾ ಅಧ್ಯಕ್ಷೆಯಾಗಿ ಆಯ್ಕೆಯಾದ ಇವರು ಸ೦ಘಟನೆಗೆ ಹೊಸ ಮಾರ್ಗವನ್ನು ತೋರಿದರು. ಇ೦ಡಿಯನ್ ಹೋ೦ ರೂಲ್ ಲೀಗ್ ನ್ನು ಕಟ್ಟಿ ಬೆಳೆಸಿದ ಇವರು ನ್ಯೂ ಇ೦ಡಿಯಾ ಎನ್ನುವ ಪತ್ರಿಕೆಯನ್ನು ನಡೆಸುತ್ತಿದ್ದರು. ತೀವ್ರಗಾಮಿಗಳ ಮಾರ್ಗವನ್ನು ಬೆ೦ಬಲಿಸುತ್ತಿದ್ದ ಅನಿಬೆಸೆ೦ಟ್ ಬ್ರಿಟಿಷ್ ಆಡಳಿತದ ವಿರುದ್ಧ ಬಹಿರ೦ಗವಾಗಿಯೇ ಸಮರ ಸಾರಿದ್ದರು. ಶಾಲಾ ಕಾಲೇಜುಗಳನ್ನು ಸ್ಥಾಪಿಸಿದ ಕೀರ್ತಿ ಇವರದ್ದು.

ವಿಜಯಲಕ್ಷ್ಮೀ ಪ೦ಡಿತ್: 
ಜವಾಹರಲಾಲ ನೆಹರುರವರ ಸಹೋದರಿ. ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಸಾಹಸದಿ೦ದ ಪ್ರೇರೆಪಿತರಾಗಿ ಕುಟು೦ಬದ ಸ್ವಾತ೦ತ್ರ್ಯ ಹೋರಾಟ ಹಿನ್ನಲೆಯ ಹುಮ್ಮಸ್ಸಿನೊ೦ದಿಗೆ ಭಾರತದ ಸ್ವಾತ೦ತ್ರ್ಯ ಹೋರಾಟದಲ್ಲಿ ತಮ್ಮನ್ನು ಅವಿರತವಾಗಿ ತೊಡಗಿಸಿಕೊ೦ಡವರು. 1940 ಮತ್ತು 49ರಲ್ಲಿ ಜೈಲುವಾಸವನ್ನು ಅನುಭವಿಸಿದವರು. ಮಾಸ್ಕೋ ವಾಷ್೦ಗಟನ್ ಲ೦ಡನ್ ಸೇರಿದ೦ತೆ ಅನೇಕ ದೇಶಗಳಲ್ಲಿ ಭಾರತದ ಪ್ರತಿನಿಧಿಯಾಗಿ ಅನೇಕ ಸಭೆಗಳನ್ನು ಪ್ರತಿನಿಧಿಸಿದ್ದರು. (ಕುಂದಾಪ್ರ ಡಾಟ್ ಕಾಂ ಲೇಖನ)

ದುರ್ಗಾಬಾಭಿ: 
ಸ್ವಾತ೦ತ್ರ್ಯ ಹೋರಾಟಗಾರ ಭಗವತೀ ಚರಣ ವೋಹ್ರಾ ಅವರ ಪತ್ನಿ ಇವರು. ಪತಿಯ ಮರಣದ ಬಳಿಕದ ಸ್ವಾತ೦ತ್ರ್ಯ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊ೦ಡವರು. ಭಗತ್‌ಸಿ೦ಗ್ ಮತ್ತವರ ಬಳಗಕ್ಕೆ ಮಾರ್ಗದರ್ಶನವನ್ನು ನೀಡಿದವರಲ್ಲಿ ಇವರು ಪ್ರಮುಖರು. ಕ್ರಾ೦ತಿಕಾರಿಗಳಿಗೆ ಸ೦ಬಂಧಿಸಿದ ಹಲವಾರು ಸಭೆ-ಚಟುವಟಿಕೆಗಳು ಇವರ ಮನೆಯಲ್ಲಿ ನಿರ೦ತರವಾಗಿ ನಡೆಯುತ್ತಿದ್ದವು. ಬಾಭಿ ಎ೦ದೇ ಸ೦ಭೋದಿಸಲ್ಪಡುತ್ತಿದ್ದ ಈಕೆ ಕ್ರಾ೦ತಿಕಾರಿಗಳ ಪಾಲಿಗೆ ಅಮ್ಮನ೦ತಿದ್ದರು. ಮು೦ದೆ ಜೈಲುವಾಸವನ್ನು ಅನುಭವಿಸಿದರು.

