ಅಕ್ಷರದ ದೀಪ ಹೊತ್ತಿಸಿದ ಗುರುಗಳಿಗೊಂದು ಸಲಾಂ

ಎದೆಯ ಹಣತೆಯಲ್ಲಿ ಅಕ್ಷರದ ದೀಪ ಹೊತ್ತಿಸಿ ಅಗಣಿತ ಮಂದಿಯ ಬಾಳಿಗೆ ಭವ್ಯ ಬೆಳಕು ನೀಡದ ಪರಮ ಗುರುಗಳು ಈ ನಮ್ಮ ಶಿಕ್ಷಕರು. ಶಿಕ್ಷಣವೆನ್ನುವ ಸಾರ್ವತ್ರಿಕ ಹಾಗೂ ನಿರಂತರ ಪ್ರಕ್ರಿಯೆಯಲ್ಲಿ ಪ್ರತಿ ಶಿಕ್ಷಕರ ಪಾತ್ರವೂ ಇಲ್ಲಿ ಮಹತ್ತ್ವದ್ದು. ಆ ಕಾರಣದಿಂದಲೇ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತದೆ. ಭಾರತದಲ್ಲಿ ಗುರುಪರಂಪರೆಗೆ ದೊಡ್ಡ ಇತಿಹಾಸವೇ ಇದೆ. ದೇಶದ ಮಾಜಿ ರಾಷ್ಟ್ರಪತಿ ದಿವಂಗತ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಸವಿನೆನಪಿಗಾಗಿ ಸೆ.5ನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ಸಡಗರದೊಂದಿಗೆ ಎಲ್ಲಾ ಶಿಕ್ಷಕರುಗಳಿಗೆ ಶುಭಾಶಯಗಳನ್ನು ತಿಳಿಸುತ್ತಾ ನಮ್ಮ ನಡುವೆಯೇ ಇದ್ದು ವಿಶೇಷವಾಗಿ ಗುರುತಿಸಿಕೊಂಡ ಕುಂದಾಪುರ ತಾಲೂಕಿನ ಮೂವರು ಶಿಕ್ಷಕರನ್ನು 'ಕುಂದಾಪ್ರ ಡಾಟ್ ಕಾಂ' ಸಂದರ್ಶಿಸಿ ಈ ವರದಿ ಪ್ರಕಟಿಸಿದೆ. (ಕುಂದಾಪ್ರ ಡಾಟ್ ಕಾಂ)

17 ವರ್ಷದಲ್ಲಿ ನಾಲ್ಕೂವರೆ ದಿನವಷ್ಟೇ ರಜೆ ಹಾಕಿದ ಶಿಕ್ಷಕ ಗುರುರಾಜ ಪಿ.

ವೃತ್ತಿಯಲ್ಲಿನ ಸಮರ್ಪಣಾ ಭಾವ ಎಂದರೆ ಇದೇ ಇರಬೇಕು. ಎಲ್ಲಾ ನೌಕರರು ಸಾಮಾನ್ಯವಾಗಿ ಒಂದಲ್ಲ ಒಂದು ಕಾರಣಕ್ಕೆ ರಜೆ ಹಾಕಿ ವರ್ಷದಲ್ಲಿ ತಮ್ಮ ರಜಾ ಕೋಟಾವನ್ನು ಮುಗಿಸಿಕೊಳ್ಳಲು ಹಂಬಲಿಸುತ್ತಾರೆ. ಆದರೆ ಉಪ್ಪಂದ ಮಡಿಕಲ್ ನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಗುರುರಾಜ್ ಪಿ ಮಾತ್ರ ತಮ್ಮ ಹದಿನೇಳು ವರ್ಷಗಳ ವೃತ್ತಿ ಜೀವನದಲ್ಲಿ ನಾಲ್ಕೂವರೆ ದಿನ ಮಾತ್ರ ರಜೆ ಹಾಕಿ ವೃತ್ತಿ ಪ್ರೇಮ ಮೆರೆದಿದ್ದಾರೆ.

