ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡುತ್ತಿದ್ದಾನೆ ಕುಂದಾಪುರ ಕುವರ

ನಮ್ಮೂರ ಸಂಗೀತ ಕುವರನಿಗೆ ಎರಡು ಪ್ರಶಸ್ತಿ

ಹೊಸ ಬಗೆಯ ಸಂಗೀತದ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿರುವ ಯಶಸ್ವಿ ಯುವ ಸಂಗೀತ ನಿರ್ದೇಶಕ, ಕುಂದಾಪುರ ತಾಲೂಕಿನ ಬಸ್ರೂರಿನ ಹುಡುಗ ರವಿ ಬಸ್ರೂರ್ ತೆಕ್ಕೆಯಲ್ಲಿ ಈ ಭಾರಿ ಎರಡು ಸಂಗೀತ ಪ್ರಶಸ್ತಿಗಳು ಸೇರಿಕೊಂಡಿದೆ. ಕಳೆದ ಕೆಲವು ದಶಕಗಳಿಂದ ಚಿತ್ರರಂಗದಲ್ಲಿ ಸಂಗೀತ ಸ್ವರ ಮೂಡಿಸುತ್ತಿದ್ದ ರವಿ ಬಸ್ರೂರ್ ಅವರಿಗೆ ಈ ಭಾರಿ  ಅವಳಿ ಪ್ರಶಸ್ತಿ ದೊರೆತಿರುವುದು ಅವರ ಪ್ರತಿಭೆಗೆ ಸಂದ ದೊಡ್ಡ ಗೌರವವರೇ ಸರಿ. 

ಅವರು ಒಂದೆಡೆ ಜೀ ಕನ್ನಡ ವಾಹಿನಿ ಕೊಡಮಾಡಿದ 2014ನೇ ಸಾಲಿನ (ಕುಂದಾಪ್ರ ಡಾಟ್ ಕಾಂ ಲೇಖನ) ‘ಜೀ ಮ್ಯೂಸಿಕ್ ಅವಾರ್ಡ್’ನ ಉತ್ತಮ ಹಿನ್ನೆಲೆ ಸ೦ಗೀತ ವಿಭಾಗದಲ್ಲಿ ಉಗ್ರಂ ಚಿತ್ರದ ಸಂಗೀತ ನಿರ್ದೇಶನಕ್ಕಾಗಿ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರೆ, ಕನ್ನಡ ಇಂಟರ್ ನ್ಯಾಷನಲ್ ಮ್ಯೂಸಿಕ್ ಅವಾರ್ಡ್ (ಕಿಮಾ) ಕೊಡಮಾಡುವ ಉತ್ತಮ ಹಿನ್ನೆಲೆ ಸಂಗೀತ ವಿಭಾಗದ ಪ್ರಶಸ್ತಿಯನ್ನು ಉಗ್ರಂ ಚಿತ್ರಕ್ಕಾಗಿಯೇ ಪಡೆದುಕೊಂಡಿದ್ದಾರೆ. ಅತ್ಯುತ್ತಮ ಸಂಯೋಜಕ (ಅತ್ಯುತ್ತಮ ಹಾಡು) ವಿಭಾಗದಲ್ಲಿಯೂ ರವಿ ಬಸ್ರೂರ್ ಅವರು ಪ್ರಬಲ ನಾಲ್ಕು ಸ್ವರ್ಧಿಗಳ ಪೈಕಿ ಓರ್ವರಾಗಿದ್ದರು. (ಕುಂದಾಪ್ರ ಡಾಟ್ ಕಾಂ ಲೇಖನ)

