ಶ್ರೀ ಕೋಟಿ ಚೆನ್ನಯ್ಯ ಸಹಿತ ವಿವಿಧ ಪರಿವಾರ ದೇವತೆಗಳ ವಿಗ್ರಹಗಳೊಂದಿಗೆ ಶೋಭಾಯಾತ್ರೆ

 ಕುಂದಾಪ್ರ ಡಾಟ್ ಕಾಂ ಸುದ್ದಿ. 

ಬೈಂದೂರು: ಬೈಂದೂರಿನ ಯಡ್ತರೆಯ ನಾಕಟ್ಟೆಯಲ್ಲಿ ನಿರ್ಮಾಣಗೊಂಡಿರುವ ನೂತನ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿ ಗರ್ಭಗೃಹ ಸಮರ್ಪಣೆ, ಬ್ರಹ್ಮಕಲಶೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಮಂಗಳವಾರ ಸಂಜೆ ಚಾಲನೆ ನೀಡಲಾಯಿತು. 

ಸಿಂಗಾರಗೊಂಡ ವಾಹನಗಳಲ್ಲಿ ಶ್ರೀ ಕೋಟಿ ಚೆನ್ನಯ್ಯ ಸಹಿತ ವಿವಿಧ ಪರಿವಾರ ದೇವತೆಗಳ ವಿಗ್ರಹಗಳನ್ನು ಚಂಡೆ ವಾದನ, ವಿಶೇಷ ವಾದ್ಯಘೋಷಗಳೊಂದಿಗೆ ರಾಹುತನಕಟ್ಟೆ ವಠಾರದಿಂದ ಬೈಂದೂರು ಪೇಟೆಯ ಮೂಲಕ ಶ್ರೀ ಬ್ರಹ್ಮಬದರ್ಕಳ ಗರಡಿಗೆ ಕರೆತರಲಾಯಿತು. ಸಮವಸ್ತ್ರ ಧರಿಸಿದ್ದ ನೂರಾರು ಮಹಿಳೆಯರು ಪೂರ್ಣಕುಂಭದೊಂದಿಗೆ ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು.  
ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷರಾದ ಕೆ. ಗೋಪಾಲ ಪೂಜಾರಿ, ನಾಕಟ್ಟೆ ಜಗನ್ನಾಥ ಶೆಟ್ಟಿ, ಅಧ್ಯಕ್ಷ ಎಸ್. ರಾಜು ಪೂಜಾರಿ, ಉಪಾಧ್ಯಕ್ಷರಾದ ಸಸಿಹಿತ್ಲು ವೆಂಕಟ ಪೂಜಾರಿ, ಮಂಜುನಾಥ ಪೂಜಾರಿ ಮೇಲ್ಹಿತ್ಲು, ಪ್ರಧಾನ ಕಾರ್ಯದರ್ಶಿ ಶಿವರಾಮ ಪೂಜಾರಿ ಯಡ್ತರೆ ಸಹಿತ ಸಮಿತಿಯ ಸದಸ್ಯರು, ಗ್ರಾಮಸ್ಥರು ಇದ್ದರು. ಸರ್ಕಾರದ ಕೋವಿಡ್ ಮಾರ್ಗಸೂಚಿಯಂತೆ ಶೋಭಾಯಾತ್ರೆ ಜರುಗಿತು. 

 ಶುಕ್ರವಾರ ಬೆಳಿಗ್ಗೆ ಋತ್ವಿಜರ ಸ್ವಾಗತ, ಆಲಯ ಪ್ರತಿಗ್ರಹ, ಶಿಲ್ಪಪೂಜೆ, ಸಾಮೂಹಿಕ ಪ್ರಾರ್ಥನೆ, ಉಗ್ರಾಣ ಮೂಹರ್ತ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ೪ ರಿಂದ ಪುಣ್ಯಾಹ, ಸಪ್ತಶುದ್ದಿ, ಪ್ರಸಾದ ಶುದ್ದಿ, ವಾಸ್ತು ಪೂಜೆ, ವಾಸ್ತು ಹೋಮ ಹಾಗೂ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.