ಹಾಡಿಗರಡಿ ದೈವಸ್ಥಾನದಲ್ಲಿ ವಿದ್ಯಾರ್ಥಿವೇತನ ವಿತರಣೆ, ಸಾಧಕರಿಗೆ ಸನ್ಮಾನ

 ಕುಂದಾಪ್ರ ಡಾಟ್ ಕಾಂ ಸುದ್ದಿ.

ಕುಂದಾಪುರ: ನಾಡದ ಶ್ರೀ ಹಾಡಿಗರಡಿ ದೈವಸ್ಥಾನದಲ್ಲಿ ನಡೆದ ವಾರ್ಷಿಕ ಹಾಲುಹಬ್ಬ, ಗೆಂಡಸೇವೆಯ  ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ವಿದ್ಯಾರ್ಥಿವೇತನ ವಿತರಣೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ  ನಡೆಯಿತು.



ಧಾರ್ಮಿಕ ಸಭಾಕಾರ್ಯಕ್ರಮವನ್ನು ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಕುಂದಾಪುರ ಶಾಖಾಧ್ಯಕ್ಷ ಕೆ.ಕೆ ಕಾಂಚನ್ ಉದ್ಘಾಟಿಸಿದರು.  ಶ್ರೀ ಹಾಡಿಗರಡಿ ದೈವಸ್ಥಾನ ಸಮಿತಿ ನಾಡ ಇದರ ಅಧ್ಯಕ್ಷ ನಾಗೇಶ್ ಪಿ.ಕಾಂಚನ್ ಅಧ್ಯಕ್ಷತೆ ವಹಿಸಿದ್ದರು. ಚಂದ್ರಕಾಂತ ರತ್ನ ಫೌಡೇಶನ್ (ಸಿಆರ್‌ಎಫ್) ನಾಡ ಇವರ ಸಹಯೋಗದೊಂದಿಗೆ ನೀಡಲಾಗುವ ವಿದ್ಯಾರ್ಥಿವೇತನ, ಪ್ರತಿಭಾ ಪುರಸ್ಕಾರವನ್ನು ಬೆಂಗಳೂರು ಹೋಟೆಲ್ ಉದ್ಯಮಿ ಬಸವರಾಜ್ ಕುದ್ರಿಸಾಲು, ನಾಡ ಇವರು ನೆರವೇರಿಸಿದರು.

ನಾಡ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ ಶೆಟ್ಟಿ, ಮರವಂತೆ ಶ್ರೀ ವರಾಹ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ಎಂ.ನಾಯಕ್ ನಾಡ, ಮುಂಬಯಿ ಬಿಎಎಸ್‌ಎಫ್ ನಿರ್ದೇಶಕ ಪ್ರದೀಪ್ ಚಂದನ್ ಕುಂದಬಾರಂದಡಿ, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಕುಂದಾಪುರ ಶಾಖೆ ಕಾರ್ಯದರ್ಶಿ ಸುರೇಶ್ ವಿಠಲವಾಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ನಾಡ ಗುಡ್ಡೆಯಂಗಡಿಯ ನಿವೃತ್ತ ಹಿರಿಯ ಪಶುವೈದ್ಯಕೀಯ ಪರಿವೀಕ್ಷಕ ರಾಘವೇಂದ್ರ ಶೆಟ್ಟಿ, ನಿವೃತ್ತ ಮಹಿಳಾ ಆರೋಗ್ಯ ಸಹಾಯಕಿ  ಗುಲಾಬಿ ಶ್ರೀನಿವಾಸ ಸೇನಾಪುರ, ಹಿರಿಯ ಯಕ್ಷಗಾನ ಕಲಾವಿದ ರಮೇಶ್ ಮೊಗವೀರ ಬೇಲ್ತೂರು, ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಪ್ರಧಾನ ವ್ಯವಸ್ಥಾಪಕ ಉದಯಕುಮಾರ ಹಟ್ಟಿಯಂಗಡಿ ಅವರನ್ನು ಸನ್ಮಾನಿಸಲಾಯಿತು.

೬೮ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ವೇದಿಕೆಯಲ್ಲಿ ಸಂಕೇತಿಕವಾಗಿ ಐವರಿಗೆ ವಿದ್ಯಾರ್ಥಿವೇತನ ನೀಡಲಾಯಿತು. ಐವರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಶ್ರೀ ಹಾಡಿಗರಡಿ ದೈವಸ್ಥಾನ ಸಮಿತಿಯ ಕಾರ್ಯದರ್ಶಿ ಪ್ರಭಾಕರ ಸೇನಾಪುರ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿಜಯ ಪಿ.ಕಾಂಚನ್ ವಂದಿಸಿದರು. ವಿಶ್ವನಾಥ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಸ್ಟ್ ಗೈಸ್ ಡಾನ್ಸ್ ಕ್ರೀವ್ ಇವರ ವತಿಯಿಂದ ರಾಜ್ಯಮಟ್ಟದ ನೃತ್ಯ ಸ್ಪರ್ಧೆ ನಡೆಯಿತು. 

ವಾರ್ಷಿಕ ಹಾಲುಹಬ್ಬದ ಪ್ರಯುಕ್ತ ಮಹಾಪೂಜೆ, ಮಂಗಳಾರತಿ, ದೈವದರ್ಶನ, ಗೆಂಡಸೇವೆ, ಮಹಾಅನ್ನಸಂತರ್ಪಣೆ ನಡೆಯಿತು. ಜ.೧೫ರಂದು ತುಲಾಭಾರ ಸೇವೆ, ಮಹಾಪೂಜೆ, ಅನ್ನಪ್ರಸಾದ ವಿತರಣೆ, ರಾತ್ರಿ ಮಹಾಪೂಜೆ, ಸರ್ವದೈವಗಳ ದರ್ಶನ ಸೇವೆ, ಹೂವು ಸಮರ್ಪಣೆ, ಬಲಿಪೂಜೆ, ಅನ್ನಪ್ರಸಾದ ವಿತರಣೆ ನಡೆಯಿತು.