1998ರಲ್ಲಿ ಕೊಡೇರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನಾಗಿ ವೃತ್ತಿ ಆರಂಭಿಸಿದ ಗುರುರಾಜ್ ಅವರು ನಾವುಂದದ ಮಸ್ಕಿ, ನಾಗೂರು ಬಳಿಯ ಗುಂಜಾನುಗುಡ್ಡೆ, ಹೇರೂರಿನ ಆಲಗದ್ದೆಕೇರಿ ಶಾಲೆಗಳಲ್ಲಿ ದುಡಿದು ಕಳೆದ ಐದು ವರ್ಷಗಳಿಂದ ಮಡಿಕಲ್ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ದೇವರು ಉತ್ತಮ ಆರೋಗ್ಯ ಹಾಗೂ ಅವಕಾಶವನ್ನು ಕೊಟ್ಟಿದ್ದಾನೆ. ತಾನು ವೃತ್ತಿ ಬದುಕು ಆರಂಭಿಸಿದ್ದೇ ಬಹಳ ತಡವಾಗಿ. ಅದರಲ್ಲಿಯೂ ರಜೆ ಹಾಕಿಕೊಂಡು ಕುಳಿತರೆ ಏನು ಪ್ರಯೋಜನ. ನಿವೃತ್ತಿ ಹೊಂದುವುದರೊಳಗೆ ಮಕ್ಕಳೊಂದಿಗೆ ಬೆರತು, ಕಲಿಸಿ, ಕಲಿತು ಬದುಕುವುದರಲ್ಲಿಯೇ ಖುಪಿ ಇದೆ. ಅದಕ್ಕಾಗಿ ರಜೆ ಹಾಕದೆ ನನ್ನ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಿದ್ದೇನೆ ಎನ್ನುವ ಬೈಂದೂರು ಪಡುವರಿಯವರಾದ ಗುರುರಾಜ್ ಅವರು ನಾಲ್ಕೂವರೆ ರಜೆಯಲ್ಲಿ ಮೂರನ್ನು ತನ್ನ ಅಣ್ಣ ಮಕ್ಕಳ ಮದುವೆಯ ಸಲುವಾಗಿ ಅನಿವಾರ್ಯವಿದ್ದುದರಿಂದ ಹಾಕಿದ್ದರು. (ಕುಂದಾಪ್ರ ಡಾಟ್ ಕಾಂ)

ಮಡಿಕಲ್ ಶಾಲೆಯ ಮುಖ್ಯ ಶಿಕ್ಷಕ ಕುಷ್ಠ ಪೂಜಾರಿ ಸೇರಿದಂತೆ ಶಾಲೆಯ ಇತರ ಸಹಶಿಕ್ಷಕರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ನೀಡಿದ ಸಹಕಾರವನ್ನು ಅವರು ಪ್ರೀತಿಯಿಂದ ನೆನೆಯುತ್ತಾರೆ.

ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕರಾದ ಗುರುರಾಜ್ ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ  2014ರಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಕೊಡಮಾಡಿದ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 2001ರಲ್ಲಿ ಜನಗಣತಿಯಲ್ಲಿ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಿದ್ದಕ್ಕೆ ಜನಗಣತಿ ಆಯೋಗದಿಂದ ಕಂಚಿನ ಪದಕವನ್ನು ಪಡೆದಿದ್ದರು.  (ಕುಂದಾಪ್ರ ಡಾಟ್ ಕಾಂ)
ಗುರುರಾಜ ಪಿ. ಅವರ ಮೊಬೈಲ್: 9743691073
****

