ಉಡುಪಿ ಜಿಲ್ಲೆಯಲ್ಲಿ 4253 ಯುವ ಮತದಾರರ ನೋಂದಣಿ

ಕುಂದಾಪ್ರ ಡಾಟ್ ಕಾಂ ಸುದ್ದಿ.

ಉಡುಪಿ,ಜ.22: ಜಿಲ್ಲೆಯಲ್ಲಿ ಈ ಸಾಲಿನ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಸಂದರ್ಭದಲ್ಲಿ 4253 ಯುವ ಮತದಾರರು ನೋಂದಣಿಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು.ಅವರು ಜಿಲ್ಲಾಧಿಕಾರಿ ಕಛೇರಿಯ ಕೋರ್ಟ್ಹಾಲ್ನಲ್ಲಿ, ಭಾರತೀಯ ಚುನಾವಣಾ ಆಯೋಗವು 1-1-2022 ನ್ನು ಅರ್ಹತಾ ದಿನವನ್ನಾಗಿಟ್ಟುಕೊಂಡು ಸಿದ್ಧಪಡಿಸಿರುವ ಭಾವಚಿತ್ರವುಳ್ಳ  ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯ, ಅಂತಿಮ ಮತದಾರರ ಪಟ್ಟಿಯ ಪ್ರತಿಗಳನ್ನು  ಹಸ್ತಾಂತರಿಸಿ ಮಾತನಾಡಿದರು.

ಪರಿಷ್ಕೃತ ಅಂತಿಮ ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿ 4,87,676 ಪುರುಷರು, 5,25,155 ಮಹಿಳಾ ಮತದಾರರು, ಇತರೆ 11 ಸೇರಿದಂತೆ ಒಟ್ಟು 10,12,842 ಮತದಾರರಿದ್ದು, ಈ ಬಾರಿಯ ಪರಿಷ್ಕರಣೆ ಸಂದರ್ಭದಲ್ಲಿ ಹೊಸ ಸೇರ್ಪಡೆಗಾಗಿ 7862, ಹೆಸರು ತೆಗೆದು ಹಾಕಲು 16815, ತಿದ್ದುಪಡಿಗಾಗಿ 2962, ವಿಧಾನಸಭಾ ವ್ಯಾಪ್ತಿಯಲ್ಲಿ ಬದಲಾವಣೆಗಾಗಿ 552 ಅರ್ಜಿಗಳು ಸ್ವೀಕೃತವಾಗಿದ್ದು,  4253 ಯುವ ಮತದಾರರು ನೋಂದಣಿಯಾಗಿದ್ದಾರೆ ಎಂದರು.

ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಗಾಗಿ 4 ದಿನಗಳ ವಿಶೇಷ ಅಭಿಯಾನ ನಡೆಸಲಾಗಿದ್ದು, ಮನೆ ಮನೆಗೆ ಲಸಿಕಾ ಮಿತ್ರ ಕಾರ್ಯಕ್ರಮ ನಡೆಸುವ ಸಂದರ್ಭದಲ್ಲಿ ಸಹ ಸಾರ್ವಜನಿಕರಿಗೆ ಅರಿವು ಮೂಡಿಸಲಾಗಿದೆ. ಅಲ್ಲದೆ ಜಿಲ್ಲಾ ಮಟ್ಟದ ಮತದಾರರ ಸಹಾಯವಾಣಿ ಕೆಂದ್ರದ  ಉಚಿತ ಸಹಾಯವಾಣಿ ಸಂಖ್ಯೆ 1950 ಮತದಾರರಿಗೆ ಅಗತ್ಯ ಮಾಹಿತಿಯನ್ನು ನೀಡಲಾಗಿದೆ ಎಂದರು.