ಕಳ್ಳರು ತಪ್ಪಿಸಿಕೊಂಡ ವಿಡಿಯೋ ವಾಟ್ಸಪ್‌ನಲ್ಲಿ ಹರಿದಾಡುತ್ತಿದೆ


ಕಳ್ಳರೂ ಸಿಗಲಿಲ್ಲ. ಇಲಾಖೆಯ ಗೌಪ್ಯತೆಯೂ ಉಳಿಯಲಿಲ್ಲ
ಕುಂದಾಪುರ: ಹಾಡಹಗಲೇ ಕುಂದಾಪುರ ತಾಲೂಕಿನ ತಲ್ಲೂರು ರಾಷ್ಟ್ರೀಯ ಹೆದ್ದಾರಿಯ ಬಳಿ ಬಸ್ಸಿಗಾಗಿ ಕಾಯುತ್ತಿದ್ದ ಮಹಿಳೆಯ ಕುತ್ತಿಗೆಯಿಂದ ಸರ ಹರಿದುಕೊಂಡು ಬೈಕಿನಲ್ಲಿ ಪರಾರಿಯಾದ ಚಾಲಾಕಿ ಕಳ್ಳರನ್ನು ಹಿಡಿಯಲು ಕುಂದಾಪುರದ ಶಾಸ್ತ್ರೀವೃತ್ತದಲ್ಲಿ ಪೊಲೀಸರು ವಿಘಲರಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಭಾರಿ ಚರ್ಚೆಗೆ ಕಾರಣವಾಗಿದೆ. ಒಂದೆಡೆ ವಿಡಿಯೋ ನೋಡಿದ ಜನ ಕಳ್ಳರನ್ನು ಹಿಡಿಯಲಾಗದ ಬಗ್ಗೆ ಪೊಲೀಸರ ಬಗ್ಗೆ ಅಸಮಾಧಾನವನ್ನು ಹೊರಗೆಡವುತ್ತಿದ್ದರೇ, ಇತ್ತ ಇಲಾಖೆಯ ಬಳಿ ಗೌಪ್ಯವಾಗಿರಬೇಕಿದ್ದ ಈ ವಿಡಿಯೋ ಎಲ್ಲರ ಮೊಬೈಲುಗಳಿಗೆ ಬಂದು ಕುಳಿತಿರುವ ಬಗ್ಗೆ ಪೊಲೀಸರು ತಲೆಕೆಡಿಕೊಂಡಿದ್ದರು.

ಆದದ್ದೇನು?
ಬೈಕಿನಲ್ಲಿ ಹಲ್ಮೆಟ್ ಧರಿಸಿ ಬಂದ ಇಬ್ಬರು ಆಗಂತುಕರು ತಲ್ಲೂರಿನಲ್ಲಿ ಮಹಿಳೆಯ ಕುತ್ತಿಗೆಯಲ್ಲಿದ್ದ ಸರವನ್ನು ಹರಿದುಕೊಂಡು ಬೈಕಿನಲ್ಲಿ ಕೆಲವೇ ನಿಮಿಷಗಳಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಕುಂದಾಪುರಕ್ಕೆ ಬಂದಿದ್ದಾರೆ. ಅದಕ್ಕೂ ಮೊದಲೇ ಭಟ್ಕಳದಲ್ಲಿ ಸರಗಳ್ಳತನ ಮಾಡಿದ ಇದೇ ಚೋರರು ಕುಂದಾಪುರ ಮಾರ್ಗವಾಗಿ ಬರುತ್ತಿರುವ ಬಗ್ಗೆ ಇಲಾಖೆಗೆ ಮಾಹಿತಿ ಬಂದಿತ್ತು. ಅದನ್ನು ಉಪಅಧೀಕ್ಷಕರ ಕಛೇರಿಯಿಂದ ಎಲ್ಲಾ ಠಾಣೆಗೆ ತಿಳಿಸುವ ಹೊತ್ತಿಗೆ ತಲ್ಲೂರಿನಲ್ಲಿ ಪ್ರಕರಣ ಬೆಳಕಿಗೆ ಬಂದಿತ್ತು. ಕೂಡಲೇ ಎಚ್ಚೇತ್ತ ಅಧಿಕಾರಿಗಳು ಕುಂದಾಪುರದ ಶಾಸ್ತ್ರೀ ವೃತ್ತದಲ್ಲಿ ಬ್ಯಾರಿಕೇಡ್ ಅಡ್ಡಲಾಗಿ ನಿಲ್ಲಿಸಿ ವಾಹನ ಸಂಚಾಯಕ್ಕೆ ಒಂದೇ ಮಾರ್ಗವನ್ನು ತೆರೆದಿಟ್ಟರು. ಅಷ್ಟರಲ್ಲಿ ಅತಿವೇಗದಿಂದ ಬಂದ ಕಳ್ಳರನ್ನು ತಡೆಯಲು ಪೊಲೀಸ್ ಸಿಬ್ಬಂಧಿಗಳು ಪ್ರಯತ್ನಿಸಿದರೂ ಅವರನ್ನೇ ದೂಡಿಕೊಂಡು ಅವರು ಪರಾರಿಯಾಗಿದ್ದರು. ಅವರನ್ನು ಫಾಲೋ ಮಾಡಿಕೊಂಡು ಹೋದರೂ ಕೂಡ ಮುಂದೆ ಯಾವ ಕಡೆ ಸಾಗಿದರೆಂಬ ಮಾಹಿತಿ ಮಾತ್ರ ಇಲಾಖೆಗೆ ಲಭ್ಯವಾಗಲಿಲ್ಲ!   