ಮಕ್ಕಳ ನೆಚ್ಚಿನ ವೇದಾವತಿ ಟೀಚರ್ ಗೆ ಜಿಲ್ಲಾ ಪ್ರಶಸ್ತಿ

ಕೆಲವೊಮ್ಮೆ ಪ್ರಶಸ್ತಿಗಳಿಂದ ಆ ವ್ಯಕ್ತಿಯ ಮೌಲ್ಯ ಹೆಚ್ಚುವ ಬದಲಾಗಿ ಪ್ರಶಸ್ತಿಯನ್ನು ಸ್ವೀಕರಿಸುವ ಕೆಲವು ವ್ಯಕ್ತಿಗಳಿಂದ ಅದರ ಮೌಲ್ಯವೇ ಹೆಚ್ಚುತ್ತದೆ. ವೃತ್ತಿ ಬದುಕಿನುದ್ದಕ್ಕೂ ಸರಳವಾಗಿ ಬದುಕುತ್ತಾ, ಸಹಸ್ರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೈದು ಎಲ್ಲರ ಪ್ರೀತಿಗೂ ಪಾತ್ರರಾಗುವ ಶಿಕ್ಷಕರು ಕೆಲವೇ ಕೆಲವರು. ಅಂತವರುಗಳಲ್ಲಿ ಒಬ್ಬರು ನಮ್ಮ ವೇದಾವತಿ ಟೀಚರು.

ಹೌದು. ಬೈಂದೂರು ವಲಯದ ಮಯ್ಯಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿರುವ ಬಿ. ಎನ್. ವೇದಾವತಿ ಅವರದ್ದು ಹೇಳಿ ಕೇಳಿ ಸರಳ, ಸಜ್ಜನಿಕೆಯ ವ್ಯಕ್ತಿತ್ವ. ಅವರು ಒಮ್ಮೆ ಪಾಠ ಮಾಡಲು ನಿಂತರೆಂದರೆ ವಿದ್ಯಾರ್ಥಿಗಳು ತಲ್ಲೀನತೆಯಿಂದ ಕೇಳುತ್ತಾರೆ. ಅದಕ್ಕೂ ಕಾರಣ ಇಲ್ಲದಿಲ್ಲ. ಕ್ಲೀಷ್ಠಕರವಾದ ಗಣಿತ ವಿಷಯವನ್ನು ಸುಲಭವಾಗಿ ವಿದ್ಯಾರ್ಥಿಗಳಿಗೆ ಅರಹುವ ಚಾಕಚಕ್ಯತೆ ಅವರದ್ದು. ಈ ಬಾರಿ ಅವರಿಗೆ ಜಿಲ್ಲಾ ಶೇಷ್ಠ ಶಿಕ್ಷಕ ಪ್ರಶಸ್ತಿ ದೊರೆತಿರುವುದು ಅವರ ನಲವತ್ತು ವರ್ಷಗಳ ಸೇವಾನಿಷ್ಠೆಗೆ ಸಂದ ದೊಡ್ಡ ಗೌರವವಾಗಿದೆ. (ಕುಂದಾಪ್ರ ಡಾಟ್ ಕಾಂ)

1976ರಲ್ಲಿ ಮಯ್ಯಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಶಿಕ್ಷಕಿಯಾಗಿ ವೃತ್ತಿ ಬದುಕು ಆರಂಭಿಸಿದ ಬೈಂದೂರಿನ ವೇದಾವತಿ ಅವರು ಕಳೆದ ಹತ್ತು ವರ್ಷಗಳಿಂದ ಮುಖ್ಯ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಿಕ್ಷಕಿಯಾಗಿ ಪಾಠ ಪ್ರವಚನಗಳಲ್ಲಿ ಎಷ್ಟು ಅಸ್ಥೆ ತೋರುತ್ತಾರೋ, ಮುಖ್ಯ ಶಿಕ್ಷಕಿಯಾಗಿ ಆಡಳತ ನಿರ್ವಹಣೆಯನ್ನು ಅಷ್ಟೇ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. 

