ಕೊಲ್ಲೂರಿನ ಒಳ ಚರಂಡಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಪೂರ್ಣ: ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಕೆರಾಡಿ

 ಕುಂದಾಪ್ರ ಡಾಟ್ ಕಾಂ ಸುದ್ದಿ.

ಕೊಲ್ಲೂರು: ಕೊಲ್ಲೂರಿನ ಒಳ ಚರಂಡಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯ ಕಾಮಗಾರಿಗಳು ಪೂರ್ಣಗೊಂಡಿದ್ದು, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಿಂದಲೇ ಇದರ ನಿರ್ವಹಣೆ ಮಾಡಲಾಗುತ್ತಿದೆ. ಕೊಲ್ಲೂರು ಪರಿಸರದ ಶೇ.90 ರಷ್ಟು ವಾಣಿಜ್ಯ ಹಾಗೂ ಗೃಹ ಬಳಕೆಗಾಗಿ ನೀರಿನ ಸಂಪರ್ಕ ನೀಡಲಾಗಿದ್ದು, ಪ್ರಸ್ತುತ ಯಾವುದೇ ಕಲುಷಿತ ನೀರು ಸೌಪರ್ಣಿಕ ನದಿಯನ್ನು ಸೇರುತ್ತಿಲ್ಲ ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಕೆರಾಡಿ ಹೇಳಿದ್ದಾರೆ.

ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಬೇಸಿಗೆ ಕಾಲ ಹಾಗೂ ವರ್ಷದ ಇತರ ದಿನಗಳಲ್ಲಿ ಕಾಣಿಸಿಕೊಳ್ಳುವ ಕುಡಿಯುವ ನೀರಿನ ಸಮಸ್ಯೆಯ ಪರಿಹಾರಕ್ಕಾಗಿ ರೂಪಿಸಿರುವ ಯೋಜನೆಯೂ ಪೂರ್ಣಗೊಂಡಿದ್ದು, ಯೋಜನೆಯ ಶೇ.90 ರಷ್ಟು ಫಲಾನುಭವಿಗಳು ಈಗಾಗಲೇ ಇದರ ಸಂಪರ್ಕ ಪಡೆದುಕೊಂಡಿದ್ದಾರೆ. ಅಂದಾಜು 2 ಕೋಟಿ ವೆಚ್ಚದಲ್ಲಿ ಹೈದರ್‌ಬಾದ್ ಹೋಟೇಲ್ ಉದ್ಯಮಿ ಕೃಷ್ಣಮೂರ್ತಿ ಮಂಜರು ವೀರಭಧ್ರ ಗುಡಿಯ ನಿರ್ಮಾಣ ಕಾರ್ಯ ಮಾಡುತ್ತಿದ್ದು, ಸಂಪೂರ್ಣ ವಾಸ್ತುಶಿಲ್ಪದೊಂದಿಗೆ ನಿರ್ಮಿಸುವ ಈ ಗುಡಿಯ ಕಾರ್ಯಕ್ಕೆ ಈಗಾಗಲೇ ಶಂಕು ಸ್ಥಾಪನೆ ಮಾಡಲಾಗಿದೆ. ದೇವಸ್ಥಾನದಲ್ಲಿ ನೂತನ ಬ್ರಹ್ಮರಥದ ನಿರ್ಮಾಣ ಕಾರ್ಯಕ್ಕೂ ಚಾಲನೆ ನೀಡಲಾಗಿದ್ದು ಉದ್ಯಮಿ ಸುನೀಲ್ ಎನ್ ಶೆಟ್ಟಿ ಅವರು ಕೊಡುಗೆಯಾಗಿ ನೀಡಲು ಒಪ್ಪಿಗೆ ನೀಡಿದ್ದು, ಈ ಹಿಂದಿನ ಮಾದರಿಯಲ್ಲಿಯೇ ರಥ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ದೇವಸ್ಥಾನ ವಠಾರವನ್ನು ಸ್ವಚ್ಛವನ್ನಾಗಿಸಲು ಯೋಜನೆಯನ್ನು ಹಮ್ಮಿಕೊಳ್ಳಲಾಗುತ್ತಿದೆ. ದೇವಸ್ಥಾನದ ಮುಂಭಾಗದಲ್ಲಿನ ಅಗ್ನಿತೀರ್ಥ ಹಾಗೂ ಆನೆ ಬಾಗಿಲಿನ ಪರಿಸರವನ್ನು ಸುಂದರಗೊಳಿಸುವ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದರು. ಭಕ್ತರ ಅನುಕೂಲಕ್ಕಾಗಿ ಜಗದಾಂಬಿಕಾ ಕಟ್ಟಡದ ಸಮೀಪದಲ್ಲಿ ಸುಸಜ್ಜಿತ ಶೌಚಾಲಯ ನಿರ್ಮಾಣದ ಗುರಿಯನ್ನು ಇರಿಸಿಕೊಳ್ಳಲಾಗಿದೆ. ಶಂಕರಾಚಾರ್ಯರ ಉದ್ಯಾನ ವನ ಸರಿಯಾದ ನಿರ್ವಹಣೆ ಇಲ್ಲದೆ ಅಸ್ತವ್ಯಸ್ತಗೊಂಡಿದ್ದು, ಭಕ್ತರ ಅನುಕೂಲಕ್ಕಾಗಿ ಸುಂದರ ವನದ ನಿರ್ಮಾಣದ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಕೊಲ್ಲೂರಿನಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಗೋಶಾಲೆ ನಿರ್ಮಾಣಕ್ಕಾಗಿ ಹಾಲ್ಕಲ್ ಬಳಿಯಲ್ಲಿ ಸರ್ಕಾರ 10 ಎಕ್ರೆ ಜಾಗವನ್ನು ದೇವಸ್ಥಾನಕ್ಕೆ ನೀಡಲು ಒಪ್ಪಿಗೆ ನೀಡಿದ್ದಾರೆ. ಪುರಾತನ ಇತಿಹಾಸವನ್ನು ಹೊಂದಿರುವ ಶುಕ್ಲ ತೀರ್ಥದ ಶ್ರೀ ಸಿದ್ದೇಶ್ವರ ದೇವಸ್ಥಾನವನ್ನು ಮರು ನಿರ್ಮಾಣ ಮಾಡಿ ಶಿಲಾಮಯಗೊಳಿಸುವ ಉದ್ದೇಶವನ್ನು ಇರಿಸಿಕೊಳ್ಳಲಾಗಿದೆ. ಭಕ್ತರ ಅನುಕೂಲಕ್ಕಾಗಿ ಸೌಪರ್ಣಿಕ ಸ್ನಾನಘಟ್ಟದ ನವೀಕರಣಕ್ಕೆ ಯೋಜನೆಯನ್ನು ರೂಪಿಸಲಾಗುತ್ತಿದ್ದು, ಮಳೆಗಾಲದಲ್ಲಿ ಈ ಪರಿಸರದಲ್ಲಿ ಭಕ್ತರ ರಕ್ಷಣೆಯ ಉದ್ದೇಶವನ್ನು ಇರಿಸಿಕೊಳ್ಳಲಾಗುತ್ತಿದೆ. ದೇವಸ್ಥಾನದ ಸುತ್ತು ಪೌಳಿಯನ್ನು 4 ಭಾಗವಾಗಿ ವಿಂಗಡಿಸಿ, ದಾನಿಗಳ ಮೂಲಕ ಈ ಕಾರ್ಯವನ್ನು ಪೂರೈಸಲು ಯೋಜನೆ ರೂಪಿಸಲಾಗುತ್ತಿದೆ.

