ಧರ್ಮವೆನ್ನುವುದು ಯಾವುದೇ ಪಕ್ಷದ ಆಸ್ತಿಯಲ್ಲ: ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿ ಹೆಬ್ಬಾರ್

ಕುಂದಾಪ್ರ ಡಾಟ್ ಕಾಂ ಸುದ್ದಿ.

ಬೈಂದೂರು: ಹಿಂದೂ ಧರ್ಮದಲ್ಲಿ ಅರಿಶಿಣ ಕುಂಕುಮಕ್ಕೆ ವಿಶೇಷ ಸ್ಥಾನವಿದೆ. ಮಹಿಳೆಯ ಮುತ್ತೈದೆತನ ಅರಿಶಿಣ ಕುಂಕುಮದೊಂದಿಗೆ ಪೂರ್ಣಗೊಳ್ಳುತ್ತದೆ. ಈ ಕಾರ್ಯಕ್ರಮ ಆಯೋಜನೆಯ ಮೂಲಕ ಧರ್ಮ ಜಾಗೃತಿ, ಧಾರ್ಮಿಕ ಸಾಮರಸ್ಯದ ಜೊತೆಗೆ ಪಕ್ಷ ಸಂಘಟನೆಗೆ ಮಹಿಳೆಯರನ್ನು ಸಜ್ಜುಗೊಳಿಸಿದಂತಾಗಿದೆ ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿ ಹೆಬ್ಬಾರ್ ಹೇಳಿದರು.

ಅವರು ಇಲ್ಲಿನ ರೋಟರಿ ಭವನದಲ್ಲಿ ಬೈಂದೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ನೇತೃತ್ವದಲ್ಲಿ ಶುಕ್ರವಾರ ಆಯೋಜಿಸಿದ್ದ ಅರಶಿಣ ಕುಂಕುಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಬಿಜೆಪಿ ಪಕ್ಷ ಧರ್ಮ ಹೆಸರಿನಲ್ಲಿ ಜನರನ್ನು ಒಡೆದು ಆಳುವ ಕೆಲಸ ಮಾಡುತ್ತಿದೆ. ಧರ್ಮವೆನ್ನುವುದು ಯಾವುದೇ ಪಕ್ಷದ ಆಸ್ತಿಯಲ್ಲ. ಧರ್ಮ ಪಾಲನೆ ಎನ್ನುವುದು ವ್ಯಕ್ತಿಯ ವೈಯಕ್ತಿಯ ಸ್ವಾತಂತ್ರ್ಯ. ರಾಜಕೀಯ ಕಾರಣಕ್ಕೆ ಧರ್ಮವನ್ನು ಮಧ್ಯೆ ತರುವುದು ಸರಿಯಲ್ಲ ಎಂದರು.

ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಲೆ, ಬೈಂದೂರು ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನಕುಮಾರ್ ಉಪ್ಪುಂದ, ಕೆಪಿಸಿಸಿ ಸದಸ್ಯ ರಘರಾಮ ಶೆಟ್ಟಿ, ತಾಪಂ ಮಾಜಿ ಸದಸ್ಯೆ ಪ್ರಮೀಳಾ ದೇವಾಡಿಗ, ಯಡ್ತರೆ ಗ್ರಾಪಂ ಮಾಜಿ ಅಧ್ಯಕ್ಷೆ ಮೂಕಾಂಬು ದೇವಾಡಿಗ, ವೆರೋನಿಕಾ ಕರ್ನೇಲಿಯೋ, ಬೈಂದೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಗುಲಾಬಿ ಪೂಜಾರಿ, ಜಯಂತಿ ಶೆಟ್ಟಿ, ಅಂಬಿಕಾ ಮಯ್ಯ ಮೊದಲಾದವರು ಉಪಸ್ಥಿತರಿದ್ದರು.

ಬೈಂದೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೌರಿ ದೇವಾಡಿಗ ಸ್ವಾಗತಿಸಿ, ಪ್ರಸ್ತಾವಿಕ ನುಡಿಗಳನ್ನಾಡಿದರು. ಶಾಂತಿ ಪಿರೇರಾ ವಂದಿಸಿದರು. ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಅರಶಿಣ ಕುಂಕುಮ, ಬಳೆ, ಹೂವು, ಸೀರೆ ನೀಡಿ ಸತ್ಕರಿಸಲಾಯಿತು.