ಒಬ್ಬ ಮಗ ಹಾಗೂ ಒಬ್ಬಳು ಮಗಳಿರುವ ಸುಖೀ ಸಂಸಾರ ಇವರದ್ದು. ಮಗಳಿಗೆ ಮದುವೆಯಾಗಿದ್ದರೇ, ಮಗ ಡಾ. ಯು. ರಾಘವವೇಂದ್ರ ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. (ಕುಂದಾಪ್ರ ಡಾಟ್ ಕಾಂ)

ಪ್ರಶಸ್ತಿ-ಪುರಸ್ಕಾರಗಳ ಬಗ್ಗೆ ಅಷ್ಟೇನು ಆಸಕ್ತಿ ಇಲ್ಲದ ವೇದಾವತಿ ಅವರು, ಶೇಷ್ಠ ಶಿಕ್ಷಕ ಪ್ರಶಸ್ತಿಗಾಗಿ ಸ್ವತಃ ಅರ್ಜಿಯನ್ನೂ ಹಾಕಿದವರಲ್ಲ. ಆದರೆ ಅವರ ವಿದ್ಯಾರ್ಥಿಗಳು ಈ ಬಗ್ಗೆ ಮುತುವರ್ಜಿ ವಹಿಸಿದ್ದರು. ತನ್ನ ಕಾರ್ಯಕ್ಕೆ ಸಾಥ್ ನೀಡಿದ ಮಯ್ಯಾಡಿ ಶಾಲೆಯ ಸಹಶಿಕ್ಷಕರುಗಳಾದ ಹನುವಂತ ಎಚ್.ಜಿ, ಸಾವಿತ್ರಿ ಬಿ, ರಾಮಣ್ಣ ನಾಯ್ಕ್, ಗಣಪತಿ ಕೆ., ರಾಜು ಎಸ್, ಲಕ್ಷ್ಮೀ ಬಿ, ಸುಬ್ರಮಣ್ಯ ಎನ್, ಉದಯಕುಮಾರ್, ಬೀನಾ ಪಿ.ಜೆ., ಇವರುಗಳ ಜೊತೆಗೆ ಎಸ್.ಡಿ.ಎಂ.ಸಿ ಸದಸ್ಯರು ಹಾಗೂ ಊರಿನವರ ಸಹಕಾರವನ್ನು ಅವರು ಸದಾ ಸ್ಮರಿಸುತ್ತಾರೆ. (ಕುಂದಾಪ್ರ ಡಾಟ್ ಕಾಂ)

* ವೇದಾವತಿ ಟೀಚರ್ ಪಾಠ ಮಾಡಲು ತರಗತಿಗೆ ಬರುತ್ತಾರೆಂದರೆ ನಮ್ಮಲ್ಲೊಂದು ವಿಶೇಷ ಕುತೂಹಲ ಇದ್ದೇ ಇರುತ್ತಿತ್ತು. ಕ್ಲಿಷ್ಟಕರವಾದ ಗಣಿತ/ವಿಜ್ಞಾನದ ವಿಷಯಗಳನ್ನು ಅವರು ಸರಳವಾಗಿ ಹೇಳಿಕೊಡುತ್ತಿದ್ದುದು ಇಂದಿಗೂ ನೆನಪಿದೆ. ಇಂದು ಶಿಕ್ಷಕಿಯಾಗಿರುವ ನಾನು ಅವರು ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದ ಶೈಲಿಯನ್ನು ನನ್ನ ತರಗತಿಗಳಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಈ ಬಗ್ಗೆ ನನಗೂ ಹೆಮ್ಮೆ ಇದೆ. -ಶಾರದಾ ಉದಯಕುಮಾರ್, ಹಳೆ ವಿದ್ಯಾರ್ಥಿ.