ಗುರುವನ್ನು ಮೀರಿಸಿದ ಶಿಷ್ಯ (ಕುಂದಾಪ್ರ ಡಾಟ್ ಕಾಂ ಲೇಖನ)
15 ವರ್ಷಗಳ ಹಿಂದೆ ಮ್ಯೂಸಿಕ್ ಪ್ರೋಗ್ರಾಂಮರ್ ಆಗಿ ವೃತ್ತಿ ಬದುಕು ಆರಂಭಿಸಿದ ರವಿ ಬಸ್ರೂರ್ 2005ರಲ್ಲಿಯೇ ಚಿತ್ರರಂಗದಿಂದ ವಿಮುಖರಾಗುಲು ಬಯಸಿದ್ದವರು. ಆ ಸಂದರ್ಭದಲ್ಲಿ(2005) ಅವರನ್ನು ಕರೆದು ಕೆಲಸ ಕೊಟ್ಟಿದ್ದು ಕನ್ನಡದ ಹೆಸರಾಂತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ. ರವಿ ಬಸ್ರೂರ್ ಈವರೆಗೆ ಮ್ಯೂಸಿಕ್ ಪ್ರೋಗ್ರಾಂಮರ್ ಆಗಿ ಸುಮಾರು 65ಕ್ಕೂ ಹೆಚ್ಚು ಚಿತ್ರಗಳನ್ನು ಮಾಡಿದ್ದು ಆ ಪೈಕಿ 25 ಚಿತ್ರಗಳನ್ನು ಅರ್ಜುನ್ ಜನ್ಯ ಅವರೊಂದಿಗೆ ಮಾಡಿದ್ದರು. ಇಂದು ಗುರುವನ್ನು ಮೀರಿಸುವಂತೆ ಬಸ್ರೂರ್ ಕನ್ನಡ ಚಿತ್ರರಂಗದಲ್ಲಿ ಬೆಳೆದು ನಿಂತಿದ್ದಾರೆ. ಕನ್ನಡದ ಚಿತ್ರರಂಗದ ಪ್ರಮುಖ ಸಂಗೀತ ನಿರ್ದೇಶಕರ ಸಾಲಿನಲ್ಲಿ ರವಿ ಬಸ್ರೂರ್ ಅವರ ಹೆಸರೂ ಕೂಡ ಅಲ್ಲಲ್ಲಿ ಕೇಳಿ ಬರುತ್ತಿದೆ. (ಕುಂದಾಪ್ರ ಡಾಟ್ ಕಾಂ ಲೇಖನ)

ಕನ್ನಡ, ಕುಂದಾಪ್ರ ಕನ್ನಡ, ತುಳುವಿನಲ್ಲಿ ರವಿ ಸಂಗೀತ (ಕುಂದಾಪ್ರ ಡಾಟ್ ಕಾಂ ಲೇಖನ)
ರವಿ ಬಸ್ರೂರು ಕನ್ನಡ ಚಿತ್ರರಂಗದಲ್ಲಷ್ಟೇ ಅಲ್ಲದೇ ಕುಂದಾಪುರ ಕನ್ನಡ ಹಾಗೂ ತುಳು ಸಿನೆಮಾಗಳಿಗೂ ಸಂಗೀತ ಸಂಯೋಜಿಸಿ ಸೈ ಎನಿಸಿಕೊಂಡಿದ್ದಾರೆ. ಕುಂದಾಪುರ ಕನ್ನಡದ ಆಲ್ಬಂ ಮೂಲಕ ಕುಂದನಾಡಿಗರ ಮನೆಮಾತಾಗಿ ಬಳಿಕ ಅವರದ್ದೇ ನಿರ್ದೇಶನದ ಗರ್ ಗರ್ ಮಂಡ್ಲ ಚಿತ್ರದ ಹಾಡಿನ ಮೂಲಕವೂ ಕುಂದಾಪ್ರ ಕನ್ನಡದಲ್ಲಿ ಹೊಸ ಭರವಸೆ ಮೂಡಿಸಿದವರು. ಇತ್ತೀಚಿಗೆ ಶತಕ ಪೂರೈಸಿದ ತುಳು ಚಿತ್ರ ಎಕ್ಕಸಕದಲ್ಲಿರೂ ರವಿ ಅವರ ಮ್ಯೂಸಿಕ್ ಭಾರಿ ಸದ್ದು ಮಾಡಿತ್ತು. ರವಿ ಈವರೆಗೆ ಹತ್ತಾರು ಕನ್ನಡ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದು ಸದ್ಯ ಕನ್ನಡ ಚಿತ್ರರಂಗದ ಬ್ಯೂಸಿ ನಿರ್ದೇಶಕರುಗಳಲ್ಲೊಬ್ಬರು. (ಕುಂದಾಪ್ರ ಡಾಟ್ ಕಾಂ ಲೇಖನ)