ಕಳ್ಳರನ್ನು ಹಿಡಿಯಲು ವಿಘಲರಾದರೇ ಪೊಲೀಸರು?
ಹೌದು ಎನ್ನುತ್ತಾರೆ ಪ್ರಕರಣವನ್ನು ಪ್ರತ್ಯಕ್ಷ ಹಾಗೂ ವೀಡಿಯೋ ಕ್ಲಿಪ್ಪಿಂಗ್ ನಲ್ಲಿ ವೀಕ್ಷಿಸಿದ ಜನರು. ಕಳ್ಳರು ಇದೇ ಮಾರ್ಗವಾಗಿ ಬರುತ್ತಾರೆಂಬ ಸ್ಪಷ್ಟ ಮಾಹಿತಿ ಇತ್ತು. ಕುಂದಾಪುರದ ಸಂಗಮ್ ಬಳಿ ಅವರನ್ನು ನಿಲ್ಲಿಸಲು ಸನ್ನೆ ಮಾಡಿದರೂ ನಿಲ್ಲಿಸಿರಲಿಲ್ಲ ಎಂಬ ಮಾಹಿತಿಯೂ ಲಭಿಸಿತ್ತು. ಆದರೂ ಶಾಸ್ತ್ರೀ ವೃತ್ತದ ಬಳಿ ಪೂರ್ಣ ಬಂದ್ ಮಾಡದೇ ಭಾಗಶಃ ಬಂದ್ ಮಾಡಿದ್ದೇಕೆ ಎಂಬ ಪ್ರಶ್ನೆ ಸಹಜವಾಗಿ ಮೂಡಿತ್ತು. ಸಚಿವರುಗಳು ಬಂದಾಗ ರಸ್ತೆ ಬ್ಲಾಕ್ ಮಾಡುವ ಕರ್ತವ್ಯ ಪ್ರಜ್ಞೆ ಈ ಸಂದರ್ಭದಲ್ಲೇಕೆ ಉಪಯೋಗಕ್ಕೆ ಬರಲಿಲ್ಲ ಎಂಬುದು ಕೆಲವರಲ್ಲಿ ಆಶ್ಚರ್ಯವನ್ನುಂಟುಮಾಡಿತ್ತು. ಇಲಾಖೆಯಲ್ಲಿ ಅಷ್ಟು ಮಂದಿ ಸಿಬ್ಬಂಧಿಗಳಿದ್ದರೂ ಸರ್ಕಲ್ ಬಳಿ 2-3 ಮಂದಿ ಮಾತ್ರ ತಡೆಯಲು ನಿಂತದ್ದೇಕೆ? ಇಲಾಖೆಯ ಬಳಿ ಶಸ್ತ್ರಾಸ್ತ್ರಗಳಿದ್ದರೂ ಬರಿಗೈಯಲ್ಲಿ ಕಳ್ಳನನ್ನು ಹಿಡಿಯಲು ನಿಂತಿದ್ದು ಎಷ್ಟು ಸರಿ? ಸಾರ್ವಜನಿಕರ ಸಹಾಯವನ್ನು ಪಡೆದಿದ್ದರೇ ಸುಲಭವಾಗಿ ಕಳ್ಳನನ್ನು ಹಿಡಿಯಬಹುದಿತ್ತು ಎಂಬುದನ್ನು ಮರೆತಿದ್ದೇಕೆ? ಇಂತಹ ಕೆಲವು ಅಂಶಗಳು ಪ್ರಶ್ನೆಯಾಗಿಯೇ ಘಟನೆಯನ್ನು ನೋಡಿದವರಿಗೆ ಉಳಿದಿದೆ. ಹಗಲಿನಲ್ಲಿ ತಡೆಯಲು ಬಂದ ಪೊಲೀಸರನ್ನೇ ದೂಡಿ ಸಾಗಬೇಕಾದರೇ ಅವರೆಷ್ಟು ಪ್ರೀಪ್ಲಾನ್ಡ್ ಕಳ್ಳರು ಎಂಬುದು ಪೊಲೀಸರಿಗೆ ಮೊದಲೇ ತಿಳಿದಿರಬೇಕಿತ್ತು. ಕೊನೆ ಪಕ್ಷ ಕೋಟೇಶ್ವರ ಜಂಕ್ಷನ್ ಬಳಿ ಕರ್ತವ್ಯ ನಿರ್ವಹಿಸಬೇಕಾಗಿದ್ದ ಪೊಲೀಸರು ಆ ಕ್ಷಣ ಅಲ್ಲಿದ್ದರೇ ಕಳ್ಳರು ಯಾವ ಮಾರ್ಗವಾಗಿ ತೆರಳಿದರು ಎಂಬುದನ್ನಾದರೂ ತಿಳಿಯಬಹುದಾಗಿತ್ತು. ಅಲ್ಲಿಯೂ ಯಾರೂ ಇದ್ದಿರಲಿಲ್ಲ. ಕಳ್ಳರನ್ನು ಫಾಲೋ ಮಾಡಿಕೊಂಡು ಜೀಪು, ಬೈಕುಗಳಲ್ಲಿ ತೆರಳಿದವರಿಗೆ ಕಳ್ಳರು ಎತ್ತ ಹೋದರೂ ಎಂದು ತಿಳಿಯದೇ ಹೊಯಿತು.