* ಈ ಭಾರಿಯ ಜಿಲ್ಲಾ ಶಿಕ್ಷಕ ಪ್ರಶಸ್ತಿ ಅರ್ಹ ವ್ಯಕ್ತಿಗೆ ದೊರೆತಿರುವುದು ಸಂತಸ ತಂದಿದೆ. ಸಂಗೀತದಲ್ಲಿ ಬಹಳ ಆಸಕ್ತಿ ಹೊಂದಿದ್ದ ಅವರು ಉತ್ತಮ ಶಿಕ್ಷಕಿ ಮಾತ್ರವಾಗಿರದೇ ಉತ್ತಮ ಆಡಳಿತ ನಿರ್ವಹಣೆಯನ್ನು ಮಾಡುತ್ತಿದ್ದರು. ಸರಳತೆ ಅವರಿಂದ ಕಲಿಯಬಹುದಾದ ದೊಡ್ಡ ಪಾಠ. - ನಾಗರಾಜ ಪಿ. ಯಡ್ತರೆ, ಹಳೆ ವಿದ್ಯಾರ್ಥಿ
ವೇದಾವತಿ ಅವರ ಶಾಲೆ ದೂರವಾಣಿ: 08254-251164

****

ಕ್ರೀಯಾಶೀಲ ಶಿಕ್ಷಕ ಅಶೋಕ್ ತೆಕ್ಕಟ್ಟೆಗೆ ಪ್ರಶಸ್ತಿಯ ಕಿರೀಟ

ಗ್ರಾಮೀಣ ಭಾಗದ ಶಾಲೆಯಲ್ಲಿದ್ದುಕೊಂಡು ಹತ್ತಾರು ಶೈಕ್ಷಣಿಕ ಪ್ರಯೋಗಗಳನ್ನು ನಡೆಸಿ ಯಶಸ್ವಿಯೂ ಆಗಿರುವ ಕ್ರೀಯಾಶೀಲ ಶಿಕ್ಷಕ ಅಶೋಕ್ ತೆಕ್ಕಟ್ಟೆಯವರಿಗೆ ಈ ಬಾರಿಯ ಜಿಲ್ಲಾ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಸಂದಿದೆ. 

ಹೆಸ್ಕತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕರಾಗಿರುವ ಅಶೋಕ್, ಮೊದಲ ಬಾರಿಗೆ ಜಾರಿಗೆ ಬಂದ ಶಿಕ್ಷಕರ ಸಿಇಟಿಯಲ್ಲಿ ಜಿಲ್ಲೆಗೆ ಪ್ರಥಮ ರ್ಯಾಂಕ್ ಪಡೆದು ವೃತ್ತಿ ಬದುಕು ಆರಂಭಿಸಿದವರು. ಈವರೆಗೆ ಹಲವಾರು ಶೈಕ್ಷಣಿಕ ಪ್ರಯೋಗಗಳನ್ನು ನಡೆಸಿ ವಿದ್ಯಾರ್ಥಿಗಳಿಗೆ ಓದಿನೆಡೆಗೆ ಆಸಕ್ತಿ ಮೂಡಿಸಿ ಕಲಿಕೆಯಲ್ಲಿ ಮುಂದಿರುವಂತೆ ಮಾಡುವುದರೊಂದಿಗೆ, ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಕ್ರೀಯರಾಗಿರುವಂತೆ ಮಾಡಿದ ಅವರ ಪ್ರಯತ್ನ ಶ್ಲಾಘನೀಯ. (ಕುಂದಾಪ್ರ ಡಾಟ್ ಕಾಂ)

ವಿಷಯವಾರು ತರಗತಿ, ಗ್ರಂಥಾಲಯ ಸೇರಿದಂತೆ ಹಲವು ವಿಶೇಷತೆಗಳಿಂದ ಕೂಡಿದ ಹೆಸ್ಕತ್ತೂರು ಶಾಲೆಗೆ ಕರ್ನಾಟಕ ಶಾಲಾ ಗುಣಮಟ್ಟ ಪರೀಕ್ಷೆ ಮತ್ತು ಮಾನ್ಯತಾ ಸಮಿತಿಯಿಂದ 'ಎ' ಗ್ರೇಡ್ ದೊರೆಯುವಲ್ಲಿಅಶೋಕ್ ಅವರ ಶ್ರಮ ವಿಶೇಷವಾದುದು.