ಸಂಗೀತ ನಿರ್ದೇಶನದಿಂದ ನಿರ್ದೇಶನದತ್ತ... (ಕುಂದಾಪ್ರ ಡಾಟ್ ಕಾಂ ಲೇಖನ)
ರವಿ ಬಸ್ರೂರು ಕೇವಲ ಸಂಗೀತ ನಿರ್ದೇಶಕನಾಗಿ ಹೆಸರು ಮಾಡದೇ ಕುಂದಾಪುರದ ಕನ್ನಡದ ಸಿನೆಮಾ ಗರ್ ಗರ್ ಮಂಡ್ಲಕ್ಕೆ ಆಕ್ಷನ್-ಕಟ್ ಹೇಳುವ ಮೂಲಕ ನಿರ್ದೇಶನಕ್ಕೂ ಸೈ ಎನಿಸಿಕೊಂಡಿದ್ದರು. ಸಂಗೀತ ನಿರ್ದೇಶಕರು ನಿರ್ದೇಶಕರಾಗುವುದೇ ತೀರಾ ಅಪರೂಪ.  ಸದ್ಯದಲ್ಲೇ ಕುಂದಾಪುರ ಮತ್ತು ಮಂಡ್ಯ ಭಾಷೆ ಮಿಶ್ರಿತ ‘ಬಿಲಿಂಡರ್’ ಎಂಬ ಹೊಸ ಚಿತ್ರವನ್ನು ಅವರು ನಿರ್ದೇಶಿಸಲಿದ್ದಾರೆ. ಈ ನಡುವೆ ಬಸ್ರೂರ್ ಅವರ ರಿಂಗ್ ಮಾಸ್ಟರ್ ಚಿತ್ರದ ಸಂಗೀತ ನಿರ್ದೇಶನವೂ ಮುಂದುವರಿದಿದೆ. (ಕುಂದಾಪ್ರ ಡಾಟ್ ಕಾಂ ಲೇಖನ)

ಒಟ್ಟಿನಲ್ಲಿ ಕಠಿಣ ಶ್ರಮ, ವೃತ್ತಿಯಲ್ಲಿನ ಅಚಲವಾದ ನಂಬುಗೆ ಮತ್ತು ನಿರಂತರ ತೊಡಗಿಕೊಳ್ಳುವಿಕೆ ರವಿ ಬಸ್ರೂರ್ ಅವರನ್ನು ಉತ್ತುಂಗದ ಮೆಟ್ಟಿಲೇರುವಂತೆ ಮಾಡಿದೆ. ಅವರ ಯಶಸ್ಸಿನ ಓಟ ಹೀಗೆಯೇ ಮುಂದುವರಿಯಲಿ ಎಂದು 'ಕುಂದಾಪ್ರ ಡಾಟ್ ಕಾಂ' ಹಾರೈಸುತ್ತದೆ (ಕುಂದಾಪ್ರ ಡಾಟ್ ಕಾಂ ಲೇಖನ)

-ಸುನಿಲ್ ಹೆಚ್. ಜಿ. ಬೈಂದೂರು


ಕುಂದಾಪ್ರ ಡಾಟ್ ಕಾಂ- editor@kundapra.com