ಆಳ್ವಾಸ್ ಸವಿದ್ಯ 2022 - ಪ್ರಾಯೋಗಿಕ ತರಬೇತಿ ಕಾರ‍್ಯಕ್ರಮ

 ಕುಂದಾಪ್ರ ಡಾಟ್ ಕಾಂ ಸುದ್ದಿ.

ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ವಿಜ್ಞಾನ ವಿಭಾಗದ ವತಿಯಿಂದ ‘ಸವಿದ್ಯ-2022’ ಪ್ರಾಯೋಗಿಕ ತರಬೇತಿ ಕಾರ‍್ಯಕ್ರಮವನ್ನು  ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.


ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆನ್ಲೈನ್ ವೇದಿಕೆ ಮುಖಾಂತರ ಮಾತನಾಡಿದ ಆಳ್ವಾಸ್ ಕಾಲೇಜಿನ ಹಿರಿಯ ವಿದ್ಯಾರ್ಥಿ, ಜಪಾನಿನ ಕ್ಯೋಟೊ ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿ ವಿಕ್ರಮ್ ತಿಮ್ಮರಡ್ಕ ವಿದ್ಯಾರ್ಥಿಗಳಲ್ಲಿ ವೃತ್ತಿ ಬದುಕಿನ ಆಯ್ಕೆಯ ಕುರಿತು ಹಲವು ಗೊಂದಲಗಳಿರುತ್ತವೆ.  ವಿಜ್ಞಾನ ವಿಭಾಗದಲ್ಲಿ ವೈದ್ಯಕೀಯ, ಇಂಜಿನಿಯರಿಂಗ್ ಕ್ಷೇತ್ರದಂತೆ ನ್ಯಾಚುರಲ್ ಸಯನ್ಸ್ ಕೋರ್ಸ್‌ಗಳಲ್ಲಿಯೂ ಕೌಶಲ್ಯಗಳನ್ನು ವೃದ್ಧಿಸಲು ಹಾಗೂ ಉನ್ನತ ವಿದ್ಯಾಭ್ಯಾಸಗಳಿಗೂ ವಿಫುಲ ಅವಕಾಶಗಳಿವೆ ಎಂದರು.  ಸಮಾಜದಿಂದ ಉನ್ನತಿಯನ್ನು ಕಂಡ ನಂತರ,  ನಮ್ಮಿಂದ ಕೈಲಾದಷ್ಟು  ಕೊಡುಗೆಯನ್ನು ನೀಡಲು ಮುಂದಾಗಬೇಕು ಎಂದರು. 

ಕಾರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ, ಯಾವುದೇ ಕಾರ್ಯದ ಯಶಸ್ಸಿಗೆ ಸ್ಪಷ್ಟವಾದ ಗುರಿಯಿರಬೇಕು, ಉತ್ತಮ ಆಯ್ಕೆಗಳಿಗೆ ಸ್ವ-ಪ್ರೇರಣೆ ಅಗತ್ಯ. ವೈಜ್ಞಾನಿಕ ಚಿಂತನೆಗಳು ಸಮುದಾಯದ ಬೆಳವಣಿಗೆಗೆ ಪೂರಕವಾಗಿರುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ವಿಜ್ಞಾನ ವಿಷಯಗಳನ್ನು ಆಯ್ದುಕೊಳ್ಳುವಾಗ ಭವಿಷ್ಯದ ವೃತ್ತಿ ಬದುಕನ್ನು ಮುಂದಿರಿಸಿಕೊಂಡು ನಿರ್ಧಾರ ಕೈಗೊಳ್ಳಿ ಎಂದರು.

ಕಾಲೇಜಿನ ವಿಜ್ಞಾನ ವಿಭಾಗಳಾದ ಬಿಎಸ್ಸಿ ಫುಡ್ ಸೈನ್ಸ್, ಆನಿಮೇಶನ್, ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ,  ಗಣಿತಶಾಸ್ತ್ರ ಹಾಗೂ ಹಾಸ್ಪಿಟಾಲಿಟಿ ಸೈನ್ಸ್ ವಿಭಾಗದ ವತಿಯಿಂದ  ವಿಜ್ಞಾನ ಮಾದರಿಗಳು, ಬಿತ್ತಿ ಪತ್ರಗಳು, ಪ್ರಾಯೋಗಿಕ ಚಟುವಟಿಕೆಗಳ ಮಾದರಿಗಳನ್ನು ಪ್ರದರ್ಶಿಸಲಾಯಿತು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಸುರತ್ಕಲ್ ಎನ್‌ಐಟಿಕೆಯ ಸಂಶೋಧನಾ ವಿದ್ಯಾರ್ಥಿ  ವೆಂಕಟರಮಣ ಪಿ ಬಿ ಅತಿಥಿಗಳಾಗಿ ಪಾಲ್ಗೊಂಡರು. 

ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.  ವಿಜ್ಞಾನ ವಿಭಾಗದ ಡೀನ್ ರಮ್ಯಾ ರೈ ಪಿಡಿ, ಕಾರ್ಯಕ್ರಮದ ಸಂಯೋಜಕಿ ಉಷಾ, ವಿವಿಧ ವಿಭಾಗದ ಮುಖ್ಯಸ್ಥರು, ಹಾಗೂ ಅಧ್ಯಾಪಕರು ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಯೋಜಕರಾದ ದೀಕ್ಷಾ ಸ್ವಾಗತಿಸಿ, ವಿನಯ್ ಕುಮಾರ್ ವಂದಿಸಿದರು. ವಿದ್ಯಾರ್ಥಿನಿ ವಿಭಾ ಕಾರ್ಯಕ್ರಮವನ್ನು ನಿರೂಪಿಸಿದರು.