ವಿದ್ಯಾರ್ಥಿಗಳಲ್ಲಿ ಸೃಜನಶೀಲತೆಯನ್ನು ಹೆಚ್ಚಿಸುವ ಸಲುವಾಗಿ ಬರವಣಿಗೆ ಪ್ರಾಮುಖ್ಯತೆ ಕೊಟ್ಟಿದ್ದ ಅಶೋಕ್ ವಿಜಯಕರ್ನಾಟಕ ಏರುಹೊತ್ತಿನ ಆವೃತ್ತಿಗೆ ನಿರಂತರವಾಗಿ ವಿದ್ಯಾರ್ಥಿಗಳ ಅಭಿಪ್ರಾಯಗಳನ್ನು ಬರೆಸುತ್ತಿದ್ದರು. 2010ರಲ್ಲಿ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ವಿದ್ಯಾರ್ಥಿ ಬರಹಗಳ 'ನಮ್ಮ ಇಂಚರ' ಎನ್ನುವ ಹಸ್ತ ಪತ್ರಿಕೆಯೊಂದನ್ನು ಆರಂಭಿಸಿ, ಪೊಷಕರಿಗೂ ಉಚಿತವಾಗಿ ತಲುಪುವಂತೆ ಮಾಡಿದ್ದರಲ್ಲದೇ, ಪ್ರತಿ ತರಗತಿಗೂ ಒಂದು ಹಸ್ತ ಪತ್ರಿಕೆಯನ್ನು ಹೊರತರುವಲ್ಲಿ ವಿಶೇಷ ಶ್ರಮವಹಿಸಿದ್ದರು.

ಶಾಲೆಯಲ್ಲಿ ರಾಷ್ಟ್ರಪತಿ ಆಯ್ಕೆ ಮಾದರಿಯ ಚುನಾವಣೆ, ಅಡುಗೆ ಹಬ್ಬ ಮುಂತಾದ ಕಾರ್ಯಕ್ರಮಗಳನ್ನು ಮುತುವರ್ಜಿಯಿಂದ ಆಯೋಜಿಸಿ ವಿದ್ಯಾರ್ಥಿಗಳಿಲ್ಲಿ ವಾಸ್ತವ ಪ್ರಪಂದ ಅರಿವು ಮುಡಿಸುತ್ತಿರುವ ಅಶೋಕ್ ತೆಕ್ಕಟ್ಟೆ ಸಾಧನೆ ತರಗತಿಗಳಿಗಷ್ಟೇ ಸೀಮಿತವಾಗಿರದೇ ಸಂಪನ್ಮೂಲ ವ್ಯಕ್ತಿಯಾಗಿ ಶಿಕ್ಷಕರಿಗಾಗಿ ಇಂಗ್ಲಿಷ್ ವಿಷಯದಲ್ಲಿ ನೂರಕ್ಕೂ ಹೆಚ್ಚು ತರಬೇತಿ, ವಿದ್ಯಾರ್ಥಿಗಳಿಗೆ ಬೇಸಿಗೆ ಶಿಬಿರದಲ್ಲಿ ವಿವಿಧ ತರಬೇತಿಗಳನ್ನು ನೀಡಿದ್ದಾರೆ. ವಿದ್ಯಾರ್ಥಿಗಳ ರೇಡಿಯೋ ಕಾರ್ಯಕ್ರಮಗಳಾದ ಚಿನ್ನರ ಚುಕ್ಕಿ ಮತ್ತು ಚುಕ್ಕಿ ಚಿನ್ನ ಹಾಗೂ ಎಜುಸ್ಯಾಟ್ ಇಂಗ್ಲಿಷ್ ಪಾಠಕ್ಕೆ ಸಾಹಿತ್ಯ, ವಿಷಯವನ್ನು ರಚಿಸಿ ಕೊಟ್ಟಿದ್ದಾರೆ. ಸ್ಥಳೀಯ ವಾಹಿನಿಯು ಆಯೋಜಿಸಿದ ಶೈಕ್ಷಣಿಕ ಸಂವಾದದಲ್ಲಿ ಭಾಗವಹಿಸಿದ್ದರು.  (ಕುಂದಾಪ್ರ ಡಾಟ್ ಕಾಂ)