ವಾಟ್ಸಪ್ ನಲ್ಲಿ ವಿಡಿಯೋ ಬಂದದ್ದು ಹೇಗೆ?
ತಲ್ಲೂರಿನಲ್ಲಿ ಭಾರಿ ಸಂಚಲನವನ್ನುಂಟುಮಾಡಿದ್ದ ಈ ಘಟನೆ ಬಗ್ಗೆ ವರದಿಯಾಗಿದ್ದರೇ ಪ್ರಕರಣ ಬಗ್ಗೆ ಸ್ಪಷ್ಟವಾಗಿ ಜನರಿಗೆ ತಿಳಿಯುತ್ತಲೇ ಇರಲಿಲ್ಲ. ಯಾವಾಗ ಶಾಸ್ತ್ರೀ ಸರ್ಕಲಿನಲ್ಲಿ ಪೊಲೀಸರ ಕೈಯಿಂದ ಕಳ್ಳರು ತಪ್ಪಿಸಿಕೊಂಡ ವಿಡಿಯೋ ವಾಟ್ಸಪ್ ನಲ್ಲಿ ಹರಿದಾಟತೊಡಗಿತೋ ಆವಾಗಲೇ ಜನ ಆಡಿಕೊಳ್ಳತೊಡಗಿದರು. ಕುಂದಾಪುರದ ಶಾಸ್ತ್ರೀ ವೃತ್ತದಲ್ಲಿರುವ ಸಿಸಿ ಕ್ಯಾಮಾರಾದ ನಿರ್ವಹಿಸುವವರಿಂದಲೇ ಈ ವಿಡಿಯೋ ಹೊರಬಿದ್ದಿರಬಹುದೆಂದು ಶಂಕಿಸಲಾಗಿದೆ. ಈಗಾಗಲೇ ಅದು ಇಲಾಖೆಗೂ ತಿಳಿದಿರುತ್ತದೆ. ಒಟ್ಟಿನಲ್ಲಿ ತಾಲೂಕಿನಲ್ಲಿ ಒಂದೂವರೆ ತಿಂಗಳಿನಲ್ಲಿ 5 ದೇವಾಲಯಗಳ ಕಳ್ಳತನ ಆಗಿರುವ ಬೆನ್ನಲೇ ಪೊಲೀಸರ ಈ ನಿರ್ಲಕ್ಷ್ಯ ಜನರು ಆಡಿಕೊಳ್ಳುವಂತೆ ಮಾಡಿತು. ಸಿಕ್ಕವರನ್ನೇ ಹಿಡಿಯಲಾಗದವರು ಇನ್ನು ಯಾರೆಂದು ತಿಳಿಯದವನನ್ನು ಎಷ್ಟು ಬೇಗನೆ ಹಿಡಿದಾರು ಎಂದು ಇಲಾಖೆಯ ವೈಫಲ್ಯದ ಬಗ್ಗೆ ದೂರಿಕೊಳ್ಳುತ್ತಿದ್ದಾರೆ. 

ಕಳ್ಳರು ತಪ್ಪಿಸಿಕೊಂಡ ವಿಡಿಯೋ ನೋಡಿ
ಕುಂದಾಪ್ರ ಡಾಟ್ ಕಾಂ- editor@kundapra.com