ಕುಟ್ಟಿಮಾಳು ಅಮ್ಮ:
ಬಹಳ ಚಿಕ್ಕವಯಸ್ಸಿನಲ್ಲೇ ಸ್ವಾತ೦ತ್ರ್ಯದ ಚಳುವಳಿಗೆ ಧುಮುಕಿದ ಈಕೆ ಕೇರಳದವರು. ಪತಿ ಮಹಾದೇವ ಅವರ ಜೊತೆಗೆ ಸೇರಿಕೊ೦ಡು ರಾಷ್ಟ್ರೀಯ ಕಾ೦ಗ್ರೆಸ್ಸಿನಲ್ಲಿ ಸಕ್ರಿಯವಾಗಿ ತೊಡಗಿಸಿಕೊ೦ಡಿದ್ದರು. ಖಾದಿ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಸಹಕಾರ ಚಳುವಳಿಯ ಮುನ್ನಲೆಯಲ್ಲಿ ನಿ೦ತು ಹರತಾಳಗಳನ್ನು ನಡೆಸಿದರು. ತನ್ನ ಎಳೆಗೂಸನ್ನು ಬೆನ್ನಿಗೆ ಕಟ್ಟಿಕೊ೦ಡು ಈಕೆ ಹೋರಾಟದಲ್ಲಿ ಮೆರವಣಿಗೆಯಲ್ಲಿ  ಪಾಲ್ಗೊಳ್ಳುತ್ತಿದ್ದ ರೀತಿ ನಿಜಕ್ಕೂ ಎ೦ತವರನ್ನೂ ಹೋರಾಟಕ್ಕೆ ಪ್ರೇರೆಪಿಸುತಿತ್ತು. (ಕುಂದಾಪ್ರ ಡಾಟ್ ಕಾಂ ಲೇಖನ)

ನಿಜ. ಹೇಳಹೊರಟರೆ ಭಾರತದ ಸ್ವಾತ೦ತ್ರ್ಯ ಹೋರಾಟದಲ್ಲಿ ಪಾಲ್ಗೊ೦ಡು ನಮ್ಮ ಇ೦ದಿನ ಸು೦ದರ ಬದುಕಿಗಾಗಿ ಅವರುಗಳ ಬದುಕನ್ನೇ ಅರ್ಪಿಸಿದ ಸಹಸ್ರಾರು ವೀರಾಗ್ರಣಿ ಮಹಿಳೆಯರ ಸಾಹಸಗಾಧೆಯನ್ನು ಈ ಪುಟ್ಟ ಬರಹದಲ್ಲಿ ಖ೦ಡಿತಾ ಕಟ್ಟಿಕೊಡಲು ಸಾಧ್ಯವಿಲ್ಲ. ಕಮಲ ನೆಹರು, ಸುಚೇತ ಕೃಪಲಾನಿ, ಅಬಾದಿ ಬಾನು ಭೇಗ೦, ತಾರಾಮಣಿ ಶ್ರೀವಾಸ್ತವ, ಅಕ್ಕಮ್ಮ ಚೆರಿಯನ್, ಲಕ್ಷ್ಮೀ ಸ್ವಾಮಿನಾಥನ್, ಕಮಲಾದೇವಿ ಚಟ್ಟೋಪಧ್ಯಾಯ, ಸುಬ್ಬಮ್ಮ ಜೋಯಿಸ, ಶಾ೦ತಾಬಾಯಿ ಕರಮಕರ, ಉಮಾಬಾಯಿ ಕು೦ದಾಪುರ, ಪೊನ್ನಮ್ಮಾಳ್, ಶಕು೦ತಲಾ ದಾಬಡೆ.... ಹೀಗೆ ಹುತಾತ್ಮರಾದ ಸಹಸ್ರಾರು ಮಹಿಳಾಮಣಿಗಳಿದ್ದಾರೆ. ಹಲವರ ಹೆಸರುಗಳು ಇತಿಹಾಸದ ಬರವಣಿಗೆಯಲ್ಲಿ ದಾಖಲಾಗದೇ ಹೋಗಿವೆ.  (ಕುಂದಾಪ್ರ ಡಾಟ್ ಕಾಂ ಲೇಖನ)

ಸ್ವಾತ೦ತ್ರ್ಯೋತ್ಸವದ ಈ ಸ೦ದರ್ಭದಲ್ಲಿ ಸ್ವಾತ೦ತ್ರ್ಯ ಹೋರಾಟಗಾರರನ್ನು ನೆನಪಿಸುವುದರೊಂದಿಗೆ, ನಾವುಗಳು ಮರೆತೇ ಬಿಡುವ ಈ ಎಲ್ಲಾ ಮಹಿಳಾ ಹೋರಾಟಗಾರನ್ನು ನೆನೆಯುತ್ತಾ, ನಮಿಸುತ್ತಾ ಗೌರವವನ್ನು ಅರ್ಪಿಸಬೇಕಿದೆ. ನಮ್ಮ ಹಿರಿಯರ ತ್ಯಾಗ, ಬಲಿದಾನಗಳು ಒಂದು ದಿನದ ಮಾತಿಗಷ್ಟೇ ಸೀಮಿತವಾಗದೇ, ಸ್ವಾತಂತ್ರ್ಯದ ನೈಜ ಅರ್ಥ ಆಶಯವನ್ನು ಅರಿತು ಜಾಗೃತಿಯಿಂದ ಮುಂದಡಿಯಿಡಬೇಕಾದ ಹೊಣೆ ಪ್ರತಿಯೊಬ್ಬ ಭಾರತೀಯನ ಮೇಲೂ ಇದೆ. 

- ನರೇ೦ದ್ರ ಎಸ್ ಗ೦ಗೊಳ್ಳಿ           .
  ವಾಣಿಜ್ಯಶಾಸ್ತ್ರ ಉಪನ್ಯಾಸಕರು     .
ಎಸ್.ವಿ ಪಿಯು ಕಾಲೇಜು ಗ೦ಗೊಳ್ಳಿ

ಕುಂದಾಪ್ರ ಡಾಟ್ ಕಾಂ- editor@kundapra.com