ಬಹು ಮಹಡಿ ಪಾರ್ಕಿಂಗ್ ಸದ್ಯಕ್ಕೆ ಬೇಡ:

2019ರಿಂದ ಕೋವಿಡ್ ಕಾರಣದಿಂದಾಗಿ ದೇವಸ್ಥಾನಕ್ಕೆ ಭಕ್ತರ ಸಂಖ್ಯೆ ಕಡಿಮೆಯಾಗಿದ್ದು, ಸಹಜವಾಗಿಯೇ ದೇಗುಲದ ಆದಾಯವೂ ಕಡಿಮೆಯಾಗಿದೆ. ಪ್ರಸ್ತುತ ಇರುವ ಪಾರ್ಕಿಂಗ್ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಣೆ ಮಾಡುವುದರಿಂದ, ದೇವಸ್ಥಾನಕ್ಕೆ ಬರುವ ಯಾತ್ರಿಕರ ವಾಹನಗಳಿಗೆ ವಾಹನ ನಿಲುಗಡೆ ಮಾಡಲು ಸಮಸ್ಯೆ ಉದ್ಭವಿಸುವುದಿಲ್ಲ ಎನ್ನುವ ನಂಬಿಕೆ ಇರುವುದರಿಂದ, ಅಂದಾಜು 48 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಬಹು ಮಹಡಿ ಪಾರ್ಕಿಂಗ್ ಯೋಜನೆಯನ್ನು ಸದ್ಯಕ್ಕೆ ಕೈ ಬಿಡುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇವೆ.