ಬಹುಮುಖ ಪ್ರತಿಭೆಯ ಅವರು ಶಿಕ್ಷಕರ ಪ್ರತಿಭಾ ಸ್ವರ್ಧೆಯಲ್ಲಿ ರಸಪ್ರಶ್ನೆ, ಪ್ರಬಂದ ರಚನೆ, ಸ್ಥಳದಲ್ಲಿಯೇ ಪಾಠೋಪಕರಣ ರಚನೆ ಮುಂತಾದ ವಿಭಾಗಗಳಲ್ಲಿ ರಾಜ್ಯಮಟ್ಟವನ್ನು ಪ್ರತಿನಿಧಿಸಿದ್ದಾರೆ. ಕೈ ಬರವಣಿಗೆಯಲ್ಲಿ ವಿಶೇಷ ಪರಿಣತಿ ಹೊಂದಿರುವ ಅಶೋಕ್ ಥರ್ಮಕೋಲ್ ಮತ್ತು ಥರ್ಮಪೋಮ್ ಬಳಸಿ ವೇದಿಕೆ ಅಲಂಕರಿಸುವುದರಲ್ಲಿ ನಿಷ್ಣಾತರು, ಲೇಖಕರಾಗಿಯೂ ಗುರುತಿಸಿಕೊಂಡಿದ್ದಾರೆ. ಮಹಿಷಾಸುರ ಮರ್ಧಿನಿ ಮಾಸ ಪತ್ರಿಕೆಯ ಸಂಪಾದಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಕೋಟೇಶ್ವರ ಮೊಗವೀರ ಯುವಕ ಸಂಘಟನೆಯ ಅಧ್ಯಕ್ಷರಾಗಿ ಸಂಘಟನಾ ಕ್ಷೇತ್ರದಲ್ಲಿಯೂ ಅವರು ಗುರುತಿಸಿಕೊಂಡಿದ್ದಾರೆ. 
ಅಶೋಕ್ ತೆಕ್ಕಟ್ಟೆ ಅವರ ಮೊಬೈಲ್: 9686503454

-ಸುನಿಲ್ ಹೆಚ್. ಜಿ. ಬೈಂದೂರು

****
20151-6ನೇ ಸಾಲಿನ ಜಿಲ್ಲಾ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಪ್ರಾಥಮಿಕ ಶಾಲಾ ವಿಭಾಗದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಬಿನ್.ಎನ್. ವೇದಾವತಿ, ಹೆಸ್ಕತ್ತೂರು ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಅಶೋಕ್ ತೆಕ್ಕಟ್ಟೆ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಕೋಟೇಶ್ವರ ಸ.ಪ.ಪೂ ಕಾಲೇಜಿನ ಉಪಪ್ರಾಂಶುಪಾಲ ಪ್ರಭಾಕರ ಮಿತ್ಯಂತ, ಹಕ್ಲಾಡಿ ಸರಕಾರಿ ಪ್ರೌಢಶಾಲೆಯ ಸಹಶಿಕ್ಷಕ ಡಾ. ಕಿಶೋರ್ ಕುಮಾರ್ ಶೆಟ್ಟಿ ಅವರಿಗೆ ಅಭಿನಂದನೆಗಳು
-ಕುಂದಾಪ್ರ ಡಾಟ್ ಕಾಂ

ಕುಂದಾಪ್ರ ಡಾಟ್ ಕಾಂ- editor@kundapra.com

ಶಿಕ್ಷಕರುಗಳು ವಿದ್ಯಾರ್ಥಿಗಳೊಂದಿಗೆ, ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾದ ಕೆಲವು ಛಾಯಾಚಿತ್ರಗಳು