ವಾರ್ಷಿಕವಾಗಿ ದೇಗುಲಕ್ಕೆ 10-12 ಕೋಟಿ ರೂ. ಆಸು-ಪಾಸಿನಲ್ಲಿ ಆದಾಯವಿದ್ದು, ಈಚೇನ ವರ್ಷಗಳಲ್ಲಿ ಈ ನಿರೀಕ್ಷಿತ ಆದಾಯವೂ ಬಾರದೆ ಇರುವುದರಿಂದ, ದೈನಂದಿನ ನಿರ್ವಹಣೆ, ಸಂಬಳ, ಶೈಕ್ಷಣಿಕ ಚಟುವಟಿಕೆ ಮುಂತಾದ ಮೂಲಭೂತ ವೆಚ್ಚಗಳನ್ನು ಭರಿಸಬೇಕಾದ ಅನೀವಾರ್ಯತೆಯೂ ಇದೆ. ದೇವಸ್ಥಾನದ ಕಾದಿರಿಸಿದ ನಿಧಿಯ ಶೇ.50 ರಷ್ಟು ಹಣವನ್ನು ಬಹು ಮಹಡಿ ಪಾರ್ಕಿಂಗ್ ಯೋಜನೆಗೆ ಬಳಸುವುದರಿಂದ ದೇವಸ್ಥಾನದ ಮೂಲಭೂತ ಸೌಕರ್ಯದ ಯೋಜನೆಗಳ ನಿರ್ವಹಣೆಯ ಮೇಲೆ ವ್ಯತಿರಿಕ್ತ ಪರಿಣಾಮಗಳಾಗುವುದರಿಂದ, ಸದ್ಯಕ್ಕೆ ಈ ಯೋಜನೆಯನ್ನು ಮುಂದಕ್ಕೆ ಹಾಕಿ, ದಾನಿಗಳು ಯಾರಾದರೂ ಈ ಯೋಜನೆಯ ವೆಚ್ಚವನ್ನು ಭರಿಸುವ ಆಸಕ್ತಿ ತೋರಿದ್ದಲ್ಲಿ ಯೋಜನೆ ಕೈಗೆತ್ತಿಕೊಳ್ಳುವಂತೆ ಮನವಿ ಮಾಡಲಾಗುವುದು ಎಂದು ಚಂದ್ರಶೇಖರ ಶೆಟ್ಟಿ ತಿಳಿಸಿದರು.

ಬ್ರಹ್ಮ ಕಲಶೋತ್ಸವ: 

ಕಳೆದ ಕೆಲ ವರ್ಷಗಳಿಂದ ಭಕ್ತರ ಬೇಡಿಕೆಯಾದ ಬ್ರಹ್ಮ ಕಲಶೋತ್ಸವ ಹಾಗೂ ಅಷ್ಟ ಬಂಧ ಮಹೋತ್ಸವ ನಡೆಸುವ ಬಗ್ಗೆಯೂ ನಮ್ಮ ಆಡಳಿತ ಮಂಡಳಿ ಆಸಕ್ತಿ ವಹಿಸಿದ್ದು. ಜನಪ್ರತಿನಿಧಿಗಳು, ದಾನಿಗಳು, ಸರ್ಕಾರ ಹಾಗೂ ಭಕ್ತರ ಸಹಕಾರದಿಂದ ಈ ಪುಣ್ಯ ಕಾರ್ಯವನ್ನು ಸಾರ್ಥಕಗೊಳಿಸುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ.

ಅಷ್ಟಬಂಧ ನಡೆದು 18 ವರ್ಷಗಳ ಆಗಿರುವುದರ ಬಗ್ಗೆ ಭಕ್ತರಲ್ಲಿ ನೋವಿದೆ. ಸದ್ಯದಲ್ಲಿಯೇ ಅರ್ಚಕರು, ತಂತ್ರಿಗಳ ಜತೆಯಲ್ಲಿ ಆಡಳಿತ ಮಂಡಳಿ ಸಭೆ ನಡೆಸಿ ಈ ಕುರಿತು ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.

ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎಸ್. ಪಿ. ಬಿ ಮಹೇಶ್, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಗೋವಿಂದ ನಾಯಕ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಡಾ. ಅತುಲಕುಮಾರ ಶೆಟ್ಟಿ, ಜಯಾನಂದ ಹೋಬಳಿದಾರ್, ಗಣೇಶ್ ಕಿಣಿ ಬೆಳ್ವೆ, ಕೆ.ಪಿ.ಶೇಖರ, ಗೋಪಾಲಕೃಷ್ಣ ನಾಡ, ಸಂಧ್ಯಾ ರಮೇಶ್, ಇಂಜಿನಿಯರ್ ಪ್ರದೀಪ್ ಇದ್ದರು.